ಒಕ್ಕೂಟ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಮಂಗಳವಾರ ರಾಷ್ಟ್ರಪತಿ ಭವನ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಇದರ ಜೊತೆಗೆ ಹಲವು ರಾಜ್ಯಗಳ ರಾಜ್ಯಪಾಲರನ್ನು ವರ್ಗಾಯಿಲಾಗಿದ್ದು, ಕೆಲವು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸಲಾಗಿದೆ.
ಪ್ರಸ್ತುತ ಮಿಜೋರಾಂ ರಾಜ್ಯಪಾಲರಾಗಿರುವ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರನ್ನು ಗೋವಾಕ್ಕೆ ವರ್ಗಾಯಿಸಲಾಗಿದೆ. ಆಂಧ್ರಪ್ರದೇಶದ ಪ್ರಮುಖ ಬಿಜೆಪಿ ಮುಖಂಡ ಡಾ.ಹಾರಿ ಬಾಬು ಕಂಭಂಪತಿ ಮಿಜೋರಾಂ ರಾಜ್ಯಪಾಲರಾಗಲಿದ್ದಾರೆ.
ಇದನ್ನೂ ಓದಿ: ಸಾಯುತ್ತೇವೆ ವಿನಃ ಹೋರಾಟದಿಂದ ಹಿಂದೆ ಸರಿಯುವುದಿಲ್ಲ: ಲಾಲು ಪ್ರಸಾದ್ ಯಾದವ್
ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ತ್ರಿಪುರಕ್ಕೆ ವರ್ಗಾಯಿಸಲಾಗಿದ್ದು, ಪ್ರಸ್ತುತ ಅಲ್ಲಿ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ.
ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೆಯ ಅವರನ್ನು ಹರಿಯಾಣ ರಾಜ್ಯಪಾಲರನ್ನಾಗಿ ಮಾಡಲಾಗಿದೆ. ಗೋವಾದ ಸಚಿವ ರಾಜೇಂದ್ರ ಅರ್ಲೆಕರ್ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಗುಜರಾತ್‌ನ ಬಿಜೆಪಿ ನಾಯಕ ಮಂಗುಭಾಯ್ ಛಗನ್‌ಭಾಯ್ ಪಟೇಲ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ಮಾಡಲಾಗಿದೆ.
ಈ ನೇಮಕಾತಿಗಳು ಆಯಾ ಕಚೇರಿಗಳ ಉಸ್ತುವಾರಿ ವಹಿಸಿಕೊಂಡ ದಿನಾಂಕಗಳಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
ರಾಜ್ಯಪಾಲರ ಮೂಲಭೂತ ಜವಾಬ್ದಾರಿ ಭಾರತ ಸಂವಿಧಾನವನ್ನು ಎತ್ತಿಹಿಡಿಯುವುದಾಗಿದೆ. ಸಂವಿಧಾನದ 159 ನೇ ವಿಧಿ ಅಡಿಯಲ್ಲಿ ರಾಷ್ಟ್ರಪತಿಗಳಿಂದ ಪ್ರಮಾಣ ವಚನವನ್ನು ಸ್ವೀಕರಿಸುವ ರಾಜ್ಯಪಾಲರು, ರಾಜ್ಯದ ಆಡಳಿತ ಮತ್ತು ಸಂವಿಧಾನ ದತ್ತವಾದ ಅಧಿಕಾರಗಳನ್ನು ಅತ್ಯಂತ ವಿವೇಚನೆಯಿಂದ ಚಲಾಯಿಸಬೇಕಾಗುತ್ತದೆ.
ಇದನ್ನೂ ಓದಿ: ಹಿಂದುತ್ವ ವಿಚಾರ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು


