ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಜನ್ಮದಿನದಂದು ಪ್ರತಿಭಾರಿ ಆನ್‌ಲೈನ್ ಮೂಲಕ ಶುಭ ಹಾರೈಸುತ್ತಿದ್ದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಾರಿ ಸಂಪ್ರದಾಯವನ್ನು ಮೀರಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಸೌರವ್ ಗಂಗೂಲಿ ಅವರ ಮನೆಗೆ ತೆರಳಿದ ಮಮತಾ ಬ್ಯಾನರ್ಜಿ ಮುಖತಃ ಭೇಟಿಯಾಗಿ ಜನ್ಮ ದಿನದ ಶುಭಾಶಯ ಕೋರಿದ್ದಾರೆ.
ಹಳದಿ ಗುಲಾಬಿಯ ಗುಚ್ಛ ಮತ್ತು ಸಿಹಿತಿಂಡಿಯೊಂದಿಗೆ ತೆರಳಿದ ಮುಖ್ಯಮಂತ್ರಿಗೆ ಸೌರವ್ ಗಂಗೂಲಿ ಅವರು ಕೂಡಾ ಹಿಂತಿರುಗಿ ಉಡುಗೊರೆಯನ್ನು ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿ ವರದಿ ಮಾಡಿದೆ.
ಇದನ್ನೂ ಓದಿ: ಗಂಗೂಲಿ ಕ್ಯಾಚ್ ಮಾಡಲು ಹೋಗಿ ‘ಕೋಬ್ರಾ’ ಹಿಡಿದ ಬಿಜೆಪಿ
ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸೌರವ್ ಗಂಗೂಲಿ ಅವರ ಸುತ್ತ ರಾಜಕೀಯ ಬೆಳವಣಿಗೆ ನಡೆದಿದ್ದವು. ಅಲ್ಲದೆ ಇತ್ತೀಚೆಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.
ಜನವರಿ 2 ರಂದು, ಸೌರವ್ ಗಂಗೂಲಿ ತಮ್ಮ ಮನೆಯ ಜಿಮ್‌ನಲ್ಲಿ ಇರಬೇಕಾದರೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಅವರು ಐದು ರಾತ್ರಿ ಮತ್ತು ಆರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅವರು ಆಸ್ಪತ್ರೆ ದಾಖಲಾದ ದಿನದಿಂದ ರಾಜಕೀಯ ನಾಯಕರು ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಯಲ್ಲಿ ಸರತಿ ಸಾಲು ನಿಲ್ಲತೊಡಗಿದ್ದರು.
ಈ ಸರತಿ ಸಾಲು ಎಷ್ಟರಮಟ್ಟಿಗೆ ಇತ್ತೆಂದರೆ, ಆಸ್ಪತ್ರೆಯು ಸೌರವ್ ಗಂಗೂಲಿ ಲೌಂಜ್ ಅನ್ನು ತೆರೆಯ ಬೇಕಾಯಿತು. ಅಲ್ಲಿ ವಿಐಪಿಗಳು ಅವರನ್ನು ಭೇಟಿ ಮಾಡಲು ತಮ್ಮ ಸರದಿಯನ್ನು ಕಾಯತೊಡಗಿದ್ದರು. ಸರಿಸುಮಾರು ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಗಂಗೂಲಿಯ ಆರೋಗ್ಯದ ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಗಂಗೂಲಿಯ ಆರೋಗ್ಯ ಬಗ್ಗೆಗಿನ ಮಾಹಿತಿಗಾಗಿ ಅವರ ಪತ್ನಿ ದೋನಾ ಗಂಗೂಲಿ ಅವರೊಂದಿಗೆ ಸಂಪರ್ಕದಲ್ಲಿದ್ದರು.
ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ
ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮೊದಲ ದಿನದಂದೇ ಗಂಗೂಲಿಯನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆ ಸಮಯದಲ್ಲಿ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್ ಮತ್ತು ರಾಜ್ಯಸಭಾ ಸಂಸದ ಸ್ವಪನ್ ದಾಸ್‌ಗುಪ್ತಾ ಕೂಡ ಅವರನ್ನು ಭೇಟಿ ಮಾಡಿದ್ದರು.
ಮಮತಾ ಬ್ಯಾನರ್ಜಿ ಅವರು ಗಂಗೂಲಿಯ 49 ನೇ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ವೈಯಕ್ತಿಕವಾಗಿ ಭೇಟಿಯಾಗಿ ಹಾರೈಸಿದ್ದು, ಅವರು ರಾಜಕೀಯದಿಂದ ಹೊರಗುಳಿದಿದ್ದಕ್ಕಾಗಿ ಧನ್ಯವಾದ ಹೇಳುವ ವಿಧಾನವಾಗಿದೆ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ.
ಸೌರವ್ ಗಂಗೂಲಿಯನ್ನು ರಾಜಕೀಯಕ್ಕೆ ಸೇರಲು ಬಿಜೆಪಿ ಭಾರಿ ಒತ್ತಡ ನೀಡಿದ್ದೇ ಅವರು ಆಸ್ಪತ್ರೆ ಸೇರಲು ಕಾರಣ ಎಂದು ಸಿಪಿಎಂ ನಾಯಕ ಅಶೋಕ್ ಭಟ್ಟಾಚಾರ್ಯ ಆರೋಪಿಸಿದ್ದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ಸೌರವ್ ಗಂಗೂಲಿಯನ್ನು ಪಕ್ಷಕ್ಕೆ ಸೇರಲು ಮತ್ತು ಅದರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸುತ್ತಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?


