ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಶುಕ್ರವಾರ ಮಂಡಿಸಿದ ಪರಿಷ್ಕೃತ ಬಜೆಟ್‌ನಲ್ಲಿ 20,000 ಕೋಟಿ ರೂಪಾಯಿ ಮೊತ್ತದ ಕೋವಿಡ್ ಪ್ಯಾಕೇಜ್ ಘೋಷಿಸಿದ್ದಾರೆ. 150 ಮೆಟ್ರಿಕ್ ಟನ್ ಸಾಮರ್ಥ್ಯದ ದ್ರವ ವೈದ್ಯಕೀಯ ಆಮ್ಲಜನಕ ಘಟಕ, ಕೋವಿಡ್ ಲಸಿಕೆಗಳ ಖರೀದಿಗೆ 1,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ಕೇರಳ ವಿಧಾನಸಭೆಯಲ್ಲಿ 2021-22ರ ಹಣಕಾಸು ವರ್ಷದ ರಾಜ್ಯ ಬಜೆಟ್‌ನಲ್ಲಿ 20,000 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಿಸಲು 1,000 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ.
ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಕೇರಳದಲ್ಲಿ ಸತತ ಎರಡನೇ ಬಾರಿ ಐತಿಹಾಸಿಕ ಗೆಲುವು ದಾಖಲಿಸಿ ಅಧಿಕಾರಕ್ಕೆ ಬಂದಿದೆ. ಪರಿಷ್ಕೃತ ಬಜೆಟ್ ಗಮನಾರ್ಹವಾಗಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಕೇರಳದ ಆರೋಗ್ಯ ಮತ್ತು ವೈದ್ಯಕೀಯ ಸಾಮರ್ಥ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.
ಇದನ್ನೂ ಓದಿ: ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದ ವೆಬ್‌ಸೈಟ್, ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್
ಕೋವಿಡ್, ಎಬೊಲಾ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ. ಪ್ರತಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ.
“ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಆಮ್ಲಜನಕ ಪೂರೈಕೆ ಅಗತ್ಯವಾಗಿದೆ. 150 ಮೆಟ್ರಿಕ್ ಟನ್ ದ್ರವ ಆಮ್ಲಜನಕದ ಸ್ಥಾವರವನ್ನು ಸ್ಥಾಪಿಸಲಾಗುವುದು. 1,000 ಮೆಟ್ರಿಕ್ ಟನ್ ಸಾಮರ್ಥ್ಯದ ಟ್ಯಾಂಕ್ ಮತ್ತು ತುರ್ತು ಸಾಗಣೆಗೆ ಟ್ಯಾಂಕರ್ ಲಭ್ಯವಾಗಲಿದೆ. ಯೋಜನೆಯ ಆರಂಭಿಕ ಹಂತಕ್ಕೆ 25 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 14 ರೊಳಗೆ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದು ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ಪರಿಣಾಮದಿಂದ ರಾಜ್ಯದ ಹೆಚ್ಚಿನ ಜನರು ತತ್ತರಿಸುತ್ತಿದ್ದಾರೆ. ಹೀಗಾಗಿ ಯಾವುದೇ ಹೊಸ ತೆರಿಗೆಗಳನ್ನು ಘೋಷಿಸಿಲ್ಲ ಎನ್ನಲಾಗಿದೆ.
14.3 ಲಕ್ಷಕ್ಕೂ ಹೆಚ್ಚು ಅನಿವಾಸಿ ಕೇರಳಿಗರು ರಾಜ್ಯಕ್ಕೆ ಮರಳಿದ್ದಾರೆ. ಅವರಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡಲು 1,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ದಿವಂಗತ ಹಿರಿಯ ರಾಜಕಾರಣಿ ಕೆ.ಆರ್.ಗೌರಿಯಮ್ಮ ಮತ್ತು ಬಾಲಕೃಷ್ಣ ಪಿಳ್ಳೈ ಅವರಿ ಸ್ಮರಣಾರ್ಥವಾಗಿ, ಎರಡು ಹೊಸ ಸ್ಮಾರಕಗಳನ್ನು ನಿರ್ಮಿಸಲು ತಲಾ 2 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಬದ್ಲಾಪುರ ಕೈಗಾರಿಕಾ ಘಟಕದಲ್ಲಿ ಅನಿಲ ಸೋರಿಕೆ : ಹಲವರಿಗೆ ಉಸಿರಾಟದ ಸಮಸ್ಯೆ


