Homeಮುಖಪುಟತಾಯ್ತನ ಮತ್ತು ಅನಾಥತೆಯ ಭಾವಗಳನ್ನು ಅನನ್ಯವಾಗಿ ಕಟ್ಟಿಕೊಡುವ 'ಟ್ರೂ ಮದರ್ಸ್'

ತಾಯ್ತನ ಮತ್ತು ಅನಾಥತೆಯ ಭಾವಗಳನ್ನು ಅನನ್ಯವಾಗಿ ಕಟ್ಟಿಕೊಡುವ ‘ಟ್ರೂ ಮದರ್ಸ್’

- Advertisement -
- Advertisement -

ನವೋಮಿ ಕವಾಸೆ (Naomi Kawase) ಅವರ ಹೆಸರು ಜಾಗತಿಕ ಸಿನಿಮಾವಲಯದಲ್ಲಿ ಬಹಳ ಚಿರಪರಿಚಿತ. ಬಹುಶಃ ಕಳೆದ ಮೂರು ದಶಕಗಳಿಂದ ಜಪಾನಿನ ಹಿರೊಕಝು ಕೊರೀಡನ (hirokazu koreeda) ಸಿನಿಮಾಗಳನ್ನು ಬಿಟ್ಟರೆ ಕಾನ್, ಬರ್ಲಿನ್, ಟೊರೊಂಟೊ ಮುಂತಾದ ಪ್ರಸಿದ್ಧ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆಯುವುದಷ್ಟೇ ಅಲ್ಲ ಪ್ರಶಸ್ತಿಗಳನ್ನು ಪಡೆದ ಮತ್ತೊಬ್ಬ ಸಿನಿಮಾತೃ ಎಂದರೆ ಅದು ನವೋಮಿ ಕವಾಸೆ.

90ರ ದಶಕದ ಪ್ರಾರಂಭದಿಂದಲೂ, ತನ್ನ ಇಪ್ಪತ್ತನೇ ವಯಸ್ಸಿನಿಂದಲೇ ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವ ನವೋಮಿ, ಜಾಗತಿಕ ಸಿನಿಮಾ ವಲಯಕ್ಕೆ ಪರಿಚಿತವಾಗಿದ್ದು ಮಾತ್ರ 1997ರ ತಮ್ಮ ’ಸುಝಕು’ (Suzaku) ಸಿನಿಮಾದ ಮುಖಾಂತರ. ಈ ಸಿನಿಮಾ 1997ರ ಕಾನ್ ಸಿನಿಮೋತ್ಸವದಲ್ಲಿ ಪ್ರತಿಷ್ಠಿತ Camera d’or ಪ್ರಶಸ್ತಿ ಪಡೆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೆ ಈ ಪ್ರಶಸ್ತಿ ಪಡೆದ ಹೆಗ್ಗಳಿಕೆ ನವೋಮಿಯವರದ್ದು. 2007ರ ’ದ ಮೌರ್‍ನಿಂಗ್ ಫಾರೆಸ್ಟ್’ (The Mourning Forest), 2011ರ ’ಹನೆಝು’ (Hanezu), 2014ರ ’ಸ್ಟಿಲ್ ದ ವಾಟರ್’ (Still The water) ಮತ್ತು 2015ರ ’ಸ್ವೀಟ್ ಬೀನ್’ (Sweet Bean) ಇವೆ ಮುಂತಾದ ಸಿನಿಮಾಗಳು ನವೋಮಿಯವರಿಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟವು.

’ಟ್ರೂ ಮದರ್ಸ್’- (True Mothers)

ಸಟೊಕೊ ಮತ್ತು ಕಿಯೊಕಝುರ 11 ವರ್ಷದ ಮಗ ಆಸಟೊನ ಮೇಲೆ, ಅವನು ಕಲಿಯುವ ಶಾಲೆಯಲ್ಲಿ, ಆಟವಾಡುವಾಗ ತನ್ನ ಸಹಪಾಠಿಯನ್ನು ಕೆಳಗೆ ಬೀಳಿಸಿದ ಎಂಬ ಅರೋಪ ಬರುತ್ತದೆ. ಈ ಅರೋಪವನ್ನ ತಾಯಿ ಸಟೊಕೊಳ ಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಈ ಆರೋಪ ಅವಳನ್ನು 11 ವರ್ಷದ ಹಿಂದಿನ ನೆನಪಿಗೆ ಕೊಂಡೊಯ್ಯುತ್ತದೆ. ಸಟೊಕೊ ಮತ್ತು ಕಿಯೊಕಝು ಬಹಳ ಅನ್ಸೋನ್ಯವಾದ ಜೋಡಿಗಳು. ಸಟೊಕೊಳಿಗೆ ತಾಯಿಯಾಗುವ ಬಯಕೆ, ಕಿಯೊಕಝು ಕೂಡ ಇದಕ್ಕೆ ಒಪ್ಪುತ್ತಾನೆ. ಆದರೆ
ಕಿಯೊಕಝುವಿನಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಸಂಗತಿ ವೈದ್ಯರಿಂದ ತಿಳಿಯುತ್ತದೆ. ಇದು ಇಬ್ಬರನ್ನೂ ಬಾಧಿಸುತ್ತದೆ. ಆನಂತರ ಅವರು ಮಗುವನ್ನು ದತ್ತು ಪಡೆಯಲು ನಿಶ್ಚಯಿಸುತ್ತಾರೆ. ಇದಿಷ್ಟು ಸಿನಿಮಾ ಪ್ರಾರಂಭದ ಮೂವತ್ತು ನಿಮಿಷಗಳ ಕಥೆ/ದೃಶ್ಯಗಳು. ಇದಿಷ್ಟನ್ನು ನೋಡುವಾಗ ನನಗೆ ಈ ಸಿನಿಮಾ ಯಾವ ಆಲೋಚನೆಯನ್ನ ಪ್ರಸ್ತುತಪಡಿಸುತ್ತದೆ ಎಂಬ ಗೊಂದಲ ಶುರುವಾಯಿತು. ಅದರಲ್ಲೂ ಸಟೊಕೊ ಪಾತ್ರ ತಾನು ತಾಯಿಯಾಗಬೇಕು ಎಂದು ಹಂಬಲಿಸುವುದು, ಅದಕ್ಕಾಗಿ ಪರಿತಪಿಸುವುದು, ಈ ಎಲ್ಲಾ ಸಂಗತಿಗಳು ಸುಲಭಕ್ಕೆ ಒಪ್ಪಿಗೆ ಆಗುತ್ತಿರಲಿಲ್ಲ.

ಅನ್ಯ ಕ್ಷೇತ್ರಗಳಂತೆ ಸಿನಿಮಾ ಕೂಡ ಪುರುಷರ ಪ್ರಾಬಲ್ಯವಿರುವ ಕ್ಷೇತ್ರ. ಇದಕ್ಕೆ ಜಪಾನ್ ಕೂಡ ಹೊರತಲ್ಲ. ಇಂತಹ ಪರಿಸರದಲ್ಲಿ ತನ್ನ ಸ್ವಂತ ಸಾಮರ್ಥ್ಯದಿಂದ ಜಾಗತಿಕ ಮನ್ನಣೆ ಪಡೆದ ನವೋಮಿ, ಈ ಸಿನಿಮಾದಲ್ಲಿ ಅದೇ ಪುರುಷ ಪ್ರಧಾನ ಸಮಾಜದ ಆಲೋಚನೆಯ ಪ್ರಭಾವದಿಂದ ಹುಟ್ಟಿದ, ಹೆಣ್ಣು ತಾಯ್ತನಕ್ಕೆ ಹಂಬಲಿಸುವ ಅದು ಸಾಧ್ಯವಿಲ್ಲದಾಗ ಅಪರಾಧಿ ಭಾವನೆಯಿಂದ ನರಳುವ, ಈ ತರಹದ ಆಲೋಚನೆಯನ್ನ ಈ ಸಿನಿಮಾ ಮುಖಾಂತರ ಪ್ರಸ್ತುತ ಪಡಿಸುತ್ತಿದ್ದಾರಾ ಎಂದು ಪ್ರಾರಂಭದಲ್ಲಿ ಗೊಂದಲವಾಯಿತು. ಆದರೆ ಅರ್ಧ ಗಂಟೆಯ ನಂತರ ತೆರೆದುಕೊಳ್ಳುವ ಚಿತ್ರಕಥೆಯಲ್ಲಿ, ಸಟೊಕೊಳ ಕಥೆಯ ಸಮಾನಾಂತರವಾಗೆ ಬರುವ ಹಿಕಾರಿಳ ಪಾತ್ರದ ಚಿತ್ರಣ ಈ ಎಲ್ಲಾ ಗೊಂದಲಗಳಿಂದ ಆಚೆ ಬರುವಂತೆ ಮಾಡಿತು. ನವೋಮಿ ಏನು ಹೇಳುತ್ತಿದ್ದಾರೋ ಅಷ್ಟು ಮಾತ್ರ ಕೇಳುವ ಮತ್ತು ಅನುಭವಿಸುವ ಹಂತಕ್ಕೆ ಅದು ನನ್ನನ್ನು ಕೊಂಡೊಯ್ದಿತು.

ಸಟೊಕೊ ದಂಪತಿಗಳಿಗೆ ದತ್ತುವಾಗಿ ಸಿಗುವ ಮಗು ಹಿಕಾರಿಯಳದು. ಹಿಕಾರಿ ತನ್ನ 14ನೇ ವಯಸ್ಸಿಗೆ ತನ್ನ ಸಹಪಾಠಿಯೊಂದಿಗಿನ ಪ್ರೀತಿಯ ಕಾರಣವಾಗಿ ಆ ಮಗುವನ್ನು ಪಡೆಯುತ್ತಾಳೆ. ಹಿಕಾರಿಗೆ ತನ್ನ ಮಗುವಿಂದ ದೂರವಾಗಲೂ ಇಷ್ಟ ಇಲ್ಲ. ಆದರೆ ತನ್ನ ತಂದೆ ತಾಯಿಯರ ಒತ್ತಾಯಕ್ಕೆ ಮಣಿದು ಅವಳು ತನ್ನಮಗುವನ್ನು ದೂರಮಾಡಿಕೊಳ್ಳಬೇಕಾಗುತ್ತದೆ. ಸಟೊಕೊ ತಾಯ್ತತನದ ಹಂಬಲ ಮತ್ತು ತಾಯ್ತನದ ಅನುಭವ ಮತ್ತು ಹಿಕಾರಿಯ ಪ್ರೇಮ ಮತ್ತು ಮಗು ಕಳೆದುಕೊಂಡ ಅನಾಥತೆಯನ್ನ ನವೋಮಿ ಕವಾಸೆ ತನ್ನ ಅದ್ಭುತ ದೃಶ್ಯಕಟ್ಟುಗಳಲ್ಲಿ ಕಟ್ಟಿಕೊಡುತ್ತಾಳೆ. ಈ ಅದ್ಬುತ ದೃಶ್ಯಗಳು ಮೊದಲರ್ಧ ಗಂಟೆ ನನ್ನಲ್ಲಿ ಉಂಟಾದ ವೈಚಾರಿಕ ಗೊಂದಲಗಳಿಗೆ ಉತ್ತರ ಸಿಕ್ಕಿತು ಅಂತ ಖಂಡಿತ ಹೇಳಲಾರೆ. ಆದರೆ ನವೋಮಿ ಕವಾಸೆಯ ಕಲಾತ್ಮಕ ದೃಷ್ಟಿ ಸಮ್ಮೋಹನಗೊಳಿಸಿಬಿಟ್ಟಿತು.

ಯಾವುದೇ ಒಂದು ಐಡಿಯಾ (ಆಲೋಚನೆ), ಸಿನಿಮಾದಲ್ಲಿ ಹೆಚ್ಚು ಭಾವುಕವಾಗಿ ಅಥವಾ ಮೆಲೋಡ್ರಮ್ಯಾಟಿಕ್ ಆಗಿ ಬಂದುಬಿಟ್ಟರೆ ಅದು ಆ ಕ್ಷಣಕ್ಕೆ ಪ್ರೇಕ್ಷಕನನ್ನ ಆರ್ದ್ರಗೊಳಿಸಿ ಅಲುಗಿಸಿಬಿಡುತ್ತದೆ ನಿಜ. ಆದರೆ ಆ ಸಿನಿಮಾ ತನ್ನ ಪ್ರೇಕ್ಷಕನನ್ನು ಅದರಾಚೆ ಆಲೋಚಿಸಲು ಪ್ರೇರೇಪಿಸಬೇಕೆಲ್ಲ! ಕವಾಸೆಯ ’ಟ್ರೂ ಮದರ್ಸ್’ ಸಿನಿಮಾ ಹೆಚ್ಚು ಮೆಲೋಡ್ರಮ್ಯಾಟಿಕ್ ಆಗಿ ಭಾವುಕವಾಗಿ ಪ್ರಸ್ತುತವಾಗಿದ್ದರೂ ಕೂಡ ಈ ಮೇಲಿನ ಅಭಿಪ್ರಾಯವನ್ನ ಇದಕ್ಕೂ ಅನ್ವಯಿಸಲಾಗುವುದಿಲ್ಲ. ಕವಾಸೆಯ 2015ರ ’ಸ್ವೀಟ್ ಬೀನ್’ (Sweet Bean) ಸಿನಿಮಾದಲ್ಲೂ ಇದು ಅನಿಸಿತ್ತು.

’ಟ್ರೂ ಮದರ್ಸ್’ ಯಾಕೆ ಪ್ರೇಕ್ಷಕನನ್ನ ಸಮ್ಮೋಹನಗೊಳಿಸುತ್ತದೆ? ಪ್ರತಿ ಪಾತ್ರಗಳ ಪ್ರತಿ ಭಾವಗಳನ್ನ ತುಂಬಾ ಕ್ಲೋಸಪ್ ಷಾಟ್‌ಗಳಲ್ಲಿ ಚಿತ್ರಿಸಲಾಗಿದೆ. ಅದರಲ್ಲೂ ಸಿನಿಮಾದ ಎರಡು ಪ್ರಧಾನ ಪಾತ್ರಗಳಾದ ಸಟೊಕೊ ಮತ್ತು
ಹಿಕಾರಿಯರು ಇರುವ ದೃಶ್ಯಗಳನ್ನು. ಈ ಎರಡು ಪಾತ್ರಗಳಲ್ಲಿ ಕ್ರಮವಾಗಿ ಹಿರೋಮಿ ನಾಗಸಕು (Hiromi Nagasaku) ಮತ್ತು ಅಜು ಮಕಿಟ (Aju Makita) ಬಹಳ ಅದ್ಭುತವಾಗಿ ನಟಿಸಿದ್ದಾರೆ. ಕಥೆ, ಪಾತ್ರಗಳಲ್ಲಿ ಉಂಟಾಗುವ ಭಾವನೆ, ಅದರ ಅಭಿವ್ಯಕ್ತಿ, ಅದನ್ನು ಸೆರೆ ಹಿಡಿಯುವ ಕ್ಯಾಮರಾದ ಸ್ಥಿತಿ ಮತ್ತು ಚಲನೆ, ಅದರ ನಡುವೆ ಬರುವ ಆ ಪುಟ್ಟ ನಗರದ ಪರಿಸರದ ದೃಶ್ಯಗಳು, ಈ ಎಲ್ಲಾ ಸಂಗತಿಗಳು ಸಾವಯವಾಗಿ ಒಂದಕ್ಕೊಂದು ಲಯ ಕಂಡುಕೊಂಡಿವೆ.

ಈ ಸಿನಿಮಾಕ್ಕೆ ಮೂಲ ಪ್ರೇರಣೆ ಮಿಝುಕಿ ಸುಜಿಮುರ ಅವರ ಕಾದಂಬರಿ ‘Morning Comes’. ನವೋಮಿ ಕವಾಸೆ ಸಮಕಾಲೀನ ಜಪಾನ್ ಸಮಾಜ ಮತ್ತು ಕುಟುಂಬದ ಸಂಘರ್ಷಗಳನ್ನ ವೈಯಕ್ತಿಕ ನೆಲೆಯಲ್ಲಿ ತನ್ನ ಸಿನಿಮಾಗಳ ಮುಖಾಂತರ ಪ್ರಸ್ತುತಪಡಿಸುತ್ತಾರೆ ಎಂಬ ಮಾತಿದೆ. ಕವಾಸೆಯ ಬಹುತೇಕ ಸಿನಿಮಾಗಳು ಅವರ ’ಅರೆ ಆತ್ಮಚರಿತ್ರೆಗಳು’ ಕೂಡ. ಕವಾಸೆ ಬಾಲ್ಯದಲ್ಲಿಯೇ ಅವರ ತಂದೆ-ತಾಯಿ ವಿಚ್ಚೇದನ ಪಡೆದ ಕಾರಣವಾಗಿ, ಅವರು ತಮ್ಮ ದೊಡ್ಡಮ್ಮನ ಹತ್ತಿರ ಬೆಳೆಯಬೇಕಾದ ಸಂದರ್ಭ ಬರುತ್ತದೆ. ಮಿಝುಕಿ ಸುಜಿಮುರರ ಕಾದಂಬರಿಯ ವಸ್ತು ಈ ಕಾರಣಕ್ಕೆ ನವೋಮಿಯವರಿಗೆ ಹತ್ತಿರವಾಗಿರಬಹುದು. ನವೋಮಿ ತನ್ನ ಪ್ರೇಕ್ಷಕನನ್ನ ಸಿನಿಮಾ ಪ್ರಾರಂಭದಿಂದಲೂ ಅಳಿಸಲು ಪ್ರಯತ್ನಿಸುತ್ತಾಳೆ. ಈ ಸಂಗತಿಗಳಿಗೆಲ್ಲಾ ಭಾವುಕವಾಗಬಾರದು ಅಂತ ಎಷ್ಟೇ ಕಠಿಣವಾಗಿರಲೂ ಪ್ರಯತ್ನಿಸಿದರೂ ಸಿನಿಮಾದ ಕಡೆಯ ಹಿಂದಿನ ಒಂದು ದೃಶ್ಯ ಮಾತ್ರ ಆರ್ದ್ರಗೊಳಿಸದೆ ಬಿಡದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...