ಭಾರತದ ತಪ್ಪಾದ ನಕ್ಷೆಯನ್ನು ಪ್ರಕಟಿಸಿದ ಆರೋಪದ ಮೇಲೆ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರ ಮೇಲೆ ಉತ್ತರ ಪ್ರದೇಶದಲ್ಲಿ FIR ದಾಖಲಿಸಲಾಗಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.
ಇತ್ತೀಚೆಗೆ ಟ್ವಿಟರ್ ಇಂಡಿಯಾ ಸರ್ಕಾರದ ಜೊತೆಗೆ ಸಂಘರ್ಷದಲ್ಲಿ ತೊಡಗಿದ್ದು, ಅದು ಹಲವು ತೊಂದರೆಗಳನ್ನು ಅನುಭವಿಸಬೇಕಾಗಿದೆ. ಉತ್ತರಪ್ರದೇಶದಲ್ಲಿ ಈ ತಿಂಗಳು ಟ್ವಿಟರ್ ವಿರುದ್ಧ ದಾಖಲಾದ ಎರಡನೇ FIR ಇದಾಗಿದೆ.
ಟ್ವಿಟರ್‌ನ ವೆಬ್‌ಸೈಟ್‌ನ “ಟ್ವೀಪ್ ಲೈಫ್” ವಿಭಾಗದಲ್ಲಿ ಭಾರತದ ತಪ್ಪಾದ ನಕ್ಷೆಯನ್ನು ಪ್ರಕಟಿಸಲಾಗಿತ್ತು. ಇದನ್ನು ಬಳಕೆದಾರರು ತಪ್ಪೆಂದು ತೋರಿಸಿದ ನಂತರ ಸೋಮವಾರ ತೆಗೆದು ಹಾಕಲಾಗಿದೆ. ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಭಾರತದ ಹೊರಗಿರುವ ಪ್ರದೇಶ ಎಂದು ತೋರಿಸಲಾಗಿತ್ತು. ಇದು ಆಕ್ರೋಶಕ್ಕೆ ಗುರಿಯಾಗಿತ್ತು.
ಬಲಪಂಥೀಯ ಗುಂಪು ಭಜರಂಗದಳದ ಮುಖಂಡ ಪ್ರವೀಣ್ ಭಾಟಿ ಅವರು ಸಲ್ಲಿಸಿರುವ ದೂರಿನಲ್ಲಿ “ಈ ದೇಶದ್ರೋಹದ ಕೃತ್ಯವು ಉದ್ದೇಶಪೂರ್ವಕವಾಗಿ ನಡೆದಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಉಲ್ಲೇಖಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505(2) (ವರ್ಗಗಳ ನಡುವೆ ದ್ವೇಷ ಸೃಷ್ಟಿಸುವುದು ಅಥವಾ ಉತ್ತೇಜಿಸುವುದು) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008ರ ಸೆಕ್ಷನ್ 74ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.
ದೆಹಲಿಯಿಂದ 100 ಕಿ.ಮೀ ದೂರದಲ್ಲಿರುವ ಯುಪಿಯ ಬುಲಂದ್‌ಶಹರ್‌ನಲ್ಲಿ ದಾಖಲಾದ ಈ ಎಫ್‌ಐಆರ್‌ನಲ್ಲಿ ಟ್ವಿಟರ್ ಇಂಡಿಯಾದ ನ್ಯೂಸ್ ಪಾರ್ಟನರ್‌ಶಿಪ್ ಮುಖ್ಯಸ್ಥ ಅಮೃತ್ ತ್ರಿಪಾಠಿ ಅವರನ್ನು ಕೂಡ ಹೆಸರಿಸಲಾಗಿದೆ.
ಕಳೆದ ವಾರವೂ FIR
ಕಳೆದ ವಾರ, ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹಲ್ಲೆಗೆ ಸಂಬಂಧಿಸಿರುವ ಪೋಸ್ಟ್‌ಗಳು ವಿವಾದಕ್ಕೆ ಕಾರಣವಾದ ನಂತರ ದಾಖಲಾದ ಎಫ್‍ಐಆರ್‌ನಲ್ಲೂ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿಯವರನ್ನು ಹೆಸರಿಸಲಾಗಿತ್ತು. ಉತ್ತರ ಪ್ರದೇಶ ಪೊಲೀಸರು ಅವರಿಗೆ ಸಮನ್ಸ್ ನೀಡಿದ್ದರು. ಟ್ವಿಟರ್ ಜೊತೆಗೆ, ಪತ್ರಕರ್ತರಾದ ರಾಣಾ ಅಯೂಬ್, ಸಬಾ ನಖ್ವಿ, ಮತ್ತು ಕೆಲವು ಕಾಂಗ್ರೆಸ್ ನಾಯಕರನ್ನು ಕೂಡ ಎಫ್‍ಐಆರ್‌ನಲ್ಲಿ ಹೆಸರಿಸಲಾಗಿದೆ.
ಬೆಂಗಳೂರು ನಿವಾಸಿ ಮನೀಶ್ ಮಹೇಶ್ವರಿ ಅವರನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್‍ನಿಂದ ತಾತ್ಕಾಲಿಕ ತಡೆಯಾಜ್ಞೆ ದೊರಕಿದೆ. ಇದನ್ನು ಯುಪಿ ಪೊಲೀಸರು ಆಕ್ಷೇಪಿಸಿದ್ದರು. ಅದಕ್ಕೆ ರಾಜ್ಯ ನ್ಯಾಯಾಲಯವು, ‘ತನಿಖೆಯನ್ನು ನಿಲ್ಲಿಸುತ್ತಿಲ್ಲ, ಮನೀಶ್ ಮಹೇಶ್ವರಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ’ ಎಂದು ಹೇಳಿದೆ. “ಪೊಲೀಸರು ತನಿಖೆ ಮಾಡಲು ಅಥವಾ ಪ್ರಶ್ನಿಸಲು ಬಯಸಿದರೆ, ಅವರು ಅದನ್ನು ವರ್ಚುವಲ್ ಮೋಡ್ ಮೂಲಕ ಮಾಡಬಹುದು” ಎಂದು ನ್ಯಾಯಮೂರ್ತಿ ನರೇಂದರ್ ಹೇಳಿದ್ದರು.
ಇದನ್ನೂ ಓದಿ; ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿ ರಾಜೀನಾಮೆ: ಸರ್ಕಾರ V/s ಟ್ವಿಟರ್ ಸಂಘರ್ಷ ಮುಂದುವರಿಕೆ


