ಕೇರಳದ ಆಡಳಿತಾರೂಢ ಸಿಪಿಎಂನ ಶಾಸಕರ ವಿರುದ್ಧ 2015 ರ ವಿಧಾನಸಭೆ ಗದ್ದಲಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಶಿಕ್ಷಣ ಮತ್ತು ಕಾರ್ಮಿಕ ಸಚಿವರಾದ ವಿ.ಶಿವಂಕುಟ್ಟಿ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಸೇರಿದಂತೆ ಹಲವರು 2015 ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪ್ರತಿಭಟನೆ ವೇಳೆ ಪೀಠೋಪಕರಣಗಳಿಗೆ ಹಾನಿಯುಂಟು ಮಾಡಿದ್ದರು. ಈ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
“ಶಾಸಕರಿಗಿರುವ ಸವಲತ್ತು ಮತ್ತು ಹಕ್ಕುಗಳನ್ನು ಅಪರಾಧದಿಂದ ವಿನಾಯಿತಿ ಪಡೆಯಲು ಬಳಸಬಾರದು. ಅಂತಹ ಕೆಲಸ ಮಾಡಿದ ಶಾಸಕರು ಅವರನ್ನು ಆಯ್ಕೆ ಮಾಡಿದ ಭಾರತೀಯ ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ” ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಕೊರತೆ; ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಲ್ಲಿಸುವತ್ತ ಕೇರಳ
“ಸಂಸದರು ಮತ್ತು ಶಾಸಕರು ಭಾರತದ ಸಂವಿಧಾನಕ್ಕೆ ಅನುಗುಣವಾಗಿರಬೇಕು. ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಕೃತ್ಯಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಮನಾಗಿ ಹೇಳಲಾಗುವುದಿಲ್ಲ. ಶಾಸಕರ ಸವಲತ್ತು ಮತ್ತು ಹಕ್ಕುಗಳನ್ನು ಅಪರಾಧ ಕಾನೂನುಗಳಿಂದ ರಕ್ಷೆ ಪಡೆಯಲು ಬಳಸಬಾರದು” ಎಂದು ಹೇಳಿದೆ.
ಕೇರಳ ಸರ್ಕಾರದ ಮೇಲ್ಮನವಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
2015ರ ಮಾರ್ಚ್ 13ರಂದು ಲಂಚದ ಆರೋಪ ಎದುರಿಸುತ್ತಿದ್ದ ಹಣಕಾಸು ಸಚಿವ ಕೆ.ಎಂ.ಮಣಿ ಬಜೆಟ್ ಮಂಡಿಸಲು ಯತ್ನಿಸಿದ್ದರು ಆಗ ವಿಧಾನಸಭೆಯಲ್ಲಿ ಭಾರೀ ಗದ್ದಲ ಉಂಟಾಗಿತ್ತು. ಶಿಕ್ಷಣ ಮತ್ತು ಕಾರ್ಮಿಕ ಸಚಿವರಾದ ವಿ.ಶಿವಂಕುಟ್ಟಿ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಜೊತೆಗೆ ಪ್ರಕರಣದಲ್ಲಿ ಮಾಜಿ ಶಾಸಕರಾದ ಇ.ಪಿ. ಜಯರಾಜನ್, ಕೆ.ಅಜಿತ್, ಸಿ.ಕೆ.ಸದಾಶಿವನ್ ಇದ್ದಾರೆ.
ಇದನ್ನೂ ಓದಿ: ಕೇರಳ: ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಪ್ರೊಟೆಕ್ಷನ್ ಯೋಜನೆ ಆರಂಭ


