HomeUncategorizedಸುದ್ದಿಯೇನೇ ಮನೋಲ್ಲಾಸಿನಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-1

ಸುದ್ದಿಯೇನೇ ಮನೋಲ್ಲಾಸಿನಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-1

- Advertisement -
- Advertisement -

ಆವಾಗಾವಾಗ ಕೆಲ ವ್ಯಕ್ತಿಗಳು, ಸ್ಥಳಗಳು, ವಿಷಯಗಳು ನಮ್ಮ ಮಾಧ್ಯಮಗಳಿಗೆ ಪ್ರಿಯವಾಗಿಬಿಡ್ತಾವ. ಬರೆ ಬರೆ ಅವೇ ಸುದ್ದಿ ಬರಲಿಕ್ಕೆ ಹತ್ತಿಬಿಡ್ತಾವು. ಒಬ್ಬರು ಬರಿತಾರ ಅಂತ ಇನ್ನೊಬ್ಬರು ಬರಿತಾರ. ಟ್ರೆಂಡ್ ಪ್ರಕಾರ ಸುದ್ದಿ ಮಾಡದೇ ಹೋದರೆ ಯಾರು ಏನು ತಿಳ್ಕೋತಾರೋ ಅಂತ ಎಲ್ಲಾರೂ ಕದ್ದು ಮುಚ್ಚಿ ಸುರುಮಾಡಿ ಆಮ್ಯಾಲೆ ಖುಲ್ಲಂ ಖುಲ್ಲಾ ಆಗಿ ಬರಿತಾರ.

ಇಂಥವರಿಗೆ ಮೀಡಿಯಾ ಡಾರ್ಲಿಂಗ್ ಅಂತ ಕರಿತಾರ. ಕನ್ನಡದೊಳಗ ಮಾಧ್ಯಮ ನಲ್ಲ ಅನ್ನಬಹುದೇನೋ. ಈಗ ಸದ್ಯಕ್ಕ ರಾಷ್ಟ್ರ ಮಟ್ಟದ ಮಾಧ್ಯಮ ನಲ್ಲ ಯಾರಪಾ ಅಂದ್ರ ಇಕ್ಬಾಲ್ ಸಿಂಗ್ ಚಹಲ್. ಮುಂಬೈ ಶಹರದೊಳಗ ಕೋವಿಡ್ ಮಹಾಮಾರಿಯನ್ನ ನಿಯಂತ್ರಣ ಮಾಡಿದ ಕೀರ್ತಿ ಇವರಿಗೆ ಹೋಗ್ತದ.

ಮೊದಲಿಗೆ ಈ ಮುಂಬಯಿ ಮೂಲದ ಐಎಎಸ್ ಅಧಿಕಾರಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲಾ. ಎಂದಿನಂತೆ ನಮ್ಮ ರಾಷ್ಟ್ರಮಟ್ಟದ ಮಾಧ್ಯಮಗಳು ಅವರ ಕೆಲಸ ನೋಡಿದ್ದಿಲ್ಲಾ, ಸುದ್ದಿ ಮಾಡಿದ್ದಿಲ್ಲ. ಅವ್ರ ಕೆಲಸದ ಬಗ್ಗೆ ಅಂತರ ರಾಷ್ಟ್ರೀಯ ಮಾಧ್ಯಮದೊಳಗ ಬಂದಮ್ಯಾಲೆ ಯಾವನಲೇ ಇವ, ನಮಗ ಗೊತ್ತಿರಲಾರದ ಹಂಗ ಮುಂಬೈದಾಗ್ ಇರೋವ, ಅಂತ್ ಹೇಳಿ, ನಮ್ಮ ಪತ್ರಿಕೆಯವರು ಆ ಅಧಿಕಾರಿಯನ್ನ ಹುಡುಕಿಕೊಂಡು ಹೋಗಿ, ಮಾತಾಡಿ, ಸುದ್ದಿ ಮಾಡಿದರು. ಅದನ್ನು ನೋಡಿದ ಪಂಥ ಪ್ರಧಾನ ಸೇವಕರು ಹಾಗು ಅರ್ಥ ಸಚಿವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋ ಖಾಸಗಿ ಕಂಪನಿಯ ಪ್ರಸಾಧನ ತಜ್ಞರು ಆ ಸುದ್ದಿಯ ಜಾಡನ್ನು ಆಧರಿಸಿ ಪ್ರಧಾನ ಮಂತ್ರಿಯವರು, ಹಣಕಾಸು ಸಚಿವರು ಇಕ್ಬಾಲ್ ಸಿಂಗ್ ಅವರಿಗೆ ಅಭಿನಂದನೆ ಕೋರಿದ ಹಾಗೆ ಟ್ವೀಟ್ ಮಾಡಿದರು. ಆಮ್ಯಾಲೆ ಸುರುವಾತು, ಸುದ್ದಿಯ ಮ್ಯಾಲೆ ಸುದ್ದಿ. ಅದು ಸೋಶಿಯಲ್ ಮೀಡಿಯಾದೊಳಗೂ ಬಂತು, ಆಂಟಿಸೋಶಿಯಲ್ ಮೀಡಿಯಾದೊಳಗೂ ಬಂತು. ಕೆಲವರು ಇದನ್ನು ಮುಂಬೈ ಯಶಸ್ಸು ಅಂತ ಬರೆದರು, ಇನ್ನು ಕೆಲವರು ಮಹಾರಾಷ್ಟ್ರದ ಹೆಮ್ಮೆಯ ಪುತ್ರ ಅಂತ ಹಂಚಿಕೊಂಡರು. ಇನ್ನೂ ಕೆಲವರು ‘ಇಷ್ಟು ಒಳ್ಳೆ ಮನುಷ್ಯಾ ಇವಾ ಆಗಿದ್ದರ, ಇವನ ಹೆಸರು ಇಕ್ಬಾಲ್ ಅಂತ್ ಯಾಕ್ ಐತಿ? ಅವ್ರ ಅಪ್ಪಾ ಅವ್ವಗ ಹೆಸರು ಇಡುವ ಮುಂದ ತಿಳಿಯಲಿಲ್ಲೇನೋ ಅಂತ ಮುಗ್ಧ ಪ್ರಶ್ನೆ ಕೇಳಿಕೊಂಡರು.

ನಮ್ಮನ್ನು ನೋಡಿ ನಗುತ್ತಿದ್ದರೆ, ‘ಮುಂಬೈ ಮಾದರಿ’ಯನ್ನು ಹೇಗೆ ಹಂಚಿಕೊಳ್ಳುವುದು: ಮುಂಬೈ ಆಯುಕ್ತ

ಇಷ್ಟಾಗಿಯೂ ಈ ಅಧಿಕಾರಿ ಮಾಡಿದ ಮ್ಯಾಜಿಕ್ ಏನು? ಕೋವಿಡ್ ರೋಗಿಗಳನ್ನು ಅವರವರ ಮನೆಬೀದಿ-ಬಡಾವಣೆಗಳಲ್ಲಿಯೇ ಪತ್ತೆ ಮಾಡಿ, ಅದರಲ್ಲಿ ಶೇ.90 ಜನ ತಮ್ಮ ತಮ್ಮ ಮನೆಯಲ್ಲಿಯೇ ಉಪಚಾರ ಪಡೆದು, ಇತರರು ಆಯಾ ವಾರ್ಡ್‌ನ ಕೋವಿಡ್ ಕಾಳಜಿ ಕೇಂದ್ರದೊಳಗ ಇರೋ ಹಂಗ ಮಾಡಿ, ಅದರೊಳಗೆ ಭಾರಿ ಭಯಾನಕ ಪ್ರಕರಣ ಮಾತ್ರ ಅಸ್ಪತ್ರೆಗೆ ಹೋಗೋ ಹಂಗ್ ನೋಡಿಕೊಂಡುಬಿಟ್ಟರು. ತಮ್ಮ ಕಚೇರಿಯ ವಾತ-ಪಿತ್ತ ಅನುಕೂಲಿತ ಕುರ್ಚೆ ಬಿಟ್ಟು ಏಳದ ಸರಕಾರಿ ಅಧಿಕಾರಿವೈದ್ಯರನ್ನ ರೋಗಿಗಳ ಮನೆಗೆ ಹೋಗುವ ಹಂಗ ಮಾಡಿದರು. ರಾಜ್ಯ-ಜಿಲ್ಲೆತಾಲೂಕು-ಗ್ರಾಮಮಟ್ಟದ ಕೆಲಸಗಳು ಆಯಾ ಮಟ್ಟದಲ್ಲಿಯೇ ಆಗ್ಬೇಕು. ಅರೋಗ್ಯ ಸೇವೆ ಸಹಿತ, ಗ್ರಾಮಮಟ್ಟದಿಂದ ಆರಂಭವಾಗಿ ತಾಲೂಕು-ಜಿಲ್ಲೆರಾಜ್ಯಮಟ್ಟಗಳಿಗೆ ಮುಟ್ಟಬೇಕು, ಅನಗತ್ಯವಾಗಿ ಯಾವ ಹಳ್ಳಿಯ ರೋಗಿಯೂ ಸಹಿತ ಜಿಲ್ಲೆ ಅಥವಾ ರಾಜ್ಯ ಮಟ್ಟದ ಆಸ್ಪತ್ರೆಗೆ ಹೋಗೋ ಪ್ರಸಂಗ ಬರಬಾರದು ಅಂತ ನೋಡಿಕೊಂಡರು. ನಮ್ಮ ರಾಜ್ಯದಲ್ಲೇ ಇದು ಸಾಧ್ಯ ಅದ ಏನು? ಹಳ್ಳಿಯ ಆಸ್ಪತ್ರೆಯೊಳಗ ರೈತರಿಗೆ ಒಂದು ಹಾವುಚೇಳು ಕಚ್ಚಿದರ ಕೊಡೋ ಔಷಧ ಇರೋದಿಲ್ಲ. ಎಲ್ಲದಕ್ಕೂ ದೊಡ್ಡಾಸ್ಪತ್ರೆಗೆ ಕಳಿಸೋ ದೊಡ್ಡ ರೋಗ ಹಳ್ಳಿ-ತಾಲೂಕು-ಜಿಲ್ಲಾ ಆಸ್ಪತ್ರೆ ವೈದ್ಯರಿಗೆ ಇರತದ.

