ಸರ್ಕಾರ ಏರ್ಪಡಿಸುವ ಸಭೆ ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ ಹಣ್ಣಿನ ಬುಟ್ಟಿ ನಿಷೇಧದ ಆದೇಶವನ್ನು ಹಿಂತೆಗುಕೊಳ್ಳುವಂತೆ ಆಗ್ರಹಿಸಿ ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ಗುರುವಾರ (ಆಗಸ್ಟ್ 12) ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.
ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂದಕ್ಕೆ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ಗುರುವಾರ ಆಗಸ್ಟ್ 12 ರಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಜನರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ: ಡಿ.ಕೆ. ಶಿವಕುಮಾರ್
ರಾಜ್ಯ ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ನೀಡದೆ ಕನ್ನಡ ಪುಸ್ತಕಗಳನ್ನು ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶ ರಾಜ್ಯದ ಹೂ ಬೆಳೆಗಾರರು ಹಾಗೂ ರೈತರ ಮೇಲೆ ಗಧಾಪ್ರಹಾರ ವಾಗಿದೆ. ಈ ಆದೇಶವನ್ನು ತಕ್ಷಣ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲು ನಿರ್ಧರಿಸಲಾಗಿದೆ.
ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ ಅರವಿಂದ್, ನಿರ್ದೇಶಕರಾದ ಶ್ರೀಕಾಂತ್ ಬೆಲ್ಲಂಪಳ್ಳಿ, ರಾಜ್ಯದ ಎಲ್ಲಾ ಹೂ ಬೆಳೆಗಾರರು ಮತ್ತು ಮಾರಾಟಗಾರರ ಸಂಘಗಳ ನೇತೃತ್ವದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ಪುಷ್ಪ ಮಾರುಕಟ್ಟೆಯ ಎದುರು ಬೆಳಿಗ್ಗೆ 11.15 ಕ್ಕೆ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಪ್ರಕರಣೆಯಲ್ಲಿ ತಿಳಿಸಲಾಗಿದೆ.
ಇತ್ತ ಸರ್ಕಾರ ಹೊರಡಿಸಿರುವ ಆದೇಶದ ಬೆನ್ನಲ್ಲೇ ಬಿಬಿಎಂಪಿಯೂ ಇದೇ ಕ್ರಮವನ್ನು ಅನುಸರಿಸಿದೆ. ಇನ್ನು ಮುಂದೆ ನಡೆಯುವ ಸಭೆ ಸಮಾರಮಭಗಳಿಗೆ ಹಾರ, ತುರಾಯಿ, ಹಣ್ಣಿನ ಬುಟ್ಟಿ ನಿಷೇಧಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ: ಕಾಂಗ್ರೆಸ್ ಆಕ್ರೋಶ, ಕ್ಷಮೆ ಕೇಳಿದ ಈಶ್ವರಪ್ಪ


