Homeಅಂಕಣಗಳುಮೋದಿಯವರೆ, ನೀವು ರೈತರ `ಮನ್‍ಕಿ ಬಾತ್’ ಕೇಳುವ ಸಮಯ ಬಂದಿದೆ

ಮೋದಿಯವರೆ, ನೀವು ರೈತರ `ಮನ್‍ಕಿ ಬಾತ್’ ಕೇಳುವ ಸಮಯ ಬಂದಿದೆ

- Advertisement -
  • ಯೋಗೇಂದ್ರ ಯಾದವ್ |
- Advertisement -

ಮೋದಿಯವರ ಇತ್ತೀಚಿನ ಭಾಷಣಗಳ ಕುರಿತು ಯೋಚಿಸುತ್ತಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮನನೋಯಿಸುವ ವೀಡಿಯೋವೊಂದನ್ನು ನೋಡಿದೆ. ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ರೈತ ಪ್ರೇಮ್‍ಸಿಂಗ್ ಲಖಿರಾಮ್ ಚವಾಣ್ ತನ್ನ ಹೊಲದಲ್ಲಿ ತಾನೇ ಬೆಳೆದ ಕ್ಯಾಬೇಜ್ ಬೆಳೆಯನ್ನು ಅತ್ಯಂತ ಸಿಟ್ಟಿನಿಂದ ನಾಶ ಮಾಡುವ ದೃಶ್ಯ ಮನಕಲುಕುವಂತಿತ್ತು.

ಮೊದಲು ಹತ್ತಿ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ಪ್ರೇಮ್‍ಸಿಂಗ್‍ಗೆ ನಿರಾಶೆ ಕಾದಿತ್ತು. ಹತ್ತಿ ಬೆಳೆ ಕೈಕೊಟ್ಟಿದ್ದಲ್ಲದೆ, ಅದಕ್ಕಾಗಿ ಮಾಡಿದ ಭಾರಿ ಸಾಲ ತಲೆ ಮೇಲೆ ಬಂದಿತ್ತು. ಈ ಕಾರಣದಿಂದ ಆತ ತನ್ನ ಹೊಲದಲ್ಲಿ ಟೊಮ್ಯಾಟೋ ಮತ್ತು ಎಲೆಕೋಸನ್ನು ಹಾಕಿದ್ದ. ಬೆಳೆದ ನಾಲ್ಕು ಕ್ವಿಂಟಲ್ ಟೊಮ್ಯಾಟೋಕ್ಕೆ ಕೇವಲ 442 ರೂಪಾಯಿಗಳು ಮಾತ್ರ ಸಿಗುತ್ತದೆ ಎಂದು ಆತನಿಗೆ ಗೊತ್ತಾಯಿತು. ಆ ನಾಲ್ಕು ಕ್ವಿಂಟಲ್ ಟೊಮ್ಯಾಟೋವನ್ನು ನಗರಕ್ಕೆ ಸಾಗಿಸಲು ಆತ 600 ರೂಪಾಯಿಗಳನ್ನು ಮತ್ತು ಅದನ್ನು ಬೆಳೆಯಲು 25,000 ರೂಪಾಯಿಗಳನ್ನು ಖರ್ಚು ಮಾಡಿದ್ದ. ಇನ್ನು ಬೆಳೆದ ಎಲೆಕೋಸಿಗೂ ಇದೇ ತರಹದ ಬೆಲೆ ಸಿಕ್ಕತ್ತು. ಆ ಕಾರಣಕ್ಕಾಗಿ ಪ್ರೇಮ್‍ಸಿಂಗ್ ತನ್ನ ಬೆಳೆಯನ್ನು ಹೊಲದಲ್ಲಿಯೇ ನಾಶ ಮಾಡಲು ನಿರ್ಧರಿಸಿದ್ದ.

ಪ್ರೇಮ್‍ಸಿಂಗ್‍ನ ವೀಡಿಯೋ ನೋಡುತ್ತಿದ್ದಂತೆ ಭಾರತದ ರೈತ ತನ್ನ ಬದುಕಿನುದ್ದಕ್ಕೂ ಪ್ರಕೃತಿ ಮತ್ತು ಮಾರುಕಟ್ಟೆ ಆರ್ಥಿಕತೆಯಿಂದ ಎದುರಿಸುವ ಗಂಡಾಂತರ ಮತ್ತು ಆತಂಕಗಳು ಕಣ್ಣ ಮುಂದೆ ಸುಳಿದವು. ಅನೇಕ ಸಲ ರೈತರ ಬೆಳೆಗಳು ರೋಗಕ್ಕೆ ತುತ್ತಾಗಿ ಹಾಳಾಗುತ್ತವೆ, ಇಲ್ಲವೆ ಬರ, ಅತಿವೃಷ್ಟಿಯಿಂದ ಬೆಳೆ ಕೈಗೆ ಸಿಗುವುದಿಲ್ಲ. ಅಕಾಸ್ಮಾತ್, ಬರ, ಬೆಳೆ ರೋಗ ಮತ್ತು ಪ್ರಕೃತಿ ವಿಕೋಪಗಳಿಂದ ಪಾರಾಗಿ ಉತ್ತಮ ಬೆಳೆ ಬೆಳೆದರೆ ಮಾರುಕಟ್ಟೆಯಲ್ಲಿ ರೈತನ ಫಸಲಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಹಣಕಾಸಿನ ದುಸ್ಥಿತಿ, ಪರಿಸರ ವಿಕೋಪ ಮತ್ತು ಅಸ್ತಿತ್ವದಲ್ಲಿರುವ ಅನೇಕ ಸಮಸ್ಯೆಗಳು ಒಂದಕ್ಕೊಂದು ಹೆಣೆದುಕೊಂಡು ಭಾರತದ ರೈತರು ಅನೇಕ ಬಿಕ್ಕುಟ್ಟುಗಳನ್ನು ಎದುರಿಸುವಂತಾಗಿದೆ.

ಗುಜರಾತಿನ ಚುನಾವಣಾ ಫಲಿತಾಂಶ, ಮಹಾರಾಷ್ಟ್ರದ ರೈತರು ನಡೆಸಿದ `ಲಾಂಗ್‍ಮಾರ್ಚ’ ಮತ್ತು ದೇಶದಾದ್ಯಂತ ನಡೆದ ರೈತರ ಪ್ರಭಟನೆಗಳಿಂದಾಗಿ ಭಾರತದ ವ್ಯವಸಾಯಿ ಸಮುದಾಯದ ಸಮಸ್ಯೆಗಳು ಮುನ್ನೆಲೆಗೆ ಬಂದಿವೆ. ತಡವಾಗಿಯಾದರೂ ರೈತರ ಈ ಸಮಸ್ಯೆಗಳ ಕುರಿತು ಗಮನ ಹರಿಸುವ ಒತ್ತಡ ಸರ್ಕಾರದ ಮೇಲೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಧಾನ ಮಂತ್ರಿ ಸುಮ್ಮನಿರುವುದಿಲ್ಲ. ತಮ್ಮ ಸರ್ಕಾರ ರೈತರಿಗಾಗಿ ಏನೇನು ಮಾಡಿದೆ ಎಂದು ಪಟಪಟನೆ ಹರಳು ಹುರಿದಂತೆ ಮಾತಾಡಿ ದೊಡ್ಡ ಪಟ್ಟಿಯನ್ನೇ ನೀಡುತ್ತಾರೆ. ಮಣ್ಣಿನ ಆರೋಗ್ಯದ ಕಾರ್ಡ, ಬೇವು ಮಿಶ್ರಿತ ಯೂರಿಯಾ, ಒಂದು ಹನಿ-ಹೆಚ್ಚು ಬೆಳೆ, ಪ್ರಧಾನ ಮಂತ್ರಿ ಫಸಲ್ ಭೀಮ್ ಯೋಜನಾ ಹೀಗೆ ಪಟ್ಟಿ ಮುಂದಿಡುತ್ತಾರೆ. ಕಳೆದ ಮೂರು ವರ್ಷದಿಂದ ನಾನು ನಿರಂತವಾಗಿ ಹಳ್ಳಿಗಳನ್ನು ಸುತ್ತಿದ್ದೇನೆ. ಪ್ರಧಾನ ಮಂತ್ರಿಗಳು ರೈತರಿಗಾಗಿ ರೂಪಿಸಿರುವ ಯಾವ ಯೋಜನೆಗಳ ಕುರಿತು ಹಳ್ಳಿಯ ರೈತರು ಮಾತನಾಡಿದ್ದನ್ನು ನಾನು ಕೇಳಿಲ್ಲ. ಪ್ರಧಾನ ಮಂತ್ರಿ ಫಸಲ್ ಬೀಮ್ ಯೋಜನೆ ಇದಕ್ಕೆ ಹೊರತಾಗಿದೆ. ಪ್ರಧಾನ ಮಂತ್ರಿಯವರ ಅತ್ಯಂತ ಪ್ರೀತಿಯ ಯೋಜನೆಗಳು ರೈತರಿಗೆ ಶಾಪವಾಗಿ ಪರಿಣಮಿಸಿವೆ. ಪ್ರಧಾನ ಮಂತ್ರಿ ಬರೀ ಮಾತಾಡುತ್ತಲೇ ಎಲ್ಲರನ್ನೂ ಒಪ್ಪಿಸುವ ಕೆಲಸ ಮಾಡದೆ, ರೈತರ ಸಮಸ್ಯೆಗಳನ್ನು ಪರಿಹರಿಸಲು ಬದ್ಧತೆಯ ಪ್ರಯತ್ನಗಳನ್ನು ಮಾಡಬೇಕಿದೆ. ರೈತರು ಜನಪ್ರಿಯ ಯೋಜನೆಗಳ ಕುರಿತು ಬರೀ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ. ಅವರ ಆದಾಯ ಹೆಚ್ಚಾಗುವ, ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ಪಾಸಿಟಿವ್ ಅಂಶಗಳ ಕುರಿತು ಕೇಳಲು ಬಯಸುತ್ತಾರೆ. ದಿನದ ಕೊನೆಗಾದರೂ ಸರ್ಕಾರ ತಡಮಾಡದೆ, ಪ್ರತಿ ವರ್ಷ ಕೇಂದ್ರ ಸರ್ಕಾರ 24 ಬೆಳೆಗಳಿಗೆ ಪ್ರತಿ ವರ್ಷ ಘೋಷಿಸುವ ಕನಿಷ್ಟ ಬೆಂಬಲ ಬೆಲೆಯ ಕುರಿತು ಗಮನ ಹರಿಸಬೇಕಿದೆ. ರೈತರ ಬೆಳೆಗಳಿಗೆ ಘೋಷಿಸಿರುವ ಕನಿಷ್ಟ ಬೆಂಬಲ ಬೆಲೆಯನ್ನು ನಮ್ಮ ಪ್ರಧಾನಿಗಳು ಹೆಚ್ಚಿಸಿ, ಇದು ನಮ್ಮ ಸರ್ರ್ಕಾರದ `ಐತಿಹಾಸಿಕ’ ಸಾಧನೆ ಎಂದು ಘೋಷಿಸಬಹುದು. ರೈತರು ಈ ಘೋಷಣೆಯಿಂದ ಹೆಚ್ಚು ಆದಾಯ ಗಳಿಸುತ್ತಾರೆ ಎಂದು ಭರವಸೆ ಹುಟ್ಟಿಸಿದರೆ ಸಾಕು.

ಕಳೆದ ಹತ್ತು ದಿನಗಳಿಂದ ನಾನು ಸ್ವರಾಜ್ ಅಭಿಯಾನದ ಜೈಕಿಸಾನ್ ಆಂದೋಲನದ ಸಂದರ್ಭದಲ್ಲಿ ವಿವಿಧ ರೈತ ಸಂಘಟನೆಗಳ ಜೊತೆಗೂಡಿ ಕನಿಷ್ಟ ಬೆಂಬಲ ಬೆಲೆಯ ಮೂಲಕ ಅನುಕೂಲ ಪಡೆದ, ದೇಶದ ವಿವಿಧ ಮಂಡಿಗಳಲ್ಲಿನ ರೈತರ ಕ್ಲೇಮುಗಳನ್ನು ಹುಡುಕುತ್ತಿದ್ದೆ. ದೇಶದ ಬೇರೆ ಬೇರೆ ಭಾಗದ ಎಪಿಎಂಸಿಗಳಲ್ಲಿ ಚಾಲ್ತಿಯಲ್ಲಿರುವ ದರಗಳ ಮೂಲಕವೇ ರೈತರ ಬೆಳೆಗಳನ್ನು ಖರೀದಿಸಿರುವುದನ್ನು ಕಂಡುಕೊಳ್ಳಬೇಕಿತ್ತು. ಎಪಿಎಂಸಿಗಳ ಅಧಿಕಾರಿಗಳ ಜೊತೆ, ಮಧ್ಯವರ್ತಿಗಳ ಜೊತೆ, ರೈತರ ಜೊತೆ ಮತ್ತು ವ್ಯಾಪಾರಿಗಳ ಜೊತೆ ಸರ್ಕಾರದ ಕನಿಷ್ಟ ಬೆಂಬಲ ಬೆಲೆಯ ಆಗುಹೋಗುಗಳ ಕುರಿತು ಚರ್ಚಿಸಲಾಯಿತು. ಈ ತಿರುಗಾಟದಲ್ಲಿ ನಾವು ಕಂಡುಕೊಂಡಿದ್ದು; ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಟ ಬೆಂಬಲ ಬೆಲೆಗೆ ಯಾವೊಬ್ಬ ರೈತನೂ ತಮ್ಮ ಬೆಳೆಯನ್ನು ಯಾವ ಮಂಡಿಯಲ್ಲೂ ಮಾರಾಟ ಮಾಡಿರುವುದು ಕಂಡುಬರಲಿಲ್ಲ. ಕೇದ್ರ ಸರ್ಕಾರ ಒಂದು ಕ್ವಿಂಟಾಲ್ ತೊಗರಿಗೆ 5,450/- ರೂಪಾಯಿಗಳ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದ್ದರೆ, ಕರ್ನಾಟಕ ಸರ್ಕಾರ ಅದನ್ನು 6,000/- ರೂಪಾಯಿಗಳಿಗೆ ಏರಿಸಿದೆ. ಆದರೆ ಅರ್ಧಕ್ಕಿಂತ ಕಡಿಮೆ ರೈತರು ಮಾತ್ರ ಈ ಬೆಂಬಲ ಬೆಲೆಗೆ ತಮ್ಮ ಬೆಳೆಗಳನ್ನು ಮಾರಬಹುದು. ಉಳಿದ ಅರ್ಧಕ್ಕಿಂತ ಹೆಚ್ಚು ರೈತರು ಮುಕ್ತ ಮಾರುಕಟ್ಟೆಯಲ್ಲಿ ಅದೇ ಬೆಳೆಯನ್ನು ಕ್ವಿಂಟಾಲ್‍ಗೆ ಕೇವಲ 4000/- ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ದಕ್ಷಿಣದ ಮೂರು ರಾಜ್ಯಗಳ ಶೇಂಗಾ ಬೆಳೆಗಾರ ರೈತರು ತಮ್ಮ ಬೆಳೆಯನ್ನು ಸರ್ಕಾರದ ಕನಿಷ್ಟ ಬೆಂಬಲ ಬೆಲೆಗೆ ಮಾರಾಟ ಮಾಡುವುದು ಸಾಧ್ಯವಾಗುವುದೇ ಇಲ್ಲ. ಕಾರಣ ಖರೀದಿಸುವ ಅವಧಿ ಚಿಕ್ಕದಾಗಿದ್ದು, ಆ ಅವಧಿಯಲ್ಲಿ ರೈತರು ಸರ್ಕಾರದ ಕನಿಷ್ಟ ಬೆಂಬಲ ಬೆಲೆ 4,450/- ರೂಪಾಯಿಗಳಿಗೆ ತಮ್ಮ ಶೇಂಗಾ ಬೆಳೆಯನ್ನು ಅಲ್ಲಿ ಮಾರದೆ, ಮುಕ್ತ ಮಾರುಕಟ್ಟೆಯಲ್ಲಿ 3,600/- ರೂಪಾಯಿಗಳಿಂದ 3,700/- ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಒಳ್ಳೆಯ ಹತ್ತಿ ಉತ್ತಮ ಬೆಲೆಗೆ ಮಾರಾಟವಾದರೆ, ಮಳೆಗೆ, ರೋಗರುಜಿನೆಗಳಿಗೆ ಸಿಕ್ಕು ಹಾಳಾದ ಹತ್ತಿ ಕನಿಷ್ಟ ದರಕ್ಕೆ ಮಾರಾಟವಾಗುತ್ತದೆ. ಇದರಿಂದಾಗಿ ಒಂದು ವರ್ಷದಲ್ಲಿ ರೈತರು 14,474/- ಕೋಟಿಗಳಷ್ಟು ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಕೇವಲ ಲಾಸ್ ಅಲ್ಲ, ಅವರ ಆದಾಯವನ್ನು ಲೂಟಿ ಮಾಡಲಾಗುತ್ತದೆ.

ನಮ್ಮ ಈ ತಿರುಗಾಟದಲ್ಲಿ ನಾವು ಸರ್ಕಾರದ ಖರೀದಿ ಕೇಂದ್ರಗಳ ವ್ಯವಹಾರಗಳನ್ನೂ ಗಮನಿಸಿದೆವು. ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಬೆಳೆಗಳನ್ನು ಮಾರಾಟ ಮಾಡುವುದೆಂದರೆ ಅನೇಕ ಅಡೆತಡೆಗಳನ್ನು ಜೋಡಿಸಿರುವ ದಾರಿಯಲ್ಲಿ ರೈತರು ಓಡಿದಂತೆ. ರೈತರು ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಕನಿಷ್ಟ ಬೆಂಬಲ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಇರುವಂತಹ ಎಲ್ಲ ಅಡತಡೆಗಳನ್ನು ಸೃಷ್ಟಿ ಮಾಡಿಟ್ಟಿದೆ. ಹಲವು ರೈತರು ಮಧ್ಯವರ್ತಿಗಳ ಹಾವಳಿಯ ಕುರಿತು ನಮಗೆ ಹೇಳಿದರು. ಮಧ್ಯವರ್ತಿಗಳು ಮೊದಲು ಅತ್ಯಂತ ಕಡಿಮೆ ಬೆಲೆಗೆ, ಅದರಲ್ಲೂ ಸರ್ಕಾರದ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಬೆಳೆಗಳನ್ನು ಖರೀದಿಸಿ, ನಂತರ ಸರ್ಕಾರದ ಕನಿಷ್ಟ ಬೆಂಬಲ ಬೆಲೆಗೆ ತಾವು ಖರೀದಿಸಿದ ಬೆಳೆಗಳನ್ನು ಮಾರಾಟ ಮಾಡುತ್ತಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಒಬ್ಬ ರೈತನ ಮಾರಾಟಕ್ಕೆ ಇಂತಿಷ್ಟು ಗರಿಷ್ಟ ಹಣದ ಮಿತಿಯನ್ನು ವಿಧಿಸಿದೆ.

ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳು ಕೇಳುವ ದಾಖಲೆಗಳ ಕುರಿತು ರೈತರು ತಮ್ಮ ಗೋಳು ಹೇಳಿಕೊಂಡರು. ಖರೀದಿ ಕೇಂದ್ರದಲ್ಲಿ, ಅಧಿಕಾರಿಗಳು ರೈತರಿಗೆ ತಮ್ಮ ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಭೂಮಿ ಒಡೆತನದ ಪತ್ರ ಮತ್ತು ಕೃಷಿ ಅಧಿಕಾರಿಗಳ ದೃಢೀಕರಣ ಪತ್ರಗಳನ್ನು ಸಲ್ಲಿಸಲು ಹೇಳುತ್ತಾರೆ. ಈ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ಕ್ರಮದ ಹಿಂದೆ ಸಣ್ಣ ರೈತರನ್ನು ಹೊರಗಿಡುವ ಹುನ್ನಾರು ಇದೆ. ಈ ದಾಖಲೆಗಳನ್ನು ಹೊಂದಿಸಿಕೊಂಡು ಬಂದ ರೈತ ಖರೀದಿ ಕೇಂದ್ರದಲ್ಲಿ ತನ್ನ ಬೆಳೆಗಳನ್ನು ಮಾರಾಟ ಮಾಡಿದನೆಂದರೆ, ಅವನಿಗೆ ಹಣ ಬರುವುದು ಮೂರೋ ನಾಲ್ಕೋ ತಿಂಗಳಾಗುತ್ತದೆ. ಮತ್ತು ಆ ಹಣ ನೇರ ರೈತನ ಬ್ಯಾಂಕ್ ಅಕೌಂಟ್‍ಗೆ ಹೋದಾಗ ಬ್ಯಾಂಕ್‍ನವರು ಆ ಹಣವನ್ನು ರೈತನ ಸಾಲಗಳಿಗೆ ಮುರಿದುಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ರೈತರು ತಮ್ಮ ಬೆಳೆಗಳನ್ನು ಖಾಸಗಿ ವ್ಯಾಪಾರಿಗಳಿಗೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ರೈತರನ್ನು ಕುರಿತ ಪ್ರಧಾನಿಯವರ `ಮನ್ ಕಿ ಬಾತ್‍ನ್ನು’ ನಾನು ಕೇಳಿದ್ದೇನೆ. ಪ್ರಧಾನಿಗಳಿಗೆ ನಾನು ಒಂದು ಸವಾಲು ಒಡ್ಡುತ್ತಿದ್ದೇನೆ. ಪ್ರಧಾನ ಮಂತ್ರಿಗಳೆ, ದೇಶದ ಯಾವುದಾದರೊಂದು ಖರೀದಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ, ನೀವು ಇಷ್ಟಪಡುವ ಯಾವುದಾದರೊಂದು ಹಿಂಗಾರಿನ ಬೆಳೆಯನ್ನು ಆಯ್ದುಕೊಳ್ಳಿ. ಯಾರಾದರು ಒಬ್ಬ ರೈತ ಆ ಖರೀದಿ ಕೇಂದ್ರಕ್ಕೆ ಬಂದು ಸರ್ಕಾರ ಘೋಷಿಸಿದ ಕನಿಷ್ಟ ಬೆಂಬಲ ಬೆಲೆಗೆ ತನ್ನ ಬೆಳೆಗಳನ್ನು ಮಾರಾಟ ಮಾಡಿದನೇ ಎಂದು ನನಗೆ ತೋರಿಸಿ. ನೀವು ಹಾಗೆ ಮಾಡಿದರೆ ನಾನು ನಿಮಗೆ ಸೆಲ್ಯೂಟ್ ಮಾಡುವೆ. ಜೊತೆಗೆ ರೈತರಿಗೆಲ್ಲ ಹೇಳಿ ಮತ ಹಾಕಿಸಿ ಮತ್ತೆ ನೀವು ಅಧಿಕಾರಕ್ಕೆ ಬರುವಂತೆ ಮಾಡಲು ಪ್ರಯತ್ನಿಸುವೆ. ನೀವು ನನ್ನ ಈ ಸವಾಲನ್ನು ಸ್ವೀಕರಿಸದೇ ಇದ್ದರೆ, ಈಗ ಸಮಯ ಬಂದಿದೆ, ದಯವಿಟ್ಟು ರೈತರ `ಮನ್ ಕಿ ಬಾತ್’ ನ್ನು ನೀವೂ ಕೇಳಲೇಬೇಕು.

ಅನುವಾದ: ಎ.ಎಸ್.ಪ್ರಭಾಕರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...