Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಶಯ್ಯಾಗೃಹದ ಪಿಸುಮಾತುಗಳಿಗೆ ಕಿವುಡಾಗೇ ಇರುವ ಗಂಡು ಜಗತ್ತು!

ಪುಸ್ತಕ ಪರಿಚಯ; ಶಯ್ಯಾಗೃಹದ ಪಿಸುಮಾತುಗಳಿಗೆ ಕಿವುಡಾಗೇ ಇರುವ ಗಂಡು ಜಗತ್ತು!

- Advertisement -
- Advertisement -

ಡಾ. ಶೋಭಾ ನಾಯಕ ಅವರ ’ಶಯ್ಯಾಗೃಹದ ಸುದ್ದಿಗಳು’ ಕವನಸಂಕಲನ ಓದಿ ಮುಗಿಸಿದಾಗ ನನಗೆ ನೆನಪಾಗಿದ್ದು ಇಬ್ಬರು. ಒಬ್ಬ ಚಾರ್ಲ್ಸ್ ಬುಕೋಸ್ಕಿ ಮತ್ತೊಬ್ಬರು ಬೆಲ್ ಹುಕ್ಸ್.

ಚಾರ್ಲ್ಸ್ ಬುಕೋಸ್ಕಿ, ತನ್ನ ಮುಕ್ತ ಕಾವ್ಯದ ಮೂಲಕ ದಿಢೀರನೆ ಜನಪ್ರಿಯತೆ ಪಡೆದ ಅಮೆರಿಕದ ಕವಿ. ಆತನ ಜನಪ್ರಿಯತೆ ಕಾರಣ, ತನ್ನ ಕಾವ್ಯದ ಮುಕ್ತತೆ, ಸೋಗಿಲ್ಲದ ಮತ್ತು ಪ್ರಾಮಾಣಿಕ ಅಭಿವ್ಯಕ್ತಿ. ತನ್ನ ಹೆಣ್ಣುಬಾಕುತನ, ಆಷಾಢಭೂತಿನದ ಬಗ್ಗೆ ಇದ್ದ ತೀವ್ರ ಅಸಹನೆ, ಜನರ ಒಣಪ್ರತಿಷ್ಠೆಗಳ ಬಗ್ಗೆ ಮರ್ಮಾಘಾತವಾಗುವಂತೆ ಕವಿತೆಯಲ್ಲಿ ಕಾಲೆಳೆದು, ಟೀಕಿಸಿ, ಬರೆದಾತ. ತನ್ನ ತೀರಾ ಖಾಸಗಿಯದ್ದನ್ನು ನಿರ್ಭಿಡೆಯಿಂದ ಹೇಳುವಂತಹ ಬುಕೋಸ್ಕಿಯ ಕಾವ್ಯದಂತೆಯೇ, ಶೋಭಾ ನಾಯಕರ ಕಾವ್ಯದಲ್ಲಿರುವುದು, ಕೇಳುವವ ತನ್ನೊಳಗೆ ತಾನು ನೋಡಿಕೊಳ್ಳುವಂತೆ ಮಾಡುವ ಅಭಿವ್ಯಕ್ತಿಯ ವಿಧಾನ.

ಇನ್ನೊಂದು ಹೆಸರು ಬೆಲ್ ಹುಕ್ಸ್. ಸ್ತ್ರೀವಾದಕ್ಕೆ ಭಿನ್ನ ಒಳನೋಟಗಳನ್ನು ನೀಡಿದ ಲೇಖಕಿ ಇವರು. ಇವರ ’ಕಮ್ಯುನಿಯನ್: ದಿ ಫೀಮೇಲ್ ಸರ್ಚ್ ಫಾರ್ ಲವ್ ಕೃತಿಯಲ್ಲಿ ಒಂದೆಡೆ, “ಸತ್ಯ ಹೇಳುವ ಸಮಯ ಬಂದಿದೆ. ಮತ್ತೆ, ನ್ಯಾಯವಿಲ್ಲದ ಪ್ರೀತಿ ಇರಲಾರದು. ಹೆಣ್ಣು ಮತ್ತು ಗಂಡಿಗೆ, ತಾವು ಆತ್ಮೀಯವಾಗಿ ಬೆರೆಯುವ, ಎಲ್ಲರೊಂದಿಗೆ ಮತ್ತು ಪ್ರತಿಯೊಬ್ಬರೊಂದಿಗೂ ಪರಸ್ಪರರ ಪ್ರೀತಿಯನ್ನು ಅರಿಯುವ ಸ್ವಾತಂತ್ರ್ಯ ನಿರಾಕರಿಸಲಾಗುವುದಿಲ್ಲ. ಒಂದುವೇಳೆ ಪ್ರೀತಿಯನ್ನು ಒಂದು ಮಾಡುವ ನೀತಿಯನ್ನು ನಾವು ಗುರುತಿಸದೇ ಹೋದಲ್ಲಿ, ಅದು ಅಧಿಕಾರವನ್ನು ಅರಸುವಂತೆ ಮತ್ತು ಜಾಣ್ಮೆಯಿಂದ ಬಳಸುವಂತೆ ಮಾಡುತ್ತದೆ. ಹೀಗಾದರೆ ನಾವು ಸಾಂಸ್ಕೃತಿಕ ಯಜಮಾನಿಕೆಯೊಂದಿಗೆ ಬೆಸೆದುಕೊಳ್ಳುತ್ತೇವೆ, ಪ್ರೀತಿಯ ಬದಲು ಅಧಿಕಾರವನ್ನು ಆಯ್ಕೆಮಾಡಿಕೊಳ್ಳುತ್ತೇವೆ” ಎನ್ನುತ್ತಾರೆ. ಪಿತೃಪ್ರಧಾನ ಮನಸ್ಥಿತಿ ಹೇಗೆ ಗಂಡು-ಹೆಣ್ಣಿನ ಪ್ರೇಮ ಮತ್ತು ಕಾಮದ ಸಂಬಂಧವನ್ನು ನಿರ್ಧರಿಸುತ್ತದೆ, ಆಳುತ್ತದೆ ಎಂಬುದನ್ನು ಬೆಲ್ ಹುಕ್ಸ್ ತಮ್ಮ ಹಲವು ಕೃತಿಗಳಲ್ಲಿ ಚರ್ಚಿಸಿದ್ದಾರೆ, ವಿಶ್ಲೇಷಿಸಿದ್ದಾರೆ.

ಶೋಭಾ ನಾಯಕ ಅವರ ಕವಿತೆಗಳಲ್ಲಿ ತೀವ್ರವಾಗಿ ಆವರಿಸಿರುವ ’ಲಾಂಗಿಂಗ್’ (ಬಯಕೆ ತೀವ್ರತೆಯ ನಿರೀಕ್ಷೆ), ಅಕ್ಕ ಹೇಳುವ, ಸಾವಿಲ್ಲದ ಕೇಡಿಲ್ಲ, ರೂಹಿಲ್ಲದ ಚೆಲುವನಿಗೆ ಕಾತರಿಸುವಂತಹದ್ದು. ಅಂತಹ ಪ್ರೇಮಿಯೊಬ್ಬನ ಧ್ಯಾನ ಇಲ್ಲಿದೆ. ಅಡುಗೆ ಒಗ್ಗರಣೆಯ ಪಾತ್ರೆಗಳ ಸದ್ದಿನಲ್ಲಿ ಕಳೆದುಹೋಗುವ ಹೆಣ್ಣಿನ ಮನೋಲೋಕದ ಮಾತುಗಳನ್ನು ಗಂಡು-ಹೆಣ್ಣು ಮಲಗುವ ಕೋಣೆಯಲ್ಲಿ ಪಿಸುಮಾತಿನಲ್ಲಿ, ತುಸುಕೋಪದಲ್ಲಿ, ತುಸು ರಮಿಸುವಂತೆ ಹಂಚಿಕೊಳ್ಳಬೇಕು. ಗಂಡು ತಾನು ಗಂಡಾಗದೆ, ಹೆಣ್ಣು ತಾನು ಹೆಣ್ಣಾಗದೆ, ಗಂಡು ಹೆಣ್ಣಾಗುತ, ಹೆಣ್ಣು ಗಂಡಾಗುತ ಬೆರೆತು ಕಲೆತು ಹೋಗುವ ಏಕಾಂತವದು. ನಿಜಕ್ಕೂ ಮಲಗುವ ಕೋಣೆಯ ಏಕಾಂತ ಹಾಗಿರುತ್ತದೆಯೇ?

ಇಲ್ಲ, ಶೋಭಾ ನಾಯಕ್ ಅವರು ಅದನ್ನು ಪುರಾಣಕಾಲದಿಂದ ಕುರುಕ್ಷೇತ್ರದವರೆಗಿನ ಸ್ತ್ರೀಯರನ್ನು ನೆನಪಿಸುವ ಮೂಲಕ ಗಟ್ಟಿಯಾಗಿ ಹೇಳುತ್ತಾರೆ. ರಾಜ್ಯಕಾರಣ ಕವಿತೆಯಲ್ಲಿ ಸೀತೆ, ಮರಿಯಾ ಮ್ಯಾಗ್ಡಲೀನ್, ದ್ರೌಪದಿ, ರಾಧೆಯರನ್ನು ಅವರ ಪತಿ, ಪ್ರಿಯಕರರು ಅತಂತ್ರವಾಗಿಸಿದ್ದನ್ನು ಬಿಚ್ಚಿಡುತ್ತಾರೆ.

ಗಂಡಿನ ಅಹಂಕಾರವನ್ನು ’ಅಹಂ’ನಲ್ಲಿ ಅನಾವರಣ ಮಾಡುತ್ತಾರೆ. ’ಮಂಚವೆಂದರೆ ಸಮರಾಂಗಣ’ ಎಂದೂ, ’ನಾನು ನರಳುವಾಗ/ ನಿನಗೆ ಸಿಗುವ/ ಸುಖದ ಹೆಸರು: ಅಹಂ’ ಎಂದೂ ವ್ಯಾಖ್ಯಾನಿಸುತ್ತಾರೆ.

ಆದರೆ ಪ್ರೇಮ ಧ್ಯಾನದಲ್ಲಿ ತನ್ನ ನಿಜವಾದ ಸಂಗಾತಿಯನ್ನು ಹುಡುಕುವ ಕವಿ, ತನ್ನೊಳಗೆ ಪುಳಕವನ್ನು ಹುಟ್ಟಿಸಿದವನನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಹಂಬಲಿಸುತ್ತಾರೆ.

ಡಾ. ಶೋಭಾ ನಾಯಕ

ಆಡುವಾಗ ಜಡೆಯೆಳೆದವನು
ತರಗತಿಯಲ್ಲಿ ಲಂಗ ಜಗ್ಗಿದವನು
ಓಣಿ ಇಕ್ಕಟ್ಟಿನಲಿ ಜಾಲಿ ಮಾತ ಕಲಿಸಿದವನು
ಮುಗಳುನಗೆಯಲಿ ಕನಸು ಹುಟ್ಟಿಸಿದವನು
ಮೊದಲು ಚುಂಬಿಸಿದ ಅವನು
ಮೈಯರಳಿಸಿದ ಇವನು..

ಎಂದು ’ನಿನ್ನ ಪ್ರೇಮದಲ್ಲಿ ಎಚ್ಚರವಿದ್ದೇನೆ’ ಎಂದು ಘೋಷಿಸುತ್ತಾರೆ. ಈ ಎಚ್ಚರ ಮತ್ತು ಕಾಯುವಿಕೆಯ ನಿರಂತರ ಚಡಪಡಿಕೆಯ ಕುದಿಯನ್ನು ಅಷ್ಟೇ ತಣ್ಣಗೆ ದಾಟಿಸುತ್ತಾರೆ.

ಕಪ್ಪಿನ ಬಿಸಿ ಚ್ಹಾದೊಳಕ್ಕೆ
ಪ್ರತಿ ಅದ್ದಿಗೂ
ಇಷ್ಟಿಷ್ಟೇ ಕರಗಿಬೀಳುವ
ಬಿಸ್ಕೆಟಿನಂತೆ
ನಿನ್ನ ಪ್ರತಿ ಅಗಲಿಕೆಯಲೂ
ನರಕದಾಳಕ್ಕೆ
ಇಷ್ಟಿಷ್ಟೇ ಮುರಿದುಬೀಳುತ್ತೇನೆ.
ಆದರೆ,
ಈ ಕಪ್ಪಿನ ತಳ ಕಲಕಿ ಕುಡಿಯಲು ಬರುವ
ಯಾವನಿಗಾದರೂ ಕಾದಿರುತ್ತದೆ
ಮುರಿದು ಬಿದ್ದ
ಮರಣದ ಆ ತುತ್ತು.

ಹೀಗೆ ಧ್ಯಾನಿಸುವ ಕವಿ, ತಮ್ಮ ತೀವ್ರ ಅಭೀಪ್ಸೆಯನ್ನು ಹೆಣ್ಣಿನ ದೇಹ ಮತ್ತು ವಾಂಚೆಯ ರೂಪಕಗಳ ಮೂಲಕ ತಮ್ಮ ಪ್ರೇಮಾಂಕ್ಷೆ, ಸಾಂಗತ್ಯದ ಬಯಕೆಗಳನ್ನು ಕಟ್ಟಿಕೊಡುತ್ತಾರೆ. ಈ ಪ್ರತಿಮೆ-ರೂಪಕಗಳ ಹಸಿತನ ಹೆಣ್ಣಿನ ಅಭಿವ್ಯಕ್ತಿಗೆ ಈಗಲೂ ಇರುವ ಚೌಕಟ್ಟನ್ನು ಒಡೆಯುವ ಸಾಹಸ ಮಾಡುತ್ತವೆ. ಗಂಡಿನ ಅಹಂಕಾರವನ್ನು ಕೆಣುಕಲೆಂದೇ ಇಲ್ಲಿ ನಿರ್ಭಿಡೆಯಿಂದ ತನ್ನ ಮನದ ಮಾತುಗಳನ್ನು ಶಯ್ಯಾಗೃಹದ ಪಲ್ಲಂಗದ ಮೇಲೆ ಹರಡಿದಂತೆ ಹೊರಬಂದಿವೆ. ಈ ಪಿಸುಮಾತುಗಳನ್ನು ಕೇಳಿಸಿಕೊಳ್ಳುವ ಗಂಡಿಗೆ ಧ್ಯಾನಿಸುತ್ತವೆ.

ಶೃಂಗಾರ, ಪ್ರಣಯ, ಪ್ರೇಮದ ದಟ್ಟ ರೂಪಕಗಳು, ನುಡಿಗಟ್ಟು ಹೆಣ್ಣಿನ ಅತ್ಯಂತಿಕ ಭಾವಲೋಕವನ್ನು ಬೆಚ್ಚಿಬೀಳಿಸುವ ಉತ್ಕಟತೆಯೊಂದಿಗೆ ಹೊರಹೊಮ್ಮಿಸುತ್ತವೆ. ಶಯ್ಯಾಗೃಹದ ಸುದ್ದಿಗಳು, ಧ್ಯಾನಸ್ಥ ಶಿವ, ಯಯಾತಿಗೊಂದು ಪತ್ರ, ಹಾಲೆದೆ, ಚರಿತ್ರೆ ಮತ್ತು ಕವಿತೆ, ಕನ್ನಡಿಯ ಚೂರು, ಅನುಭವ ಮಂಟಪ, ಮಂಡೋದರಿ, ಸವರಾತ್ರಿಯ ಸಂಲಗ್ನ, ಶಯ್ಯಾಗೃಹದ ಎಲ್ಲಾ ರಾತ್ರಿಗಳು ಮುಗಿದ ಮೇಲೆ, ಕಲ್ಲಾದವರ ನೆತ್ತಿಯ ಮೇಲೆ, ನಾನು ನೀನು ಕವಿತೆಗಳು ಇಷ್ಟವಾಗುವ ಕವಿತೆಗಳು.

ಒಂದೆಡೆ ಗಂಡಿನ ಅಹಂಕಾರಕ್ಕೆ ಹೆಣ್ಣಿನ ಕನಿಷ್ಠ ಪ್ರತಿರೋಧದ ಅಗತ್ಯವನ್ನು ಹೇಳುತ್ತಾರೆ;

“ಕಲ್ಲಾದವರ ನೆತ್ತಿಯ ಮೇಲೆ
ಕಾಗೆ ಗೂಬೆ ಹೇತುಹೋಗುತ್ತವೆ.
ಮಿಸುಕಾಡಬೇಕು
ಮಾತಾಡಬೇಕು”

ಹಾಗೆಯೇ ಅರಿತು ಬೆರೆತು ಸಮಾನರೆನಿಸಿದಾಗ ಪೂರ್ಣತಯು ಎಂಬುದನ್ನೂ ಕವಿ ನೆನಪಿಸುತ್ತಾರೆ;

ಸುಖ
ಕೇವಲ ಒಂದು
ಹೊಂಗನಸಲ್ಲ
ನಾವಾಗೇ ಬರೆದು
ಪೂರ್ಣಗೊಳಿಸಬೇಕಾದ ವರ್ಣಚಿತ್ರ.

ಪ್ರೇಮಕ್ಕೆ ಮರಳಲು, ನಾವೆಂದೂ ಪಡೆಯದ, ಆದರೆ ಸದಾ ಹಂಬಲಿಸಿದ ಪ್ರೀತಿ ಪಡೆಯಲು, ನಾವು ಕೊಡಬೇಕಾದ ಪ್ರೀತಿಯನ್ನು ಹಂಚಿಕೊಳ್ಳಲು ಸಿದ್ಧರಾಗದ ನಾವು ರಮ್ಯ ಸಂಬಂಧಗಳತ್ತ ವಾಲುತ್ತೇವೆ. ಈ ಸಂಬಂಧಗಳು ಉಳಿದ ಯಾವುದೇ ಸಂಬಂಧಗಳಿಗಿಂತ ಹೆಚ್ಚಾಗಿ ನಮ್ಮನ್ನು ವಿಮೋಚನೆಯತ್ತ, ಬಿಡುಗಡೆಯತ್ತ ಕರೆದೊಯ್ಯುತ್ತವೆ ಎಂದು ನಂಬಿರುತ್ತೇವೆ. ಆದರೆ ನಿಜವಾದ ಪ್ರೀತಿ, ನಾವು ವಿಮೋಚನೆಗೆ ಸಿದ್ಧರಾಗಿದ್ದರಷ್ಟೆ, ಸ್ವತಂತ್ರಗೊಳಿಸುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಉಳಿಯಬೇಕೆಂದಿದ್ದರೆ ಮಾತ್ರ ಪ್ರೀತಿ ನಮ್ಮನ್ನು ಉಳಿಸುತ್ತದೆ ಎಂದು ಬೆಲ್ ಹುಕ್ಸ್ ಹೇಳುತ್ತಾರೆ.

ಎಲ್ಲ ಅಹಮಿಕೆಯ ಪದರಗಳನ್ನು ಕಳಚಿದಾಗ ಮಾತ್ರ ಪ್ರೇಮ ಸಾಧ್ಯ. ಅದು ಬಿಡುಗಡೆಯ ಹಾದಿ. ಅಂತಹ ಧ್ಯಾನ ಶೋಭ ನಾಯ್ಕರ ಕವಿತೆಗಳಲ್ಲಿ ಇರುವುದರಿಂದಲೇ ಇವು ಇಲ್ಲಿರುವ ಶೃಂಗಾರದ ರೂಪಕಗಳಾಚೆಗೆ ಹಾರುತ್ತವೆ.

ಶಯ್ಯಾಗೃಹದ ಸುದ್ದಿಗಳು
ಡಾ. ಶೋಭಾ ನಾಯಕ
ಪುಟ: 92 | ಬೆಲೆ : 100/-
ಪ್ರಕಾಶನ: ಮನೋರಮಾ
ಬುಕ್ ಹೌಸ್, ಬೆಳಗಾವಿ

– ಎಸ್ ಕುಮಾರ್


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...