ದಲಿತ ಯುವಕನೊಬ್ಬ ತನ್ನ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರ ಮಾಡುವುದಕ್ಕೆ ಅಡ್ಡಿಪಡಿಸಿದ್ದ 9 ಜನರಿಗೆ ಐದು ವರ್ಷಗಳ ಜೈಲು ಶಿಕ್ಷೆ ನೀಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. 2018 ರ ಜೂನ್‌ನಲ್ಲಿ ಪಾರ್ಸಾ ಗ್ರಾಮದಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿ ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
ನ್ಯಾಯಾಲಯವು ನಟ್ವರ್‌ಸಿನ್ಹಾ ಪರ್ಮಾರ್, ಕುಲ್‌ದೀಪ್‌ದಸಿಂಗ್ ಚೌಹಾಣ್, ಅನಿರುದ್ಧ್‌ಸಿನ್ಹಾ ರಾಥೋಡ್, ದೇವೇಂದ್ರಸಿನ್ಹಾ ಚಾವ್ಡಾ, ವಿಜಯಸಿನ್ಹಾ ಚೌಹಾಣ್, ವಿಪುಲ್ ಚೌಹಾಣ್, ಜಿಗರ್ಸಿಂಗ್ ಚೌಹಾಣ್, ನರೇಶ್ ಚೌಹಾಣ್ ಮತ್ತು ವೀರೇಂದ್ರಸಿನ್ಹಾ ಚೌಹಾಣ್ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿದೆ.
ಘಟನೆ ಏನು…?
ಜೂನ್ 17, 2018 ರಂದು, ಪಾರ್ಸಾ ಗ್ರಾಮದ ಕ್ಷತ್ರಿಯ ಸಮುದಾಯದ ಯುವಕ ಗುಂಪೊಂದು, ದಲಿತ ಸಮುದಾಯದ ಪ್ರಶಾಂತ್ ಸೋಲಂಕಿ ಅವರು ತಮ್ಮ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುವುದಕ್ಕೆ ಅಡ್ಡಿ ಪಡಿಸಿತ್ತು. ದಲಿತ ವರ ಸೋಲಂಕಿ ಕುದುರೆ ಸವಾರಿ ಮಾಡುವಂತಿಲ್ಲ. ಏಕೆಂದರೆ, ಕುದುರೆ ಸವಾರಿಯನ್ನು ಕೇವಲ ನಮ್ಮಂತಹ “ಧೈರ್ಯಶಾಲಿ ಜಾತಿಯವರು” ಮಾತ್ರ ಮಾಡಬೇಕು ಎಂದು ಯುವಕರು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಕೊಪ್ಪಳ: ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ
ಈ ಯುವಕರ ಗುಂಪಿನ ಬೆದರಿಕೆ ಬಳಿಕ ವರನ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿತ್ತು. ಪೊಲೀಸರು ಗ್ರಾಮಕ್ಕೆ ಧಾವಿಸಿ ಪೊಲೀಸ್ ರಕ್ಷಣೆಯಲ್ಲಿ ಮೆರವಣಿಗೆ ನಡೆಸಲಾಗಿತ್ತು. ಒಂಬತ್ತು ಆರೋಪಿಗಳನ್ನು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಪ್ರತಿಯೊಬ್ಬರಿಗೂ 10,000 ರೂಪಾಯಿಗಳ ದಂಡ ವಿಧಿಸಿದೆ.
ಮೇ 2019 ರಲ್ಲಿಯೂ ಕೂಡ, ಅರಾವಳ್ಳಿ ಜಿಲ್ಲೆಯ ಖಂಭಿಸರ್ ಗ್ರಾಮದಲ್ಲಿ, ದಲಿತ ವರನ ಕುದುರೆ ಸವಾರಿಯ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆದಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.
ರಾಜ್ಯದಲ್ಲಿಯೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ, ಬರಗೂರ ದಾನಪ್ಪ ಮತ್ತು ಕಕ್ಕರಗೋಳ ರಾಘವೇಂದ್ರರ ಕೊಲೆ ಪ್ರಕರಣ ಸೇರಿ ಕನಕಗಿರಿ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಕೊಲೆ ಪ್ರಕರಣಗಳ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇಂದು (ಜುಲೈ 19) ದಲಿತ ದಮನಿತರ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೊಪ್ಪಳ ಚಲೋ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ: ಹರಿಯಾಣ: ದಲಿತ ಯುವತಿಯನ್ನು ಅಪಹರಿಸಿ ಸತತ 9 ದಿನ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು


