“ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು” ಎಂಬ ದ ರಾ ಬೇಂದ್ರೆಯವರ ಸಾಲುಗಳನ್ನು ’ಬಂಗಾರ ನೀರ ಕಡಲಾಚೆ’ ಕವನ-ಹಾಡಿನಲ್ಲಿ ಕೇಳಿರಬೇಕು. ಇಲ್ಲಿ ಬೇಂದ್ರೆಯವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಡಲು ಹೊಳೆಯುವುದನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆ ಅಲ್ಲವೇ! ಬೇಂದ್ರೆಯವರು ಚಿತ್ರಿಸಿದ ಹೊಳೆಯುವ ಕಡಲನ್ನು ಮೂಡಿಸಿದ ಸೂರ್ಯೋದಯ ಮತ್ತು ಸೂರ್ಯಾಸ್ತದ ಬಗ್ಗೆ ಕೆಲವು ವಿಜ್ಞಾನದ ಸಂಗತಿಗಳನ್ನು ಚರ್ಚಿಸೋಣ.
ಸೂರ್ಯ ಪೂರ್ವದಲ್ಲಿ ಹುಟ್ಟಿ ನೆತ್ತಿಯ ಮೇಲೆ ಸಾಗಿ, ಪಶ್ಚಿಮದಲ್ಲಿ ಪ್ರತಿ ದಿನ ಮುಳುಗುತ್ತಾನೆ ಎಂಬುದನ್ನು ಸಾಮಾನ್ಯವಾಗಿ ತಿಳಿದಿರುತ್ತೇವೆ. ಬಹುಶಃ ಎಲ್ಲರಿಗೂ, ಇದು ಸೂರ್ಯನ ನಿಜವಾದ ಚಲನೆಯಲ್ಲ, ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತನ್ನ ಅಕ್ಷದ ಸುತ್ತ ತಿರುಗುತ್ತಿರುವ ಕಾರಣದಿಂದ, ಎಲ್ಲಾ ಆಕಾಶಕಾಯಗಳು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವಂತೆ ನಾವು ಸಾಮಾನ್ಯವಾಗಿ ಗ್ರಹಿಸುತ್ತೇವೆ ಎಂಬುದು ಕೂಡ ತಿಳಿದ ವಿಚಾರವೇ.

ಈಗ ಈ ಫೋಟೋ ನೋಡಿ. ಇದೊಂದು ಸೂರ್ಯಾಸ್ತದ ಫೋಟೋ? ಫೋಟೋದಲ್ಲಿನ ವಿಶೇಷವೇನು ಎಂಬುದನ್ನು ಗಮನಿಸಿ. ಅರೆರೆ, ಯಾರೋ ಸೂರ್ಯಾಸ್ತದ ಎರಡು ಫೋಟೋ ತೆಗೆದು ಫೋಟೋಶಾಪ್ ಮೂಲಕ ಜೋಡಿಸಿದ್ದಾರೆ ಅನ್ನಿಸುತ್ತಿದೆಯೇ? ಇದೊಂದು ಚಮತ್ಕಾರದ ಗ್ರಾಫಿಕ್ಸ್ ಫೋಟೋ ಅಂದುಕೊಂಡಿರಾ? ಇಲ್ಲ. ಇದು, ಒಂದೇ ಬಾರಿಗೆ ತೆಗೆದಿರುವ ನಿಜವಾದ ಫೋಟೋನೇ ಹೊರತು ಎರಡು ಪೋಟೋ ಜೋಡಿಸಿರುವುದಲ್ಲ! ಇಂತಹ ಫೋಟೋಗಳನ್ನು ಪ್ರಪಂಚದಾದ್ಯಂತ ಅನೇಕರು ಸೆರೆ ಹಿಡಿದಿದ್ದಾರೆ. ಇದನ್ನು ಸೀಳು ಆಕಾಶದ ಸೂರ್ಯಾಸ್ತ (Split-sky Sunset/ Split Sunset/ Split-screen Sunset) ಎಂಬ ಹೆಸರಿನಿಂದ ಪ್ರಚಲಿತವಾಗಿದೆ.
ಹಾಗಾದರೆ ಏನು, ಆಕಾಶ ಎರಡು ಭಾಗವಾಗಿದೆಯಾ? ಅಥವಾ ಒಂದು ಬದಿಯಿಂದ ರಾತ್ರಿಯಾಗುತ್ತಿರುವುದನ್ನು ನೋಡುತ್ತಿದ್ದೇವೆಯೇ? ಇದು ಯಾವ ಯಾವ ಪ್ರದೇಶದಲ್ಲಿ ಹೀಗೆ ಕಾಣುತ್ತೆ? ಈ ತರಹದ ಸೂರ್ಯಾಸ್ತ ಸಾಮಾನ್ಯವೇ ಎಂಬಿತ್ಯಾದಿಯಾಗಿ ಯೋಚಿಸುತ್ತಿದ್ದೀರಾ?

ಸೌರಮಂಡಲದ ಇತರ ಗ್ರಹಗಳಿಗೆ ಹೋಲಿಕೆ ಮಾಡಿದರೆ, ಭೂಮಿಯಲ್ಲಿ ಮಾತ್ರ ಜೀವಿಗಳ ಉಗಮಕ್ಕೆ ಮತ್ತು ಪೋಷಣೆಗೆ ಸೂಕ್ತವಾದ ವಾತಾವರಣವಿರುವುದು. ಈ ವಾತಾವರಣದಲ್ಲಿ ಹೆಚ್ಚಾಗಿ ಆಕ್ಸಿಜನ್ ಮತ್ತು ನೈಟ್ರೋಜನ್ ಇದೆ. ಸೂರ್ಯನ ತೀವ್ರ ನೇರಳಾತೀತ (UV Rays) ಕಿರಣಗಳಿಂದ ಜೀವರಾಶಿಯನ್ನು ರಕ್ಷಿಸಲು ಓಜೋನ್ ಪದರವು ವಾತಾವರಣದಲ್ಲಿದೆ. ಪ್ರತಿ ದಿನ ವಾತಾವರಣದ ಅನಿಲಗಳು, ಧೂಳು ಮತ್ತು ಮೋಡಗಳ ಮೂಲಕ ಹಾದು ಬರುವ ಸೂರ್ಯನ ಬೆಳಕು ಆಕಾಶದಲ್ಲಿ ರಂಗುರಂಗಿನ ಚಿತ್ತಾರವನ್ನೇ ಮೂಡಿಸುತ್ತೆ.
ಸಾಮಾನ್ಯವಾಗಿ ನೀವು ಆಕಾಶವನ್ನು ನೋಡಿದರೆ, ನೀಲಿ ಬಣ್ಣ ಕಾಣುತ್ತದೆ ಅಲ್ಲವೇ? ಏಕೆ ನೀಲಿ ಬಣ್ಣ ಎಂದು ಪ್ರಶ್ನಿಸಿದರೆ: ಸೂರ್ಯನ ಬೆಳಕು ಭೂಮಿಯ ವಾತಾವರಣದಲ್ಲಿ ಹಾದುಹೋಗುವಾಗ, ವಾತಾವರಣದಲ್ಲಿನ ಅನಿಲಗಳು, ಮೋಡಗಳು, ಧೂಳಿನ ಕಣಗಳು ಬೆಳಕನ್ನು ಚದುರಿಸುತ್ತವೆ (Scattering). (ಬಿಳಿ ಬಣ್ಣ ಏಳು VIBGYOR ಬಣ್ಣಗಳಾಗಿ ಚದುರುವುದು). ವಾತಾವರಣದಲ್ಲಿ ಆಕ್ಸಿಜನ್ ಮತ್ತು ನೈಟ್ರೋಜನ್ ಹೆಚ್ಚಾಗಿರುವುದರಿಂದ, ಈ ಅನಿಲದ ಅಣುಗಳು ಬಿಳಿ ಬೆಳಕಿನ ಏಳು ಬಣ್ಣಗಳಲ್ಲಿ ನೀಲಿ ಬಣ್ಣವನ್ನು ಹೆಚ್ಚು ಚದುರಿಸುತ್ತದೆ. ಈ ಕಾರಣದಿಂದ ಆಕಾಶವು ನೀಲಿ ಬಣ್ಣದಲ್ಲಿ ಕಾಣುತ್ತದೆ. ಸೂರ್ಯೋದಯದ ನಂತರದಿಂದ ಸೂರ್ಯಾಸ್ತದವರೆಗೂ ಆಕಾಶ ನೀಲಿ ಬಣ್ಣವಾಗಿ ಕಾಣುವುದನ್ನು ಗಮನಿಸಿರಬಹುದು. ಆದರೆ, ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಯಾವ ಬಣ್ಣ ಕಾಣುತ್ತದೆ?
ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬೆಳಕು ಭೂಮಿಯ ವಾತಾವರಣದಲ್ಲಿ ಹೆಚ್ಚು ದೂರ ಚಲಿಸುವುದರಿಂದ, ನೀಲಿ ಬೆಳಕು ಅಷ್ಟು ದೂರ ಕ್ರಮಿಸುವುದರಲ್ಲಿ ಚದುರಿಹೋಗಿ, VIBGYORನಲ್ಲಿ ಉಳಿಯುವ ಕೊನೆಯ ಬಣ್ಣದ ಕೆಂಪು ಬೆಳಕು ನಮ್ಮ ಕಣ್ಣುಗಳನ್ನು ತಲುಪುತ್ತದೆ. ಆ ಕಾರಣದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಆಕಾಶವು ಕೆಂಪಾಗಿ ಹೊಳೆಯುವುದು. ಹೆಚ್ಚಿನ ಕವಿಗಳಿಗಂತೂ ಈ ಕೆಂಪು ಬಣ್ಣದ ಆಕಾಶವು ಅವರ ಕವಿತೆಗಳಿಗೆ ರಾಗವಾಗಿ ನುಡಿದಿದೆ. “ಸಂಜೆಯ ರಾಗಕೆ ಬಾನು ಕೆಂಪೇರಿದೆ?” ಎನ್ನುವ ಸುಬ್ರಾಯ ಚೊಕ್ಕಾಡಿಯವರ ಕವಿತೆ-ಹಾಡನ್ನು ನೀವು ಕೇಳಿರಬಹುದು.
ಇರಲಿ, ಆದರೆ ಈ ಸೀಳಾಕಾಶದ ಸೂರ್ಯಾಸ್ತ ಮೂಡುವುದು ಹೇಗೆ ಅನ್ನುವುದನ್ನು ನೋಡೋಣ.
ಈ ಚಿತ್ರದಲ್ಲಿ ನೋಡಿ, ಸೂರ್ಯಾಸ್ತದ ಸಮಯದಲ್ಲಿ, ಆಕಾಶದ ಒಂದು ಭಾಗದಲ್ಲಿ ಒಂದು ದೊಡ್ಡ ಮೋಡ, ಸಣ್ಣ ಸಣ್ಣ ಮೋಡಗಳಿಗೆ ಸೂರ್ಯನ ಬೆಳಕು ನೇರವಾಗಿ ಬೀಳುವುದನ್ನು ಮರೆಮಾಚುತ್ತಿದೆ. ಹೀಗೆ ಮರೆಮಾಚುವಿಕೆ ನಡೆದಾಗ, ದೊಡ್ಡ ಮೋಡದ ನೆರಳಿನಲ್ಲಿರುವ ಮೋಡಗಳಿಗೆ ಸೂರ್ಯನ ನೇರವಾದ ಬೆಳಕು ಬೀಳದೆ, ಚದುರಿಹೋದ ನೀಲಿ ಬೆಳಕಿನ ಕಿರಣಗಳು ಮಾತ್ರ ಬೀಳುತ್ತವೆ. ಹಾಗಾಗಿ, ಈ ಭಾಗ ನೀಲಿ ಬಣ್ಣದಲ್ಲಿ ಹೊಳೆಯುತ್ತಿದ್ದರೆ, ದೊಡ್ಡ ಮೋಡವಿರದ ಭಾಗದಲ್ಲಿ ಕೆಂಪಾದ ಆಕಾಶವೇ ಕಾಣುತ್ತದೆ. ಈ ಕಾರಣದಿಂದ, ಆಕಾಶವು ಎರಡು ಭಾಗವಾಗಿರುವಂತೆ ಕಂಡು ಒಂದು ಕಡೆ ನೀಲಿ ಬಣ್ಣ ಇನ್ನೊಂದು ಕಡೆ ಕೆಂಪು ಬಣ್ಣದಲ್ಲಿ
ಗೋಚರಿಸುತ್ತದೆ.
ಈ ಪ್ರಕ್ರಿಯೆ ನಡೆಯುವುದು ಬೆಳಕಿನ ಚದುರುವಿಕೆಯ ಕಾರಣದಿಂದ. ಇದನ್ನು ಪ್ರಚಲಿತದಲ್ಲಿ Split Sunset, Split-sky Sunset ಅಂತ ಕರೆಯುತ್ತಾರೆ. ಕನ್ನಡದಲ್ಲಿ ಸೀಳು ಆಕಾಶದ ಸೂರ್ಯಾಸ್ತ ಎಂದು ಕರೆಯಬಹುದೇನೊ! ಇಂತಹ ದೃಶ್ಯ ಸೂರ್ಯಸ್ತದ ಸಮಯದಲ್ಲಿ ಮೂಡಲು ಮೋಡಗಳು ಚಿತ್ರದಲ್ಲಿ ತೋರಿಸಿದಂತೆ ವ್ಯವಸ್ಥೆಗೊಂಡರೆ ಮಾತ್ರ ಸಾಧ್ಯ ಮತ್ತು ಮೋಡ ಮತ್ತು ಸೂರ್ಯನ ನಿರಂತರ ಚಲನೆಯಿಂದ ಈ ತರಹ ವ್ಯವಸ್ಥೆಯು ಹೆಚ್ಚು ಸಮಯ ಕೂಡ ಉಳಿದುಕೊಂಡಿರಲಾರದು. ಆದಕಾರಣ ಈ ಸೀಳಾಕಾಶದ ಸೂರ್ಯಾಸ್ತ ಸಾಮಾನ್ಯವಾಗಿ ಹೆಚ್ಚು ಸಮಯ ಗೋಚರಿಸುವುದಿಲ್ಲ. ಕೆಲವೊಮ್ಮೆ ಅಸ್ಪಷ್ಟವಾಗಿ ಈ ತರಹದ ವಿದ್ಯಮಾನವನ್ನು ನೀವು ನೋಡಿರಬಹುದು, ಆದರೆ, ಸ್ಪಷ್ಟವಾಗಿ ಗೆರೆ ಎಳೆದಂತೆ ಸೀಳಾಕಾಶವಾಗಿ ಕಾಣುವುದು ಅತಿ ಅಪರೂಪ. ಆದರೂ ಇದು ಅಸಾಧ್ಯವಾದುದಲ್ಲ. ಹಾಗಾಗಿ, ಸೂರ್ಯಾಸ್ತವನ್ನು ನೀವೂ ಕೂಡ ಒಂದಲ್ಲಾ ಒಂದು ದಿನ ವೀಕ್ಷಿಸಬಹುದು. ಅಂದಹಾಗೆ ಇಂತಹ ವಿದ್ಯಮಾನ ಸೂರ್ಯೋದಯದ ಸಮಯದಲ್ಲೂ ಸಂಭವಿಸಬಹುದಾದರೂ, ಹೆಚ್ಚಾಗಿ ಎಲ್ಲರೂ ಸೂರ್ಯಾಸ್ತದಲ್ಲಿಯೇ ಇದನ್ನು ಕಂಡಿದ್ದಾರೆ.
ಇದನ್ನೂ ಓದಿ: ಬೆಳ್ಳಿಚುಕ್ಕಿ; 2030ಕ್ಕೆ ಪ್ರಳಯವಂತೆ!


