ತರಕಾರಿ ವ್ಯಾಪಾರ ಮಾಡುತ್ತಿದ್ದ ಯುವಕನಿಗೆ ಒತ್ತಾಯವಾಗಿ ಗಾಂಜಾ ಸೇವನೆ ಮಾಡಿಸಿ, ಆತನ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಆರೋಪದ ಮೇಲೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಕಡಲೆಕಾಯಿ, ತರಕಾರಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿ ಶಿವರಾಜ್ ಮೇಲೆ ಗಾಂಜಾ ಸೇವಿಸಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದ ಘಟನೆ ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಠಾಣೆಯ ಇನ್‌ಸ್ಪೆಕ್ಟರ್ ಪಾರ್ವತಮ್ಮ ಮತ್ತು ಸಬ್ ಇನ್‌ಸ್ಪೆಕ್ಟರ್ ಆಂಜಿನಪ್ಪ ಹಾಗೂ ಇತ್ತಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಲಂಚ ಕೊಡದ ಕಾರಣಕ್ಕೆ ಬೀದಿ ಬದಿ ವ್ಯಾಪಾರಿ ಶಿವರಾಜ್ ಎಂಬಾತನ ಮೇಲೆ ಗಾಂಜಾ ಸೇವಿಸಿದ್ದ ಸುಳ್ಳು ಪ್ರಕರಣ ದಾಖಲಿಸಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಆತ ಆತ್ಮಹತ್ಯೆಗೆ ಯತ್ನಿಸಿದ್ದ. ಇದಾದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಡಿಸಿಪಿಗೆ ಪ್ರಕರಣದ ವರದಿ ನೀಡುವಂತೆ ಸೂಚಿಸಲಾಗಿತ್ತು.
ಇದನ್ನೂ ಓದಿ: ದಲಿತ ಮಹಿಳೆಯ ಲಾಕಪ್ ಡೆತ್: ಮೂವರು ಪೊಲೀಸರು ಸೇವೆಯಿಂದ ವಜಾ
ಯಶವಂತಪುರ ಉಪವಿಭಾಗದ ಎಸಿಪಿ ಮತ್ತು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಪ್ರಕರಣದ ತನಿಖೆಯನ್ನು ನಡೆಸಿದ್ದರು. ತನಿಖೆ ವೇಳೆ ಪಿಎಸ್‌ಐ ಆಂಜಿನಪ್ಪ ಡಿಸಿಪಿ ಅವರ ವಾಯ್ಸ್ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಅವರು ಸಲ್ಲಿಸಿದ ವರದಿ ಆಧಾರದ ಮೇಲೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ವರದಿಯ ಪ್ರಕಾರ, ಇನ್‌ಸ್ಪೆಕ್ಟರ್ ಪಾರ್ವತಮ್ಮ ಜುಲೈ 14 ರ ರಾತ್ರಿ ಗೋರಗುಂಟೆಪಾಳ್ಯ ಬಳಿ ಗಸ್ತಿನಲ್ಲಿದ್ದಾಗ ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಂಡರು. “ಅವರಲ್ಲಿ ಒಬ್ಬರು ಸಿಗರೇಟು ಸೇದುತ್ತಿದ್ದರು ಮತ್ತು ಪೊಲೀಸ್ ವಾಹನವನ್ನು ನೋಡಿದ ಮೇಲೆ ಸಿಗರೇಟು ಎಸೆದರು. ಆತ ಮಾದಕ ದ್ರವ್ಯ ಸೇವಿಸುತ್ತಿದ್ದಾನೆಂದು ಪೊಲೀಸರು ಭಾವಿಸಿದ್ದರು. ಇಬ್ಬರನ್ನು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ, ನಾಲ್ಕು ಮಂದಿ ಪೊಲೀಸರು ಯುವಕನಿಗೆ ಗಾಂಜಾ ತುಂಬಿದ ಸಿಗರೇಟನ್ನು ಕೊಟ್ಟು ಅದನ್ನು ಧೂಮಪಾನ ಮಾಡಲು ಒತ್ತಾಯಿಸಿದ್ದಾರೆ” ಎಂದು ಹೇಳಿದೆ.
“ಯುವಕರು ಗಾಂಜಾ ತುಂಬಿದ ಸಿಗರೇಟು ಸೇವನೆ ಮಾಡಲು ಒಪ್ಪದ ಕಾರಣ, ಧೂಮಪಾನ ಮಾಡಿದರೆ ಕೇಸ್‌ನಿಂದ ತೆಗೆದುಹಾಕುವುದಾಗಿ ತಿಳಿಸಿದ್ದಾರೆ. ಯವಕರನ್ನು ಬಲವಂತವಾಗಿ ಗಾಂಜಾ ಸೇವಿಸುವಂತೆ ಮಾಡಿ, ಇಬ್ಬರು ಕಾನ್‌ಸ್ಟೆಬಲ್‌ಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯು ಗಾಂಜಾ ಸೇವನೆಯನ್ನು ದೃಢಪಡಿಸಿದೆ. ತರುವಾಯ, ಆತನ ವಿರುದ್ಧ ಪ್ರಕರಣ ದಾಖಲಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
“ಈ ಘಟನೆಯಿಂದ ಬೇಸರಗೊಂಡ ಯುವಕ ಜುಲೈ 17 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್, ಆತ ಶೀಘ್ರವೇ ಚೇತರಿಸಿಕೊಂಡಿದ್ದಾರೆ. ನಂತರ ನಾವು ವಿಚಾರಣೆ ನಡೆಸಿದ್ದೇವೆ ”ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ವರದಿ ತಿಳಿಸಿದೆ.
ಘಟನೆಯಿಂದ ಮನನೊಂದಿದ್ದ ಶಿವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆ ನಂತರ ಆತ ಗುಣಮುಖನಾಗಿ ಮನೆಗೆ ಮರಳಿದ್ದಾರೆ. ಬಳಿಕ ವಿಡಿಯೋ ಮಾಡಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು. ವಿಡಿಯೊ ವೈರಲ್ ಆದ ಬಳಿಕ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದ್ದವು. ನಂತರ ತನಿಖೆಗೆ ಆದೇಶಿಸಿದ್ದ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ನಾಲ್ವರನ್ನು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕೊಲೆ ಆರೋಪಿಯ ಮದುವೆಯಲ್ಲಿ ಪೊಲೀಸರು ಭಾಗಿ: ತೀವ್ರ ಖಂಡನೆ – ಕಡ್ಡಾಯ ರಜೆ ಶಿಕ್ಷೆ


