ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಈ ವಾರದ ಆರಂಭದಲ್ಲಿ 50 ವರ್ಷದ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ ಆರು ವರ್ಷದ ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ಪಟ್ಟಣದಲ್ಲಿ ಸೋಮವಾರ ಡಾ.ದೀಪಕ್ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.
“ಅಪರಾಧ ನಡೆದ 18 ಗಂಟೆಗಳಲ್ಲಿ ಒಂದೇ ತಾಲೂಕಿನ ನಾಲ್ಕು ಜನರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಡಾ. ದೀಪಕ್, ಭುವನ್ ಎಂಬ 6 ವರ್ಷದ ಮಗುವಿಗೆ ಡೆಂಗ್ಯೂಗೆ ಚಿಕಿತ್ಸೆ ನೀಡುತ್ತಿದ್ದರು. ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಯಿಗಿತ್ತು. ಶಿವಮೊಗ್ಗದ ಆಸ್ಪತ್ರೆಯಲ್ಲಿ ಬಾಲಕ ಭುವನ್ ಮೃತಪಟ್ಟಿದ್ದರು. ಇದರಿಂದ ಕೋಪಗೊಂಡಿದ್ದ ಬಾಲಕನ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಮತ್ತು ನಾಲ್ವರು ಆರೋಪಿಗಳಲ್ಲಿ ಒಬ್ಬರು ಮಗುವಿನ ಸಂಬಂಧಿ, ಉಳಿದವರು ಆತನ ಸ್ನೇಹಿತರು “ಎಂದು ಅಕ್ಷಯ್ ತಿಳಿಸಿದ್ದಾರೆ. ಸದ್ಯಕ್ಕೆ ಗಾಯಾಳು ವೈದ್ಯ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ, ಕಠಿಣ ಕಾಯ್ದೆ ರೂಪಿಸಲು IMA ಆಗ್ರಹ
ವೈದ್ಯರ ಮೇಲೆ ನಡೆಯುವ ಇಂತಹ ದಾಳಿಗಳನ್ನು ಎದುರಿಸಲು ಕಾನೂನು ಘಟಕವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಕರ್ನಾಟಕದ ವೈದ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
“ಕರ್ನಾಟಕದಾದ್ಯಂತದ ವೈದ್ಯರು ಸಾಧ್ಯವಾದಷ್ಟು ಉತ್ತಮ ಆರೋಗ್ಯ ಸೌಲಭ್ಯವನ್ನು ನೀಡುವಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೂ, ಕಳೆದ 8 ರಿಂದ 10 ತಿಂಗಳುಗಳಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ 12 ಕ್ಕೂ ಹೆಚ್ಚು ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿವೆ. ಆದರೆ ಗಮನಕ್ಕೆ ಬರದ, ಎಫ್‌ಐಆರ್ ದಾಖಲಾಗದ ಮತ್ತು ಮೌಖಿಕ ನಿಂದನೆ, ಬೆದರಿಕೆಗಳು ಮತ್ತು ಕರ್ತವ್ಯಕ್ಕೆ ಅಡ್ಡಿಯುಂಟುಮಾಡುವ ಘಟನೆಗಳು ನೂರಾರು ಆಗಿರಬಹುದು” ಎಂದು ಪತ್ರದಲ್ಲಿ ಹೇಳಲಾಗಿದೆ.
ಇದೇ ರೀತಿಯ ಘಟನೆ ಅಸ್ಸಾಂನಲ್ಲಿಯೂ ನಡೆದಿದ್ದು, ಗುವಾಹಟಿಯಿಂದ 140 ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ ಹೊಜೈನಲ್ಲಿರುವ ಕೊರೊನಾ ಆರೈಕೆ ಕೇಂದ್ರವೊಂದರಲ್ಲಿ ವೈದ್ಯರೊಬ್ಬರ ಮೇಲೆ ಮಾರಣಾಂತಿಕೆ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಇಪ್ಪತ್ನಾಲ್ಕು ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಿ: ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಕೆ


