Homeಮುಖಪುಟಬೆಳ್ಳಿಚುಕ್ಕಿ; ಭೂಕಂಪನವಲ್ಲ; ಸ್ಫೋಟವಲ್ಲ; ಏನಿದು ಶಬ್ದ? ಸೂಪರ್‌ಸಾನಿಕ್ ಬೂಮ್!

ಬೆಳ್ಳಿಚುಕ್ಕಿ; ಭೂಕಂಪನವಲ್ಲ; ಸ್ಫೋಟವಲ್ಲ; ಏನಿದು ಶಬ್ದ? ಸೂಪರ್‌ಸಾನಿಕ್ ಬೂಮ್!

- Advertisement -
- Advertisement -

ಕಳೆದ ಕೆಲವು ದಿನಗಳ ಹಿಂದೆ ’ಬೆಂಗಳೂರಿನಲ್ಲಿ ಭಾರಿ ಶಬ್ದ’ ಎಂದು ವರದಿಯಾಯಿತು. ಜನರು ತಮ್ಮ ಮನೆಯ ಕಿಟಕಿ ಗಾಜುಗಳು, ಫ್ಯಾನ್ ಮತ್ತು ಹ್ಯಾಂಗಿಂಗ್‌ಗಳು ಅಲ್ಲಾಡಿದವು, ಭೂಕಂಪನದ ಅನುಭವವಾಯಿತು ಎಂದರು. ಸೋಷಿಯಲ್ ಮೀಡಿಯಾದಲ್ಲಿ ಈ ಶಬ್ದದ ಬಗ್ಗೆ ಹಲವು ಪೋಸ್ಟ್‌ಗಳು ಕಾಣಿಸತೊಡಗಿದವು. “ಈಗತಾನೆ ಭಾರಿ ಶಬ್ದ ಕೇಳಿಸಿತು, ನಿಮಗೇನಾದರೂ ಕೇಳಿಸಿತೇ? Bomb Blast ಶಬ್ದದ ತರ ಬೆಂಗಳೂರಿನಲ್ಲಿ ಕೇಳಿಸಿತು, ಇದು ನಿಜವೇ? ಯಾವುದೋ ಕ್ವಾರಿಯಲ್ಲಿ ಬ್ಲಾಸ್ಟ್ ಆಗಿರಬೇಕು, ಅದರ ಶಬ್ದವೇ? ಅಲ್ಲೆಲ್ಲೋ ಮೆಟ್ರೋ ಕಾಮಗಾರಿಯಲ್ಲಿ ಭೂಮಿಯ ಒಳಗೆ ಬಾಂಬ್ ಸಿಡಿದಿರಬೇಕು. ಭೂಕಂಪನವಾಗಿರಬೇಕು” ಇಂತ ವಿವಿಧ ಅಭಿಪ್ರಾಯಗಳು ಬೆಂಗಳೂರು ಹ್ಯಾಶ್ ಟ್ಯಾಗ್‌ನೊಂದಿಗೆ ಒಮ್ಮೆಲೆ ವ್ಯಕ್ತವಾದವು. ತಕ್ಷಣಕ್ಕೆ ಯಾರಿಗೂ ಶಬ್ದದ ಮೂಲ ಯಾವುದು ಅಂತ ತಿಳಿಯಲಾಗಲಿಲ್ಲ. ಇದು ನ್ಯೂಸ್ ಚಾನಲ್‌ಗಳಿಗೆ ಆಹಾರವಾಗಿ, ಅವರೂ ದೊಡ್ಡ ಶಬ್ದ ಮಾಡತೊಡಗಿದರು. ಪೊಲೀಸರು ಆ ದಿನ ಉಂಟಾದ ಶಬ್ದದ ಮೂಲ ಹುಡುಕುತ್ತಿದ್ದಾರೆ ಎಂದು ಮಾಹಿತಿಗಳೂ ಬರತೊಡಗಿದವು.

ಒಂದು ವರ್ಷದ ಹಿಂದೆ ಇದೇರೀತಿ ಬೆಂಗಳೂರಿನಲ್ಲಿ ದೊಡ್ಡ ಶಬ್ದವಾಗಿತ್ತು. ಆಗಲೂ ಇದೇ ರೀತಿ ಎಲ್ಲರೂ ಗೊಂದಲಗೊಂಡು ತಮಗೆ ತೋಚಿದ್ದನ್ನು ಕಲ್ಪಿಸಿಕೊಂಡಿದ್ದರು. ಆದರೆ, ಅಂದು ಸಂಜೆಯೊಳಗೆ, ಇಂಡಿಯನ್ ಏರ್‌ಪೋರ್ಸ್‌ನವರು, ’ತಮ್ಮ ಸಂಸ್ಥೆಗೆ ಸೇರಿದ ತರಬೇತಿನಿರತ ಜೆಟ್ ವಿಮಾನ ಇಂತಹ ಶಬ್ದ ಮಾಡಿತು’ ಎಂದು ತಿಳಿಸಿ ’ಶಬ್ದಕ್ಕಿಂತಲೂ ವೇಗವಾಗಿ ಚಲಿಸುವ ಈ ವಿಮಾನ ಮಾಡುವ ಸಾಮಾನ್ಯ ಶಬ್ದ ಇದು, ಇದನ್ನು ಸೂಪರ್‌ಸಾನಿಕ್ ಬೂಮ್ ಎಂದು ಕರೆಯುತ್ತಾರೆ’ ಎಂದು ಹೇಳಿಕೆ ನೀಡಿತು. ಹಾಗಾದರೇ ಏನಿದು ಸೂಪರ್‌ಸಾನಿಕ್ ಬೂಮ್ (Supersonic Boom)? ಇದು ಹೇಗೆ ಉಂಟಾಗುತ್ತದೆ?

ಶಬ್ದದ (ಧ್ವನಿ) ವೇಗ

17ನೇ ಶತಮಾನದ ಫ್ರಾನ್ಸ್ ವಿಜ್ಞಾನಿಯಾದ ಪೆರ್ರಿ ಗೆಸ್ಸಂಡಿ, ಮೊದಲ ಬಾರಿಗೆ ಶಬ್ದದ (ಧ್ವನಿಯ) ವೇಗವನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಅವರು, ‘ಗನ್-ಪೈರ್’ಅನ್ನು ದೂರದಿಂದ ನೋಡಿದಾಗ, ಗನ್-ಫೈರ್ ಮಾಡಿದಾಗ ಉಂಟಾದ ಬೆಳಕು ಮತ್ತು ಸ್ವಲ್ಪ ನಿಧಾನವಾಗಿ ಕೇಳಿದ ಗನ್-ಫೈರ್‌ನ ಶಬ್ದದ ನಡುವೆ ಇದ್ದ ಸಮಯವನ್ನು ಲೆಕ್ಕ ಹಾಕಿದರು. ಗನ್ ಇರುವ ಸ್ಥಳದಿಂದ ತಾವು ಇರುವ ದೂರದ ಆಧಾರದಲ್ಲಿ ಮೊದಲ ಬಾರಿಗೆ ಶಬ್ದದ ವೇಗವನ್ನು ಕಂಡುಹಿಡಿದರು. ಅಂದು ಅವರು, ಶಬ್ದವು ಸೆಕೆಂಡಿಗೆ ಸುಮಾರು 478 ಮೀಟರ್ ಚಲಿಸುತ್ತದೆ ಎಂದು ತಿಳಿಸಿದರು. ತದನಂತದ ಹಲವು ವಿಜ್ಞಾನಿಗಳು ವಿವಿಧ ರೀತಿಯಲ್ಲಿ ಪ್ರಯೋಗ ಮಾಡಿ ಶಬ್ದದ ವೇಗವನ್ನು ನಿಖರವಾಗಿ ಲೆಕ್ಕ ಹಾಕಿದರು. ಇಂದು ನಮಗಿರುವ ನಿಖರವಾದ ಮಾಹಿತಿ ಎಂದರೆ ಶಬ್ದವು ಸೆಕೆಂಡಿಗೆ 343 ಮೀಟರ್ ಚಲಿಸುತ್ತದೆ ಎಂದು.

ವಸ್ತುವಿನ ವೇಗ ಮತ್ತು ಶಬ್ದದ ವೇಗ

ಶಬ್ದದ ವೇಗ ಸೆಕೆಂಡಿಗೆ 343 ಮೀಟರ್. ಈಗ ಚಲಿಸುವ ವಸ್ತುವೊಂದರೆ ವೇಗವನ್ನು ಶಬ್ದದ ವೇಗಕ್ಕೆ ಹೋಲಿಕೆ ಮಾಡಿ ನೋಡೋಣ. ಈ ಕೆಳಗಿನ ಒಂದು ಚಿಕ್ಕ ಸಮೀಕರಣದಿಂದ ನಾವು ಇದನ್ನು ಪತ್ತೆ ಹಚ್ಚಬಹುದು.

ಮಾಕ್ ನಂಬರ್= (ವಸ್ತುವಿನ ವೇಗ)/(ಶಬ್ದದ ವೇಗ)

ಈ ಮೇಲಿನ ಸಮೀಕರಣದಲ್ಲಿರುವ ಅನುಪಾತವನ್ನು ಮಾಕ್ ನಂಬರ್ (Mach Number) ಎಂದು ಕರೆಯುತ್ತಾರೆ. ಈ ಮಾಕ್ ನಂಬರ್ 1ಕ್ಕಿಂತಲೂ ಕಡಿಮೆ ಇದ್ದರೆ, ಅಂದರೆ ವಸ್ತುವಿನ ವೇಗ ಶಬ್ದದ ವೇಗಕ್ಕಿಂತಲೂ ಅತೀ ಕಡಿಮೆ ಇದ್ದರೆ ಅದನ್ನು ಸಬ್‌ಸಾನಿಕ್ ವೇಗ (Subsonic Speed) ಎಂದು ಕರೆಯುತ್ತಾರೆ. ಮಾಕ್ ನಂಬರ್ 1 ಇದ್ದರೆ, ಅಂದರೆ, ವಸ್ತುವಿನ ವೇಗ ಶಬ್ದದ ವೇಗದಷ್ಟೆ ಇದ್ದರೆ, ಅದನ್ನು ಟ್ರ್ಯಾನ್‌ಸಾನಿಕ್ ವೇಗ (Transonic Speed) ಎನ್ನುತ್ತಾರೆ. ಅದೇ ಮಾಕ್ ನಂಬರ್ 1ಕ್ಕಿಂತಲೂ ಹೆಚ್ಚಿದ್ದರೆ ಅದು ಸೂಪರ್‌ಸಾನಿಕ್ ವೇಗ (Supersonic Speed – ವಸ್ತುವಿನ ವೇಗ ಶಬ್ದದ ವೇಗಕ್ಕಿಂತಲೂ ಹೆಚ್ಚು). ಅಲ್ಲದೆ, ಮಾಕ್ ನಂಬರ್ 5ಕ್ಕಿಂತಲೂ ಹೆಚ್ಚಿದ್ದರೆ ಅದು ಹೈಪರ್‌ಸಾನಿಕ್ ವೇಗ- Hypersonic Speed. ಹೀಗೆ ವಸ್ತುವಿನ ವಿವಿಧ ವೇಗಗಳನ್ನು ಶಬ್ದದ ವೇಗಕ್ಕೆ ಹೋಲಿಸಿ ಮಾಕ್ ನಂಬರ್ ಮುಖಾಂತರ ಹೆಸರಿಸಬಹುದು.

ಸೂಪರ್‌ಸಾನಿಕ್ ಬೂಮ್

ಸಾಮಾನ್ಯವಾಗಿ ನಾವು ದಿನನಿತ್ಯ ನೋಡುವ ಸೈಕಲ್, ಬಸ್ಸು, ಕಾರು, ಆಟೋ ಹಾಗೂ ಇನ್ನುಳಿದ ವಾಹನಗಳೆಲ್ಲವೂ ಸಬ್‌ಸಾನಿಕ್ ವೇಗದಲ್ಲಿಯೇ ಚಲಿಸುವುದು. ಇದು ಸರ್ವೇಸಾಮಾನ್ಯ ಮತ್ತು ನಮಗೆ ದಿನನಿತ್ಯವೂ ಅನುಭವಕ್ಕೆ ಬರುವ ವೇಗ. ಆದರೆ, ಟ್ರ್ಯಾನ್‌ಸಾನಿಕ್ ಮತ್ತು ಸೂಪರ್‌ಸಾನಿಕ್ ವೇಗ ವಿಶೇಷವಾದ್ದು. 18ನೇ ಶತಮಾನದಲ್ಲಿ, ಇಷ್ಟು ವೇಗದಲ್ಲಿ ವಸ್ತುಗಳು (ಅಥವಾ ವಾಹನಗಳು) ಚಲಿಸಲು ಸಾಧ್ಯವೇ ಇಲ್ಲ ಎಂದೇ ನಂಬಲಾಗಿತ್ತು. ಆದರೆ, ಈಗ ಹಲವು ವಿಮಾನಗಳು ಟ್ರ್ಯಾನ್‌ಸಾನಿಕ್ ವೇಗದಲ್ಲಿ ಚಲಿಸಬಲ್ಲವು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿಮಾನಗಳು (ಸೂಪರ್‌ಸಾನಿಕ್ ಜೆಟ್) ಶಬ್ದದ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತವೆ!

ಶಬ್ದ ಚಲಿಸಲು ವಾತಾವರಣ ಅತ್ಯಗತ್ಯ. ಶಬ್ದವು ವಾತಾವರಣದಲ್ಲಿ ಕಂಪನಗಳ ಮೂಲಕ ಪಸರಿಸುತ್ತದೆ. ಈ ಕಂಪನಗಳು ವಾತಾವರಣದಲ್ಲಿ ಒತ್ತಡ (Compression) ಮತ್ತು ವಿರಳ (Rarefaction) ರಚನೆಯಲ್ಲಿ, ಶಬ್ದದ ವೇಗದಲ್ಲಿಯೇ ಚಲಿಸುತ್ತವೆ. ಒಂದು ವಿಮಾನ ಗಾಳಿಯಲ್ಲಿ ಚಲಿಸುತ್ತಿದ್ದರೆ, ವಿಮಾನದ ಮುಂದಿನ ಭಾಗವು ಗಾಳಿಯನ್ನು ನೂಕುತ್ತಿರುತ್ತದೆ, ಈ ಜಾಗದಲ್ಲಿ ಒತ್ತಡದ ತರಂಗಗಳು ಸೃಷ್ಟಿಯಾಗುತ್ತಿರುತ್ತದೆ. ಆದರೆ ವಿಮಾನದ ಹಿಂದಿನ ಭಾಗದಲ್ಲಿ, ಅದು ಗಾಳಿಯನ್ನು ನೂಕದಿರುವುದರಿಂದ ಮತ್ತು ಪ್ರತಿಕ್ಷಣವು ಆ ಜಾಗದಿಂದ ಮುಂದೆ ಚಲಿಸುತ್ತಿರುವುದರಿಂದ, ವಿರಳವಾದ ತರಂಗಗಳು ಸೃಷ್ಟಿಯಾಗುತ್ತಿರುತ್ತವೆ. ವಿಮಾನವು ಶಬ್ದದ ವೇಗಕ್ಕಿಂತಲೂ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರೆ, ಈ ಒತ್ತಡ ಮತ್ತು ವಿರಳ ತರಂಗಳೂ, ವಿಮಾನ ಚಲಿಸುವ ವಿರುದ್ಧ ದಿಕ್ಕಿಗೆ ಶಬ್ದದ ವೇಗದಲ್ಲಿಯೇ ಚಲಿಸುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ.

