ಕಾಂಗ್ರೆಸ್ ಟೂಲ್‌ಕಿಟ್ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ವೇಳೆ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ಷುಲ್ಲಕ, ನಿಷ್ಪ್ರಯೋಜಕ ಅರ್ಜಿಗಳ ಬಗ್ಗೆ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
“ರಾಷ್ಟ್ರ ವಿರೋಧಿ ಕೃತ್ಯಗಳ” ಕುರಿತು ಕಾಂಗ್ರೆಸ್ ವಿರುದ್ಧದ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೋಂದಣಿಯನ್ನು ಅಮಾನತುಗೊಳಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ’ಅರ್ಜಿದಾರರಿಗೆ ಕಾಂಗ್ರೆಸ್ ಟೂಲ್‌ಕಿಟ್ ಇಷ್ಟವಾಗದಿದ್ದರೆ, ಅದನ್ನು ನೋಡಬೇಡಿ, ನಿರ್ಲಕ್ಷಿಸಿ. ಇದು ರಾಜಕೀಯ ಪಕ್ಷದ ಯೋಜಿತ ಪ್ರಚಾರ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ‘ಕಾಂಗ್ರೆಸ್ ಟೂಲ್‌ಕಿಟ್ ಎಕ್ಸ್‌ಪೋಸ್ಡ್’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!
ಕಾಂಗ್ರೆಸ್ ಟೂಲ್‌ಕಿಟ್ ಪ್ರಕರಣದ ಅರ್ಜಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, ಇಂತಹ ಕ್ಷುಲ್ಲಕ ಅರ್ಜಿಗಳನ್ನು ಆಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. “ಇಂತಹ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಏನಾದರೂ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರನ್ನು ಪರ ವಾದಿಸುತ್ತಿದ್ದ ವಕೀಲ ಶಶಾಂಕ್ ಶೇಖರ್ ಜಾ, ಕೊರೊನಾ ವೈರಸ್ ರೂಪಾಂತರದ ರೂಪಕ್ಕೆ “ಇಂಡಿಯನ್ ವೆರಿಯಂಟ್” ಎಂಬ ಪದವನ್ನು ಬಳಸುವುದು ಸಹ ಯೋಜಿತ ಪ್ರಚಾರದ ವಿಷಯವಾಗಿದೆ ಎಂದು ವಾದಿಸಿದರು. ಇದೇ ವೇಳೆ ಸಿಂಗಾಪುರವು, “ಸಿಂಗಾಪುರ್ ರೂಪಾಂತರ” ದಂತಹ ಪದಗಳನ್ನು ಬಳಸಲು ಆಕ್ಷೇಪ ವ್ಯಕ್ತಪಡಿಸಿದೆ ಎಂದು ವಕೀಲ ಶಶಾಂಕ್ ಶೇಖರ್ ಜಾ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್, “ಭಾರತ ಪ್ರಜಾಪ್ರಭುತ್ವ, ನಿಮಗೆ ಗೊತ್ತಾ..?” ಎಂದು ಕಿಡಿಕಾರಿದ್ದಾರೆ. ’ನ್ಯಾಯಾಲಯವು ಎಂದಾದರೂ ವಿವಿಧ ರೀತಿಯ ರಾಜಕೀಯ ಪ್ರಚಾರವನ್ನು ನಿಯಂತ್ರಿಸಬಹುದೇ’ ಎಂದು ಮರು ಪ್ರಶ್ನೆ ಮಾಡಿದ್ದಾರೆ.
ದ್ವಿಸದಸ್ಯ ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಎಂ.ಆರ್.ಶಾ ಅವರು, ‘ಟೂಲ್‌ಕಿಟ್ ‘ ವಿಷಯದಲ್ಲಿ ಈಗಾಗಲೇ ಕ್ರಿಮಿನಲ್ ತನಿಖೆ ಬಾಕಿ ಉಳಿದಿದೆ. ಆರ್ಟಿಕಲ್ 32 ರ ಅಡಿಯಲ್ಲಿ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಮಾಡಿದ ಬಿಜೆಪಿಯ ಉನ್ನತ ನಾಯಕರ ವಿರುದ್ಧ ಕಾಂಗ್ರೆಸ್ ಪ್ರಕರಣ ದಾಖಲಿಸಿತ್ತು. ಟ್ವಿಟ್ಟರ್ ಕೂಡ ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ‘ಟೂಲ್‌ಕಿಟ್’ ಒಂದು ಕಟ್ಟುಕಥೆ, ತಿರುಚಿದ ಆರೋಪ ಎಂದು ಅನುಮೋದಿಸಿತ್ತು.
ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು


