ಲೋಕ್ ಜನಶಕ್ತಿ ಪಕ್ಷದ (LJP) ನಾಯಕ ಚಿರಾಗ್ ಪಾಸ್ವಾನ್ ಸೋಮವಾರ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಜನ್ಮ ದಿನದಂದು ‘ಆಶೀರ್ವಾದ್ ಯಾತ್ರೆ’ ಆರಂಭಿಸಿದ್ದಾರೆ. ಈ ವೇಳೆ ಆಶೀರ್ವಾದ್ ಯಾತ್ರೆ ಪ್ರದರ್ಶನವಲ್ಲ. ಜನರ ಆಶೀರ್ವಾದ ಪಡೆಯುವ ಗುರಿಯನ್ನು ಮಾತ್ರ ಹೊಂದಿದೆ. ನನ್ನ ಸ್ವಂತ ಜನರೇ ನನಗೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದಾರೆ.
“ನಾನು ಆಶೀರ್ವಾದ್ ಯಾತ್ರೆಯನ್ನು ಹಾಜಿಪುರದಿಂದ ಪ್ರಾರಂಭಿಸುತ್ತಿದ್ದೇನೆ. ಏಕೆಂದರೆ ಅದು ನನ್ನ ತಂದೆಯ ಕರ್ಮ ಭೂಮಿ. ನಾವು ಬಿಹಾರದ ಪ್ರತಿ ಜಿಲ್ಲೆಯಲ್ಲೂ ಈ ಯಾತ್ರೆಯನ್ನು ನಡೆಸುತ್ತೇವೆ. ಎಲ್ಲರ ಆಶೀರ್ವಾದವನ್ನು ಪಡೆದುಕೊಳ್ಳುವುದು ನಮ್ಮ ಏಕೈಕ ಗುರಿ. ಯಾರಿಗೂ ನನ್ನ ಸ್ಥಾನಮಾನ ಪ್ರದರ್ಶಿಸುವ ಅವಶ್ಯಕತೆ ನನಗೆ ಇಲ್ಲ. ನನ್ನ ಸ್ವಂತ ಜನರೇ ನನಗೆ ದ್ರೋಹ ಬಗೆದಿದ್ದಾರೆ” ಎಂದು ಚಿರಾಗ್ ಹೇಳಿದ್ದಾರೆ.
ಎರಡು ದಶಕಗಳ ಹಿಂದೆ ರಾಮ್ ವಿಲಾಸ್ ಪಾಸ್ವಾನ್ ಲೋಕ್ ಜನಶಕ್ತಿ ಪಕ್ಷವನ್ನು ಕಟ್ಟಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಮ್ ವಿಲಾಸ್ ಪಾಸ್ವಾನ್ ನಿಧನರಾದರು. ಅವರ ನಿಧನದ ನಂತರ ಪಕ್ಷದಲ್ಲಿ ಬಿರುಕು ಉಂಟಾಗಿದೆ. ಚಿರಾಗ್ ಪಾಸ್ವಾನ್ ಮತ್ತು ಅವರು ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ನಡುವೆ ಪಕ್ಷದ ನಿಯಂತ್ರಣ ಕುರಿತು ಸಂಘರ್ಷ ಉಂಟಾಗಿದೆ. ಹೀಗಾಗಿ ಈಗ ಚಿರಾಗ್ ಪಾಸ್ವಾನ್ ಆಶೀರ್ವಾದ್ ಯಾತ್ರೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕೇಳಿದ ಯುವಜನರ ಮೇಲೆ ಲಾಠಿ ಪ್ರಯೋಗಿಸಿದ ಬಿಹಾರ ಸರ್ಕಾರ
“ನಾನು ಸಿಂಹದ ಮರಿ, ಎಷ್ಟು ಜನರು ನಮ್ಮನ್ನು ತುಳಿಯಲು ಎಷ್ಟೇ ಪ್ರಯತ್ನಿಸಿದರೂ ನಾನು ಎಂದಿಗೂ ಹೆದರುವುದಿಲ್ಲ” ಎಂದು ಚಿರಾಗ್ ಯಾತ್ರೆ ಆರಂಭಿಸುವ ಮೊದಲು ಹೇಳಿದ್ದಾರೆ. ಜೊತೆಗೆ ‘ಪಾಸ್ವಾನ್’ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ.
ಪಕ್ಷದ ಆರು ಸಂಸದರಲ್ಲಿ ಐವರು ಪಶುಪತಿ ಕುಮಾರ್ ಪರಾಸ್ ಬೆಂಬಲವಾಗಿ ಜೂನ್ 13 ರಂದು ಬೆಂಬಲ ಪತ್ರ ನೀಡಿದ ನಂತರ ಚಿರಾಗ್ ಬದಲಿಗೆ ಪರಾಸ್ ಅವರನ್ನು ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕರಾಗಿ ಗುರುತಿಸಲಾಗಿದೆ.
“ಬಿಜೆಪಿ ಮಧ್ಯಸ್ಥಿಕೆ ವಹಿಸಿ ಪಕ್ಷದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ, ಅವರ ಮೌನದಿಂದ ಖಂಡಿತವಾಗಿಯೂ ನೋವುಂಟಾಗಿದೆ” ಎಂದು ಚಿರಾಗ್ ಈ ಹಿಂದೆ ಹೇಳಿದ್ದರು. ಲೋಕ ಜನಶಕ್ತಿ ಪಕ್ಷದ ಬಿಕ್ಕಟ್ಟು ಪ್ರಾದೇಶಿಕ ಪಕ್ಷದ ಆಂತರಿಕ ವಿಷಯವಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ಬಿಜೆಪಿಯ ಮೌನದಿಂದ ನೋವಾಗುತ್ತಿದೆ: ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್


