Homeಮುಖಪುಟಏರುತ್ತ ಇಳಿಯುತ್ತ ಸಾಗುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆ ಹಿಂದಿನ ಕಾರಣಗಳು

ಏರುತ್ತ ಇಳಿಯುತ್ತ ಸಾಗುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆ ಹಿಂದಿನ ಕಾರಣಗಳು

2021 ರ ಏಪ್ರಿಲ್ ತಿಂಗಳಿನಲ್ಲಿ ಮೋದಿ ಜನಪ್ರಿಯತೆ ಇಳಿಯಲು ಕಾರಣಗಳೇನು? ಮೇ ತಿಂಗಳ ಕೊನೆಯಲ್ಲಿ ಜನಪ್ರಿಯತೆ ಏರಿದ್ದು ಹೇಗೆ?

- Advertisement -
- Advertisement -

ಮೂಲ : ಕ್ವಿಂಟ್
ಅನುವಾದ: ರಾಜೇಶ್ ಹೆಬ್ಬಾರ್

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆ 2021 ರಲ್ಲಿ ಇಳಿಯುತ್ತ ಏರುತ್ತ ಸಾಗುತ್ತಿದೆ. ಏಪ್ರೀಲ್ ವೇಳೆಗೆ ಇಳಿಕೆ ಕಂಡಿದ್ದ ಪ್ರಧಾನಿ ಮೋದಿ ಜನಪ್ರಿಯತೆ ಮತ್ತೆ ಮೇ ವೇಳೆಗೆ ಒಂದಷ್ಟು ಚೇತರಿಕೆ ಕಂಡಿದೆ. ಅಂತರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ಸ್ ನ ಗ್ಲೋಬಲ್ ಲೀಡರ್ ಟ್ರಾಕರ್ ಈ ಕುರಿತು ಹೊಸ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಜನಪ್ರೀಯತೆ 2021 ಏಪ್ರಿಲ್ ವೇಳೆಗೆ ಕುಸಿತ ಗೊಂಡಿದ್ದು ಜನಪ್ರಿಯತೆಯು ಮೇ, 2021 ರ ವೇಳೆಗೆ ಕೊಂಚ ಏರಿಕೆ ಕಂಡಿರುವುದು ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ಅಂಕಿ ಅಂಶಗಳಿಂದ ಕಂಡುಬಂದಿದೆ. ಕೊರೋನಾ ಎರಡನೇ ಅಲೆಯ ಕಾಲದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯಲು ಕಾರಣಗಳೇನು? ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಧಾನಿ ಮೋದಿ ಮಾಡಿದ ಸರ್ಕಸ್‌ಗಳೇನು? ಅದರ ಫಲಿತಾಂಶವೇನು? ರಾಷ್ಟ್ರೀಯ ಸುದ್ದಿ ಸಂಸ್ಥೆ ಕ್ವಿಂಟ್ ಈ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿದ್ದು ಆ ವರದಿ ಇಲ್ಲಿದೆ.

ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ಗ್ಲೋಬಲ್ ಲೀಡರ್ ಟ್ರಾಕರ್ ಸೂಚ್ಯಂಕವು ಹೇಳುವ ಪ್ರಕಾರ ಕಳೆದ 5 ರಿಂದ 6 ವಾರಗಳಲ್ಲಿ ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.

ಮಾರ್ನಿಂಗ್ ಕನ್ಸಲ್ಟ್ ಪ್ರಧಾನಿ ಮೋದಿಯವರ ನಾಯಕತ್ವದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದವರ ಸಂಖ್ಯೆಯಲ್ಲಿ ಅಸಂತೋಷ ವ್ಯಕ್ತಪಡಿಸಿದವರ ಸಂಖ್ಯೆಯನ್ನು ಕಳೆದು ಜನಪ್ರಿಯತೆಯ ಸೂಚ್ಯಂಕವನ್ನು ಹೇಳಿದೆ.

ಮೇ 25 ರ ನೆಟ್ ಅಪ್ರೂವಿಂಗ್ ರೇಟ್ ಪ್ರಕಾರ ಸರಾಸರಿ 64% ಜನರು ಪ್ರಧಾನಿಯ ನಾಯಕತ್ವದ ಕುರಿತು ಸಮಾಧಾನ ವ್ಯಕ್ತಪಡಿಸಿದ್ದು 33% ಜನರು ಪ್ರಧಾನಿ ನಾಯಕತ್ವದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತರ್ಜಾಲ ಆಧಾರಿತ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಅಂಕಿ ಅಂಶಗಳನ್ನು ಪ್ರಕಟಿಸಿದೆ.

2021 ರ ಏಪ್ರಿಲ್ ತಿಂಗಳಿನಲ್ಲಿ ಮೋದಿ ಜನಪ್ರಿಯತೆ ಇಳಿಯಲು ಕಾರಣಗಳೇನು? ಮೇ ತಿಂಗಳ ಕೊನೆಯಲ್ಲಿ ಜನಪ್ರಿಯತೆ ಏರಿದ್ದು ಹೇಗೆ?

ಮಾರ್ನಿಂಗ್ ಕನ್ಸಲ್ಟ್ ಟ್ರಾಕರ್ ಪ್ರಕಾರ ಏಪ್ರಿಲ್ ಮೊದಲವಾರದಿಂದ ಆರಂಭವಾಗಿ ಸತತ 6 ವಾರಗಳ ಕಾಲ ಪ್ರಧಾನಿಯ ಜನಪ್ರಿಯತೆ ಕುಸಿತ ಕಂಡಿದೆ. 2021, ಮಾರ್ಚ್ 31 ರ ಹೊತ್ತಿಗೆ ಗ್ಲೋಬಲ್ ಲೀಡರ್ ಟ್ರಾಕರ್ ನಲ್ಲಿ ಪ್ರಧಾನಿ ಜನಪ್ರಿಯತೆಯ ರೇಟಿಂಗ್ 54 ರಷ್ಟಿದ್ದು 74% ಜನರು ಮೋದಿ ನಾಯಕತ್ವದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು 20% ಜನರು ಮಾತ್ರ ಅಸಂತೋಶ ವ್ಯಕ್ತಪಡಿಸಿದ್ದರು. ಆದರೆ ಮೇ 8 ರ ಹೊತ್ತಿಗೆ ಜನಪ್ರಿಯತೆಯ ರೇಟಿಂಗ್ 31 ಕ್ಕೆ ಕುಸಿತಕಂಡಿತ್ತು. ಇದೇ ವೇಳೆ ಶೇ. 63 ಜನರು ಪ್ರಧಾನಿ ನಾಯಕತ್ವದ ಕುರಿತು ತೃಪ್ತಿ ವ್ಯಕ್ತಪಡಿಸಿದ್ದು ಶೇ. 32 ಜನರು ಅಸಮಾಧನವನ್ನು ವ್ಯಕ್ತಪಡಿಸಿದ್ದಾರೆ. ಮಾರ್ಚ್ 31 ರಿಂದ ಮೇ 8 ರ ಅವಧಿಯಲ್ಲಿ ಪ್ರಧಾನಿ ಜನಪ್ರಿಯತೆ 22 ರೇಟಿಂಗ್ ಪಾಯಿಂಟ್ ಗಳಷ್ಟು ಕಡಿಮೆಯಾಗಿದೆ.

ಮೇ 8 ರ ನಂತರದ ವಾರಗಳಲ್ಲಿ ಪ್ರಧಾನಿ ನಾಯಕತ್ವದ ಕುರಿತು ಜನರ ಅಭಿಪ್ರಾಯ ಶೇ. 1 ರಷ್ಟು ಬದಲಾಗಿದೆ. ಹಾಗಾದರೆ ಏಪ್ರಿಲ್ ಅವಧಿಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಕುಸಿದಿದ್ದು ಹೇಗೆ? 2021 ಮೇ ಅಂತ್ಯದ ವೇಳೆಗೆ ಜನಪ್ರಿಯತೆಯ ಪ್ರಮಾಣ ಕೊಂಚ ಹೆಚ್ಚಲು ಕಾರಣವೇನು ಎಂದು ಸಿ ವೋಟರ್ ರಾಜಕೀಯ ಸಮೀಕ್ಷೆ ಸಂಸ್ಥೆಯ ಸ್ಥಾಪಕ ಯಶವಂತ್ ದೇಶಮುಖ್ ಅನೇಕ ಕಾರಣಗಳನ್ನು ನೀಡಿದ್ದಾರೆ.

ಸಿ ವೋಟರ್ ನ ಯಶವಂತ್ ದೇಶಮುಖ್ ಹೇಳುವ ಪ್ರಕಾರ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ದೇಶಾದ್ಯಂತ ತಲೆದೋರಿದ ಆಕ್ಸಿಜನ್ ಕೊರತೆ, ಜನರ ಸಾವು, ಸ್ಮಶಾನಗಳಲ್ಲಿನ ಕ್ಯೂ ಅಥವಾ ನದಿಯಲ್ಲಿ ತೇಲಿ ಬಂದ ಮೃತದೇಹಗಳು ಮೋದಿಯವರ ಜನಪ್ರಿಯತೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ದೇಶದಲ್ಲಿ ತಲೆದೋರಿದ ಕೊರೊನಾ ಪರಿಸ್ಥಿತಿಗಿಂತ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಡೆದ ಘಟನೆಗಳು ಪ್ರಧಾನಿಯವರ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಯಶವಂತ್ ದೇಶಮುಖ್ ಅಭಿಪ್ರಾಯ ಪಟ್ಟಿದ್ದಾರೆ.

ದೇಶದ ಜನರು ಆರೋಗ್ಯ ವ್ಯವಸ್ಥೆಯ ದುರಂತಕ್ಕೆ ಪ್ರಧಾನಿ ಮೋದಿಯನ್ನು ಹೊಣೆ ಮಾಡಿಲ್ಲ. ಬದಲಾಗಿ ತಮ್ಮ ರಾಜ್ಯ ಸರ್ಕಾರಗಳ ಕಡೆಗೆ ಜನರ ಸಿಟ್ಟು ತಿರುಗಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಜನಾಕ್ರೋಶಕ್ಕೆ ಗುರಿಯಾಗಿವೆ. ಇದರಿಂದಾಗಿ ಪ್ರಧಾನಿ ಮೋದಿಯವರು ತಮ್ಮ ವರ್ಚಸನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ. ಪ್ರಧಾನಿ ಮೋದಿಯವರು ತಮ್ಮ ಜನಪ್ರಿಯತೆಗೆ ಧಕ್ಕೆಯಾಗುವ ಕಾರಣದಿಂದ ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಗೆ ಮುಂದಾಗಲಿಲ್ಲ. ಕಳೆದ ವರ್ಷ ಅಂದರೆ 2020 ರಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದ ಪರಿಣಾಮ ವಲಸೆ ಕಾರ್ಮಿಕರು ಸೇರಿ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಲಾಕ್ ಡೌನ್ ನಂತರದ ದಿನಗಳಲ್ಲಿ ಅನೇಕ ಚುನಾವಣೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಕಳೆದ ವರ್ಷದ ಅಪಾಯದಿಂದ ಪಾರಾಗುವ ಮತ್ತು ಪಶ್ಚಿಮ ಬಂಗಾಳ ಚುನಾವಣೆ ಹಿನ್ನಡೆಯಿಂದ ಆದ ಮುಜುಗರದಿಂದ ತಪ್ಪಿಸಿಕೊಳ್ಳಲು ತಪ್ಪಿಸಿಕೊಳ್ಳಲು ಕೊರೋನಾ ವಿರುದ್ಧ ರಾಷ್ಟ್ರವ್ಯಾಪಿ ಕ್ರಮಗಳ ಬದಲಾಗಿ ಕೊರೋನಾ ನಿರ್ವಹಣೆಯ ಹೊರೆಯನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ಹಾಕಿ ಪ್ರಧಾನಿ ಮೋದಿ ತೆರೆಮರೆಗೆ ಸರಿದರು. ನರೇಂದ್ರ ಮೋದಿ ತೆರೆಮರೆಗೆ ಸರಿದ ಪರಿಣಾಮವಾಗಿ ಕೇಂದ್ರ‍ ಸರ್ಕಾರ ನಿರ್ಧಾರ ಕೈಗೊಳ್ಳುವವರಿಲ್ಲದೇ ಕೆಲದಿನ ತಡಬಡಾಯಿಸಿತು. ಕೇಂದ್ರ‍ ಸರ್ಕಾರದ ಈ ವೈಫಲ್ಯಕ್ಕೆ ಮೇ ಮೊದಲವಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿದ್ಯಮಾನಗಳೇ ಸಾಕ್ಷಿ.

2021 ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ನಿರಂತರವಾಗಿ ಭಾಗವಹಿಸಿದರು. ನೂರಾರು ಚುನಾವಣಾ ರ್ಯಾಲಿಗಳನ್ನುದ್ಧೇಶಿಸಿ ಭಾಷಣ ಮಾಡಿದರು. ಅದೇ ಸಂದರ್ಭದಲ್ಲಿ ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ಅಲೆಯು ದೇಶವ್ಯಾಪಿ ಹರಡಿತು. ತಾವು ಆಯ್ಕೆ ಮಾಡಿದ ಪ್ರಧಾನಿ ತಮ್ಮ ಕುಟುಂಬಗಳು ಕಷ್ಟದಲ್ಲಿ ಸಿಲುಕಿರುವಾಗ ಚುನಾವಣೆಯಲ್ಲಿ ತೊಡಗಿರುವುದು ದೇಶದ ಜನರಿಗೆ ಇಷ್ಟವಾಗಿಲ್ಲ. ಜನರ ಜೀವದ ರಕ್ಷಣೆ ದೇಶದ ಪ್ರಧಾನಿಯ ಮೊದಲ ಆದ್ಯತೆಯಲ್ಲ ಎಂಬ ಭಾವ ಜನರಲ್ಲಿ ಬಲವಾಗಿ ಬೇರೂರಿದ ಕಾರಣಕ್ಕೆ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿಯವರ ಜನಪ್ರಿಯತೆ ಕುಸಿತವಾಗಿದೆ. ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಕೂಡ ಪ್ರಧಾನಿ ವರ್ಚಸ್ಸಿನ ಕುಸಿತಕ್ಕೆ ಕಾರಣವಾಗಿರುವುದು ಈ ಸಮೀಕ್ಷೆಗಳ ಅಂಕಿ ಅಂಶದಿಂದ ಬೆಳಕಿಗೆ ಬಂದಿದೆ. ಬಿಜೆಪಿ ತಾನು ಬಂಗಾಳದಲ್ಲಿ ಅತಿದೊಡ್ಡ ವಿರೋಧಪಕ್ಷವಾಗಿರುವುದೇ ದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತ ಪಶ್ಚಿಮ ಬಂಗಾಳದ ಚುನಾವಣೆಯ ಸೋಲಿಗೆ ಕುಸಿಯುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆಯೂ ಒಂದು ಕಾರಣ ಎಂಬ ಅಂಶವನ್ನು ಮರೆಮಾಚಲು ಯತ್ನಿಸುತ್ತಿದೆ. ಅಂಕಿ ಸಂಖ್ಯೆಗಳು ಮತ್ತು ವಿವಿಧ ಸಂಸ್ಥೆಗಳ ಸಮೀಕ್ಷೆಗಳು ಬಂಗಾಳ ಚುನಾವಣೆಯನ್ನು ಗೆಲ್ಲುವಷ್ಟು ಮೋದಿ ವರ್ಚಸ್ಸು ಸಾಲಲಿಲ್ಲ ಎಂದು ತೋರಿಸುತ್ತಿವೆ. ಬಿಜೆಪಿ ಏನೇ ಹೇಳಿದರೂ ದೇಶದ ಜನರು ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಲ್ಲಿ ಬಿಜೆಪಿ ಚುನಾವಣೆಗಳನ್ನು ಸೋಲಲಿಕ್ಕೆ ಮೋದಿಯವರನ್ನು ಕಾರಣ ಮಾಡಿದ್ದಾರೆ ಎಂಬ ಅಂಶವು ಏಪ್ರಿಲ್ ತಿಂಗಳಿನ ಪ್ರಧಾನಿಯವರ ಜನಪ್ರಿಯತೆ ರೇಟಿಂಗ್ ನಿಂದ ಬಹಿರಂಗವಾಗಿದೆ.

ಆದರೆ ಮೇ ಅಂತ್ಯದ ವೇಳೆಗೆ ಇಳಿಮುಖವಾಗುತ್ತಿರುವ ಕೊರೋನಾ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣದಿಂದ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂಬ ನಂಬಿಕೆ ಜನರಲ್ಲಿ ಆರಂಭವಾಗಿದೆ. ಕೊರೋನಾ ನಿರ್ವಹಣೆಯ ವೈಫಲ್ಯಕ್ಕೆ ರಾಜ್ಯ ಸರ್ಕಾರಗಳೇ ಕಾರಣ ಎಂಬ ಭಾವನೆ ಜನರಲ್ಲಿ ಬೇರೂರುವಂತೆ ಮಾಡಲು ಕೇಂದ್ರ ಸರ್ಕಾರವು ಯಶಸ್ವಿಯಾಗಿರುವುದರಿಂದ ಜನರು ಮೋದಿಯ ಮೇಲೆ ತಮ್ಮ ಸಿಟ್ಟನ್ನು ತೋರಿಸುತ್ತಿಲ್ಲ. 2021, ಮೇ ತಿಂಗಳಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಚಿಕ್ಕದಾದ ಪಡಿತರ ಪ್ಯಾಕೇಜ್ ಒಂದನ್ನು ಘೋಷಿಸಿದ್ದೂ ಪ್ರಧಾನಿಯ ಜನಪ್ರಿಯತೆಯ ಹೆಚ್ಚಳಕ್ಕೆ ಒಂದು ಕಾರಣ.

ಭಾರತದಲ್ಲಿ ಪ್ರಧಾನಿ ಮೋದಿ ಸುದೀರ್ಘ ಪ್ರಾಬಲ್ಯಕ್ಕೆ ಕಾರಣಗಳೇನು?

ಪ್ರಧಾನಿ ಮೋದಿ ಭಾರತದಲ್ಲಿ ದೀರ್ಘ ಕಾಲದಿಂದ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2014 ರಿಂದ ಸತತ ಏಳು ವರ್ಷಗಳ ಕಾಲ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ. ಮೋದಿ ಜನಪ್ರಿಯತೆಯ ಆಧಾರದ ಮೇಲೆ ಬಿಜೆಪಿ 2019ರಲ್ಲಿ ಎರಡನೇ ಅವಧಿಗೆ ರಾಷ್ಟ್ರದ ಆಡಳಿತದ ಚುಕ್ಕಾಣಿ ಹಿಡಿದಿದೆ. ವಿವಿಧ ರಾಜ್ಯಗಳಲ್ಲೂ ಮೋದಿ ಹೆಸರಿನಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತಿವೆ. ನರೇಂದ್ರ ಮೋದಿಯ ಜನಪ್ರಿಯತೆಯ ಬಂಡವಾಳದಲ್ಲೇ ರಾಜಕೀಯದಲ್ಲಿ ತೊಡಗಿರುವ ಬಿಜೆಪಿಗೆ ಮೋದಿ ವರ್ಚಸ್ಸಿಗೆ ಉಂಟಾಗುವ ಸಣ್ಣಪ್ರಮಾಣದ ಧಕ್ಕೆ ಕೂಡ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಜೆಪಿಯ ಪರಿಸ್ಥಿತಿ ಅರಿತಿರುವ ಮೋದಿಯವರು ಸತತ ಏಳು ವರ್ಷಗಳಿಂದ ತಮ್ಮ ಜನಪ್ರಿಯತೆಯನ್ನು ಸಾಕಷ್ಟು ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಮೋದಿಯ ಜನಪ್ರೀಯತೆಗೆ ಅನೇಕ ಕಾರಣಗಳಿವೆ.

