ಜನರ ಜೀವ ಮತ್ತು ಜೀವನೋಪಾಯ ಉಳಿಸಲು ಸರ್ಕಾರ ಕೈಗೊಳ್ಳಬೇಕಾದ ಪಂಚ ತುರ್ತು ಕ್ರಮಗಳ ಬಗ್ಗೆ ತಿಂಗಳಿನಿಂದ ಹೋರಾಟ ಮಾಡುತ್ತಿರುವ ಜನಾಗ್ರಹ ಆಂದೋಲನವು ಸೋಮವಾರ [ಮೇ 24 ರಂದು] ರಾಜ್ಯವ್ಯಾಪಿ ಜನಾಗ್ರಹಕ್ಕೆ ಕರೆ ನೀಡಿದೆ. ಈ ಆಂದೋಲನಕ್ಕೆ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿವೆ.
ಉಚಿತ ಚಿಕಿತ್ಸೆ, ಸರ್ವರಿಗೂ ವ್ಯಾಕ್ಸಿನ್, ಬಿಪಿಎಲ್ ಜನರಿಗೆ ಸಮಗ್ರ ದಿನಸಿ – ಮಾಸಿಕ 5000 ನೆರವು ಧನ, ಅನಾಥವಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ಮತ್ತು ಕೃಷಿ ಬೀಜ, ಗೊಬ್ಬರಕ್ಕೆ ವಿಶೇಷ ಸಬ್ಸಿಡಿ ಈ ಐದು ಪಂಚ ಕ್ರಮಗಳನ್ನು ಜಾರಿಗೆ ತರಬೇಕೆಂದು ಜನಾಗ್ರಹ ಆಂದೋಲನ ಆಗ್ರಹಿಸಿದೆ. ಜನಪರ ಸಂಘಟನೆಗಳು ಹಾಗೂ ಪಕ್ಷಗಳು ಕರೆ ನೀಡಿವೆ.
ಜನರ ಜೀವ ಉಳಿಸುವ ಕ್ರಮಗಳಿಗಾಗಿ ಹಾಗೂ ಸಂಕಷ್ಟದಲ್ಲಿರುವ ಜನರ ಜೀವನೋಪಾಯಕ್ಕೆ ಆಸರೆಯಾಗಬಲ್ಲ ಪ್ಯಾಕೇಜಿಗಾಗಿ ತಮ್ಮ ತಮ್ಮ ಮನೆ ಮುಂದೆಯೇ ತಟ್ಟೆ ಲೋಟ ಬಡಿದು, ಖಾಲಿ ಚೀಲ ಪ್ರದರ್ಶಿಸುವ ಮೂಲಕ ಸರ್ಕಾರದ ಕಣ್ತೆರೆಸಲು ಮುಂದಾಗಿದೆ.
ಇದನ್ನೂ ಓದಿ: “ನಾವೂ ಬದುಕಬೇಕು”: ನಾಳೆ ರಾಜ್ಯಾದ್ಯಂತ ಜನಾಗ್ರಹ ಆಂದೋಲನ
ಜನಾಗ್ರಹ ಆಂದೋಲನದ ಪೋಸ್ಟರ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿರೋಧ ಪಕ್ಷಗಳು ಈ ಆಂದೋಲನಕ್ಕೆ ಬೆಂಬಲ ನೀಡಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ಕಾಂಗ್ರೆಸ್ ಪಕ್ಷವು ಈ ಜನಾಗ್ರಹ ಆಂದೋಲನವನ್ನು ಹಾಗೂ ಅದರ ಹಕ್ಕೊತ್ತಾಯಗಳನ್ನು ಬೆಂಬಲಿಸುತ್ತದೆ” ಎಂದಿದ್ದಾರೆ.
’ಸರ್ಕಾರ ತೆಗೆದುಕೊಳ್ಳಲೇಬೇಕಾದ ಕ್ರಮಗಳಿಗಾಗಿ 24 ರಂದು ಜನಾಗ್ರಹ ಆಂದೋಲನ ನಡಿಯುತ್ತಿದೆ.
ಉಚಿತ ಚಿಕಿತ್ಸೆ – ಸರ್ವರಿಗೂ ವ್ಯಾಕ್ಸಿನ್ – ಬಡವರಿಗೆ ಸಮಗ್ರ ದಿನಸಿ – ಕೆಲಸ ಇಲ್ಲದವರಿಗೆ ಆರ್ಥಿಕ ನೆರವು – ಅನಾಥರಿಗೆ ಪರಿಹಾರ. ಕಾಂಗ್ರೆಸ್ ಈ ಹಕ್ಕೊತ್ತಾಯಗಳನ್ನು ಬೆಂಬಲಿಸುತ್ತದೆ ಹಾಗೂ 24 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ” ಎಂದು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಒಡಿಶಾದ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಿದ ಸೋಂಕು: ಕೊರೊನಾ ಕೇಂದ್ರಗಳನ್ನು ಆರಂಭಿಸಲು ಒತ್ತಾಯ
ರಾಜ್ಯದ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳ ಕೂಡ ಈ ಆಂದೋಲನಕ್ಕೆ ಬೆಂಬಲ ನೀಡಿದೆ. ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ “ಈ ಆಂದೋಲನ ಮುಂದಿಟ್ಟಿರುವ ಹಕ್ಕೊತ್ತಾಯಗಳು ಬಹಳ ಸಮಂಜಸವಾಗಿವೆ. ಸರ್ಕಾರ ಇವನ್ನು ಪರಿಗಣಿಸಲೇಬೇಕು ಎಂದು ಜನತಾ ದಳ ಪಕ್ಷದ ಪರವಾಗಿ ನಾನು ಒತ್ತಾಯಿಸುತ್ತೇನೆ. ಜೆಡಿಎಸ್ 24 ರ ಪ್ರತಿಭಟನೆಯನ್ನು ಬೆಂಬಲಿಸಿ ಭಾಗವಹಿಸಲಿದೆ” ಎಂದು ಹೇಳಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಜನರ ಈ ಆಗ್ರಹಕ್ಕೆ ಸರ್ಕಾರ ಸ್ಪಂದಿಸುವುದೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಜನಾಗ್ರಹ ಆಂದೋಲನದ ಪರವಾಗಿ ಕೆ.ಎಲ್. ಅಶೋಕ್ ಮತ್ತು ಮಾಮಾವಳ್ಳಿ ಶಂಕರ್ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಯಿಮಾತಿನಲ್ಲಿ ಕೊರೊನಾ ವಾರಿಯರ್ಸ್ ಎನ್ನದೆ, ದುಡಿದವರಿಗೆ ಗೌರವಧನ ನೀಡಿ- ಕುಮಾರಸ್ವಾಮಿ


