Homeಮುಖಪುಟಬೆಳ್ಳಿಚುಕ್ಕಿ; 2030ಕ್ಕೆ ಪ್ರಳಯವಂತೆ!

ಬೆಳ್ಳಿಚುಕ್ಕಿ; 2030ಕ್ಕೆ ಪ್ರಳಯವಂತೆ!

- Advertisement -

ವೀಕ್ಷಕರೆ ನಿಮಗೆ ಗೊತ್ತಾ? ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಿರುವುದು.. ಎಲ್ಲಾ ನದಿಗಳು ಉಕ್ಕಿ
ಹರಿಯುತ್ತಿರುವುದು.. ಅಣೆಕಟ್ಟೆಗಳೆಲ್ಲವೂ ಭರ್ತಿಯಾಗಿರುವುದು.. ಕೆಲವು ಕಡೆ ನೆರೆಯಾಗಿ ಜನಜೀವನ ಅಸ್ತವ್ಯಸ್ತವಾಗಿರುವುದು… ಇದಕ್ಕೆಲ್ಲಾ ಏನು ಕಾರಣ ಅಂತ ಗೊತ್ತಾ? ಇಷ್ಟೆಲ್ಲಾ ಅನಾಹುತಕ್ಕೆ ಕಾರಣವೇನು? ಮುಂದೊಂದು ದಿನ ಪ್ರಳಯವಾಗಿ ಮನುಷ್ಯ ಸಂಕುಲವೇ ಸರ್ವನಾಶವಾಗುತ್ತದೆ ನಿಮಗೆ ತಿಳಿದಿದೆಯೇ? ಇದಕ್ಕೆಲ್ಲಾ ಕಾರಣ ಆ… ಒಂದು… ವೀಕ್ಷಕರೆ… ನಿಮಗೆ ಆಶ್ಚರ್ಯವಾಗಬಹುದು… ಈ ಕವಿಗಳೆಲ್ಲ ಹಾಡಿ ಹೊಗಳಿದ ಆ ಚಂದಮಾಮನೇ? ಭೂಮಿಯಿಂದ ಬೆಳ್ಳಗೆ ಕಾಣುವ ಆ ಚಂದ್ರನೇ ಇದಕ್ಕೆಲ್ಲಾ ಕಾರಣನಾ? ಕಾರಣ… ಕಾರಣ… ಇದು ನಾವು ಹೇಳುತ್ತಿರುವುದಲ್ಲ… ನಿಮಗೆ ವಿಜ್ಞಾನಿಗಳು ಹೇಳುತ್ತಿದ್ದಾರೆ… ಚಂದ್ರ! ಚಂದ್ರ! ಚಂದ್ರ! ಹೌದು ವೀಕ್ಷಕರೆ… ವಿಜ್ಞಾನಿಗಳು ಹೇಳಿದ್ದಾರೆ… 18 ವರ್ಷಕ್ಕೊಮ್ಮೆ ಚಂದ್ರನಲ್ಲಿ ನಡೆಯುವ ಓಲಾಟ ಇಂತಹ ಪರಿಣಾಮಗಳನ್ನು ಭೂಮಿಯ ಮೇಲೆ ತಂದೊಡ್ಡುತ್ತಂತೆ… ಹೆಚ್ಚು ಜನರು ಸಾಯುತ್ತಾರಂತೆ… 2030ಕ್ಕೆ ಭೂಮಿಯೇ ಪ್ರಳಯವಾಗುತ್ತಂತೆ… ನಾವು ನೀವೆಲ್ಲರೂ ಸಾ…”

ಹೀಗೆ, ಅವರದೇ ಅಸಂಬದ್ಧ ಶೈಲಿಯ ನಿರೂಪಣೆಯಲ್ಲಿ, ತಲೆಬುಡ ಇಲ್ಲದೆ, ವಿಜ್ಞಾನಿಗಳು ಅಂತ ಪದ ಸೇರಿಸಿ, ತಥಾಕಥಿತ ಪ್ರಳಯವನ್ನು ಸಮಯ ಸಿಕ್ಕಿದಾಗೆಲ್ಲಾ ಕಕ್ಕುವ ದೃಶ್ಯಮಾಧ್ಯಮದಲ್ಲಿ ಸಿನಿಮೀಯ ಪ್ರವಾಹದ ಗ್ರಾಫಿಕ್ ಸಹಿತ ದೃಶ್ಯಗಳನ್ನು ನೀವೂ ನೋಡಿ ಕಣ್ತುಂಬಿಕೊಂಡಿರಬಹುದು. ಮೇಲಿನ ಮಾತುಗಳೂ ಕೂಡ ನೆನ್ನೆಮೊನ್ನೆಯ ಒಂದು ಟಿವಿ ಕಾರ್ಯಕ್ರಮದಲ್ಲಿ ನುಡಿದ ನುಡಿಗಳೇ! ಈ ಕಾರ್ಯಕ್ರಮದಲ್ಲಿ, ಚಂದ್ರನೇ ಈಗ
ಸುರಿಯುತ್ತಿರುವ ಧಾರಾಕಾರ ಮಳೆಗೆ ಕಾರಣ, ಚಂದ್ರನೆ ಪ್ರವಾಹಕ್ಕೆ ಕಾರಣ, ಚಂದ್ರನೆ 2030ರ ಪ್ರಳಯಕ್ಕೆ ಮತ್ತು ಪ್ರವಾಹಕ್ಕೆ ಕಾರಣ ಎಂದು ಹೇಳಿದ್ದಾರೆ. ಆ ಚಂದ್ರನ ಬಗ್ಗೆ, ಅವರು ಪ್ರಸ್ತಾಪಿಸಿದ ಚಂದ್ರನ ಓಲಾಟದ (Moon’s Wobble) ಬಗ್ಗೆ ಸ್ವಲ್ಪ ಮಾತನಾಡುವ.

ಭೂಮಿಯ ಉಪಗ್ರಹ ಚಂದ್ರ

ಭೂಮಿ ಸೌರಮಂಡಲದ ಮೂರನೇ ಗ್ರಹ. ಅಂದರೆ, ಸೂರ್ಯನ ಸುತ್ತ ಬುಧ, ಶುಕ್ರ ಗ್ರಹದ ನಂತರ ಭೂಮಿ ಸುತ್ತುತ್ತದೆ. ಭೂಮಿಗೆ ಒಂದು ಉಪಗ್ರಹವಿದೆ. ಅದು ಚಂದ್ರ. ಭೂಮಿ ಹೇಗೆ ಸೂರ್ಯನ ಸುತ್ತ ಸುತ್ತಿ, ತನ್ನ ಅಕ್ಷದಲ್ಲಿ ತಿರುಗುತ್ತಿದೆಯೋ, ಹಾಗೆಯೇ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿದ್ದು, ತನ್ನ ಅಕ್ಷದ ಸುತ್ತಲೂ ತಿರುಗುತ್ತಿದ್ದಾನೆ.

ಚಂದ್ರ ಭೂಮಿಯ ಸುತ್ತ ತಿರುಗಲು ಸುಮಾರು 27 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಹಾಗೆಯೇ, ತನ್ನ ಅಕ್ಷದ ಸುತ್ತ ತಿರುಗಲು ಸಹ 27 ದಿನಗಳನ್ನೇ ತೆಗೆದುಕೊಳ್ಳುತ್ತಾನೆ. ಈ ಕಾರಣದಿಂದ ಚಂದ್ರನ ಯಾವ ಪ್ರದೇಶ ಭೂಮಿಗೆ ಮುಖ ಮಾಡಿರುತ್ತೋ, ಆ 50% ಪ್ರದೇಶವನ್ನು ಮಾತ್ರ ನಾವು ಭೂಮಿಯಿಂದ ನೋಡಬಹುದು (Near-side of the Moon). ಇದರ ವಿರುದ್ಧ ದಿಕ್ಕಿಗಿರುವ ಉಳಿದ 50% ಚಂದ್ರನ ಪ್ರದೇಶ ಭೂಮಿಯ ದಿಕ್ಕಿಗೆ ಇರದಿಲ್ಲದರಿಂದ, ಅದು ನಮಗೆ ಕಾಣುವುದಿಲ್ಲ (Far-side of the Moon). ರಾಕೆಟ್‌ನಲ್ಲಿ ಹೋಗಿ, ಚಂದ್ರನನ್ನು ಸುತ್ತಿಯೇ ನೋಡಬೇಕು. ಈ ವಿಷಯ ನಿಮಗೆ ಈಗಾಗಲೇ ಗೊತ್ತಿರಬಹುದು. ಚಂದ್ರನ ಒಂದು ಪ್ರದೇಶ ಮಾತ್ರ ನಮಗೆ ಏಕೆ ಕಾಣುತ್ತದೆ ಎಂದು ನೀವು ಯಾರಿಗಾದರೂ ಪ್ರಶ್ನಿಸಿದರೆ, ಮೇಲೆ ತಿಳಿಸಿದ ಉತ್ತರ ನಿಮಗೆ ಸಿಗುತ್ತದೆ. ಆದರೆ, ಈ ಉತ್ತರದಲ್ಲಿ ನಾವು ಚಂದ್ರನ ಓಲಾಡುವಿಕೆಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ.

ಒಂದು ಅಮಾವಾಸ್ಯೆಯಿಂದ ಮತ್ತೊಂದು ಅಮಾವಾಸ್ಯೆಯವರೆಗೆ ಚಂದ್ರನ ಬಿಂಬಾವಸ್ಥೆಯನ್ನು ನಾವು ಸೂಕ್ಷ್ಮವಾಗಿ ಗ್ರಹಿಸಿದರೆ, ಚಂದ್ರನ ಓಲಾಡುವಿಕೆಯನ್ನು ನಾವು ಗ್ರಹಿಸಬಹುದು. ಬರಿಗಣ್ಣಿನಲ್ಲಿ ಪ್ರತಿದಿನ ಚಂದ್ರನನ್ನು ನೋಡಿ ಚಂದ್ರನ ಓಲಾಡುವಿಕೆಯನ್ನು ಗಮನಿಸುವುದು ಕಷ್ಟ. ಪ್ರತಿ ದಿನದ ಚಂದ್ರನ ಬಿಂಬಾವಸ್ಥೆಯ ಫೋಟೋ ತೆಗೆದು, ಎಲ್ಲಾ ಫೋಟೋಗಳನ್ನು ಒಂದಕ್ಕೊಂದು ಸಂಬಂಧಿಸಿದಂತೆ ಅಧ್ಯಯನ ಮಾಡಿದರೆ, ಚಂದ್ರನ ಓಲಾಡುವಿಕೆಯನ್ನು ಗುರುತಿಸಬಹುದಕ್ಕೆ ಸಾಧ್ಯ. ಈ ಓಲಾಡುವಿಕೆಯ ಕಾರಣದಿಂದ, ಭೂಮಿಯಿಂದ ಚಂದ್ರನನ್ನು ಒಂದು ಅಮಾವಾಸ್ಯೆಯಿಂದ ಮತ್ತೊಂದು ಅಮಾವಾಸ್ಯೆವರೆಗೂ ಗಮನಿಸಿದಾಗ, ಚಂದ್ರನ ಅರ್ಧ ಭಾಗ ಅಂದರೆ 50% ಬದಲು 59% ಪ್ರದೇಶ ಭೂಮಿಗೆ ಗೋಚರವಾಗುತ್ತದೆ. ಇದು ಚಂದ್ರನ ಓಲಾಡುವಿಕೆಯಿಂದಾಗುವ (Moon’s Wobbling) ಪರಿಣಾಮ. ಇದೇನು ವಿಶೇಷವಾದ ವಿಷಯವಲ್ಲ. ಚಂದ್ರ ಭೂಮಿಯ ಸುತ್ತ ಸುತ್ತುವಾಗ ನಡೆಯುವ ಸಾಮಾನ್ಯ ಪ್ರಕ್ರಿಯೆ. ಆದರೆ ಅದನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಅಷ್ಟೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ; ಭೂಕಂಪನವಲ್ಲ; ಸ್ಫೋಟವಲ್ಲ; ಏನಿದು ಶಬ್ದ? ಸೂಪರ್‌ಸಾನಿಕ್ ಬೂಮ್!

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಚಂದ್ರ ಭೂಮಿಯ ಸುತ್ತ ಸುತ್ತುವ ಕಕ್ಷೆಯು ಭೂಮಿ ಸೂರ್ಯನ ಸುತ್ತುವ ಕಕ್ಷೆಗೆ ಐದು ಡಿಗ್ರಿ ಓರೆಯಾಗಿದೆ (ಚಿತ್ರವನ್ನು ಗಮನಿಸಿ). ಈ ಎರಡು ಕಕ್ಷೆಗಳು ಎರಡು ಬಿಂದುವಿನಲ್ಲಿ ಸಂಧಿಸುತ್ತವೆ. ಇದನ್ನು ನೋಡ್ ಓ1 ಮತ್ತು ಓ2 ಎಂದು ಕರೆಯಬಹುದು. ಚಂದ್ರನ ಓಲಾಡುವಿಕೆಯಿಂದ, ಈ ಬಿಂದುವು ಕೂಡ ಸುತ್ತುತ್ತದೆ. ಈ ಬಿಂದುಗಳು ಒಂದು ಸುತ್ತು ಸುತ್ತಲು 18.6 ವರ್ಷಗಳು ಬೇಕು ಇದನ್ನು ಲೂನಾರ್ ಸ್ಟ್ಯಾಂಡ್ ಸ್ಟಿಲ್ (Lunar Standstill) ಎಂದು ಕರೆಯುತ್ತಾರೆ.

ಸಮುದ್ರದ ಅಲೆಗಳ ಉಬ್ಬರ-ಇಳಿತ

ಸಾಮಾನ್ಯವಾಗಿ ನಿಮಗೆಲ್ಲಾ ತಿಳಿದಿರಬಹುದು. ಭೂಮಿಯ ಸಮುದ್ರಗಳಲ್ಲಿ ಅಲೆಗಳ ಉಬ್ಬರ-ಇಳಿತಗಳಿಗೆ ಚಂದ್ರನೇ ಕಾರಣ ಎನ್ನುವುದು. ಹೌದು, ಚಂದ್ರ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಇದಕ್ಕೆ ಕಾರಣವಾಗಿದೆ. ಚಂದ್ರ ತನ್ನ ಗುರುತ್ವಾಕರ್ಷಣ ಬಲದಿಂದ ತನ್ನ ಹತ್ತಿರವಿರುವ ಭೂಭಾಗದ ಪ್ರದೇಶವನ್ನು ತನ್ನತ್ತ ಎಳೆಯುತ್ತದೆ, ಜೊತೆಗೆ, ಈ ಪ್ರದೇಶದ ವಿರುದ್ಧ ದಿಕ್ಕಿನಲ್ಲಿರುವ ಭೂಭಾಗವನ್ನು ಕೂಡ ತನ್ನತ್ತ ಎಳೆಯುತ್ತಿರುತ್ತದೆ. ಆದರೆ, ಚಂದ್ರನ ಗುರುತ್ವ ಬಲ ತನ್ನ ಹತ್ತಿರವಿರುವ ಭೂಭಾಗಕ್ಕೆ ಹೆಚ್ಚಿದ್ದು, ದೂರ ಇರುವ (ವಿರುದ್ಧ ದಿಕ್ಕಿನಲ್ಲಿ) ಭಾಗದಲ್ಲಿ ಕಡಿಮೆ ಇರುತ್ತದೆ (ಚಿತ್ರಗಳನ್ನು ಗಮನಿಸಿ). ಈ ಗುರುತ್ವ ಬಲದ ವ್ಯತ್ಯಾಸದಿಂದ, ಭೂಮಿಯಲ್ಲಿನ ಸಾಗರಗಳಲ್ಲಿ ಅಲೆಗಳ ಉಬ್ಬರ-ಇಳಿತಗಳಿರುತ್ತವೆ. ಇದನ್ನೇ ಟೈಡ್ (Tide) ಎಂದು ಕರೆಯುವುದು.

ಇಲ್ಲೊಂದು ಪ್ರಶ್ನೆ ಕೇಳಬಹುದು. ಸಾಗರದ ಅಲೆಗಳ ಉಬ್ಬರ-ಇಳಿತಗಳಿಗೆ ಸೂರ್ಯ ಕಾರಣವಾಗುವುದಿಲ್ಲವಾ ಎಂದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ದೂರ (Distance). ಭೂಮಿಗೆ ಚಂದ್ರ 3 ಲಕ್ಷ ಕಿಲೋಮೀಟರ್ ಹತ್ತಿರದಲ್ಲಿದ್ದರೆ, ಸೂರ್ಯ 150 ದಶ ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಭೂಮಿಯಲ್ಲಿ ಅಲೆಗಳ ಉಬ್ಬರಕ್ಕೆ ಸೂರ್ಯ ಮತ್ತು ಚಂದ್ರರ ಗುರುತ್ವ ಬಲ ಕಾರಣವಾದರೂ, ಈ ಕಾಯಗಳು ಭೂಮಿಯ ಎರಡು ಬಿಂದುವಿನಲ್ಲಿ ಉಂಟಾಮಾಡುವ ಗುರುತ್ವ ಬಲದ ವ್ಯತ್ಯಾಸ ಮುಖ್ಯ ಕಾರಣ. ಈ ವ್ಯತ್ಯಾಸ, ಸೂರ್ಯ ಭೂಮಿಯಿಂದ ದೂರವಿರುವುದರಿಂದ, ಕಡಿಮೆ ಇದೆ, ಚಂದ್ರ ಭೂಮಿಗೆ ಹತ್ತಿರವಿರುವುದರಿಂದ ಹೆಚ್ಚಿದೆ. ಹಾಗಾಗಿ ಭೂಮಿಯಲ್ಲಿ ಸಾಗರದ ಅಲೆಗಳ ಉಬ್ಬರ-ಇಳಿತಗಳಿಗೆ ಚಂದ್ರ ಮುಖ್ಯ ಕಾರಣವಾಗುತ್ತದೆ.

ಸಾಮಾನ್ಯವಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು, ಸೂರ್ಯ, ಭೂಮಿ ಮತ್ತು ಚಂದ್ರನ ಸ್ಥಾನದಿಂದ, ಸಮುದ್ರದಲ್ಲಿ ಅಲೆಯ ಉಬ್ಬರಗಳು ಹೆಚ್ಚಿರುತ್ತವೆ. ಈ ಅಲೆಗಳ ಉಬ್ಬರ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯಾದರೂ, ಕಡಲಿನ ಕಿನಾರೆಯಲ್ಲಿ ಇತರೆ ಕಾರಣಗಳಿಂದ ನಡೆಯುತ್ತಿರುವ ಮಾನವನ ಅವೈಜ್ಞಾನಿಕ ಕಾಮಗಾರಿಗಳು/ ಅಭಿವೃದ್ಧಿಯ ಹೆಸರಲ್ಲಿ ನಡೆಯುವ ನಿಸರ್ಗ ಸಂಬಂಧಿತ ವಿನಾಶಕಾರಿ ವಿದ್ಯಮಾನಗಳಿಂದಲೂ ಅನೇಕ ಅನಾಹುತಗಳು ನಡೆದಿರುವುದಂತು ಸತ್ಯ.

2030ಕ್ಕೆ ಸಮುದ್ರದ ಅಲೆಗಳ ಉಬ್ಬರ ಹೆಚ್ಚುತ್ತದೆ! ಪ್ರಳಯವಾಗುತ್ತಾ?

ಈ ತಿಂಗಳ ನೇಚರ್ ಕ್ಲೈಮೆಟ್ ಚೇಂಚ್‌ನ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನ ಹೀಗಿದೆ. 2030ಕ್ಕೆ ಕರಾವಳಿ ಪ್ರದೇಶದಲ್ಲಿ ಪ್ರವಾಹದ ಉಲ್ಬಣ ಈಗಿರುವ ಮಿತಿಗಿಂತಲೂ ಹೆಚ್ಚಾಗಿರುತ್ತದೆ. ಇದರಿಂದ ಕರಾವಳಿ ಭಾಗದ ನಗರಗಳಲ್ಲಿ ಪ್ರವಾಹ ಸ್ಥಿತಿ ಉಲ್ಬಣವಾಗುತ್ತದೆ ಎಂದು ವರದಿಯಾಗಿದೆ.

ಚಂದ್ರನ ಕಾರಣದಿಂದ ಭೂಮಿಯ ಮೇಲೆ ನಡೆಯುವ ಸಾಗರಗಳ ಉಬ್ಬರಗಳು ಚಂದ್ರನ ಓಲಾಡುವಿಕೆಯ 18.6 ವರ್ಷಗಳ ಚಕ್ರಗಳಲ್ಲಿ ಕೆಲವೊಮ್ಮೆ ಹೆಚ್ಚಬಹುದು, ಕಡಿಮೆಯಾಗಬಹುದು ಮತ್ತು ಈ ರೀತಿ ಆಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ, ಈ ಅಧ್ಯಯನದ ಪ್ರಕಾರ, ಪ್ರಸ್ತುತ ಆಗಿರುವ ಭೂಮಿಯಲ್ಲಿನ ಹವಾಮಾನ ಬದಲಾವಣೆ ಅತ್ಯಂತ ಅಪಾಯಕಾರಿಯಾಗಿದ್ದು. ಈ ಅನಿಯಂತ್ರಿತ ವಿದ್ಯಮಾನವು ಚಂದ್ರನ ಓಲಾಡುವಿಕೆಯ ಜೊತೆ ಸಂಯೋಜನೆಗೊಂಡರೆ, ಸಾಗರದ ಅಲೆಗಳ ಉಬ್ಬರಗಳು ತೀವ್ರವಾಗಿರುತ್ತವೆ. ಈ ಕಾರಣದಿಂದ 2030ಕ್ಕೆ ಕಡಲ ಕಿನಾರೆಯ ನಗರಗಳಲ್ಲಿ ತೀವ್ರ ಪ್ರವಾಹ ಸ್ಥಿತಿ ಉಂಟಾಗಬಹುದು ಎಂದು ಹೇಳಿರುವುದು. ಇಂತಹ ಅಧ್ಯಯನಗಳು ಭೂಮಿಯಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲುತ್ತಿದ್ದು, ಎಲ್ಲಾ ರಾಷ್ಟ್ರಗಳೂ ನಿಸರ್ಗ ಕೇಂದ್ರಿತ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಆದರೆ, ’ಬರ ಎಂದರೆ ಎಲ್ಲರಿಗೂ ಇಷ್ಟ’ (Everybody love a good drought) ಎಂಬ ಚಿಂತಕ-ಪತ್ರಕರ್ತ ಪಿ ಸಾಯಿನಾಥ್‌ರವರ ಮಾತಿನಂತೆ, ಸರಿಸುಮಾರು ಎಲ್ಲಾ ರಾಷ್ಟ್ರಗಳೂ ಈ ವಿಷಯಗಳ ಬಗ್ಗೆ ಕಿವುಡಾಗಿವೆ. ಇದರ ಜೊತೆಗೆ, ಪ್ರವಾಹ, ಪ್ರಳಯವೇ ತಮಗೆ ಇಷ್ಟ ಎಂಬಂತೆ ನುಡಿಯುವ, ನಡೆಯುವ ದೃಶ್ಯ ಮಾಧ್ಯಮಗಳಂತು, ಈ ಅಧ್ಯಯನದ ವರದಿಯನ್ನು ಅರೆ-ಬರೆಯಾಗಿ ಓದಿಕೊಂಡು, ಈಗ ಪ್ರಪಂಚದಲ್ಲಿ ಆಗುತ್ತಿರುವ ಮಳೆಗೆ ಚಂದ್ರನೇ ಕಾರಣ, 2030ಕ್ಕೆ ಪ್ರಳಯವೇ ಆಗಿಹೋಗುತ್ತದೆ ಎಂದು ಜನರನ್ನು ಭಯಪಡಿಸಲು ಜೋರಾಗಿ ಕಿರುಚಿ ಅರಚುವವರಿಗೆ ಏನು ಹೇಳಬೇಕೋ ತಿಳಿಯದು!

ವಿಡಿಯೋ ನೋಡಿ : ಚಂದ್ರನ ಓಲಾಡುವಿಕೆಯ ವಿಡಿಯೋ

 

ವಿಶ್ವ ಕೀರ್ತಿ ಎಸ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial