ಫಿರೋಜಾಬಾದ್‌ನಲ್ಲಿ ಸುಮಾರು 40 ಮಂದಿ, ಅದರಲ್ಲೂ ಹೆಚ್ಚಾಗಿ ಮಕ್ಕಳು ನಿಗೂಢ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಗರಕ್ಕೆ ಭೇಟಿ ನೀಡಿದ್ದಾರೆ. ಮಥುರಾಗೆ ಹೋಗುವ ದಾರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದಾರೆ.
“ಇದುವರೆಗೆ 32 ಮಕ್ಕಳು ಮತ್ತು 7 ವಯಸ್ಕರು ಸಾವನ್ನಪ್ಪಿದ್ದಾರೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಗೂ ಸರಿಯಾದ ಚಿಕಿತ್ಸೆ ಸಿಗುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಆದಿತ್ಯನಾಥ್, ಇಷ್ಟು ಜನರ ಸಾವಿನ ಕಾರಣವಾದ ನಿಗೂಢ ರೋಗದ ಬಗ್ಗೆ ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನ ವೈದ್ಯರ ತಂಡವು ತನಿಖೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಿಂದ ರೋಗಿಗಳನ್ನು ಕರೆತರಲು ಹೆಚ್ಚಿನ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಸುದಾಮ ನಗರಕ್ಕೂ ಸಿಎಂ ಆದಿತ್ಯನಾಥ್ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಬೃಹತ್ ಪಾದಯಾತ್ರೆ ಆರಂಭಿಸಿದ ಬಿಜೆಪಿ: ಕೋವಿಡ್ ಉಲ್ಬಣದ ಆತಂಕ!
ಸ್ಥಳೀಯ ವರದಿಗಳ ಪ್ರಕಾರ ಈ ನಿಗೂಢ ರೋಗಕ್ಕೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಿರಬಹುದು ಎಂದು ಹೇಳುತ್ತಿವೆ. ಜೊತೆಗೆ ಖಾಸಗಿ ವೈದ್ಯಕೀಯ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಇದೆ ಎಂದು ತಿಳಿಸಿವೆ.
ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 200 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ವೈದ್ಯಕೀಯ ಆಸ್ಪತ್ರೆಯ (ಸ್ವಾಯತ್ತ) ಪ್ರಿನ್ಸಿಪಾಲ್ ಮತ್ತು ಡೀನ್ ಡಾ.ಸಂಗೀತಾ ಅನೀಜಾ ಹೇಳಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲ ರೋಗಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಳು ನೆಗೆಟಿವ್ ಇದೆ ಎಂದು ಹೇಳಿದ್ದಾರೆ.
“ಕಳೆದ ಐದು ದಿನಗಳಲ್ಲಿ ಈ ಪ್ರಕರಣಗಳು ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಸೋಂಕಿತರಲ್ಲಿ 90% ಮಕ್ಕಳು. ಅವರಲ್ಲಿ ಹಲವರು ಡೆಂಗ್ಯೂಗೆ ಒಳಗಾಗಿದ್ದಾರೆ. ಆದರೆ ಇತರರ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಅವರು ಡೆಂಗ್ಯೂಗೆ ಒಳಗಾಗಿಲ್ಲ” ಎಂದಿದ್ದಾರೆ ಎಂದು ದಿ ಹಿಂದೂ ಉಲ್ಲೇಖಿಸಿದೆ.
ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಅಧಿಕ ಜ್ವರ, ಅತಿಸಾರ ಮತ್ತು ವಾಂತಿ ಸಾಮಾನ್ಯ ಲಕ್ಷಣಗಳಾಗಿವೆ. ಲಕ್ನೋದ ತನಿಖ ತಂಡ ನಮ್ಮೊಂದಿಗಿದೆ. ಅವರು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ನೆರೆಯ ಆಗ್ರಾ ಮತ್ತು ಮಥುರಾದಿಂದಲೂ ಇದೇ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ ಎಂದು ಡಾ.ಅನೆಜಾ ಹೇಳಿದ್ದಾರೆ.
ಸದ್ಯ 1 ರಿಂದ 8 ನೇ ತರಗತಿಯವರೆಗೆ ತರಗತಿಗಳನ್ನು ಒಂದು ವಾರ ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ.
ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್‌ರನ್ನು ಬಿಜೆಪಿ ನಾಯಕರು ಅತಿಯಾಗಿ ಪ್ರಶಂಸಿಸುತ್ತಿರುವುದಕ್ಕೆ ಕಾರಣ ಇದು


