ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯಲ್ಲಿ ಓರ್ವ ಮಹಿಳೆ ಮತ್ತು ಆಕೆಯ ಐದು ಮಂದಿ ಹೆಣ್ಣು ಮಕ್ಕಳು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ರಾಜ್ಯ ರಾಜಧಾನಿಯಿಂದ 55 ಕಿ.ಮೀ ದೂರದಲ್ಲಿರುವ ಮಹಾಸಮುಂಡ್ ಮತ್ತು ಬೆಲ್ಸೊಂಡಾ ನಡುವಿನ ರೈಲ್ವೆ ಕ್ರಾಸಿಂಗ್ ಬಳಿ ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತರನ್ನು ಉಮಾ ಸಾಹು (45), ಅನ್ನಪೂರ್ಣ (18), ಯಶೋದ (16), ಭೂಮಿಕಾ (14), ಕುಂಕುಮ್ (12) ಮತ್ತು ತುಳಸಿ (10) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಮ್ಚಾ ಗ್ರಾಮದ 45 ವರ್ಷದ ಉಮಾ ಸಾಹು ತನ್ನ ಪತಿಯೊಂದಿಗೆ ಜಗಳವಾಡಿಕೊಂಡು ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ಉತ್ತರಪ್ರದೇಶ : ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ ಮತ್ತು ಬಿಜೆಪಿಯ ರಾಜಕೀಯ ಲೆಕ್ಕಾಚಾರ
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಮಹಾಸಮುಂಡ್ ಪೊಲೀಸ್ ಅಧೀಕ್ಷಕ ಪ್ರಫುಲ್ ಠಾಕೂರ್ ತಿಳಿಸಿದ್ದಾರೆ.
“ಕಳೆದ [ಬುಧವಾರ] ರಾತ್ರಿಯಿಂದ ಮಹಿಳೆ ತನ್ನ ಹೆಣ್ಣು ಮಕ್ಕಳೊಂದಿಗೆ ಕಾಣೆಯಾಗಿದ್ದರು, ಆದರೆ ಅವಳ ಪತಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಬದಲಿಗೆ ತಮ್ಮ ಸಂಬಂಧಿಕರ ಮನೆಗಳಲ್ಲಿ ಅವರನ್ನು ಹುಡುಕುತ್ತಿದ್ದನು. ಗುರುವಾರ ಬೆಳಿಗ್ಗೆ ಯಾರೋ ರೈಲು ಹಳಿಗಳಲ್ಲಿ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದು ಠಾಕೂರ್ ಹೇಳಿದ್ದಾರೆ.
ಬುಧವಾರ ರಾತ್ರಿ ಊಟಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಜಗಳದ ನಂತರ ಮಹಿಳೆ ತನ್ನ ಹೆಣ್ಣು ಮಕ್ಕಳೊಂದಿಗೆ ಮನೆಯಿಂದ ಹೊರಟು ಹೋಗಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣದಂತೆ ತೋರುತ್ತಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ. ಆತ್ಮಹತ್ಯೆ ಪತ್ರಗಳು ಪತ್ತೆಯಾಗಿಲ್ಲ” ಎಂದು ಠಾಕೂರ್ ಮಾಹಿತಿ ನೀಡಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ನಮ್ಮ ವಿವಾಹಕ್ಕೆ ಕಾನೂನಿನ ಮಾನ್ಯತೆಯಿಲ್ಲ ಹಾಗಾಗಿ ವಿಚ್ಛೇದನದ ಪ್ರಶ್ನೆಯಿಲ್ಲ-ಟಿಎಂಸಿ ಸಂಸದೆ ನುಸ್ರತ್


