ನಟ, ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಇತ್ತಿಚೆಗೆ ಮುಕ್ತಾಯಗೊಂಡ ತಮಿಳುನಾಡು ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲುವಲ್ಲಿಯೂ ವಿಫಲವಾಗಿದೆ. ಇತ್ತ ಪಕ್ಷದ ಸದಸ್ಯರು ಸಾಲು ಸಾಲು ರಾಜೀನಾಮೆ ಸಲ್ಲಿಸುತ್ತಿದ್ದು, ಸದಸ್ಯರು ತಮ್ಮ ಆಲೋಚನೆಗಳನ್ನು ತನಗೆ ಕಳುಹಿಸುವಂತೆ ಕಮಲ್ ಹಾಸನ್ ಕೇಳಿಕೊಂಡಿದ್ದಾರೆ.
ಕೊಯಮತ್ತೂರು (ದಕ್ಷಿಣ) ಕ್ಷೇತ್ರದಿಂದ ಸ್ಫರ್ಧಿಸಿದ್ದ ಎಂಎನ್ಎಂ ಸಂಸ್ಥಾಪಕ ಕಮಲ್ ಹಾಸನ್ ಅಲ್ಲಿ ಸೋಲನುಭವಿಸಿದ್ದರು. ಸಂಘಟನೆಯಲ್ಲಿ “ಪ್ರಜಾಪ್ರಭುತ್ವ” ಕೊರತೆಯಿದೆ ಎಂದು ಆರೋಪಿಸಿ ಪಕ್ಷದ ಉಪಾಧ್ಯಕ್ಷ ಆರ್.ಮಹೇಂದ್ರನ್ ಹುದ್ದೆ ತ್ಯಜಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಮಹೇಂದ್ರನ್ ಅವರನ್ನು ಅನುಸರಿಸಿ, ಇತರ ಆರು ಮಂದಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಪತ್ರಗಳನ್ನು ಕಳುಹಿಸಿದ್ದಾರೆ. ಪಕ್ಷದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ತಮ್ಮ ಆಲೋಚನೆಗಳನ್ನು ನನಗೆ ಮೇಲ್ ಮಾಡಿ ತಿಳಿಸುವಂತೆ ಪಕ್ಷದ ಸದಸ್ಯರಲ್ಲಿ ಕಮಲ್ ಹಾಸನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲಿಯೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ!
ಸದಸ್ಯರ ರಾಜೀನಾಮೆ ಹಿನ್ನೆಲೆ ಪಕ್ಷದ ಉದ್ದೇಶಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಈಗೀನ ಪರಿಸ್ಥಿತಿ ಮತ್ತು ಉದ್ದೇಶಿತ ಪಿತೂರಿಗಳಿಗೆ ಅನುಗುಣವಾಗಿ ನಮ್ಮ ಗುರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ಒತ್ತಿ ಹೇಳಿದ್ದಾರೆ.
ಕೊಯಮತ್ತೂರಿನ ಸಿಂಗನಲ್ಲೂರ್ ಕ್ಷೇತ್ರದಿಂದ ಸ್ಪರ್ಧಿಸಿದ ಮಹೇಂದ್ರನ್, ಪಕ್ಷದಲ್ಲಿರುವ ಕೆಲವು ಸಲಹೆಗಾರರನ್ನು ದೂಷಿಸಿದ್ದಾರೆ. ಜೊತೆಗೆ ಕಮಲ್ ಹಸನ್ ಅವರು ಪಕ್ಷವನ್ನು ನಡೆಸುವ ವಿಧಾನವು ಸರಿಯಿಲ್ಲ ಎಂದು ಆರೋಪಿಸಿದ್ದಾರೆ.
“ತಮಿಳುನಾಡಿಗೆ ಬದಲಾವಣೆ ತರುವ ಉದ್ದೇಶದಿಂದ ನಮ್ಮ ಪಕ್ಷವು ಏಪ್ರಿಲ್ 6 ರಂದು ನಡೆದ ಮೊದಲ ವಿಧಾನಸಭಾ ಚುನಾವಣೆಯನ್ನು ಎದುರಿಸಿದೆ. ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ” ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
“ಕ್ಷೇತ್ರದಲ್ಲಿ ಶತ್ರುಗಳ ಜೊತೆಗೆ ಪಕ್ಷದಲ್ಲಿ ದ್ರೋಹಿಗಳು ಇದ್ದಾರೆ ಎಂದು ನಮಗೆ ತಿಳಿದಿದೆ. ಪಕ್ಷದಿಂದ ದ್ರೋಹಿಗಳನ್ನು ತೆಗೆಯಲು ಸರ್ವಾನುಮತದ ಕೋರಸ್ ಇತ್ತು. ಈ ಪಟ್ಟಿಯ ಮೊದಲ ಸಾಲಿನಲ್ಲಿ ಡಾ. ಆರ್.ಮಹೇಂದ್ರನ್ ಇದ್ದರು. ಮಹೇಂದ್ರನ್ ಅವರು ತಮ್ಮ ಅಪ್ರಾಮಾಣಿಕತೆ ಮತ್ತು ಅದಕ್ಷತೆಯನ್ನು ಮರೆಮಾಚಲು ಇತರರನ್ನು ದೂಷಿಸಲು ಮತ್ತು ಸಹಾನುಭೂತಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಮಲ್ ಹಾಸನ್ ಆರೋಪಿಸಿದ್ದಾರೆ.
ನಟ ಕಮಲ್ ಹಾಸನ್ ಅವರ ಎಂಎನ್ಎಂ ತಮಿಳುನಾಡಿನ 234 ವಿಧಾನಸಭಾ ಸ್ಥಾನಗಳಲ್ಲಿ 154 ರಲ್ಲಿ ಸ್ಪರ್ಧಿಸಿತ್ತು. ಉಳಿದ 80 ಸ್ಥಾನಗಳಲ್ಲಿ ಎಂಎನ್ಎಂನ ಎರಡು ಮೈತ್ರಿ ಪಾಲುದಾರಾದ, ಆರ್.ಶರತ್ಕುಮಾರ್ ನೇತೃತ್ವದ ಎಐಎಸ್ಎಂಕೆ ಮತ್ತು ಟಿ.ಆರ್.ಪರಿವೇಂದ್ರ ಅವರ ಐಜೆಕೆ ತಲಾ 40 ಸ್ಥಾನಗಳಿಗೆ ಸ್ಪರ್ಧಿಸಿದ್ದವು.
ಸದ್ಯ ತಮಿಳುನಾಡಿನಲ್ಲಿ ಎಂ ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ರಾಜ್ಯದಲ್ಲಿ ಬಹುಮತ ಪಡೆದು ಒಂದು ದಶಕದ ನಂತರ ಅಧಿಕಾರಕ್ಕೆ ಮರಳಿದೆ.
ಇದನ್ನೂ ಓದಿ: ಕೊರೊನಾ ಚಿಕಿತ್ಸೆಗೆ ಹಸುವಿನ ಸಗಣಿ ಬಳಕೆ ಅಪಾಯಕಾರಿ- ವೈದ್ಯರ ಎಚ್ಚರಿಕೆ