ಮೊದಲನೆಯದಾಗಿ ಪ್ರಧಾನಿ ಮೋದಿ ಜನರನ್ನುದ್ಧೇಶಿಸಿ ಮಾತನಾಡುವಾಗ ತಮ್ಮ ಸರ್ಕಾರದ ಯೋಜನೆಗಳು ಮತ್ತು ಅವುಗಳ ಅನುಷ್ಠಾನದ ಕುರಿತು ಮಾತನಾಡದೇ ರಾಜಕೀಯ ವಿಷಯಗಳನ್ನು ಮಾತ್ರ ಮಾತನಾಡುತ್ತಾರೆ. ಭಾವನಾತ್ಮಕ ಅಂಶಗಳ ಮೂಲಕ ಜನರನ್ನು ತಮ್ಮೊಂದಿಗೆ ಹಿಡಿದಿಡಲು ಮುಂದಾಗುತ್ತಾರೆ. ಈ ಅಂಶ ಕೂಡ ಪ್ರಧಾನಿಯವರ ಜನಪ್ರಿಯತೆ ಕುಸಿಯದಂತೆ ನೋಡಿಕೊಂಡಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ, ನೀತಿ ನಿಯಮ ಮತ್ತು ಸರ್ಕಾರದ ಕಾರ್ಯಕ್ಷಮತೆಯಲ್ಲಿನ ವೈಫಲ್ಯಗಳು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಇತರ ಮಂತ್ರಿಗಳ ಮೇಲೆ ಹೋಗುತ್ತವೆ. ಪ್ರಧಾನಿ ಮೋದಿ ಉದ್ಧೇಶ ಪೂರ್ವಕವಾಗಿಯೇ ಸರ್ಕಾರದ ನಿರ್ದಿಷ್ಟ ಯೋಜನೆಗಳ ಕುರಿತಾದ ವಿಷಯಗಳಿಂದ ಅಂತರ ಕಾಪಾಡಿಕೊಳ್ಳುತ್ತಾರೆ. ಇದರಿಂದ ಪ್ರಧಾನಿ ಮೋದಿ ಸರ್ಕಾರದ ಬಹುತೇಕ ಎಲ್ಲಾ ಮಂತ್ರಿಗಳು ಅತ್ಯಂತ ಕಡಿಮೆ ಜನಪ್ರಿಯರಾಗಿದ್ದಾರೆ. ಬಹುತೇಕ ಮಂತ್ರಿಗಳ ಹೆಸರು ಕೂಡ ಜನರಿಗೆ ತಿಳಿದಿಲ್ಲ.
ಕೇಂದ್ರ ಸರ್ಕಾರದ ಜನಪ್ರಿಯತೆ ಯಾವಾಗಲೂ ಪ್ರಧಾನಿ ಮೋದಿ ಜನಪ್ರಿಯತೆಗಿಂತ ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ. ಪೂರಕವೆಂಬಂತೆ ಸಿ ವೋಟರ್ 2021 ಜನವರಿಯಲ್ಲಿ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಇರುವ ಸಂತೃಪ್ತಿ ಸೂಚ್ಯಂಕ ಕೇಂದ್ರಸರ್ಕಾರದ ಸಮ್ಮತಿ ಸೂಚ್ಯಂಕಕ್ಕಿತ ಶೇ. 8 ರಷ್ಟು ಹೆಚ್ಚಾಗಿದೆ. 2020 ರ ಜನವರಿಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ತಮ್ಮ ಸರ್ಕಾರಕ್ಕಿಂತ ಶೇ. 6 ರಷ್ಟು ಮುಂದಿದ್ದರು.

ಭಾರತದಲ್ಲಿ ಜನರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಬೇರೆ ಬೇರೆಯಾಗಿ ನೋಡುತ್ತಾರೆ. ಸರ್ಕಾರದ ವೈಫಲ್ಯಕ್ಕೆ ಪ್ರಧಾನಿಯನ್ನು ಹೊಣೆ ಮಾಡುತ್ತಿಲ್ಲ. ತಾವು ಎಷ್ಟೇ ಕಷ್ಟದಲ್ಲಿದ್ದರೂ ಕೇಂದ್ರಸರ್ಕಾರವನ್ನು ದೂಷಿಸುತ್ತಾರೆಯೇ ಹೊರತು ಪ್ರಧಾನಿಯ ಮೇಲೆ ಅಸಮಾಧಾನಗೊಳ್ಳುವುದಿಲ್ಲ ಎಂದು ಸಿ ವೋಟರ್ ಸ್ಥಾಪಕ ಯಶವಂತ್ ದೇಶಮುಖ್ ಅಭಿಪ್ರಾಯ ಪಟ್ಟಿದ್ದಾರೆ.

ನೋಟ್ ಬ್ಯಾನ್ ಸಂದರ್ಭದಲ್ಲಿ ಜನರು ಅನೇಕ ತೊಂದರೆಗೆ ಒಳಗಾದರು. ಸರ್ಕಾರದ ಆಡಳಿತ ವೈಫಲ್ಯದ ನಡುವೆಯೂ ಪ್ರಧಾನಿ ಜನಪ್ರಿಯತೆ ಕುಗ್ಗಲಿಲ್ಲ. ಪ್ರಧಾನಿಯ ಉದ್ಧೇಶಗಳು ಒಳ್ಳೆಯದೇ ಆಗಿರುತ್ತವೆ. ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಧಾನಿ ಏನು ಮಾಡಲು ಸಾಧ್ಯ ಎಂಬ ಭಾವನೆ ದೀರ್ಘ ಕಾಲದಿಂದ ಜನರಲ್ಲಿ ಬೇರೂರಿದೆ.

ದೇಶದಲ್ಲಿ ಕೊರೋನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತೊಡಗಿದ ಘಟನೆ ಮೊಟ್ಟ ಮೊದಲ ಬಾರಿಗೆ ಜನರು ಪ್ರಧಾನಿಯವರ ಉದ್ಧೇಶವನ್ನು ಶಂಕಿಸುವಂತೆ ಮಾಡಿದೆ. ದೇಶ ವಿಪತ್ತಿನಲ್ಲಿರುವಾಗ ಚುನಾವಣೆಯಲ್ಲಿ ಮುಳುಗಿದ್ದು ಪ್ರಧಾನಿ ಅಧಿಕಾರ ದಾಹಿ ಎಂಬ ಭಾವ ಜನರಲ್ಲಿ ನಿಧಾನಕ್ಕೆ ಆರಂಭಗೊಂಡಿದ್ದು ಏಪ್ರಿಲ್ ನಲ್ಲಿ ಪ್ರಧಾನಿ ಮೋದಿ ಜನಪ್ರಿಯತೆಯ ಕುಸಿತ ಇದರ ಸಂಕೇತ.

ಪರ್ಯಾಯ ನಾಯಕರ ಕೊರತೆ ಪ್ರಧಾನಿ ಜನಪ್ರಿಯತೆಗೆ ಕಾರಣವೇ?

ಕಳೆದ ಕೆಲವಾರಗಳಿಂದ ಅನೇಕ ರಾಜಕೀಯ ತಜ್ಞರು ಪ್ರಧಾನಿ ಮೋದಿಗೆ ಪರ್ಯಾಯ ನಾಯಕರು ದೇಶದಲ್ಲಿ ಇಲ್ಲದ ಕಾರಣ ಮೋದಿ ಜನಪ್ರಿಯ ನಾಯಕರಾಗಿದ್ದಾರೆ ಎಂದು ತಮ್ಮ ಲೇಖನಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಅವರ ಲೇಖನಗಳು ವಿರೋಧ ಪಕ್ಷಗಳ ವೈಫಲ್ಯವೇ ಮೋದಿ ಜನಪ್ರಿಯತೆಯ ಹಿಂದಿರುವ ರಹಸ್ಯ ಎಂಬರ್ಥದಲ್ಲಿ ಕೊನೆಗೊಳ್ಳುತ್ತವೆ. ಸಿ ವೋಟರ್ ಮಾತ್ರ ಪರ್ಯಾಯ ನಾಯಕರ ಕೊರತೆಯೊಂದೇ ಮೋದಿ ಜನಪ್ರಿಯತೆಗೆ ಮುಖ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸುತ್ತದೆ.

ಸಿ ವೋಟರ್ 2021, ಏಪ್ರಿಲ್ ವೇಳೆಗೆ ರಾಷ್ಟ್ರವ್ಯಾಪಿ ನಡೆಸಿದ ಸಮಿಕ್ಷೆಯಲ್ಲಿ ಪ್ರಧಾನಿಯವರ ಜನಪ್ರಿಯತೆ ಕುಸಿತ ಕಂಡಿದೆ. ಆದರೆ ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಗೆ ಪರ್ಯಾಯ ನಾಯಕರು ಯಾರಾಗಬಹುದು ಎಂದು ಕೇಳಿದ ಪ್ರಶ್ನೆಗೆ ಜನರು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಒಬ್ಬ ಪರ್ಯಾಯ ನಾಯಕನಿಲ್ಲದ ವೇಳೆಯಲ್ಲೂ ಪ್ರಧಾನಿ ಜನಪ್ರಿಯತೆ ಕುಸಿತ ಗೊಂಡಿರುವುದು ರಾಜಕೀಯ ತಜ್ಞರ ವಾದಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ.

ಸಿ ವೋಟರ್ ಪ್ರಕಾರ ಪರ್ಯಾಯ ನಾಯಕ ಅಥವಾ ಪ್ರತಿಸ್ಪರ್ಧಿಯ ವಿಚಾರ ಮುನ್ನೆಲೆಗೆ ಬರುವುದು ಚುನಾವಣೆಗೆ ಒಂದುವರ್ಷ ಇರುವಾಗ ಅಥವಾ ಚುನಾವಣೆಗೆ 18 ತಿಂಗಳು ಮೊದಲು. ಆ ಅಂತಿಮ ಅವಧಿಯಲ್ಲಿ ಪ್ರತಿಸ್ಪರ್ಧಿಯ ಜನಪ್ರಿಯತೆ ಏರಿದಂತೆ ಆಡಳಿತದಲ್ಲಿರುವ ನಾಯಕನ ಜನಪ್ರಿಯತೆ ಕುಸಿಯುತ್ತದೆ.

ಉದಾಹರಣೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ಜನಪ್ರಿಯತೆ 2010 ರ ಅವಧಿಯಲ್ಲೇ ಕುಸಿಯಲು ಪ್ರಾರಂಭವಾಯಿತು. 2011 ರ ಇಂಡಿಯಾ ಅಗೆನೆಸ್ಟ್ ಕರಪ್ಶನ್ ಆಂದೋಲನದ ನಂತರ ಡಾ. ಸಿಂಗ್ ಜನಪ್ರಿಯತೆಯ ಕುಸಿತ ಇನ್ನೂ ತೀವ್ರವಾಯಿತು. ಆ ವೇಳೆಗೆ ದೇಶಕ್ಕೆ ಮನಮೋಹನ್ ಸಿಂಗ್ ಪರ್ಯಾಯ ಯಾರೆಂದು ತಿಳಿದಿರಲಿಲ್ಲ. ಇಂದಿನ ಪ್ರಧಾನಿ ಮೋದಿ ಮುನ್ನೆಲೆಗೆ ಬಂದಿದ್ದು 2013 ರ ವೇಳೆಗಷ್ಟೆ. ಪ್ರತಿಸ್ಪರ್ಧಿ, ಅಥವಾ ಪರ್ಯಾಯ ನಾಯಕತ್ವದ ಅಂಶ ಪ್ರಮುಖವಾಗುವುದು ಚುನಾವಣಾ ವರ್ಷಗಳಲ್ಲಿ ಎಂದು ಸಿ ವೋಟರ್ ಸಮಿಕ್ಷೆ ಹೇಳುತ್ತದೆ.

ಕೋವಿಡ್ ನಿರ್ವಹಣೆಯ ವಿರುದ್ಧ ಕೇಂದ್ರ ಸರ್ಕಾರವನ್ನು ವಿರೋಧಪಕ್ಷಗಳು ತೀವ್ರವಾಗಿ ಟೀಕಿಸಲು ಆರಂಭಿಸಿದ್ದು ಮೇ ಅವಧಿಯಲ್ಲಿ. ಮೋದಿ ಜನಪ್ರಿಯತೆ ಹೆಚ್ಚು ಕುಸಿದಿರುವುದು ಏಪ್ರಿಲ್ ನಲ್ಲಿ. ಮೋದಿ ಜನಪ್ರಿಯತೆ ಕುಸಿತಕ್ಕೂ ಪರ್ಯಾಯ ನಾಯಕತ್ವದ ಕೊರತೆಗೂ ನೇರ ಸಂಬಂಧ ಸಮೀಕ್ಷೆಗಳ ವರದಿಯಿಂದ ಕಂಡು ಬರುವುದಿಲ್ಲ.

ಪ್ರಧಾನಿ ಮೋದಿ ನಾಯಕತ್ವದ ಕುರಿತು ಜನರ ನಂಬಿಕೆಯಲ್ಲಿ ವ್ಯತ್ಯಾಸವಾಗಿರುವುದು ಜನಪ್ರಿಯತೆ ಕುಸಿತದ ಮೂಲಕ ಪ್ರಕಟವಾಗಿದೆ. ಪ್ರಧಾನಿ ಮೋದಿ ಉದ್ದೇಶಗಳು ಕುರಿತು ಜನರಲ್ಲಿ ಬಲವಾಗಿ ಬೇರೂರಿದ್ದ ಧನಾತ್ಮಕ ಅಭಿಪ್ರಾಯಗಳು ಮತ್ತು ನಂಬಿಕೆ ಕುಸಿತವಾಗಿರುವುದು ಈ ಸಮೀಕ್ಷೆಗಳಿಂದ ತಿಳಿಯುತ್ತದೆ.

ತಮ್ಮನ್ನು ಸಂಕಷ್ಟಕ್ಕೆ ದೂಡಿದರೂ ಜನರು ಕಠಿಣ ನಿರ್ಧಾರಗಳನ್ನು ಬೆಂಬಲಿಸುತ್ತಾರೆ.

ಮಾರ್ನಿಂಗ್ ಕನ್ಸಲ್ಟ್ ಜಾಗತಿಕ ಸಮಿಕ್ಷಾ ಸಂಸ್ಥೆಯ ಪ್ರಕಾರ ಪ್ರಧಾನಿ ಮೋದಿಯ ಜನಪ್ರಿಯತೆ ಅವರ ಅಧಿಕಾರವಧಿಯಲ್ಲಿ ಎರಡು ಭಾರಿ ಉತ್ತುಂಗಕ್ಕೆರಿದೆ. ಒಂದು ಆಗಸ್ಟ್ 10, 2019 ರಂದು. ಸಂವಿಧಾನದ ಅನುಚ್ಛೇದ 370 ರಡಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ಕೇಂದ್ರಸರ್ಕಾರ ತೆಗೆದು ಹಾಕಿದ ಸಂದರ್ಭದ ಆಸುಪಾಸಿನ ದಿನಗಳು ಅವು. ಆ ಸಂದರ್ಭದಲ್ಲಿ ಪ್ರಧಾನಿಯ ಜನಪ್ರಿಯತೆಯ ಸೂಚ್ಯಂಕ 74 ಕ್ಕೆ ಏರಿತ್ತು. ಪ್ರಧಾನಿ ನಾಯಕತ್ವವನ್ನು ದೇಶದ ಶೇ. 84 ಜನರು ಬೆಂಬಲಿಸಿದ್ದರು.

ಪ್ರಧಾನಿ ಮೋದಿ ಜನಪ್ರಿಯತೆ ಉತ್ತುಂಗಕ್ಕೆ ಏರಿದ ಎರಡನೇ ಸಂದರ್ಭ 2 ಮೇ, 2020 ರಲ್ಲಿ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಸೂಚ್ಯಂಕ 72 ಕ್ಕೆ ಏರಿತು. ಜೊತೆಗೆ ದೇಶ ಶೇ. 82 ಜನರು ಮೋದಿ ನಾಯಕತ್ವವನ್ನು ಬೆಂಬಲಿಸಿದ್ದರು. ಶೇ. 12 ಜನರು ಮಾತ್ರ ಮೋದಿ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಎರಡನೆಯ ಸಂದರ್ಭ ಭಾರತದಲ್ಲಿ ಕೆಂದ್ರ ಸರ್ಕಾರ ರಾಷ್ಟ್ರ ವ್ಯಾಪಿ ಲಾಕ್ ಡೌನ್ ಘೋಷಿಸಿದ್ದ ಸಂದರ್ಭ.

ಸಮೀಕ್ಷೆಯು ಹೊರಹಾಕಿದ ಪ್ರಧಾನಿ ಜನಪ್ರಿಯತೆ ಉತ್ತುಂಗಕ್ಕೇರಿದ ಎರಡು ಸಂದರ್ಭಗಳಿಂದ ಭಾರತದ ಜನರು ತಮ್ಮ ನೋವು ಕಷ್ಟಗಳ ನಡುವೆಯೂ ನಾಯಕನ ಕಠಿಣ ನಿರ್ಧಾರಗಳನ್ನು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದೆರಡು ಘಟನೆಗಳ ಸಂದರ್ಭದಲ್ಲಿ ಜನರು ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಕಠಿಣ ನಿಲುವು ತೆಗೆದುಕೊಂಡಿದ್ದಾರೆ ಎಂಬ ಭಾವವನ್ನು ಹೊಂದಿದ್ದರು ಎಂಬುದು ಅರ್ಥವಾಗುತ್ತದೆ.

ಲಾಕ್ ಡೌನ್, ಡಿಮಾನಿಟೈಸೇಶನ್ ನಂತಹ ಸಂದರ್ಭದಲ್ಲಿನ ಪ್ರಧಾನಿ ಮೋದಿ ಜನಪ್ರಿಯತೆಯು, ಜನರು ಎಷ್ಟೇ ಕಷ್ಟವಾದರೂ ಕಠಿಣ ಮತ್ತು ಏಕಪಕ್ಷೀಯ ನಿರ್ಣಯಗಳನ್ನು ಬೆಂಬಲಿಸುತ್ತಾರೆ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. ಮೋದಿಯವರ ನಿರ್ಣಯಗಳ ಹಿಂದಿನ ಉದ್ಧೇಶ ಸರಿಯಾಗಿಯೇ ಇದೆ ಎಂಬ ಭಾವ ಜನರಲ್ಲಿ ಬೆಳೆದಿರುವುದನ್ನು ತೋರಿಸುತ್ತದೆ.

ಪ್ರಧಾನಿ ಮೋದಿ ಅಪಾರ ಜನಪ್ರಿಯತೆಗೆ ಕಾರಣವಾದ, ಪ್ರಧಾನಿ ಮೋದಿ ನಿಲುವುಗಳ ಹಿಂದಿನ ಉದ್ಧೇಶಗಳ ಮೇಲಿನ ಜನರ ನಂಬಿಕೆ ಕೇವಲ ನರೆಂದ್ರ ಮೋದಿ ಒಬ್ಬ ಸಮರ್ಥ ಪ್ರಧಾನಿ ಎಂಬ ಕಾರಣಗಳಿಂದ ಬೆಳೆದು ಬಂದಿಲ್ಲ. ಕೆಲವು ವರ್ಗಗಳ ಜನರು ಪ್ರಧಾನಿಯನ್ನು ಹಿಂದೂ ಹೃದಯ ಸಾಮ್ರಾಟ ಎಂದು ನಂಬಿರುವುದರಿಂದ ಮತ್ತು ಕೆಲವು ವರ್ಗಗಳು ಮೋದಿ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲು ಅತ್ಯಂತ ಸಮರ್ಥ ನಾಯಕ ಎಂದು ನಂಬಿದ್ದಾರೆ. ಜನರ ಈ ಬಲವಾದ ನಂಬಿಕೆಯ ಆಧಾರದ ಮೇಲೆ ಮೋದಿ ಜನಪ್ರೀಯತೆ ಮತ್ತು ಮೋದಿ ಉದ್ಧೇಶಗಳ ಕುರಿತಾದ ಜನರ ಅಭಿಪ್ರಾಯ ನಿಂತಿದೆ.

ವಿರೋಧಪಕ್ಷಗಳು ಇದುವರೆಗೆ ಕೊರೋನಾ ನಿರ್ವಹಣೆಯಲ್ಲಿನ ಕೇಂದ್ರ ಸರ್ಕಾರದ ವೈಫಲ್ಯವನ್ನು ಮತ್ತು ಕೋವಿಡ್ ವ್ಯಾಕ್ಸೀನ್ ಗಳನ್ನು ನೀಡುವಲ್ಲಿ ಸರ್ಕಾರ ಎಡವಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುವುದರಿಂದ ಮೋದಿ ಜನಪ್ರಿಯತೆ ಕಡಿಮೆಯಾಗುತ್ತಿಲ್ಲ ಎಂಬ ಅಂಶ ಸಿ ವೋಟರ್ ಮತ್ತು ಮಾರ್ನಿಂಗ್ ಕನ್ಸಲ್ಟ್ ನ ಸಮಿಕ್ಷೆಗಳಿಂದ ಸಾಬೀತಾಗಿದೆ. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳನ್ನು ಟೀಕಿಸುವ ಬದಲು ವಿರೋಧ ಪಕ್ಷಗಳು ನರೇಂದ್ರ ಮೋದಿಯವರ ಉದ್ಧೇಶಗಳನ್ನು ಪ್ರಶ್ನಿಸುವ ಮೂಲಕ ಮತ್ತು ಜನರ ಜೀವದ ಕುರಿತಾಗಿ ದೇಶದ ಪ್ರಧಾನಿಯ ನಿರಾಸಕ್ತಿಯನ್ನು ಎತ್ತಿ ತೋರಿಸುವುದಕ್ಕೆ ಮುಂದಾಗಬೇಕು. ನರೇಂದ್ರ ಮೋದಿ ಉದ್ಧೇಶಗಳ ಬಗ್ಗೆ ಜನರ ನಂಬಿಕೆ ಇಳಿದರೆ ಮಾತ್ರ ಭಾರತದಲ್ಲಿ ಮೋದಿ ಪ್ರಾಬಲ್ಯ ಕುಂಠಿತವಾಗಲು ಸಾಧ್ಯ.


ಇದನ್ನೂ ಓದಿ: ಲಸಿಕೆ ಪಡೆದ ಎಲ್ಲರೂ 2 ವರ್ಷಗಳಲ್ಲಿ ಸಾಯುತ್ತಾರೆ: ಈ ವ್ಯಾಟ್ಸಾಪ್ ವದಂತಿ ನಂಬಬೇಡಿ –…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಏರುತೆ ಇಳಿಯುತೇ ಯಾಕ‌0ದ್ರ‌ ದೇಶ‌ ಇನ್ನೂ ಪೂರ್ತಿ ನಾಶ‌ವಾಗಿಲ್ಲ‌ ಅದ್ಕೆ. ಸ‌ದ್ಯೆ ದೇಶ‌ ಹಾಳಾಗುತ್ತೆ ಆಗ‌ ಭ‌ಕ್ತ‌ತಿ0ದ‌ ಜ‌ನ‌ಪ್ರೀಯ‌ತೆ 100% ಏರುತ್ತೆ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...