“ನಾನು ನಾನಲ್ಲ. ನನ್ನ ಹೆಸರೂ ನನ್ನದಲ್ಲ. ನನ್ನ ತಂದೆ-ತಾಯಿ ನನ್ನನ್ನು ಹೆತ್ತವರಲ್ಲ. ನನ್ನ ತಮ್ಮ ಮತ್ತು ತಂಗಿ ನನ್ನ ಒಡಹುಟ್ಟಿದವರಲ್ಲ. ನಾನಾಡುವ ಭಾಷೆ ನನ್ನ ಮಾತೃಭಾಷೆಯಲ್ಲ. ನಾನು ಪಾಲಿಸುವ ಧರ್ಮ ನನ್ನದಲ್ಲ. ನಾನು ವಾಸಿಸುವ ದೇಶ ನನ್ನ ದೇಶವಲ್ಲ. ಅಂದರೆ ನಾನು ಯಾರೆಂದು ನೀವು ಭಾವಿಸಿದ್ದೀರೋ ಆತ ನಾನಲ್ಲ. ನಾನು ನಿಜವಾಗಲೂ ಯಾರೆಂದು ಹೇಳಬೇಕೆಂಬ ಆಶೆ ನನಗೆ; ಆದರೆ ನನ್ನ ಬದುಕಿನ ಪರಿಸ್ಥಿತಿ ನಾನು ನಿಜ ಹೇಳದಂತೆ ತಡೆಯುತ್ತಿದೆ….”

ಇಂತಹ ಪರಿಸ್ಥಿತಿಯಲ್ಲಿರುವ ಒಬ್ಬ ಮನುಷ್ಯನ ಬದುಕು ಹೇಗಿರಬಹುದೆಂದು ತೋರಿಸಿರುವ ಫ್ರೆಂಚ್ ನಿರ್ದೇಶಕ ರಾಡು ಮಹೈಲಿಯಾನು ಅವರ ‘Live and become’ (ಬದುಕು ಮತ್ತು ಬೆಳೆ) ಎಂಬ ಅದ್ಭುತ ಸಿನಿಮಾವನ್ನು ಮೊನ್ನೆ ನೋಡಿದೆ.

ನಮ್ಮಲ್ಲಿ ಬಹಳಷ್ಟು ಜನ ಯಹೂದಿಯರೆಲ್ಲ ಬಿಳಿಯರು ಎಂದು ನಂಬಿದ್ದಾರೆ. ಆದರೆ ಆಫ್ರಿಕಾದ ಇಥಿಯೋಪಿಯಾದಲ್ಲೂ ಕಪ್ಪು ಬಣ್ಣದ ಯಹೂದಿಯರಿದ್ದರು. ಐತಿಹ್ಯದ ಪ್ರಕಾರ ಇಸ್ರೇಲಿನ ರಾಜ ಸಾಲೊಮನ್ ಮತ್ತು ಇಥಿಯೋಪಿಯಾದಲ್ಲಿದ್ದ ಶೀಬಾ ಸಾಮ್ರಾಜ್ಯದ ರಾಣಿಗೆ ಜನಿಸಿದ ಪುತ್ರ ಮನೆಲಿಕ್‌ನ ವಂಶಜರು ಈ ಕಪ್ಪು ಯಹೂದಿಗಳು.

ಎಂಭತ್ತರ ದಶಕದಲ್ಲಿ ಇಥಿಯೋಪಿಯಾದ ಮೇಲೆ ಕ್ಷಾಮ ಮತ್ತು ಆಂತರಿಕ ಯುದ್ಧ ಜೊತೆಜೊತೆಗೆ ದಾಳಿ ಇಟ್ಟಾಗ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆಯ ಸೂಡಾನ್ ದೇಶಕ್ಕೆ ವಲಸೆ ಹೋಗಿ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸಲಾರಂಭಿಸಿದರು. ಅವರಲ್ಲಿ ಯಹೂದಿಯರೂ ಇದ್ದರು. ಅದೇ ಹೊತ್ತಿಗೆ ಜಗತ್ತಿನಾದ್ಯಂತ ಚದುರಿಹೋಗಿದ್ದ ಯಹೂದಿಗಳಿಗೆ ಇಸ್ರೇಲ್ ತನ್ನ ಬಾಗಿಲನ್ನು ತೆರೆಯಿತಲ್ಲದೆ, ಇಥಿಯೋಪಿಯಾದಲ್ಲಿದ್ದ ಯಹೂದಿಯರನ್ನು ಇಸ್ರೇಲಿಗೆ ಹೊತ್ತೊಯ್ಯಲು ’ಅಪರೇಷನ್ ಮೋಸಸ್’ ಎಂಬ ಗುಪ್ತ ಕಾರ್ಯಾಚರಣೆಯನ್ನು ಕೈಗೊಂಡಿತು.

‘Live and become’ಚಿತ್ರದ ಕತೆ ಪ್ರಾರಂಭವಾಗುವುದೇ ಸೂಡಾನ್‌ನಲ್ಲಿನ ಒಂದು ನಿರಾಶ್ರಿತರ ಶಿಬಿರದಲ್ಲಿ. ಭವಿಷ್ಯವೇ ಇಲ್ಲದಂತಹ ಆ ಶಿಬಿರದಲ್ಲಿ ಒಂದು ದಿನ ಯಹೂದಿ ತಾಯಿಯೊಬ್ಬಳ ಮಗ ಅವಳ ಮಡಿಲಲ್ಲೇ ಕೊನೆಯುಸಿರೆಳೆಯುತ್ತಾನೆ. ಅವಳ ದುಃಖವನ್ನು ಕ್ರಿಶ್ಚಿಯನ್ ತಾಯಿಯೊಬ್ಬಳು ದೂರದಿಂದಲೇ ಗಮನಿಸುತ್ತಾಳೆ. ಅದೇ ದಿನ ರಾತ್ರಿ ಹಲವು ಯಹೂದಿಯರನ್ನು ಇಸ್ರೇಲಿಗೆ ಸಾಗಿಸಲು ಲಾರಿಗಳು ಬಂದಾಗ ಆ ಯಹೂದಿ ತಾಯಿ ಲಾರಿಯನ್ನೇರಲು ಜನರ ಸಾಲಿನಲ್ಲಿ ನಿಲ್ಲುತ್ತಾಳೆ. ಆ ಕ್ಷಣ ಕ್ರಿಶ್ಚಿಯನ್ ತಾಯಿಗೆ ಒಂದು ಪರಿಹಾರದ ಸೂತ್ರ ಹೊಳೆಯುತ್ತದೆ. ನಿದ್ರಿಸುತ್ತಿರುವ ತನ್ನ ಕ್ರಿಶ್ಚಿಯನ್ ಮಗನನ್ನು ಎದ್ದೇಳಿಸಿ ಸಾಲುಗಟ್ಟಿ ನಿಂತಿರುವ ಜನರತ್ತ ಬೊಟ್ಟು ಮಾಡಿ “ಹೋಗು” ಎಂದು ಆದೇಶಿಸುತ್ತಾಳೆ. ತನ್ನ ತಾಯಿಯೇ ತನ್ನನ್ನು ಓಡಿಸುತ್ತಿದ್ದಾಳೆ ಎಂದು ಭಾವಿಸುವ ಮಗ ಕಣ್ಣೀರಿಡುತ್ತಾನೆ. ಆದರೆ ಆಕೆ ಕರಗುವುದಿಲ್ಲ “ಹೋಗು, ಬದುಕು ಮತ್ತು ಬೆಳೆ” ಎಂದು ಆತನನ್ನು ದೂಡುತ್ತಾಳೆ. ವಿಧಿ ಇಲ್ಲದೆ ಆತ ಹೋಗುತ್ತಾನೆ. ತನ್ನ ಮಗನನ್ನು ಕಳೆದುಕೊಂಡಿರುವ ಯಹೂದಿ ತಾಯಿಯ ಕೈ ಹಿಡಿಯುತ್ತಾನೆ. ಆಕೆಗೆ ಗೊತ್ತಾಗುತ್ತದೆ: ನರಕ ಸದೃಶವಾಗಿರುವ ಶಿಬಿರದಿಂದ ತನ್ನ ಮಗನನ್ನು ಪಾರು ಮಾಡಲು ಕ್ರಿಶ್ಚಿಯನ್ ತಾಯಿ ತನ್ನೊಂದಿಗೆ ತನ್ನ ಪುತ್ರನನ್ನು ಗುಪ್ತವಾಗಿ ಸಾಗಿಸಲು ಇಚ್ಛಿಸುತ್ತಿದ್ದಾಳೆಂದು. ಆ ಹುಡುಗ ತೀರಿಕೊಂಡಿರುವ ತನ್ನ ಮಗನ ವಯಸ್ಸಿನನೇ ಆದ್ದರಿಂದ ಈತನೇ ತನ್ನ ಮಗ ಎಂದು ಅಧಿಕಾರಿಗಳಿಗೆ ಹೇಳಿ ಅವನನ್ನು ತನ್ನೊಂದಿಗೆ ಇಸ್ರೇಲಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ತನ್ನ ಮಗನ ಹೆಸರಾದ ಸಾಲೊಮನ್ ಹೆಸರನ್ನೇ ಈ ಹುಡುಗನಿಗೂ ಇಡುತ್ತಾಳೆ. ತನ್ನ ವಂಶದ ಮತ್ತು ಸಮುದಾಯದ ಪ್ರಮುಖರ ಹೆಸರನ್ನೆಲ್ಲ ಆತನಿಗೆ ಮನವರಿಕೆ ಮಾಡಿಕೊಟ್ಟು “ಎಂದೂ ನೀನು ನಿಜವಾಗಲೂ ಯಾರು ಎಂಬುದನ್ನು ಯಾರಿಗೂ ಹೇಳಬೇಡ” ಎಂದು ಹೇಳಿ ಕ್ಷಯರೋಗದಿಂದ ಸಾಯುತ್ತಾಳೆ.

ಹೊಸ ಹೆಸರು, ಹೊಸ ದೇಶ, ಹೊಸ ಪರಿಸರದಲ್ಲಿ ಬಾಲಕ ಏಕಾಂಗಿಯಾಗುತ್ತಾನೆ. ಆತನನ್ನು ದಾಖಲಿಸಿರುವ ಶಾಲೆಯಿಂದ ಓಡಿಹೋಗಲು ಯತ್ನಿಸುತ್ತಾನೆ, ಇತರೆ ಹುಡುಗರೊಂದಿಗೆ ಬಡಿದಾಡುತ್ತಾನೆ. ಆಹಾರವನ್ನು ತ್ಯಜಿಸಿ ಮೌನವಾಗಿ ಪ್ರತಿಭಟಿಸುತ್ತಾನೆ. ಕೊನೆಗೆ ಅವನನ್ನು ನಿಯಂತ್ರಿಸಲು ಆಗದೇ. ಇಬ್ಬರು ಮಕ್ಕಳನ್ನು ಹೊಂದಿರುವ ಬಿಳಿ ಯಹೂದಿ ದಂಪತಿಗಳಿಗೆ ಅಧಿಕಾರಿಗಳು ಅವನನ್ನು ದತ್ತು ನೀಡುತ್ತಾರೆ. ಅವರ ಮನೆಯಲ್ಲೂ ಬಾಲಕ ತನ್ನ ಬಂಡಾಯವನ್ನು ಮುಂದುವರೆಸುತ್ತಾನೆ. ಆದರೆ ಆ ದಂಪತಿಗಳು ಆತನನ್ನು ನಿಜವಾಗಲೂ ಪ್ರೀತಿಸುತ್ತಾರೆ. ಜನಾಂಗೀಯ ದ್ವೇಷಿಗಳಿಂದ ಅವನನ್ನು ರಕ್ಷಿಸುತ್ತಾರೆ. ತಾವು ನಾಸ್ತಿಕರಾದರೂ ಬಾಲಕನಿಗೆ ಯಹೂದಿ ಸಂಪ್ರದಾಯದಲ್ಲಿ ನಂಬಿಕೆ ಇದೆ ಎಂದು ಭಾವಿಸಿ ಆತನನ್ನು ಧಾರ್ಮಿಕ ಶಾಲೆಗೂ ದಾಖಲಿಸುತ್ತಾರೆ. ಪ್ರೀತಿಯಿಂದಲೇ ಬಾಲಕನ ಬಂಡಾಯವನ್ನು ಮುರಿಯುತ್ತಾರೆ. ತನ್ನನ್ನು ಹೆತ್ತ ತಾಯಿಗೆ ಹಂಬಲಿಸುತ್ತಲೇ, ತನ್ನನ್ನು ರಕ್ಷಿಸಿದ ತಾಯಿ ನೀಡಿದ ಎಚ್ಚರಿಕೆಯನ್ನು ಮರೆಯದೇ ತನ್ನನ್ನು ಸಾಕಿಸಲಹುತ್ತಿರುವ ತಾಯಿಗೆ ಹತ್ತಿರವಾಗುತ್ತಾನೆ.

PC: myCANAL

ಹೊಸ ದೇಶದ ಭಾಷೆ ಮತ್ತು ತನ್ನ ದತ್ತು ಸಂಸಾರದ ಫ್ರೆಂಚ್ ಭಾಷೆಗಳನ್ನು ಕಲಿಯುತ್ತಾನೆ. ಯಹೂದಿ ಸಂಪ್ರದಾಯಗಳನ್ನು ಪಾಲಿಸುತ್ತಾನೆ. ಇಸ್ರೇಲಿನಲ್ಲಿ ವಾಸಿಸುವ ಹಕ್ಕು ತನ್ನಂತಹ ಕಪ್ಪು ಯಹೂದಿಯರಿಗೂ ಇದೆ ಎಂದು ಪ್ರತಿಭಟಿಸುತ್ತಾನೆ, ವಿಧಿ ಇಲ್ಲದೆ ತಾನಿರುವ ಸಂದರ್ಭಕ್ಕೆ ಹೊಂದುಕೊಳ್ಳುತ್ತಾನೆ. ಆದರೆ ಅವನ ಆಳದಲ್ಲಿ ತನ್ನ ಬದುಕೇ ಒಂದು ದೊಡ್ಡ ಸುಳ್ಳು ಎಂಬ ನೋವು ಕಾಡುತ್ತಲೇ ಇರುತ್ತದೆ; ಹೆತ್ತ ತಾಯಿಯ ನೆನಪು ಮರುಕಳಿಸುತ್ತಿರುತ್ತದೆ.

ಆತ ಹದಿಹರೆಯದವನಾದಾಗ ಬಿಳಿ ಯಹೂದಿ ಯುವತಿಯೊಬ್ಬಳು ಅವನನ್ನು ಪ್ರೇಮಿಸಲಾರಂಭಿಸುತ್ತಾಳೆ. ಇಸ್ರೇಲ್ ಸರ್ಕಾರದ ನಿಯಮದ ಪ್ರಕಾರ ಆ ಹಂತದಲ್ಲಿ ಆತ ಸೈನ್ಯವನ್ನು ಸೇರಬೇಕು. ಚಿಕ್ಕವನಿದ್ದಾಗಲೇ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿರುವ ಅವನಿಗೆ ಸೈನ್ಯವನ್ನು ಸೇರಲು ಇಷ್ಟವಿಲ್ಲ. ಅತ್ತ ತನ್ನನ್ನು ಪ್ರೀತಿಸುತ್ತಿರುವ ಹುಡುಗಿಗೆ ತನ್ನ ಬಗ್ಗೆ ಸತ್ಯವನ್ನೂ ಹೇಳಲಾಗದೆ, ಇತ್ತ ಸೈನ್ಯಕ್ಕೆ ಸೇರಿ ಬಂದೂಕು ಹಿಡಿಯಲೂ ಆಗದೆ ಆತ ಫ್ರಾನ್ಸ್ ದೇಶಕ್ಕೆ ಪಲಾಯನ ಮಾಡುತ್ತಾನೆ. ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್ ಆಗುತ್ತಾನೆ. ’ಗಡಿಗಳಿಲ್ಲದ ವೈದ್ಯರು’ ಎಂಬ ಸರ್ಕಾರೇತರ ಸಂಘಟನೆಯನ್ನು ಸೇರಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಾನೆ. ಆದರೂ ಯುದ್ಧದ ಹಿಂಸೆ ಅವನನ್ನು ಬಸವಳಿಸುತ್ತದೆ. ಅನಾರೋಗ್ಯದಿಂದ ಹತ್ತು ವರ್ಷಗಳ ನಂತರ ಇಸ್ರೇಲಿಗೆ ವಾಪಸ್ ಬರುತ್ತಾನೆ. ಅಲ್ಲಿ ಅವನ ಹುಡುಗಿ ಆತನಿಗಾಗಿ ಕಾದಿರುತ್ತಾಳೆ. ತನ್ನ ತಂದೆ-ತಾಯಿಯ ವಿರೋಧದ ನಡುವೆಯೂ ಆಕೆ ಅವನನ್ನು ಮದುವೆಯಾಗುತ್ತಾಳೆ. ತಮ್ಮ ಮೊದಲನೆ ರಾತ್ರಿ ತನ್ನ ಹೆಂಡತಿಗಾದರೂ ತನ್ನ ಬಗ್ಗೆ ಸತ್ಯವನ್ನು ಹೇಳಬೇಕೆಂದು ಆತ ಪ್ರಯತ್ನಿಸುತ್ತಾನೆ. ಆದರೆ ಅವಳ ನಿಷ್ಕಳಂಕ ಪ್ರೀತಿ ಅವನ ಬಾಯಿ ಕಟ್ಟಿಹಾಕುತ್ತದೆ.

ಅವರಿಬ್ಬರ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತದೆ. ಆದರೆ ಯಾವಾಗ ಆಕೆ ಗರ್ಭಿಣಿಯಾಗುತ್ತಾಳೋ ಆಗ ಆತನಿಂದ ಸುಳ್ಳನ್ನು ಮುಂದುವರಿಸಲಾಗುವುದಿಲ್ಲ. ಸತ್ಯ ಹೊರಬರುತ್ತದೆ. ತನ್ನ ಹೆಸರು ಸಾಲೊಮನ್ ಅಲ್ಲ, ತಾನು ಯಹೂದಿ ಅಲ್ಲ, ತಾನು ಇಸ್ರೇಲಿ ಅಲ್ಲ ಎಂದು ಹೇಳಿದಾಗ ಆಕೆ ಕಣ್ಣೀರಿಡುತ್ತಾಳೆ. ತಾನು ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ತ್ಯಜಿಸಿದ್ದು ಇಂಥವನಿಗಾಗಿಯೇ ಎಂದು ಕುಪಿತಳಾಗುತ್ತಾಳೆ. ಅವನನ್ನು ತೊರೆದುಹೋಗುತ್ತಾಳೆ.

ಆಗ ಆತನ ನೆರವಿಗೆ ಬರುವುದು ಅವನನ್ನು ಪ್ರೀತಿಯಿಂದ ಸಾಕಿಸಲುಹಿದ ತಾಯಿ. ಆತ ಬೇಕೆಂತಲೇ ಸುಳ್ಳು ಹೇಳಲಿಲ್ಲ, ಬದಲಾಗಿ ಆತ ಇದ್ದ ಸಂದರ್ಭ ಹಾಗಿತ್ತು ಎಂದು ತಾಯಿ ಮನವರಿಕೆ ಮಾಡಿಕೊಟ್ಟ ನಂತರ ಹೆಂಡತಿ ಆತನಲ್ಲಿಗೆ ವಾಪಸ್ ಬರುತ್ತಾಳೆ. ಹಾಗೆ ಬರುವಾಗ “ನಿನಗಾಗಿ ಮೂವರು ತಾಯಂದಿರು ಅದೆಷ್ಟು ಪ್ರೀತಿ ತೋರಿದರು” ಎಂದು ಉದ್ಗಾರವೆತ್ತುತ್ತಾಳೆ ಮತ್ತು ಆತ ತನ್ನ ಹೆತ್ತ ತಾಯಿಯನ್ನು ಹುಡುಕಬೇಕು ಎಂದು ಹೇಳುತ್ತಾಳೆ. ಅವರಿಗೊಬ್ಬ ಮಗ ಜನಿಸಿದಾಗ ಸಾಲೊಮನ್ ಆಫ್ರಿಕಾದ ನಿರಾಶ್ರಿತರ ಶಿಬಿರದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಗ ಓರ್ವ ಮುದುಕಿ ಆತನ ಕಣ್ಣಿಗೆ ಬೀಳುತ್ತಾಳೆ, “ಅಮ್ಮಾ ಎಂದು ಆಕೆಯನ್ನು ಆಪ್ಪಿಕೊಳ್ಳುತ್ತಾನೆ. ಆಕೆಯ ಆಕ್ರಂದನದೊಂದಿಗೆ ಚಿತ್ರ ಮುಗಿಯುತ್ತದೆ.

ಈ ಜಗತ್ತಿನಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಅದೆಷ್ಟು ಜನ ಏನೇನನ್ನು ಮಾಡಿಲ್ಲ. ಅದೆಷ್ಟೋ ಜನ ಪ್ರಾಣರಕ್ಷಣೆಗಾಗಿ ಇತರರನ್ನು ಕೊಂದಿದ್ದಾರೆ, ಉಪವಾಸದಿಂದ ಸಾಯಬಾರದೆಂದು ಇತರೆ ಮನುಷ್ಯರ ಮಾಂಸವನ್ನು ತಿಂದು ಬದುಕಿದ್ದಾರೆ, ಮೂತ್ರವನ್ನು ಕುಡಿದು ತಮ್ಮ ಪ್ರಾಣ ಹೋಗದಂತೆ ನೋಡಿಕೊಂಡಿದ್ದಾರೆ, ನೂರಾರು ಸುಳ್ಳು ಹೇಳಿದ್ದಾರೆ. ತಮ್ಮನ್ನು ನಂಬಿರುವವರಿಗೇ ದ್ರೋಹ ಬಗೆದಿದ್ದಾರೆ.

‘Live and become’ ನ ನಾಯಕ ಕೂಡ ತನ್ನ ಪ್ರಾಣರಕ್ಷಣೆಗೆ ಸುಳ್ಳು ಹೇಳಿದ್ದಾನೆ. ತನ್ನ ಗುಟ್ಟು ರಟ್ಟಾಗದಂತೆ ಪ್ರತಿಕ್ಷಣ ಎಚ್ಚರಿಕೆ ವಹಿಸಿದ್ದಾನೆ. ಆದರೆ ಪ್ರೀತಿಗೆ ಆ ಸುಳ್ಳನ್ನು ಹೊರಗೆಡಹುವ ಮತ್ತು ಆ ಸುಳ್ಳನ್ನು ಮೀರಿ ಬದುಕುವ ಶಕ್ತಿ ಇದೆ ಎಂದು ಚಿತ್ರ ತೋರಿಸುತ್ತದೆ.

ಪ್ರೀತಿಯೇ ಹೆತ್ತ ತಾಯಿ ಅವನನ್ನು ದೂರ ಕಳುಹಿಸುವಂತೆ ಮಾಡುತ್ತದೆ. ಪ್ರೀತಿಯೇ ಮತ್ತೋರ್ವ ತಾಯಿ ಅವನನ್ನು ರಕ್ಷಿಸುವಂತೆ ಮಾಡುತ್ತದೆ. ಪ್ರೀತಿಯೇ ಮೂರನೆ ತಾಯಿ ಅವನನ್ನು ಸಾಕಿಸಲಹುವಂತೆ ನೋಡಿಕೊಳ್ಳುತ್ತದೆ. ಪ್ರೀತಿಯೇ ಅವನ ಹೆಂಡತಿ ಅವನನ್ನು ಸ್ವೀಕರಿಸುವಂತೆ ಮಾಡುತ್ತದೆ. ದೇಶ, ಭಾಷೆ, ಧರ್ಮ, ಬಣ್ಣದಂತಹ ಗಡಿಗಳನ್ನು ಗುರುತಿಸದ ಪ್ರೀತಿಗೆ ಇರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಇದು ಆಗಸ್ಟ್ 05, 2009ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಮರುಪ್ರಕಟಣೆ


ಇದನ್ನೂ ಓದಿ: ಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗೌರಿ ಲಂಕೇಶ್
+ posts

LEAVE A REPLY

Please enter your comment!
Please enter your name here