ಈ ತಿಂಗಳ ಆರಂಭದಲ್ಲಿ ನೈರುತ್ಯ ದೆಹಲಿಯ ಕಂಟೋನ್ಮೆಂಟ್ ಬಳಿ ಒಂಬತ್ತು ವರ್ಷದ ದಲಿತ ಬಾಲಕಿ ಮೇಲೆ ನಡೆದಿದ್ದಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ವರದಿ ನೀಡಿರುವ ಪೊಲೀಸರು, ಬಾಲಕಿ ಮೇಲೆ ಅತ್ಯಾಚಾರ ನಡೆದಿದೆಯೇ ಎಂದು ಖಚಿತಪಡಿಸಲು ಯಾವುದೇ ಪುರಾವೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳ ಬಹಿರಂಗ ಹೇಳಿಕೆಗಳನ್ನು ಉಲ್ಲೇಖಿಸಿ, 55 ವರ್ಷದ ಸ್ಮಶಾನದ ಪೂಜಾರಿ ರಾಧೇ ಶ್ಯಾಮ್ ಮತ್ತು ಸ್ಮಶಾನದ ಉದ್ಯೋಗಿ ಕುಲದೀಪ್ ಸಿಂಗ್ ಇಬ್ಬರು ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪ್ರಕರಣದ ತನಿಖಾ ಅಧಿಕಾರಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಇತರ ಆರೋಪಿಗಳಾದ ಸಲೀಂ ಅಹ್ಮದ್ ಮತ್ತು ಲಕ್ಷ್ಮಿ ನಾರಾಯಣ್, ಇಬ್ಬರೂ ಸ್ಮಶಾನದಲ್ಲಿ ಉದ್ಯೋಗಿಗಳಾಗಿದ್ದು, ದಲಿತ ಬಾಲಕಿಯನ್ನು ಸುಡಲು ಅತ್ಯಾಚಾರ ಮಾಡಿದವರಿಗೆ ಸಹಾಯ ಮಾಡಿದ್ದಾರೆ ಎಂದು ಐಒ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ಆಕ್ರಂದನ ಕೇಳುತ್ತಿಲ್ಲವೇ? ದೆಹಲಿಯ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ
“ಮಗು ಅತ್ಯಾಚಾರಕ್ಕೊಳಗಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಯಾವುದೇ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಅಥವಾ ವೈದ್ಯಕೀಯ/ ವೈಜ್ಞಾನಿಕ ಸೇರಿದಂತೆ ಯಾವುದೇ ಪುರಾವೆಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಐಒ ಒಪ್ಪಿಕೊಂಡಿದ್ದಾರೆ. ಮಗು ಅತ್ಯಾಚಾರಕ್ಕೊಳಗಾಗಿದೆಯೋ ಇಲ್ಲವೋ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ”ಎಂದು ನ್ಯಾಯಾಲಯ ಆಗಸ್ಟ್ 12 ರಂದು ನೀಡಿದ ಆದೇಶದಲ್ಲಿ ಉಲ್ಲೇಖಿಸಿದೆ.
ಪೊಲೀಸರ ಮುಂದೆ ಆರೋಪಿಗಳು ನೀಡಿರುವ ಬಹಿರಂಗ ಹೇಳಿಕೆಗಳನ್ನು ಇತರ ಸಾಕ್ಷ್ಯಗಳು ಬೆಂಬಲಿಸದ ಹೊರತು, ಕಾನೂನಿನ ಅಡಿಯಲ್ಲಿ ಸ್ವೀಕಾರಾರ್ಹವಲ್ಲ.
ವಿಶೇಷ ನ್ಯಾಯಾಧೀಶ ಅಶುತೋಷ್ ಕುಮಾರ್, ಈ ಮಧ್ಯೆ, ಸಂತ್ರಸ್ತ ಮಗುವಿನ ತಾಯಿಗೆ 2.5 ಲಕ್ಷ ರೂಪಾಯಿಗಳನ್ನು “ಮಧ್ಯಂತರ ಪರಿಹಾರ” ಎಂದು ಘೋಷಿಸಿದ್ದಾರೆ.
ನ್ಯಾಯಾಲಯವು ನಾಲ್ವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಎಫ್ಐಆರ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮತ್ತು ನಂತರ ಆಕೆಯ ಪೋಷಕರ ಒಪ್ಪಿಗೆಯಿಲ್ಲದೆ ಅಂತ್ಯ ಸಂಸ್ಕಾರ ಮಾಡಿರುವ ದೂರಿದೆ.
ಆಗಸ್ಟ್ 1 ರಂದು ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ, ಕುಟುಂಬದ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಕುರಿತು ಬಾಲಕಿಯ ತಾಯಿಯ ಹೇಳಿಕೆಯ ಆಧಾರದ ಮೇಲೆ ದೆಹಲಿ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ಅಪರಾಧ ಸಂಹಿತೆಯ “ಕೊಲೆ”, “ಅತ್ಯಾಚಾರ” ಮತ್ತು “ಕ್ರಿಮಿನಲ್ ಬೆದರಿಕೆ”, ಪೋಕ್ಸೊ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ


