ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 74 ರೋಗಿಗಳು ಸಾವನ್ನಪ್ಪಿದ್ದಾರೆ. ಇದು ರಾಜ್ಯದ ಅತಿದೊಡ್ಡ ಕೊರೊನಾ ಆರೈಕೆ ಕೇಂದ್ರವಾಗಿದ್ದು, ಮೃತರೆಲ್ಲರೂ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ 2 ರಿಂದ 6 ರವರೆಗೆ 26 ಮಂದಿ, ಬುಧವಾರ 20 ಮಂದಿ ಮತ್ತು ಗುರುವಾರ ಬೆಳಿಗ್ಗೆ 15 ಸಾವುಗಳು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿವೆ.
ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ಅದರ ಪೂರೈಕೆಯ ನಡುವಿನ ಅಂತರವು ಕೆಲವು ಸಮಸ್ಯೆಗಳಿಗೆ ಕಾರಣವಾಗಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶ: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, ಮಾಸಿಕ 5000 ರೂ. ಪಿಂಚಣಿ
ಜೊತೆಗೆ ರಾಜ್ಯದಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಒತ್ತಿ ಹೇಳಿದ್ದರು. ಆಮ್ಲಜನಕದ ಸುಗಮ ಪೂರೈಕೆಗಾಗಿ ವಾರ್ಡ್ ಮಟ್ಟದ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯಿದೆ ಎಂದಿದ್ದರು.
ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿರುವಂತೆ, ಮೇ 1 ಮತ್ತು 10 ರ ನಡುವೆ ಗೋವಾವು ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಗದಿಪಡಿಸಿದ 110 ಮೆಟ್ರಿಕ್ ಟನ್‌ಗಳಲ್ಲಿ ಕೇವಲ 66.74 ಮೆಟ್ರಿಕ್ ಟನ್‌ಗಳನ್ನು ಮಾತ್ರ ಪಡೆದುಕೊಂಡಿದೆ ಎಂದು ಪ್ರಧಾನ ಕಾರ್ಯದರ್ಶಿ ಪಿಕೆ ಗೋಯೆಲ್ ಅವರು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತ, ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೊರೊನಾ ಸೋಂಕಿತ ರೋಗಿಗಳಿಂದ ತುಂಬಿದ್ದು, ಹೊಸ ರೋಗಿಗಳಿಗೆ ಸ್ಥಳವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಯೋಜನೆಗೆ ವ್ಯಾಪಕ ವಿರೋಧ: ಪೋಟೋ, ವಿಡಿಯೊ ನಿಷೇಧಿಸಿದ ಸರ್ಕಾರ


