HomeಮುಖಪುಟInternational Plastic Bag Free Day| ಪ್ಲಾಸ್ಟಿಕ್ ಅಥವಾ ಪರಿಸರ? ಆಯ್ಕೆ ನಮ್ಮದು!

International Plastic Bag Free Day| ಪ್ಲಾಸ್ಟಿಕ್ ಅಥವಾ ಪರಿಸರ? ಆಯ್ಕೆ ನಮ್ಮದು!

ಪ್ರತಿ ಸೆಕೆಂಡಿಗೆ ಜಗತ್ತಿನಲ್ಲಿ 10 ಲಕ್ಷ ಪ್ಲಾಸ್ಟಿಕ್‌ ಕವರ್‌ಗಳು ಬಳಕೆಯಾಗುತ್ತವೆ ಎಂಬುದು ಭೂಮಿಗೆ, ಜೀವ ಸಂಕುಲಕ್ಕೆ ಮತ್ತು ಮನುಕುಲಕ್ಕೆ ಅತ್ಯಂತ ಅತಂಕದ ವಿಷಯ.

- Advertisement -
- Advertisement -

ಪ್ಲಾಸ್ಟಿಕ್, ಪ್ಲಾಸ್ಟಿಕ್, ಪ್ಲಾಸ್ಟಿಕ್. ನಗರ ಹಳ್ಳಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್. ಇಂದು ಜಗತ್ತನ್ನು ಆಳುತ್ತಿರುವುದು ಇದೇ ಪ್ಲಾಸ್ಟಿಕ್. ಮಣ್ಣಲ್ಲಿ ಕೊಳೆಯದ, ನೀರಲ್ಲಿ ಕರಗದ, ಗಾಳಿಯಲ್ಲಿ ಲೀನವಾಗದೇ ಭೂಮಿಯ ಮೇಲೆ ರಾಶಿ ರಾಶಿ ಕಸವಾಗಿ, ಮಾಲಿನ್ಯವಾಗಿ ಪರಿಸರವನ್ನು ಹಾಳುಮಾಡುವ ಇದೇ ಪ್ಲಾಸ್ಟಿಕ್ ಇಂದು ನಮ್ಮನ್ನು ಆಳುತ್ತಿರುವುದು. ಜಗತ್ತಿನಲ್ಲಿ ಪ್ರತಿನಿತ್ಯ ಕೋಟ್ಯಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ನಿತ್ಯ ನಾವು ಹೀಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಎಲ್ಲಿ ಸೇರುತ್ತೆ ಗೊತ್ತೆ? ಸಮುದ್ರದ ತಳ, ನದಿ ಸರೋವರಗಳ ಆಳ, ಭುಮಿಯ ಮೇಲ್ಪದರ ಮತ್ತು ಗರ್ಭದಲ್ಲಿ ಕೂತು ಇಡೀ ಪರಿಸರವನ್ನೇ ನಾಶ ಮಾಡುತ್ತದೆ. ಜಲಚರಗಳು, ಪ್ರಾಣಿಪಕ್ಷಿಗಳು ಬಳಸಿ ಬಿಸಾಡಿದ ಪ್ಲಾಸ್ಟಿಕ್ ನುಂಗಿ ಸಾವಿಗೆ ಗುರಿಯಾಗುತ್ತವೆ.

ಇಂದು ಜುಲೈ 3ನ್ನು ಪ್ಲಾಸ್ಟಿಕ್ ಬ್ಯಾಗ್‌ ಮುಕ್ತ ದಿನ. ಪ್ಲಾಸ್ಟಿಕ್‌ ಬಳಕೆಯ ಪ್ರಮಾಣವನ್ನು ತಡೆಯಲು ಅಂತರಾಷ್ಟ್ರೀಯ ಸಮುದಾಯ ಈ ದಿನವನ್ನು ಪ್ಲಾಸ್ಟಿಕ್ ಬ್ಯಾಗ್‌ ಮುಕ್ತ ದಿನವನ್ನಾಗಿ ಆಚರಿಸುತ್ತದೆ. ವಿಶ್ವದೆಲ್ಲೆಡೆ ಸರ್ಕಾರ ಮತ್ತು ನಾಗರಿಕ ಸಮಾಜ ಪ್ಲಾಸ್ಟಿಕ್ ಮರುಬಳಕೆಯ ಗುರಿಯನ್ನು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಅನೇಕ ನಿರ್ಣಯಗಳನ್ನು ಅಂಗೀಕರಿಸುತ್ತವೆ.

ನಮ್ಮ ದೇಶದಲ್ಲಿ ಪ್ರತಿದಿನ 29,590 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆಯೆಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ 2019 ರಲ್ಲಿ ಸಂಸತ್ತಿನಲ್ಲಿ ಅಂಕಿ ಅಂಶಗಳನ್ನು ನೀಡಿದ್ದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆ ಕಡಿಮೆಯಾಗುವ ಬದಲು ದುಪ್ಪಟ್ಟಾಗಿದೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್ ಮಾಸ್ಕ್‌ಗಳ ರಾಶಿ, ಸ್ಯಾನಿಟೈಜರ್ ಬಾಟೆಲ್‌ಗಳು, ಗ್ಲೌಸ್‌ಗಳು, ಪಿಪಿಇ ಕಿಟ್‌ಗಳ ರಾಶಿ ನಗರಗಳ ಮೂಲೆಯಲ್ಲಿ ತುಂಬ ತೊಡಗಿವೆ. ಈ ಬಗ್ಗೆ ಜನರಾಗಲಿ ಸರ್ಕಾರವಾಗಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಎಲ್ಲಾ ಕಾನೂನುಗಳು ಕೇವಲ ತೋರಿಕೆಗೆ ಮಾತ್ರ ಜಾರಿಯಲ್ಲಿವೆ.

ಪರಿಸರ ಇಂದು ಎದುರಿಸುತ್ತಿರುವ ಮೂರು ಅಪಾಯಗಳನ್ನು ಪಟ್ಟಿ ಮಾಡಿ ಅಂದರೆ ನಾವು ತಾಪಮಾನ ಏರಿಕೆ, ಅರಣ್ಯ ನಾಶ, ಮತ್ತು ಮಾಲಿನ್ಯಗಳ ದೊಡ್ಡ ಪಟ್ಟಿಯನ್ನೇ ನೀಡುತ್ತೇವೆ. ಈ ಪಟ್ಟಿಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್‌ನ ಹೆಸರು ಸುಳಿಯುವುದೇ ಇಲ್ಲ. ಪ್ಲಾಸ್ಟಿಕ್‌ನಿಂದ ಕೇವಲ, ಹಸು, ಆಡು, ಕುರಿ, ನಾಯಿ, ಮೀನು ಮುಂತಾದ ಪ್ರಾಣಿಗಳಿಗೆ ಮಾತ್ರ ಅಪಾಯ ಎಂಬ ತಪ್ಪು ತಿಳುವಳಿಕೆ ನಾಗರಿಕ ಸಮಾಜದಲ್ಲಿ ಆಳವಾಗಿ ಬೇರೂರಿ ಬಿಟ್ಟಿದೆ. ನಿಜದಲ್ಲಿ ಪ್ಲಾಸ್ಟಿಕ್ ಪ್ರಾಣಿಗಳಿಗಿಂತ ಹೆಚ್ಚು ಮನುಷ್ಯನಿಗೆ ಅಪಾಯಕಾರಿ. ಇಂದು ಆಹಾರ ಸರಪಳಿಯಲ್ಲಿ ಹಾಲು, ಮಾಂಸದ ಮೂಲಕ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರಿ ಆಗಿದೆ.

ಇದನ್ನೂ ಓದಿ: ನಟ ಅಮೀರ್‌ ಖಾನ್‌ ಮತ್ತು ಕಿರಣ್ ರಾವ್‌ ವಿಚ್ಛೇದನ ಘೋಷಣೆ!