ಆದರೆ, ಯಾವ ವಿಮಾನ ಶಬ್ದದ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಚಲಿಸುತ್ತದೋ, ಆಗ ವಿಮಾನದ ಮುಂದಿನ ಭಾಗದಲ್ಲಿ ಅತೀ ಹೆಚ್ಚು ಒತ್ತಡ ತರಂಗಗಳು ಶೇಖರಣೆಯಾಗುತ್ತಾ ಹೋಗುತ್ತದೆ. ಏಕೆಂದರೆ, ವಿಮಾನದ ಅತೀ ವೇಗ ಈ ಒತ್ತಡ ತರಂಗಗಳ ಹೊರ ಹೋಗುವಿಕೆಯನ್ನು ತಡೆಯುತ್ತಿರುತ್ತದೆ. ಹೆಚ್ಚು ಹೆಚ್ಚು ಒತ್ತಡದ ತರಂಗಗಳ ಜೊತೆಗೂಡಿ, ಒಮ್ಮೆಲೆ ಒಂದು ದೊಡ್ಡ ಶಾಕ್‌ವೇವ್ ಆಗಿ ವಿಮಾನ ಚಲಿಸುವ ವಿರುದ್ಧ ದಿಕ್ಕಿನಲ್ಲಿ ಕೋನ್ ಅಕಾರದಲ್ಲಿ ಹೊರಹೊಮ್ಮುತ್ತದೆ. ಈ ಶಬ್ದದ ಕೋನ್ ಭೂಮಿಯ ಯಾವ ಯಾವ ಪ್ರದೇಶಕ್ಕೆ ಸ್ಪರ್ಶವಾಗುತ್ತದೋ ಆ ಪ್ರದೇಶದಲ್ಲೆಲ್ಲಾ ಅತೀ ದೊಡ್ಡದಾದ ಶಬ್ದ ಕೇಳಿಬರುತ್ತದೆ. ಅತೀ ಒತ್ತಡದ ಗಾಳಿಯು ಕ್ಷಣಕ್ಕೆ ಶಾಕ್‌ವೇವ್ ಆಗಿ ಪರಿವರ್ತನೆಗೊಂಡಾಗ ಉಂಟಾಗುವ ಶಬ್ದ ಇದು. ಈ ಶಾಕ್‌ವೇವ್‌ನ ಚಿತ್ರವನ್ನು ಸೂಪರ್‌ಸಾನಿಕ್ ಜೆಟ್‌ಗಳು ಸಂಚರಿಸುವಾಗ ಕ್ಯಾಮರಾದ ಸಹಾಯದಿಂದ ಸೆರೆ ಹಿಡಿಯಬಹುದು.

ಶಬ್ದ-ಕೋನ್‌ನಿಂದ ಹೊರಗಿರುವ ಪ್ರದೇಶಗಳಿಗೆ ಈ ಶಬ್ದವು ಕೇಳುವುದಿಲ್ಲ. ಅಲ್ಲದೆ, ವಿಮಾನ ಗಾಳಿಯಲ್ಲಿ ಎಷ್ಟೊತ್ತು ಶಬ್ದದ ವೇಗಕ್ಕಿಂತಲೂ ವೇಗವಾಗಿ ಚಲಿಸುತ್ತಿರುತ್ತದೋ, ಅಷ್ಟೂ ಸಮಯ ಇಂತಹ ದೊಡ್ಡ ಶಬ್ದ ಕೇಳುತ್ತಲೇ ಇರುತ್ತದೆ. ಇದನ್ನೇ ಸೂಪರ್‌ಸಾನಿಕ್ ಬೂಮ್ ಎಂದು ಕರೆಯುತ್ತಾರೆ. ಇದು ಗಾಳಿಯಲ್ಲಿ ಉಂಟಾಗುವ ಶಬ್ದವಾದುದರಿಂದ, ಭೂಕಂಪನ ಮಾಪಕಗಳು ಈ ಶಬ್ದವನ್ನು ಗ್ರಹಿಸುವುದಿಲ್ಲ. ಈ ಶಬ್ದವು ಯಾವುದೇ ಹಾನಿಯನ್ನು ಮಾಡುವುದಿಲ್ಲವಾದರೂ, ಜೋರಾದ ಬ್ಲಾಸ್ಟ್‌ನಂತೆ ಕೇಳುವುದಂತು ನಿಜ. ಒಮ್ಮೊಮ್ಮೆ ಮನೆಯ ಕಿಟಕಿ ಗಾಜುಗಳು ಒಡೆಯಬಹುದು ಹಾಗೂ ಸಡಿಲವಾಗಿ ತೂಗಿ ಹಾಕಿರುವ ವಸ್ತುಗಳು ಬೀಳಲೂಬಹುದು.

ಹೈಪರ್‌ಸಾನಿಕ್ ವೇಗ (Hypersonic Speed)

ವಸ್ತುಗಳು (ವಾಹನಗಳು) ಶಬ್ದಕ್ಕಿಂತಲೂ ಐದು ಪಟ್ಟು ವೇಗವಾಗಿ ಚಲಿಸಿದರೆ ಅದು ಹೈಪರ್‌ಸಾನಿಕ್ ವೇಗ. ಆದರೆ, ಅಷ್ಟು ವೇಗದಲ್ಲಿ ಚಲಿಸುವ ವಸ್ತು/ವಾಹನ ಇದೆಯಾ ಎಂದು ಪ್ರಶ್ನೆ ಕೇಳಿದರೆ, ಹೌದು ಇವೆ! ನಾಸಾ ಬಾಹ್ಯಾಕಾಶ ಸಂಸ್ಥೆಯ ಸ್ಪೇಸ್ ಶಟಲ್ ಆಥವಾ ಯಾವುದಾದರೂ Re-entry Space Modulesಗಳು, ಸ್ಪೇಸ್‌ನಿಂದ ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದಾಗ, ಅದರ ವೇಗ ಸರಿಸುಮಾರು 25 ಮಾಕ್ ನಂಬರ್‌ಗಳಾಗಿರುತ್ತವೆ. ಅಂದರೇ, ಶಬ್ದದ ವೇಗಕ್ಕಿಂತಲೂ 25 ಪಟ್ಟು ಹೆಚ್ಚು! ಇಷ್ಟು ವೇಗದಲ್ಲಿ ಸ್ಪೇಸ್ ಶಟಲ್‌ಗಳು ಬರುವಾಗ, ಶಟಲ್‌ನ ಹೊರ ಕವಚದ ಬಳಿ, ಗಾಳಿಯಲ್ಲಿರುವ ನೈಟ್ರೋಜನ್ ಮತ್ತು ಆಕ್ಸಿಜನ್ ಅಣುಗಳ ರಾಸಾಯನಿಕ ಬಂಧ (Chemical Bond) ಒಡೆದು, ಅನಿಲಗಳು ಅಯಾನ್‌ಗಳಾಗಿ, ಪ್ಲಾಸ್ಮಾ ಸ್ಥಿತಿಗೆ ತಲುಪುತ್ತವೆ. ಈ ಪ್ಲಾಸ್ಮಾ ಸ್ಥಿತಿಯು ಅತೀ ಹೆಚ್ಚು ತಾಪಮಾನವನ್ನು (ಸುಮಾರು 1600 ಡಿಗ್ರಿ ಸೆಲ್ಸಿಯಸ್) ಹೊಂದಿರುತ್ತದೆ. ಹಾಗಾಗಿ, ಸ್ಪೇಸ್ ಶಟಲ್ ಮತ್ತು Re-entry Space Moduleಗಳ ಹೊರ ಕವಚವನ್ನು ಅತೀಹೆಚ್ಚ ಶಾಖವನ್ನು ತಡೆಯುವ ವಸ್ತುಗಳಿಂದ ನಿರ್ಮಿಸಬೇಕಾಗಿರುತ್ತದೆ. 2003ರ ಕೊಲಂಬಿಯಾ ಸ್ಪೇಸ್ ಶಟಲ್ ನಿಮಗೆಲ್ಲ ನೆನಪಿರಬಹುದು. ಹೈಪರ್‌ಸಾನಿಕ್ ವೇಗದಲ್ಲಿ ವಾತಾವರಣಕ್ಕೆ ಪ್ರವೇಶಿಸಿದ ಶಟಲ್, ತನ್ನ Heat Shieldನಲ್ಲಿನ ಸಣ್ಣ ಸಮಸ್ಯೆಯಿಂದ, ಶಾಖವು ಶಟಲ್‌ಗೆ ಪ್ರವೇಶಿಸಿ, ಇಡೀ ಶಟಲ್ ನಾಶವಾಯಿತು. ಈ ಶಟಲ್‌ನಲ್ಲಿದ್ದ ಕಲ್ಪನಾ ಚಾವ್ಲಾ ಸೇರಿ, ಏಳು ಗಗನಯಾತ್ರಿಗಳು ತಮ್ಮ ಪ್ರಾಣ ಕಳೆದುಕೊಂಡರು. ಹಾಗಾಗಿ, ಹೈಪರ್‌ಸಾನಿಕ್ ವೇಗದ ಚಲನೆಗೆ, ಭೂಮಿಯ ವಾತಾವರಣದ ವಿಸ್ತೃತ ಅಧ್ಯಯನ, ಅದರ ಬದಲಾವಣೆಯ ವೇಗ ತಿಳಿಯುವುದು ಅತೀ ಮುಖ್ಯ.

ಹೌದು ಆ ದಿನ ಬೆಂಗಳೂರಿನ ಜನ ಕೇಳಿಸಿಕೊಂಡ ನಿಗೂಢ ಶಬ್ದ ಸೂಪರ್‌ಸಾನಿಕ ಬೂಮ್ ಆಗಿರಬಹುದು!

ಶುಕ್ರ ಮತ್ತು ಮಂಗಳನ ಸಮಾಗಮ

ಮಳೆಗಾಲದ ಆಕಾಶ ಮೋಡಗಳಿಂದ ಕೂಡಿರುತ್ತದೆ. ಒಂದೊಂದು ದಿನ ಆಕಾಶದಲ್ಲಿ ಸೂರ್ಯನನ್ನು ನೋಡುವುದೇ ಕಷ್ಟ. ಆದರೂ ಮೊಡಗಳೇನಾದರು ಸ್ವಲ್ಪ ಬಿಡುವು ಕೊಟ್ಟರೆ, ಜುಲೈ ತಿಂಗಳ ಆಗಸದ ಈ ವಿಶೇಷ ಘಟನೆಯನ್ನು ನೋಡಬಹುದು.

ಕಳೆದ ವರ್ಷ ಡಿಸೆಂಬರ್ 21ರಂದು ಸಂಜೆಯ ಆಕಾಶದಲ್ಲಿ ಶನಿ ಮತ್ತು ಗುರು ಗ್ರಹದ ಮಹಾಸಮಾಗಮವನ್ನು ನೋಡಿ ಕಣ್ತುಂಬಿಕೊಂಡೆವು. ಹಾಗೆಯೇ ಈ ಜುಲೈನಲ್ಲಿ ಶುಕ್ರ ಮತ್ತು ಮಂಗಳ ಗ್ರಹದ ಸಮಾಗಮವನ್ನು ಸಂಜೆಯ ಆಕಾಶದಲ್ಲಿ ನೋಡಬಹುದು. ಜುಲೈ 12ರ ಸಂಜೆಯಂದು, ಸೂರ್ಯ ಮುಳುಗಿದ ನಂತರ, ಪಶ್ಚಿಮ ದಿಕ್ಕಿನಲ್ಲಿ ಎರಡು ಪ್ರಕಾಶಮಾನವಾದ ಚುಕ್ಕಿಗಳು ಬಹಳ ಹತ್ತಿರದಲ್ಲಿರುವುದನ್ನ ಕಾಣಬಹುದು. ಇದು ಶುಕ್ರ ಮತ್ತು ಮಂಗಳ ಗ್ರಹ.

ಭೂಮಿಯ ಆಕಾಶದಲ್ಲಿ ಅಂದು ಈ ಗ್ರಹಗಳು ಜೋಡಿ ಚುಕ್ಕೆಗಳಾಗಿ ಬಹಳ ಹತ್ತಿರದಲ್ಲಿ ಕಾಣುತ್ತವೆ. ಇದನ್ನು ಬರಿಗಣ್ಣಿನಲ್ಲಿ, ಬೈನಾಕ್ಯೂಲರ್ ಅಥವಾ ಟೆಲಿಸ್ಕೋಪಿನಲ್ಲೂ ನೋಡಬಹುದು. ಜುಲೈ 12ರ ನಂತರವು ಪ್ರತಿದಿನ, ಶುಕ್ರ ಮತ್ತು ಮಂಗಳ ಗ್ರಹಗಳ ಮಧ್ಯದ ದೂರವನ್ನು ಈ ತಿಂಗಳು ಪೂರ್ತಿ ಗಮನಿಸುತ್ತಿರಿ. ನೀವು ಏನನ್ನು ಗಮನಿಸುತ್ತೀರೋ ಅದನ್ನು ಪಟ್ಟಿ ಮಾಡಿ.

ವಾಸ್ತವವಾಗಿ ಈ ಎರಡು ಗ್ರಹಗಳು ಬಹಳ ದೂರದಲ್ಲಿದ್ದರೂ, ಭೂಮಿಯಿಂದ ಕಂಡಾಗ ಮಾತ್ರ ಹತ್ತಿರದಲ್ಲಿರುವಂತೆ ಗೋಚರಿಸುತ್ತವೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ: ಆಗಸದ ಬಾಲಾಂಕೃತ ಅತಿಥಿಗಳು; ಹ್ಯಾಲಿ, ಶೂಮೇಕರ್ ಇತ್ಯಾದಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪರಿಷತ್ ಫಲಿತಾಂಶ ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರನ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ

0
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ...