ಕೊರೊನಾ 2ನೇ ಅಲೆಯಿಂದ ಎಚ್ಚೆತ್ತಿರುವ ಹಲವು ರಾಜ್ಯ ಸರ್ಕಾರಗಳು, ಕೊರೊನಾ ನಿಯಂತ್ರಣ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 12ನೇ ತರಗತಿ ಪರೀಕ್ಷೆ ರದ್ದುಗೊಳಿಸಿವೆ. ಆದರೆ, 12ನೇ ತರಗತಿ ಪರೀಕ್ಷೆ ನಡೆಸುತ್ತೇವೆ ಎನ್ನುತ್ತಿರುವ ಆಂಧ್ರ ಪ್ರದೇಶದ ನಿರ್ಧಾರಕ್ಕೆ ಕಿಡಿಕಾರಿರುವ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.
“12ನೇ ತರಗತಿ ಪರೀಕ್ಷೆ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಕೊರೊನಾ ಸೋಂಕಿಗೆ ಬಲಿಯಾದರೂ ಸಹ ಆಂಧ್ರಪ್ರದೇಶ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು, ಅಲ್ಲದೆ ಮೃತ ವಿದ್ಯಾರ್ಥಿಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಎಚ್ಚರಿಕೆ ನೀಡಿವೆ.
ಕೊರೊನಾ 2ನೇ ಅಲೆ ನಡುವೆಯೇ ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಭಯದ ವಾತಾವರಣ ನಿರ್ಮಾಣ ಮಾಡಿದೆ. ಈ ಸೋಂಕು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ. ಇಂತಹ ಸಂದರ್ಭದಲ್ಲಿ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಯಾವ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ? ” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಡೆಲ್ಟಾ ಪ್ಲಸ್ 3ನೇ ಅಲೆ ಸೃಷ್ಟಿಸುತ್ತೆ ಎನ್ನಲು ಆಧಾರವಿಲ್ಲ- ಐಜಿಐಬಿ ನಿರ್ದೇಶಕ
12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಹೈದ್ರಾಬಾದ್ ಉಚ್ಛ ನ್ಯಾಯಾಲಯಕ್ಕೆ ಮೊದಲೇ ಅಫಿಡವಿಟ್ ಸಲ್ಲಿಸಿತ್ತು. “ಆಂತರಿಕ ಅಂಕಗಳ ಮೇಲೆ ರಾಜ್ಯ ಶಿಕ್ಷಣ ಮಂಡಳಿಗೆ ಯಾವುದೇ ನಿಯಂತ್ರಣವಿಲ್ಲ. ಇತರ ರಾಜ್ಯಗಳು ಪರ್ಯಾಯ ಮೌಲ್ಯಮಾಪನ ವ್ಯವಸ್ಥೆಯನ್ನು ಆಧಾರವಾಗಿ ತೆಗೆದುಕೊಂಡಿವೆ. ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರ 12ನೇ ತರಗತಿ ಅಂತಿಮ ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದೇವೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸಲಾಗುವುದು” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.
ಅಫಿಡವಿಟ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ಎಷ್ಟು ಕೊಠಡಿಗಳಿವೆ. ಒಂದು ಕೊಠಡಿಗೆ 15 ರಿಂದ 18 ವಿದ್ಯಾರ್ಥಿಗಳನ್ನು ಕೂರಿಸಲಾಗುವುದು ಎಂಬ ವಿವರಗಳನ್ನು ಹೈದ್ರಾಬಾದ್ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.
ರಾಜ್ಯದಲ್ಲಿಯೂ ಕೊರೊನಾ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷಗಳನ್ನು ರದ್ದು ಪಡಿಸಲಾಗಿದೆ. ಆದರೆ, ಫಲಿತಾಂಶ ಪ್ರಕಟಗೊಳಿಸಲು ಹೊರಟಿದ್ದ ಇಲಾಖೆಗೆ, ಪುನರಾವರ್ತಿತ ವಿದ್ಯಾರ್ಥಿಗಳು ನಮಗೆ ಅನ್ಯಾಯ ಆಗಿದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದು ಸದ್ಯ ಫಲಿತಾಂಶ ತಡೆಗೆ ಕಾರಣವಾಗಿದೆ.
ಇದನ್ನೂ ಓದಿ: ಕೊರೊನಾ ಭಯ: ಕರ್ನೂಲ್‌ನಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಒಂದೆ ಕುಟುಂಬದ ನಾಲ್ವರು