ಮನುಷ್ಯನ ಶ್ವಾಸಕೋಶ, ಕರುಳು, ಕಿಡ್ನಿಯಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮಕಣಗಲು ಪತ್ತೆಯಾಗಿವೆ. ಇತ್ತೀಚಿನ ಅಧ್ಯಯನವೊಂದು ಹೇಳುವ ಪ್ರಕಾರ “ವಾರದಲ್ಲಿ ಸರಾಸರಿ 2000 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹವನ್ನು ಸೇರುತ್ತಿದೆ. ಶ್ವಾಸ, ಆಹಾರ, ನೀರು ಇದೇ ಮಾರ್ಗವಾಗಿ ನಮಗರಿವಿಲ್ಲದಂತೆ ಪ್ಲಾಸ್ಟಿಕ್ ಇಂದು ನಮ್ಮ ದೇಹವನ್ನು ಆಕ್ರಮಿಸುತ್ತಿದೆ. 2000 ಚಿಕ್ಕ ಪ್ಲಾಸ್ಟಿಕ್ ಕಣಗಳೆಂದರೆ ಅದು ಒಂದು ಎಟಿಎಮ್  ಕಾರ್ಡ್‌ಗೆ ಸಮ.

ವಿಶ್ವ ಸಂಸ್ಥೆಯು ಪ್ಲಾಸ್ಕಿಕ್ ಮಾಲಿನ್ಯ ಜಗತ್ತನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದು ಘೋಷಿಸಿದೆ. ಜಗತ್ತಿನಲ್ಲಿ ಪ್ರತಿ ವರ್ಷ ಸರಿ ಸುಮಾರು 300 ಮಿಲಯನ್‌ ಟನ್‌ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದು ಜಗತ್ತಿನಲ್ಲಿರುವ ಮಾನವರ ಒಟ್ಟೂ ತೂಕಕ್ಕಿಂತಲೂ ಹೆಚ್ಚು. ಸಾಗರಗಳಲ್ಲಿ ದೊಡ್ಡ ಪ್ಲಾಸ್ಟಿಕ್ ನಡುಗಡ್ಡೆಗಳು ಪತ್ತೆಯಾಗಿವೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಜಗತ್ತಿನ ಪ್ರತಿನಿತ್ಯದ ತ್ಯಾಜ್ಯದಲ್ಲಿ 20% ಪ್ಲಾಸ್ಟಿಕ್‌ ಒಳಗೊಂಡಿರುತ್ತದೆ. ಕಾಗದ ಅಥವಾ ಬಟ್ಟೆಯಂತೆ ಪ್ಲಾಸ್ಟಿಕ್ ಕಡಿಮೆ ಅವಧಿಯಲ್ಲಿ ಕೊಳೆಯುವ ವಸ್ತುವಾಗಿದ್ದರೆ ಚಿಂತೆಯಿರಲಿಲ್ಲ. 300 ವರ್ಷ ಕಳೆದರೂ ಪ್ಲಾಸ್ಟಿಕ್ ಪರಿಸರದಲ್ಲಿ ವಿಘಟನೆಗೊಳ್ಳುವುದಿಲ್ಲ. ಇದು ನಮಗೆಲ್ಲ ತಿಳಿದಿರುವ ವಿಷಯವಾದರೂ ಪ್ರತಿ ಸೆಕೆಂಡಿಗೆ ಜಗತ್ತಿನಲ್ಲಿ 10 ಲಕ್ಷ ಪ್ಲಾಸ್ಟಿಕ್‌ ಕವರ್‌ಗಳು ಬಳಕೆಯಾಗುತ್ತವೆ ಎಂಬುದು ಭೂಮಿಗೆ, ಜೀವ ಸಂಕುಲಕ್ಕೆ ಮತ್ತು ಮನುಕುಲಕ್ಕೆ ಅತ್ಯಂತ ಅತಂಕದ ವಿಷಯ. ಪ್ಲಾಸ್ಟಿಕ್ ಚೀಲ, ಕವರ್ ಮುಂತಾದ ವಸ್ತುಗಳ ಬಳಕೆಯನ್ನು ನಿಲ್ಲಿಸಿ, ಕಾಗದ, ಬಟ್ಟೆಯ ಬ್ಯಾಗ್‌ಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 3 ರಂದು ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್‌ ಮುಕ್ತ ದಿನವನ್ನು ಆಚರಿಸಲಾಗುತ್ತದೆ.

ಬಾಂಗ್ಲಾದೇಶವು 2002ರಲ್ಲಿಯೇ ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ನಿಷೇಧವನ್ನು ಹೇರಿತ್ತು. ಆಮೂಲಕ ಪ್ಲಾಸ್ಟಿಕ್ ನಿಷೇಧಿಸಿದ ಜಗತ್ತಿನ ಮೊದಲ ದೇಶವಾಗಿ ಬಾಂಗ್ಲಾದೇಶ ಗುರುತಿಸಿಕೊಂಡಿತ್ತು. ಭಾರತದಲ್ಲಿ 2006 ರಿಂದ ಭಾರತದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ನಿಷೇಧ ಆರಂಭವಾಗಿ ಇಂದು ಅನೇಕ ರಾಜ್ಯಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳ ಬಳಕೆಯ ಮೇಲೆ ಸಂಪೂರ್ಣ ಅಥವಾ ಭಾಗಶ: ನಿಷೇಧವಿದೆ. 2019ರ ಗಾಂಧಿ ಜಯಂತಿಯಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 2022 ರ ವೇಳೆಗೆ ಭಾರತವು ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್‌ನಿಂದ ಮುಕ್ತವಾಗಲಿದೆ ಎಂದು ಘೋಷಿಸಿದ್ದರು. ಪ್ರಧಾನಿಗಳ ಘೋಷಣೆ ಇದುವರೆಗೆ ಒಂದು ಆಶಾವಾದವಾಗಿಯೇ ಉಳಿದಿದೆ ಹೊರತು ವಾಸ್ತವದಲ್ಲಿ ಜಾರಿಗೆ ಬಂದಿಲ್ಲ.

ಇದನ್ನೂ ಓದಿ: ಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! – ಬಿ.ಚಂದ್ರೇಗೌಡ

ಪ್ಲಾಸ್ಟಿಕ್ ರಸ್ತೆಗಳು ಮತ್ತು ಮರುಬಳಕೆ ತಂತ್ರಜ್ಞಾನ

ಮುಂಬೈ ಮಹಾನಗರ ಪಾಲಿಕೆ 2014 ರಲ್ಲಿ ಪ್ಲಾಸ್ಟಿಕ್‌ ರಸ್ತೆಗಳ ಪ್ರಯೋಗಕ್ಕೆ ಕೈ ಹಾಕಿತು. 2018 ರ ವರೆಗೆ ಪ್ಲಾಸ್ಟಿಕ್‌ ರಸ್ತೆಗಳ ನಿರ್ಮಾಣ ಪ್ರಯತ್ನದಲ್ಲಿ ಯಾವುದೇ ಬೆಳವಣಿಗೆಯಾಗಲಿಲ್ಲ. 2020ರಲ್ಲಿ ಮಹಾನಗರ ಪಾಲಿಕೆ ಪ್ಲಾಸ್ಟಿಕ್‌ ಕೊರತೆಯಿಂದ ಈ ಯೋಜನೆಯನ್ನೇ ಕೈಬಿಟ್ಟಿತು. ಪ್ಲಾಸ್ಟಿಕ್ ಮರುಬಳಕೆಯ ಮೂಲಕ ವಿವಿಧ ಆಟಿಕೆ, ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಪದ್ಧತಿ ಜಾರಿಯಲ್ಲಿದೆ. ಪೈಪ್‌ಗಳ ತಯಾರಿಕೆಯಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಮುಂಬೈ ನಗರ ಪ್ರತಿ ತಿಂಗಳು 25 ಟನ್‌ ಪ್ಲಾಸ್ಟಿಕ್‌ ಮರುಬಳಕೆಯನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಭಾರತ ಸರ್ಕಾರ 2019ರಲ್ಲಿ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ ದೇಶದಲ್ಲಿ ಸದ್ಯ 34,000 ಕಿಲೋಮಿಟರ್ ರಸ್ತೆಗಳ ಉದ್ದದ ನಿರ್ಮಾಣದಲ್ಲಿ ಡಾಂಬರು ಮತ್ತು ಕಾಂಕ್ರಿಟಿನ ಜೊತೆ ಪ್ಲಾಸ್ಟಿಕ್ ಮಿಶ್ರಣವನ್ನು ಬಳಸಲಾಗಿದೆ.

ಕೋಲ್ಡ್‌ ಪ್ಲಾಸ್ಮಾ ಪ್ಯಾರಲಿಸಿಸ್ ಪ್ರಕ್ರಿಯೆ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೈಡ್ರೋಜನ್, ಮಿಥೇನ್ ಮತ್ತು ಎತಿಲಿನ್ ಆಗಿ ಪರಿವರ್ತಿಸುವುದು ಪ್ಲಾಸ್ಟಿಕ್ ಮರುಬಳಕೆಗೆ ಇರುವ ಮತ್ತೊಂದು ವಿಧಾನ. ಸದ್ಯ ಭಾರತದಲ್ಲಿ ಈ ವಿಧಾನದಲ್ಲಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್‌ ಅನ್ನು ಕರಗಿಸುವ ಪ್ರಕ್ರಿಯೆ ಜಾರಿಗೆ ಬಂದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕ್ಷಣಾರ್ಧದಲ್ಲಿ ವಿಘಟಿಸಿ ಕರಗಿಸಬಲ್ಲ  ಬ್ಯಾಕ್ಟೀರಿಯಾದ ಸಂಶೋಧನೆಯಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್‌ ಆಫ್ ಪ್ಲಾಸ್ಟಿಕ್ ಇಂಜಿನೀಯರಿಂಗ್‌ ವಿಜ್ಞಾನಿಗಳು ತೊಡಗಿದ್ದಾರೆ. ಇದುವರೆಗೆ ಸಂಶೋಧನೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ ಎಂದು ಪ್ರಕಾಶ್‌ ಜಾವಡೇಕರ್‌ 2019ರಲ್ಲಿ ಭಾರತ ಸಂಸತ್ತಿಗೆ ಹೇಳಿದ್ದರು.

ಇದನ್ನೂ ಓದಿ: ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮೈದಾಳಕೆರೆಗೆ ವಿಷಕಾರಿ ಪ್ಲಾಸ್ಟಿಕ್ ಬೂದಿ!

ಸ್ಲಮ್‌ ಡಾಗ್ ಮಿಲೇನಿಯರ್‌

ಆಸ್ಕರ್‌ ಪ್ರಶಸ್ತಿ ವಿಜೇತ 2008ರ ಸ್ಲಮ್‌ ಡಾಗ್ ಮಿಲೇನಿಯರ್‌ ಚಿತ್ರ ಭಾರತದ ಮಹಾನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಉಂಟಾಗುವ ಸಮಸ್ಯೆಗಳ ಕುರಿತಾಗಿ ಬೆಳಕು ಚೆಲ್ಲಿತ್ತು. ಏಷ್ಯಾದ ಅತಿದೊಡ್ಡ ಕೊಳಗೇರಿ ಮುಂಬೈನ ಧಾರವಿಯಲ್ಲಿದೆ. ಇಲ್ಲಿ 2.5 ಲಕ್ಷ ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಪ್ಲಾಸ್ಟಿಕ್ ರಿಸೈಕಲ್ ಫ್ಯಾಕ್ಟರಿಗಳ ಕೇಂದ್ರ ಧಾರವಿ ಪ್ರತಿವರ್ಷ 500 ಮಿಲಯನ್ ಡಾಲರ್ ಆದಾಯವನ್ನು ದೇಶಕ್ಕೆ ನಿಡುತ್ತಿದೆ. ಈ ಆದಾಯದ ಪ್ರಮಾಣ ಗಮನಿಸಿದರೆ ದೇಶದಲ್ಲಿರುವ ಪ್ಲಾಸ್ಟಿಕ್ ಪ್ರವಾಹದ ಒಂದು ಚಿಕ್ಕ ಕಲ್ಪನೆ ನಮ್ಮ ಕಣ್ಮುಂದೆ ಬಂದು ಹೋಗುತ್ತದೆ.

ಪ್ರತಿನಿತ್ಯ ಭಾರತದ ಮಹಾನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಅನೇಕರನ್ನು ನೋಡುತ್ತೇವೆ. ದೇಶದಲ್ಲಿ  ಸರಿ ಸುಮಾರು 40 ಲಕ್ಷ ಜನರು ಪ್ಲಾಸ್ಟಿಕ್ ಆಯುವ ಉದ್ಯೋಗದಲ್ಲಿ ತೊಡಗಿದ್ದಾರೆ.  ದೇಶದ 40% ಪ್ಲಾಸ್ಟಿಕ್ ಮರುಬಳಕೆಯ ರೂವಾರಿಗಳು ಈ ವೇಸ್ಟ್ ಪಿಕ್ಕರ್ಸ್. ಸರ್ಕಾರ  ಮತ್ತು ನಾಗರಿಕ ಸಮಾಜ ವೇಸ್ಟ್‌ಪಿಕ್ಕರ್ಸ್‌ ಗಳ ಮೇಲೆ ಕನಿಷ್ಠ ಮಾನವೀಯ ಕಾಳಜಿಯಿನ್ನು ತೋರಿಸದಿರುವುದು ಭಾರತದ ಸಾಮಾಜಿಕ ವ್ಯವಸ್ಥೆಯ ದೊಡ್ಡ ದುರಂತ.

ಚಿತ್ರ ಕೃಪೆ: NDTV

ಮನುಷ್ಯರ ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀರುವ ಪ್ಲಾಸ್ಟಿಕ್ ತ್ಯಾಜ್ಯ 

ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮನುಷ್ಯನ ಅರೋಗ್ಯಕ್ಕೆ ಯಾವುದೇ ಹಾನಿಯಿಲ್ಲವೆಂದು ಈಗಲೂ ವಾದಿಸುವವರು ಮತ್ತು ನಂಬುವವರು ವಿಜ್ಞಾನಿ ರುಥೆನ್ ರುಡೆಲ್ ಮಾತುಗಳನ್ನು ಕೇಳಬೇಕು. ಪ್ಲಾಸ್ಟಿಕ್ ಸಂಶೋಧನೆಯಲ್ಲಿ ತೊಡಗಿರುವ ಅತ್ಯುನ್ನತ ಸಂಶೋಧನಾ ಸಂಸ್ಥೆಯ ನಿರ್ದೇಶಕ ರುಡೆಲ್ ಮನುಷ್ಯನ ಆರೋಗ್ಯದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಬೀರುವ ಪರಿಣಾಮಗಳನ್ನು ಈ ರೀತಿಯಲ್ಲಿ ವಿವರಿಸುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯಗಳು ಅಪಾಯಕಾರಿ ರಾಸಾಯನಿಕಗಳಿಂದ ಮಾಡಲ್ಪಟ್ಟಿದ್ದು ಮನುಷ್ಯನ ದೇಹದ ಹಾರ್ಮೋನು ವ್ಯವಸ್ಥೆಯನ್ನೇ ನಾಶಪಡಿಸುತ್ತವೆ. ಹುಟ್ಟು ಅಂಗವೈಕಲ್ಯ, ಸಂತಾನಹೀನತೆ, ಕ್ಯಾನ್ಸರ್‌ ಗಡ್ಡೆಗಳು ಪ್ಸಾಸ್ಟಿಕ್ ರಾಸಾಯನಿಕಗಳಿಂದ ಸಂಭವಿಸುತ್ತದೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನ ಇತ್ತೀಚಿನ ಸಂಶೋಧನೆಯ ಪ್ರಕಾರ ವಿನೈಲ್ ರಾಸಾಯನಿಕ ವರ್ಗಕ್ಕೆ ಸೇರಿದ DEHP ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಮನುಷ್ಯನ ಸಂತಾನೋತ್ಪತ್ತಿ ಶಕ್ತಿಯನ್ನೇ ಕುಂಠಿತಗೊಳಿಸುವ ಶಕ್ತಿಯನ್ನು DEHP ರಾಸಾಯನಿಕ ಘಟಕಾಂಶಗಳು ಹೊಂದಿರುತ್ತವೆ. DEHP ಪ್ಲಾಸ್ಟಿಕ್‌ನ ಒಂದು ಉತ್ಪನ್ನವಷ್ಟೇ !

ನಾವೀಗ ಮತ್ತೊಮ್ಮೆ ಯೋಚನೆ ಮಾಡಬೇಕು. ದೇಶದಲ್ಲಿ ಉತ್ಪಾದನೆಯಾಗುವ 60% ಪ್ಲಾಸ್ಟಿಕ್ ತ್ಯಾಜ್ಯ ಹಾಗೆ ಪರಿಸರದಲ್ಲಿಯೇ ಉಳಿಯುತ್ತಿದೆ. ಹೀಗೆ ಮುಂದುವರೆದರೆ ನಗರದ ಹೊರವಲಯಗಳಲ್ಲಿ ಪ್ಲಾಸ್ಟಿಕ್ ಪರ್ವತಗಳ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಉತ್ಪ್ರೇಕ್ಷೆಯೆನಿಸಿದರೆ ಬೆಂಗಳೂರು, ಮುಂಬೈ ನಗರಗಳ ಒಣ ತ್ಯಾಜ್ಯ ವಿಲೇವಾರಿ ಘಟಕಗಳನ್ನೊಮ್ಮೆ ನೋಡಿ ಬನ್ನಿ..

ನಮ್ಮ ಭೂಮಿಗೆ ಪ್ಲಾಸ್ಟಿಕ್ ಧಾರಣ ಸಾಮರ್ಥ್ಯವಿಲ್ಲವೆಂಬ ಬಹು ಮುಖ್ಯ ಸಂಗತಿಯನ್ನು ಈ ಹೊತ್ತು ಜ್ಞಾಪಿಸಿಕೊಳ್ಳುವುದು ಉತ್ತಮ. ಪ್ಲಾಸ್ಟಿಕ್ ಎಂದರೆ ಅಗ್ಗದ, ಹಗುರದ, ಸರಳ ವಸ್ತುವೆಂಬ ತಿಳುವಳಿಕೆಯೇ 20 ನೇ ಶತಮಾನದಲ್ಲಿ ಜಗತ್ತಿಗೆ ಮಾಡಲಾದ ದೊಡ್ಡ ಮೋಸ ಮತ್ತು ವಂಚನೆ. ಇಂದು ಪ್ಲಾಸ್ಟಿಕ್‌ ತ್ಯಾಜ್ಯದ ನಿರ್ವಹಣೆಗೆ ಆಗುವ ಖರ್ಚು, ಮನುಷ್ಯನ ಅರೋಗ್ಯದ ಮೇಲಾಗುವ ಪರಿಣಾಮವನ್ನು ಲೆಕ್ಕಹಾಕಿದೆ ಅಗ್ಗವೆಂಬ ಹೆಗ್ಗಳಿಕೆ ಪಡೆದ ಪ್ಲಾಸ್ಟಿಕ್ ನಿಜದಲ್ಲಿಯೂ ಅಗ್ಗವೇ ?

ಪ್ರಸ್ತುತ ನಮ್ಮ ಮುಂದೆ ಎರಡು ಬಹು ಮುಖ್ಯ ವಿಷಯಗಳಿವೆ. ಒಂದು ಪ್ಲಾನೆಟ್ ಮತ್ತೊಂದು ಪ್ಲಾಸ್ಟಿಕ್. ಆಯ್ಕೆ ನಮಗೆ ನಿಮಗೆ ಬಿಟ್ಟಿದ್ದು . ಜುಲೈ 3 ರ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ ಪ್ಲಾಸ್ಟಿಕ್‌ಗೆ ಪರ್ಯಾಯಗಳ ಬಳಕೆಯ ಕಡೆಗೆ ನಮ್ಮ ನಿಮ್ಮನೊಂದಿಷ್ಟು ಪ್ರೇರೇಪಿಸಲಿ…

-ರಾಜೇಶ್ ಹೆಬ್ಬಾರ್


ಇದನ್ನೂ ಓದಿ: 1 ಕೆಜಿ ಪ್ಲಾಸ್ಟಿಕ್ ಅಥವಾ 10 ಪ್ಲಾಸ್ಟಿಕ್ ಬಾಟಲಿಗಳನ್ನು ನೀಡುವವರಿಗೆ ಒಂದು ಪ್ಯಾಕೆಟ್ ಹಾಲು ಉಚಿತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...