2020 ರ ಜೆಎನ್‌ಯು ಕ್ಯಾಂಪಸ್ ಹಿಂಸಾಚಾರ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ. ಕಬ್ಬಿಣದ ಸರಳುಗಳಂತಹ ಶಸ್ತ್ರಗಳಿಡಿದು, ಮುಖವಾಡ ಧರಿಸಿದ ಗೂಂಡಾಗಳು ವಿಶ್ವವಿದ್ಯಾಲಯಕ್ಕೆ ನುಗ್ಗಿ ಹಲವಾರು ವಿದ್ಯಾರ್ಥಿಗಳ ಮೇಳೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
2020 ರ ಜನವರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ನಿತ್ಯಾನಂದ ರೈ ಉತ್ತರಿಸಿದ್ದಾರೆ. ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಘಟನೆ ನಡೆದು ಒಂದೂವರೆ ವರ್ಷಗಳ ನಂತರವೂ ಯಾರನ್ನೂ ಬಂಧಿಸಲಾಗಿಲ್ಲ.
ಹಿಂಸಾಚಾರ ಪ್ರಕರಣದ ತನಿಖೆಯ ವಿಶೇಷ ತನಿಖಾ ತಂಡ ರಚಿಸಲಾಗಿತ್ತು, ಇದರ ಭಾಗವಾಗಿ ಸಾಕ್ಷಿಗಳನ್ನು ಪರಿಶೀಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದ ಫೂಟೇಜ್‌ಗಳ ಸಂಗ್ರಹ ಮತ್ತು ವಿಶ್ಲೇಷಣೆ ನಡೆಸಲಾಗಿತ್ತು. ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿ ವಿಚಾರಣೆ ನಡೆಸಲಾಗಿತ್ತು. ಆದರೆ, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಕೇಂದ್ರ ಸಚಿವಾಲಯವು ಸಂಸತ್ತಿನಲ್ಲಿ ಡಿಎಂಕೆಯ ದಯಾನಿಧಿ ಮಾರನ್ ಅವರ ಪ್ರಶ್ನೆಗೆ ಮಾಹಿತಿ ನೀಡಿದೆ.
ಜನವರಿ 5, 2020 ರಂದು, ಸುಮಾರು 50 ಮಂದಿ ಮುಖವಾಡ ಧರಿಸಿದ ಯುವಕರು ಮತ್ತು ಮಹಿಳೆಯರು, ಕಬ್ಬಿಣದ ರಾಡ್‌ಗಳು ಮತ್ತು ಸುತ್ತಿಗೆಗಗಳನ್ನು ಹಿಡಿದು ಶಸ್ತ್ರಸಜ್ಜಿತರಾಗಿ, ಜೆಎನ್‌ಯು ಕ್ಯಾಂಪಸ್‌ನಲ್ಲಿ ನುಗ್ಗಿದ್ದರು. ವಿದ್ಯಾರ್ಥಿಗಳು ಎಚ್ಚರಗೊಳ್ಳುವ ಮೊದಲೇ ಹಾಸ್ಟೆಲ್‌ಗಳು ಮತ್ತು ಇತರ ಕಟ್ಟಡಗಳಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು.
ಇದನ್ನೂ ಓದಿ: “ಜೆಎನ್‌ಯು ಮೇಲಿನ ದಾಳಿ ನನಗೆ 26/11 ಭಯೋತ್ಪಾದಕ ದಾಳಿಯನ್ನು ನೆನಪಿಸುತ್ತದೆ”: ಉದ್ಧವ್ ಠಾಕ್ರೆ
ಜೆಎನ್‌ಯು ಅಧ್ಯಕ್ಷೆ ಐಶೆ ಘೋಷ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಮಾರಣಾಂತಿಕ ದಾಲೀಗೆ ಒಳಗಾಗಿ ತಲೆಯಿಂದ ರಕ್ತ ಹರಿಯುತ್ತಿದ್ದ ಆಕೆಯ ಫೋಟೋಗಳು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು.
ಜೆಎನ್‌ಯು ವಿದ್ಯಾರ್ಥಿಗಳು ಕ್ಯಾಂಪಸ್‌ನ ಒಳಗೆ ಮತ್ತು ಹೊರಗೆ ತೀವ್ರ ಪ್ರತಿಭಟನೆ ಆರಂಭಿಸಿದ್ದರು. ABVP ಸದಸ್ಯರೇ ದಾಳಿ ನಡೆಸಿದ್ದಾರೆ, ಇದಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲವಿದೆ, ಹಾಗಾಗಿಯೇ ಪೊಲೀಸರು ದಾಳಿಗೆ ಸಹಕರಿಸಿದ್ದಾರೆ ಎಂದು ಹಿಂಸಾಚಾರದ ವಿರುದ್ಧ ಮುಂಬೈ, ಚೆನ್ನೈ, ಪುಣೆ, ಹೈದರಾಬಾದ್, ಒಡಿಶಾ, ಕೋಲ್ಕತಾ, ಬೆಂಗಳೂರು ಮತ್ತು ಅಹಮದಾಬಾದ್ ಸೇರಿದಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು.
ವಿಪಕ್ಷ ನಾಯಕರು ಘಟನೆಯನ್ನು ಖಂಡಿಸಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಕ್ರೂರ ದಾಳಿಯನ್ನು 26/11 ಮುಂಬೈ ಭಯೋತ್ಪಾದಕ ದಾಳಿಗೆ ಹೋಲಿಸಿದ್ದರು. ಕಬ್ಬಿಣದ ಸರಳುಗಳಂತಹ ಶಸ್ತ್ರಗಳಿಡಿದು, ಮುಖವಾಡ ಧರಿಸಿದ ಗೂಂಡಾಗಳು ನಡೆಸಿರುವ ಹಿಂಸಾತ್ಮಕ ದಾಳಿಯನ್ನು “ಹೇಡಿತನ” ಎಂದು ಕರೆದಿದ್ದರು.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಸಚಿವ ಪಿ ಚಿದಂಬರಂ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಹಲವು ಮಂದಿ ತನಿಖೆಗೆ ಆಗ್ರಹಿಸಿದ್ದರು.
ಇದನ್ನೂ ಓದಿ: ಜೆಎನ್‌ಯು ವಿದ್ಯಾರ್ಥಿಗಳ ಪರವಾಗಿ ನಾವಿದ್ದೇವೆ: JNU ಹಿಂಸೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ


