ಹಿಂದುತ್ವ ವಿಚಾರ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು
PC: Naidunia

ಹಿಂದುತ್ವ ವಿರುದ್ಧದ ವಿಚಾರವಾಗಿ ಭಾನುವಾರ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

ಭಾನುವಾರ ಮುಸ್ಲಿಂ ರಾಷ್ಟ್ರೀಯ ಮಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಗುಂಪು ಹತ್ಯೆಗಳನ್ನು ಮಾಡುವ ತಪ್ಪಿತಸ್ಥರು ಹಿಂದುತ್ವ ವಿರೋಧಿಗಳು ಎಂದಿದ್ದರು.

ಸೋಮವಾರ ಸರಣಿ ಟ್ವೀಟ್‌ಗಳನನ್ನು ಮಾಡಿರುವ ಓವೈಸಿ, ಹಸುಗಳು ಮತ್ತು ಎಮ್ಮೆಗಳ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲದ ಈ ಅಪರಾಧಿಗಳಿಗೆ, ನಿರ್ದಿಷ್ಟ ಸಮುದಾಯದ ಹೆಸರುಗಳ ಆಧಾರದ ಮೇಲೆ ಜನರನ್ನು ಕೊಲ್ಲವ ಬಗೆ ಸಾಕಷ್ಟು ತಿಳಿದಿದೆ. ಈ ಅಪರಾಧಿಗಳಿಗೆ ಬೆನ್ನೆಲುಬಾಗಿ ಹಿಂದುತ್ವ ಸರ್ಕಾರ ಇದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಓವೈಸಿ ಸವಾಲು ಸ್ವೀಕರಿಸಿದ್ದೇವೆ, ಯುಪಿಯಲ್ಲಿ 300ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ- ಯೋಗಿ ಆದಿತ್ಯನಾಥ್

 

“ಆರ್‌ಎಸ್‌ಎಸ್‌ನ ಭಾಗವತ್ ಅವರು ಗುಂಪುಹತ್ಯೆ ಮಾಡಿದವರು ‘ಹಿಂದುತ್ವ ವಿರೋಧಿ’ ಎಂದು ಹೇಳಿದ್ದಾರೆ. ಈ ಅಪರಾಧಿಗಳಿಗೆ ಹಸು ಮತ್ತು ಎಮ್ಮೆಯ ನಡುವಿನ ವ್ಯತ್ಯಾಸ ತಿಳಿದಿಲ್ಲ ಆದರೆ ಜುನೈದ್, ಅಖ್ಲಾಕ್, ಪೆಹ್ಲೂ, ರಕ್ಬರ್, ಅಲಿಮುದ್ದೀನ್ ಎಂಬ ಹೆಸರುಗಳ ಆಧಾರದ ಮೇಲೆ ಜನರನ್ನು ಕೊಲ್ಲವ ಬಗೆಯನ್ನು ಸಾಕಷ್ಟು ತಿಳಿದಿದ್ದಾರೆ. ಈ ಅಪರಾಧಿಗಳಿಗೆ ಹಿಂದುತ್ವ ಸರ್ಕಾರದ ಬೆಂಬಲವಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಜೊತೆಗೆ ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರ ಮೇಲೆ ಆಗುತ್ತಿರುವ ದಾಳಿಗಳನ್ನು ಉಲ್ಲೇಖಿಸಿದ್ದಾರೆ, 2015 ರಲ್ಲಿ ಮೊಹಮ್ಮದ್ ಅಖ್ಲಾಕ್ ಅವರ ಕ್ರೂರ ಹತ್ಯೆ, 2017 ರಲ್ಲಿ ಪೆಹ್ಲೂ ಖಾನ್ ಮೇಲೆ ನಡೆದ ದಾಳಿ ಮತ್ತು 2018 ರಲ್ಲಿ ಅಲಿಮುದ್ದೀನ್ ಸಾವುಗಳನ್ನು ಉಲ್ಲೇಖಿಸಿದ್ದಾರೆ.

“ಅಲಿಮುದ್ದೀನ್ ಕೊಲೆಗಾರರಿಗೆ ಕೇಂದ್ರ ಸಚಿವರ ಕೈಯಲ್ಲಿ ಹಾರ ಹಾಕಿಸಲಾಗುತ್ತದೆ. ಅಖ್ಲಾಕ್ ಕೊಲೆಗಾರನ ದೇಹದ ಮೇಲೆ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ. ಆಸಿಫ್ ಕೊಲೆಗಾರರಿಗೆ ಬೆಂಬಲವಾಗಿ ಮಹಾಪಂಚಾಯತ್ ಅನ್ನು ಕರೆಯಲಾಗುತ್ತದೆ” ಎಂದು ಒತ್ತಿ ಹೇಳಿದ್ದಾರೆ.

“ಹೇಡಿತನ, ಹಿಂಸೆ ಮತ್ತು ಕೊಲೆ ಗಾಡ್ಸೆಯ ಹಿಂದುತ್ವ ಚಿಂತನೆಯ ಅವಿಭಾಜ್ಯ ಅಂಗವಾಗಿದೆ. ಮುಸ್ಲಿಮರನ್ನು ಹತ್ಯೆ ಮಾಡುವುದು ಈ ಚಿಂತನೆಯ ಪರಿಣಾಮವಾಗಿದೆ” ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಮೋಹನ್ ಭಾಗವತ್ ಅವರು “ಗುಂಪು ಹತ್ಯೆ” ಯ ಅಪರಾಧಿಗಳನ್ನು ಶಿಕ್ಷಿಸಬೇಕು. ಆದರೂ “ಕೆಲವೊಮ್ಮೆ, ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಭಾನುವಾರ ಕಾರ್ಯಕ್ರಮದಲ್ಲಿ ಹೇಳಿದ್ದರು.

“ಹಸು ಪವಿತ್ರ ಪ್ರಾಣಿ. ಆದರೆ ಹಲ್ಲೆ ಮಾಡುವವರು ಕೂಡ ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ. ಕಾನೂನು ಯಾವುದೇ ಪಕ್ಷಪಾತವಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಮೋಹನ್ ಭಾಗವತ್ ಹೇಳಿದ್ದರು.

ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.


ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಬಿಎಸ್‍ಪಿ ಏಕಾಂಗಿ ಸ್ಪರ್ಧೆ: ಓವೈಸಿ ಜೊತೆ ಮೈತ್ರಿ ತಳ್ಳಿ ಹಾಕಿದ ಮಾಯಾವತಿ

LEAVE A REPLY

Please enter your comment!
Please enter your name here