ನಮ್ಮ ಸರಕಾರ ರೋಗಿಗಳನ್ನ ಗುಣ ಮಾಡೋ ಮೊದಲು ಇಂಥಹ ಆಸ್ಪತ್ರೆ ಹಾಗೂ ವೈದ್ಯರಿಗೆ ಔಷಧಿ ಕೊಡಬೇಕು. ‘ಎಲ್ಲಾ ರೋಗಕ್ಕೂ ಬೆಂಗಳೂರಿನಾಗ ಮಾತ್ರ ಔಷಧಿ ಅಂತ ನಂಬಿರುವ ಅಧಿಕಾರಿಮಂತ್ರಿಗಳನ್ನು ಮೊದಲಿಗೆ ಹಳ್ಳಿಯ ಆಸ್ಪತ್ರೆ ನೋಡಲಿಕ್ಕೆ ಕಳಿಸಬೇಕು.

ಇಲ್ಲೇ ಒಂದು ಸ್ವಲ್ಪ ಪಕ್ಕಕ್ಕೆ ಸರಿದು ಕರ್ಮಸಿದ್ಧಾಂತ ನೆನಪು ಮಾಡಿಕೊಳ್ಳೋಣ. ಭಾರತೀಯ ದರ್ಶನದ ಅನುಸಾರ ಒಂದು ಕೆಲಸವನ್ನು ‘ಯಾರು ಮಾಡಿದರು? ಅನ್ನುವುದು ಮುಖ್ಯ ಅಲ್ಲ. ‘ಯಾವ ಕೆಲಸ ಆತು?, ಅದರಿಂದ ಯಾರಿಗೆ ಅನುಕೂಲ ಆತು?, ಯಾರಿಗೆ ಅನಾನುಕೂಲ ಆತು? ಅನ್ನೋದು ಮುಖ್ಯ.

ಆದರೆ, ಪ್ರತಿ ಸಾರಿ ಆಗುವಂತೆ, ನಮ್ಮ ಮಾಧ್ಯಮಗಳು ಯಾರನ್ನೋ ಹೀರೋ ಮಾಡಲಿಕ್ಕೆ ಹೋಗಿ ‘ಯಾರು ಅನ್ನುವುದನ್ನು ದೊಡ್ಡದು ಮಾಡಿ, ‘ಏನು ಅನ್ನುವುದನ್ನು ಸಣ್ಣದು ಮಾಡಿಬಿಟ್ಟವು.

ಇಕ್ಬಾಲ್ ಸಿಂಗ್ ಅವರು ಮಾಡಿದ ಕೆಲಸ ಯಾವುದು? ಅದರ ಹಿಂದಿನ ನೀತಿ-ನಿಯಮ ಯಾವುವು? ಅವುಗಳಿಂದ ಬೇರೆ ಯಾರು ಯಾವ ಪಾಠ ಕಲಿಯಬಹುದು? ಮುಂಬೈಯಲ್ಲಿ ಸಲ್ಲಿದ್ದು ಇನ್ನೆಲ್ಲಿ ಸಲ್ಲುವುದು ಅನ್ನುವುದನ್ನು ವಿಚಾರ ಮಾಡಲಿಕ್ಕೆ ಹೋಗಲೇ ಇಲ್ಲ.

ಇಷ್ಟಕ್ಕೂ ಅವರು ಮಾಡಿದ್ದೂ ಮ್ಯಾಜಿಕ್ ಅಲ್ಲ. ಅದು ನಮ್ಮ ಸಂವಿಧಾನದ ಮೂಲ ತತ್ವ ಗಳಲ್ಲಿ ಒಂದು. ಅದನ್ನು ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು, ನೀತಿ ನಿರೂಪಕರು, ಜಾರಿ ಮಾಡುವ ಸಿಬ್ಬಂದಿಗಳು, ಎಲ್ಲರೂ ಪಾಲಿಸಲೇಬೇಕಾದದ್ದು. ಈ ದಂಡಪಿಂಡಗಳು ಉಪಯೋಗಿಸಬೇಕಾಗಿದ್ದ, ಆದರೆ ಬಳಸದೆ ಬಿಟ್ಟ ಮಂತ್ರ ದಂಡದ ಹೆಸರು ‘ವಿಕೇಂದ್ರೀಕರಣ.

‘ಹಿಂಗ ಅಂದ್ರ ಅದರಾಗ ಹೊಸಾದು ಏನು ಐತಿ? ನಮ್ಮ ಮಧ್ಯದ ‘ಗೋಡ್ಬೋಲೆ ಅಂದ್ರೆ ಬರೀ ಒಳ್ಳೊಳ್ಳೆ ಮಾತಾಡುವ ಕೆ.ಎಸ್ ಈಶ್ವರಪ್ಪ ಅವರು ಹಿರೆತನ ಮಾಡುವ ಸಚಿವಾಲಯ ಅದೇ ಅಲ್ಲವೇ? ವಿಕೇಂದ್ರೀಕರಣ ಅಂದ್ರೆ ಈ ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಪಂಚಾಯತಿಯವರು ಮನೆ ಹಂಚುವುದು, ಊರ ಹೊರಗಡೆ ದೊಡ್ಡ ದೊಡ್ಡ ಸ್ವಾಗತ ಕಮಾನು ಕಟ್ಟುವುದು, ಅಷ್ಟೇ ಅಲ್ಲವೇ? ಅಂತ ನೀವು ಕೇಳಬಹುದು.

ಇದು ವಿಕೇಂದ್ರೀಕರಣ ಅನ್ನುವ ವಿಚಾರದ ಕೇವಲ ಒಂದು ಭಾಗ ಅಷ್ಟೇ. ಇದನ್ನು ಹಂತಹಂತವಾಗಿ, ಸರಿಯಾಗಿ ತಿಳಿದುಕೊಳ್ಳೋಣ. ಇದರ ಮೊದಲ ಭಾಗವಾಗಿ ಬೇರೆ ಬೇರೆ ದೇಶಗಳಲ್ಲಿ, ಅಂದ್ರೆ ಉದ್ಯೋಗ ಖಾತ್ರಿಯಂಥಾ ಯೋಜನೆಗಳು ಇರಲಾರದ ದೇಶಗಳಲ್ಲಿ, ಮನೆ ಹಂಚಿಕೆ ಮಾಡದ, ಸ್ವಾಗತ ಕಮಾನು ಕಟ್ಟಲಾರದ ದೇಶಗಳಲ್ಲಿ ಈ ಪರಿಸ್ಥಿತಿ ಹೆಂಗ್ ಐತಿ? ಇದನ್ನ ನೋಡೋಣ.

ನಮ್ಮ ದೋಸ್ತ್ ಡೊನಾಲ್ಡ್ ಕೆಂಪಣ್ಣನವರು ಅಮೆರಿಕ ಅಧ್ಯಕ್ಷರಾಗಿದ್ದ ಕಾಲದಲ್ಲಿ ಒಂದು ಮುಂಜಾವಿನಲ್ಲಿ ಎದ್ದು ಕತ್ತಿ ಝಳಪಿಸಿ ಒಂದು ಮಾತು ಹೇಳಿದರು. ಇಂಗ್ಲಂಡ್‌ನಿಂದ ಬಂದ ವಲಸಿಗರು ಕಟ್ಟಿದ ಈ ದೇಶದಲ್ಲಿ, ಜಗತ್ತಿನ 220 ದೇಶಗಳಿಂದ ಕೆಲಸಗಾರರು ಬಂದು ದುಡಿದು ಶ್ರೀಮಂತಗೊಳಿಸಿದ ಅಮೆರಿಕ ದೇಶದ ಒಳಗೆ ೨೫ ದೇಶಗಳಿಂದ ವಲಸಿಗರು ಬರಬಾರದು ಅಂತ ನಾನು ಒಂದು ಅಭೂತಪೂರ್ವ ಆದೇಶ ಜಾರಿ ಮಾಡಿಬಿಡ್ತೇನೆ ಅಂತ ಹೂಂಕರಿಸಿದರು. ಆ ನನ್‌ಮಗ ಒಬಾಮ ಎಡಗೈನಲ್ಲಿ ಸಹಿ ಮಾಡ್ತಾ ಇದ್ದ, ಅದಕ್ಕೆ ನಾನು ಬಲಗೈನಲ್ಲಿ ಸಹಿ ಮಾಡಿಬಿಡ್ತೇನೆ, ಅಂತ ಮಾಡೇಬಿಟ್ಟರು.

ಅವು ಬಹುತೇಕ ಮುಸ್ಲಿಂ ದೇಶಗಳು ಇದ್ದವು. ಹೀಗಾಗಿ ಮುಸಲ್ಮಾನರ ಮೇಲೆ ದ್ವೇಷ ಇದ್ದ ಅನೇಕರಿಗೆ ಡೊನಾಲ್ಡ್ ಅಪ್ಪನವರು ರಾತ್ರೋ ರಾತ್ರಿ ಹೀರೋ ಆಗಿ ಬಿಟ್ಟರು. ಕೆಲವರು ಅತೀವ ಆಸಕ್ತರು ಉತ್ತರ ಭಾರತದ ಹಳ್ಳಿ ಒಂದರ ಹೆಸರು ಬದಲಿ ಮಾಡಿ ಡೊನಾಲ್ಡ್ ಅಪ್ಪನವರ ಹೆಸರು ಇಟ್ಟರು. ಅವರ ಹೆಸರಿನಲ್ಲಿ ಪೂಜೆ, ಪುನಸ್ಕಾರ ಎಲ್ಲಾ ಮಾಡಿಸಿಬಿಟ್ಟರು.

ಆದ್ರೆ ಈ ಆದೇಶ ಹೊರಬಿದ್ದ ಒಂದೇ ತಿಂಗಳಿನಲ್ಲಿ ಅದು ರದ್ದು ಆಗಿಹೋತು. ಅದನ್ನ ರದ್ದು ಮಾಡಿದ್ದೂ ಯಾರಪ ಅಂದರ, ಒಬ್ಬ ಜಿಲ್ಲಾ ನ್ಯಾಯಾಧೀಶರು. ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ಜಡ್ಜ್ ಸಾಹೇಬರು ಅಲ್ಲ. ಬರೆ ಕೌಂಟಿ ಅಂದ್ರ ಜಿಲ್ಲಾ ನ್ಯಾಯಾಧೀಶರು. ಅನೇಕರ ಕನಸಿನ ನಾಡಾದ ಅಮೆರಿಕದಾಗ ಅಧಿಕಾರದ ಶಾಖೆ ಪ್ರಶಾಖೆಗಳು ಹೆಂಗ ಹಬ್ಬಿಕೊಂಡುಬಿಟ್ಟಾವು ಅನ್ನೋದು ಇದರಿಂದ ಸ್ವಲ್ಪ ತಿಳಿಯಬಹುದು.

ಅಲ್ಲವೇ ಮನೋಲ್ಲಾಸಿನಿ ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಖ್ ಪೊಲೀಸ್ ಅಧಿಕಾರಿಗೆ “ಖಲಿಸ್ತಾನಿ” ಹಣೆಪಟ್ಟಿ ಕಟ್ಟಿದ ಬಿಜೆಪಿಗರು; ಸುವೇಂದು ಅಧಿಕಾರಿ ವಿರುದ್ಧ ಭುಗಿಲೆದ್ದ...

0
ಪ.ಬಂಗಾಳದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ "ಖಲಿಸ್ತಾನಿ" ಎಂದು ಕರೆದಿದ್ದು, ತಮ್ಮದೇ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಸಿಖ್‌ ಸಮುದಾಯಕ್ಕೆ ಸೇರಿದ ಐಪಿಎಸ್‌ ಅಧಿಕಾರಿಯನ್ನು ಸಿಖ್‌ ಪ್ರತ್ಯೇಕತಾವಾದಿಗಳಿಗೆ ಹೋಲಿಕೆ ಮಾಡಿದ್ದಾರೆ,...