ಹರಿಯಾಣ ರಾಜ್ಯವ್ಯಾಪಿ ಕೊರೊನಾ ಲಾಕ್‌ಡೌನ್ ವಿಧಿಸಿರುವ ಮಧ್ಯೆ, ಭಾನುವಾರ ಸಾವಿರಾರು ರೈತರು, ಮೇ 26 ರಂದು ದೆಹಲಿಯ ಗಡಿಗಳಲ್ಲಿ ನಡೆಯಲಿರುವ ಕರಾಳ ದಿನ ಆಚರಣೆಗೆ ಹರಿಯಾಣದ ಕರ್ನಾಲ್‌ನಿಂದ ಹೊರಟಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಕಳೆದ ಆರು ತಿಂಗಳಿಂದ ದೆಹಲಿಯ ಸಿಂಘು, ಟಿಕ್ರಿ, ಶಹಜನ್‌ಪುರ ಮತ್ತು ಗಾಝಿಪುರ್ ಗಡಿಗಳಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು ಚಾರುನಿ) ನಾಯಕ ಗುರ್ನಮ್ ಸಿಂಗ್ ಚಾರುನಿ ನೇತೃತ್ವದಲ್ಲಿ, ಸಾವಿರಾರು ರೈತರು ಹರಿಯಾಣದ ಕರ್ನಾಲ್‌ನ ಬಸ್ತಡಾ ಟೋಲ್ ಪ್ಲಾಜಾದಿಂದ ದೆಹಲಿಯ ಸಿಂಘು ಗಡಿಗೆ ನೂರಾರು ವಾಹನಗಳಲ್ಲಿ ಸಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಪರಿಹಾರಕ್ಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಹೋರಾಟ; ಮೆ 21 ರಂದು ರಾಜ್ಯವ್ಯಾಪಿ ಪ್ರತಿಭಟನೆ
ಸಿಂಘು ಗಡಿಯನ್ನು ತಲುಪಿದ ನಂತರ ಅಲ್ಲಿಯೇ ಒಂದು ವಾರ ಲಂಗರ್ ಸೇವೆಯನ್ನು ಮಾಡುತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ. ಸಾವಿರಾರು ರೈತರು ಕರ್ನಾಲ್ ಟೋಲ್ ಪ್ಲಾಜಾದಿಂದ ಹೊರಟು, ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳನ್ನು ಗುರ್ನಾಮ್ ಸಿಂಗ್ ಚಾರುನಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
करनाल से दिल्ली कुच के लिए तैयार किसानों का बड़ा काफिला…@BKU_Charuni pic.twitter.com/9QUh4LyInk
— Gurnam Singh Charuni (@GurnamsinghBku) May 23, 2021
ಹರಿಯಾಣ ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹರಿಯಾಣದಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಹರಿಯಾಣದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಉಲ್ಬಣಗೊಂಡಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ. ಗ್ರಾಮೀಣ ಪಂಜಾಬ್‌ನಲ್ಲಿ ಸೋಂಕಿನ ಹರಡುವಿಕೆಗೂ ರೈತ ಪ್ರತಿಭಟನೆಯೇ ಕಾರಣ ಎಂದು ಕೇಂದ್ರ ಸರ್ಕಾರ ಕುಡ ಆರೋಪಿಸಿದೆ.
ದೆಹಲಿ ಬಳಿಯ ಟಿಕ್ರಿ ಬಾರ್ಡರ್ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಪಂಜಾಬ್‌ನ ಸಾಗ್ರೂರ್‌ನಲ್ಲಿರುವ ಖಾನೌರಿ ಪ್ರತಿಭಟನಾ ಸ್ಥಳದಿಂದ ಸಾವಿರಾರು ಜನರು ಹೊರಟಿದ್ದಾರೆ ಎಂದು ಬಿಕೆಯು ಹೇಳಿದೆ.
ಮೇ 26 ರಂದು ತಮ್ಮ ಮನೆ, ವಾಹನಗಳು ಮತ್ತು ಅಂಗಡಿಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಲು ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಮನವಿ ಮಾಡಿದ್ದಾರೆ.
“ಮೇ 26 ರಂದು ರೈತ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತದೆ. ಅದೇ ದಿನ ಪ್ರಧಾನಿ ಮೋದಿ ಸರ್ಕಾರ ರಚಿಸಿ ಏಳು ವರ್ಷಗಳಾಗುತ್ತವೆ. ಆ ದಿನವನ್ನು ನಾವು ಕರಾಳ ದಿನವೆಂದು ಆಚರಿಸುತ್ತೇವೆ. ಅಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಪ್ರತಿಭಟನೆಯ ರೂಪದಲ್ಲಿ ಸುಡುತ್ತೇವೆ” ಎಂದು ರಾಜೇವಾಲ್ ಹೇಳಿದ್ದಾರೆ.
ಇತ್ತ, ಸುರಿಯುತ್ತಿರುವ ಮಳೆಯ ಮಧ್ಯೆಯೇ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, “ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ನಮ್ಮೊಂದಿಗೆ ಮಾತುಕತೆ ಪ್ರಾರಂಭಿಸಿ ಮತ್ತು ಬೇಡಿಕೆಗಳನ್ನು ಈಡೇರಿಸಿ” ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು: ಮೇ 26 ರಂದು ಕಪ್ಪು ದಿನ ಆಚರಿಸಲು ರೈತರ ನಿರ್ಧಾರ



ರೈತರ ಈ ಹೋರಾಟಕ್ಕೆ ಜಯವಾಗಲಿ.