ಭೀಮಾ ಕೊರೇಂಗಾವ್ ಪ್ರಕರಣದಲ್ಲಿ UAPA ಕಾಯ್ದೆಯಡಿ ಬಂಧಿಸಲಾಗಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರ ಸಾವಿಗೆ ಇಡೀ ದೇಶವೇ ಆಕ್ರೋಶ ಹೊರಹಾಕಿದೆ. ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ಚಿಂತಕರು, ವಿಪಕ್ಷಗಳ ನಾಯಕರು ಒಕ್ಕೂಟ ಸರ್ಕಾರವನ್ನು ಖಂಡಿಸಿದ್ದಾರೆ.
ಕರಾಳ UAPA ಕಾಯ್ದೆಯನ್ನು ರದ್ದು ಮಾಡಬೇಕೆಂದು ಹಲವು ಹೋರಾಟಗಾರರು ದನಿ ಎತ್ತಿದ್ದಾರೆ. ಜುಲೈ 14 (ಬುಧವಾರ) ರಂದು ’ಕರಾಳ ಯುಎಪಿಎ ವಿರೋಧಿ ಸಮಾನ ಮನಸ್ಕರ ವೇದಿಕೆ’ ಫಾದರ್ ಸ್ಟಾನ್ ಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಸಾರ್ವಜನಿಕ ಹಕ್ಕೋತ್ತಾಯವನ್ನು ಆಯೋಜಿಸಿದೆ.
ಬೆಂಗಳೂರಿನ ಮೌರ್ಯ ಜಂಕ್ಷನ್ ಗಾಂಧಿ ಪ್ರತಿಮೆ ಬಳಿ, ಬೆಳಗ್ಗೆ 10.30ಕ್ಕೆ ಸಮಾನ ಮನಸ್ಕರು ಸೇರಿ ಹಕ್ಕೋತ್ತಾಯ ಮಂಡಿಸಲಿದ್ದಾರೆ.
ಇದನ್ನೂ ಓದಿ: ಪಾದ್ರಿ ಸ್ಟಾನ್ ಸ್ವಾಮಿ ಸಾವು: ಭಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ

“ಅಪರಾಧ ಅಧಿಕಾರವೇರಿದಾಗ ಮೌನ ಅತಿಘೋರ ಅಪರಾಧ” ಎಂದಿರುವ ವೇದಿಕೆ, ಕರಾಳ UAPA ಮತ್ತು NIA ಕಾಯ್ದೆಗಳು ಕೂಡಲೆ ರದ್ದಾಗಬೇಕು ಎಂದಿದೆ.
ಈ ಕಾಯ್ದೆಯಡಿ ಬಂಧಿತ ಹೋರಾಟಗಾರರ ಬೇಷರತ್ ಬಿಡುಗಡೆಯಾಗಬೇಕು ಎಂದು ವೇದಿಕೆ ಆಗ್ರಹಿಸಿದೆ. ಭೀಮಾ ಕೋರೆಗಾಂವ್- ಎಲ್ಗರ್ ಪರಿಷತ್ ಗಲಭೆಯು ಬಿಜೆಪಿ ಮತ್ತು ಸಂಘ ಪರಿವಾರ ಸೃಷ್ಟಿಸಿದ ವ್ಯವಸ್ಥಿತಿ ದೊಂಬಿ. ಬಿಜೆಪಿ ದುರಾಡಳಿತ ವಿರೋಧಿಸುವವರ ದನಿ ಅಡಗಿಸುವ ರಾಜಕೀಯ ಪಿತೂರಿ ಎಂದು ’ಕರಾಳ ಯುಎಪಿಎ ವಿರೋಧಿ ಸಮಾನ ಮನಸ್ಕರ ವೇದಿಕೆ’ ಹೇಳಿದೆ.
ಕಳೆದ ಅಕ್ಟೋಬರ್‌ನಲ್ಲಿ ಎಲ್ಗರ್ ಪರಿಷತ್ ಪ್ರಕರಣಕ್ಕೆ (ಭೀಮಾ ಕೋರೆಗಾಂವ್) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಫಾದರ್ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಿತ್ತು. ಜುಲೈ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನ್ಯಾಯಾಂಗ ಬಂಧನದಲ್ಲಿಯೇ ಅವರು ನಿಧನರಾದರು. ಅವರ ನಿಧನಕ್ಕೆ ರಾಷ್ಟ್ರೀಯ-ಅಂತರರಾಷ್ಟರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ.
ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 70 ವರ್ಷ ವಯಸ್ಸಿನ ಕೈದಿಗಳನ್ನು ಬಿಡುಗಡೆ ಮಾಡಲು ಏಕರೂಪದ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಫಾದರ್ ಸ್ಟಾನ್ ಸ್ವಾಮಿಯವರನ್ನು ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ


