ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ‘ತೌಕ್ತೆ’ (Tauktae) ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ 53 ತಂಡಗಳನ್ನು ನಿಯೋಜಿಸಲಾಗಿದೆ.
ಈ 53 ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
53 ತಂಡಗಳ ಪೈಕಿ 24 ತಂಡಗಳನ್ನು ಈ ಮೊದಲೇ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಉಳಿದ ತಂಡಗಳನ್ನು ಕಾರ್ಯಾಚರಣೆಗೆ ಸಿದ್ಧವಾಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತೌಕ್ತೆ ಚಂಡಮಾರುತ ರೂಪುಗೊಂಡಿದೆ.
ಇದನ್ನೂ ಓದಿ: ಭೂ ಕೈಲಾಸ ಸೃಷ್ಟಿಸುವ ಬಿಜೆಪಿ ಮಾತು ನಂಬಿ ಜನ ಅಧಿಕಾರ ನೀಡಿದ್ದಾರೆ: ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿ- ಕುಮಾರಸ್ವಾಮಿ
ಒಂದು ಎನ್‌ಡಿಆರ್‌ಎಫ್ ತಂಡವು ಸುಮಾರು 40 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಮರ ಮತ್ತು ಕಂಬ ಕತ್ತರಿಸುವ ಉಪಕರಣಗಳು, ಮೂಲ ವೈದ್ಯಕೀಯ ನೆರವು, ಇತರ ಉಪಯುಕ್ತ ಸಾಧನಗಳು ಇರಲಿವೆ.
” ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಗುರುವಾರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಶನಿವಾರ ಬೆಳಿಗ್ಗೆ ಮತ್ತಷ್ಟು ಹೆಚ್ಚಾಗುತ್ತದೆ. ನಂತರದ 24 ಗಂಟೆಗಳ ಅವಧಿಯಲ್ಲಿ ಚಂಡಮಾರುತ ತೀವ್ರಗೊಳ್ಳುತ್ತದೆ” ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಉತ್ತರ-ವಾಯುವ್ಯ ಗುಜರಾತ್ ಮತ್ತು ಪಕ್ಕದ ಪಾಕಿಸ್ತಾನ ತೀರಗಳನ್ನು ತೌಕ್ತೆ ಚಂಡಮಾರುತ ಅಪ್ಪಳಿಸಲಿದ್ದು, ಮೇ 18 ರ ಸಂಜೆ ಗುಜರಾತ್ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, ಮಾಸಿಕ 5000 ರೂ. ಪಿಂಚಣಿ


