ರಾಜ್ಯದ ಪ್ರಮುಖ ದಿನ ಪತ್ರಿಕೆಯಾಗಿರುವ ‘ವಾರ್ತಾಭಾರತಿ’ ಗೆ ರಾಜ್ಯ ಸರ್ಕಾರ ತನ್ನ ಸರ್ಕಾರಿ ಜಾಹಿರಾತುಗಳನ್ನು ನೀಡದೆ ಇರುವುದು ಇದೀಗ ವಿವಾದವಾಗಿ ಮಾರ್ಪಟ್ಟಿದೆ. ವಾರ್ತಾಇಲಾಖೆಯ ಆಯುಕ್ತರಾಗಿರುವ ಡಾ.ಪಿ.ಎಸ್. ಹರ್ಷ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಅವರು ಪತ್ರಿಕೆಯ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡಾ ಪತ್ರಿಕೆಯೊಂದಕ್ಕೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದಾರೆ.
ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, “ವಾರ್ತಾಭಾರತಿ ಪತ್ರಿಕೆಗೆ ಒಂದು ವರ್ಷದಿಂದ ಸುಮಾರು 1 ಕೋಟಿಗೂ ಹೆಚ್ಚಿನ ಮೌಲ್ಯದ ಜಾಹಿರಾತುಗಳನ್ನು ನೀಡದೆ ವಂಚಿಸಿ, ಪಕ್ಷಪಾತ ಮಾಡಲಾಗಿದೆ. ಇದು ಅಕ್ಷಮ್ಯಕರ ನಿಲುವು” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ‘ವಾರ್ತಾಭಾರತಿ’ ಪತ್ರಿಕೆಗೆ ಜಾಹೀರಾತು ನೀಡದ ವಾರ್ತಾ ಇಲಾಖೆ- ಮಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಡಾ. ಪಿ.ಎಸ್. ಹರ್ಷ ಕೈವಾಡ?
ಸಿದ್ದರಾಮಯ್ಯ ಅವರು ತನ್ನ ಪತ್ರದಲ್ಲಿ, “ಕರ್ನಾಟಕದಲ್ಲಿ ನೈಜ ಸ್ಫೂರ್ತಿಯಲ್ಲಿ ಪತ್ರಿಕಾ ವೃತ್ತಿಯನ್ನು ನಿರ್ವಹಿಸುತ್ತಿರುವ ಮಾಧ್ಯಮಗಳಲ್ಲಿ ‘ವಾರ್ತಾಭಾರತಿ’ ಕೂಡ ಒಂದು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗಗಳಿಗೆ ಭಾರತದ ಸಂವಿಧಾನದ ಆಶಯಗಳೆ ಆತ್ಯಂತಿಕವಾಗಿವೆ. ನಮ್ಮ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡುವವರೆಲ್ಲರೂ ನೈಜ ಸ್ಫೂರ್ತಿಯಿಂದ ಕೆಲಸ ಮಾಡುತ್ತಿದ್ದಾರೆಂದು ಅರ್ಥ” ಎಂದು ಹೇಳಿದ್ದಾರೆ.
“ಈ ನಾಲ್ಕೂ ಅಂಗಗಳು ತಮಗೆ ನಿರ್ಧಿಷ್ಟ ಪಡಿಸಿದ ಚೌಕಟ್ಟುಗಳಲ್ಲೆ ಕೆಲಸ ಮಾಡಬೇಕು. ಹಾಗೆ ಒಂದು ಚೌಕಟ್ಟನ್ನು ವಿಧಿಸಿಕೊಂಡು ಕೆಲಸ ಮಾಡುತ್ತಿರುವ ಪತ್ರಿಕೆಗಳಲ್ಲಿ ವಾರ್ತಾಭಾರತಿ ಕೂಡ ಒಂದು. ನಾನದರ ಓದುಗ ಆಗಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

“ಕಳೆದ ಮೂರು ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರವು ‘ನ್ಯೂಸ್ ಪ್ರಿಂಟ್’ನ ಜಿಲೆ ವಿಪರೀತ ಹೆಚ್ಚಿಸಿದೆ. ಜಿಎಸ್‌ಟಿಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ದೊಡ್ಡ ದೊಡ್ಡ ಪತ್ರಿಕೆಗಳು ಕೂಡ ದಿನ ನಿತ್ಯದ ಚಟುವಟಿಕೆಗಳನ್ನು ನಡೆಸಲೂ ಆಗದಷ್ಟು ಸುಸ್ತಾಗುತ್ತಿವೆ. ಇದರಿಂದಾಗಿ ಲೆಕ್ಕವಿಲ್ಲದಷ್ಟು ಪತ್ರಕರ್ತರನ್ನು ಕೆಲಸದಿಂದ ತೆಗೆದು ಹಾಕಿವೆ. ಅನೇಕ ಪತ್ರಿಕೆಗಳು ಸಾಲ ತಗೆದು, ಆಸ್ತಿ ಪಾಸ್ತಿಗಳನ್ನು ಮಾರಿ ನಿರ್ವಹಣೆ ಮಾಡುತ್ತಿವೆ” ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
“ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಮಾಧ್ಯಮಗಳು ಉಳಿಯಬೇಕು. ಕೇಂದ್ರ ಸರ್ಕಾರಕ್ಕೆ ಈ ಕುರಿತು ಕಾಳಜಿಗಳಿದ್ದರೆ ನ್ಯೂಸ್ ಪ್ರಿಂಟ್‌ನ ಬೆಲೆಯನ್ನು ಇಳಿಸಬೇಕು. ಅತಿ ಕಡಿಮೆ ದರದಲ್ಲಿ ಪತ್ರಿಕೆಗಳಿಗೆ ಪೂರೈಸಬೇಕು. ಇಂಥ ಸಂದರ್ಭದಲ್ಲಿ ಪತ್ರಿಕೆಗಳು ಸರ್ಕಾರವು ನೀಡುವ ಜಾಹಿರಾತುಗಳ ಮೇಲೆ ಅವಲಂಬಿತವಾಗುತ್ತವೆ. ಸರ್ಕಾರವು ನಿಷ್ಟಕ್ರಪಾತವಾಗಿ ಜಾಹಿರಾತುಗಳನ್ನು ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು ಶಿಕ್ಷೆ ಖಾಯಂ
“ನಮ್ಮ ಸರ್ಕಾರದ ಅವಧಿಯಲ್ಲಿ ಹೊಸದಿಗಂತದಂತಹ ಪತ್ರಿಕೆಗಳಿಗೆ ಕೂಡ ಉಳಿದ ಪತ್ರಿಕೆಗಳಿಗೆ ನೀಡಿದ ಪ್ರಮಾಣದಲ್ಲೆ ಜಾಹಿರಾತುಗಳನ್ನು ನೀಡಿದ್ದೆವು. ಜನರ ತೆರಿಗೆ ಹಣದಲ್ಲಿ ಸರ್ಕಾರ ನಡೆಸುವಾಗ ಸರ್ಕಾರಗಳು ಪಕ್ಷಪಾತ ಮಾಡದಂತೆ ಎಚ್ಚರವಹಿಸಬೇಕಾಗುತ್ತದೆ. ಕನ್ನಡದ 9 ದಿನಪತ್ರಿಕೆಗಳನ್ನು ರಾಜ್ಯ ಪತ್ರಿಕೆಗಳಂದು ಗುರುತಿಸಲಾಗಿದೆ. ಅದರಲ್ಲಿ ವಾರ್ತಾಭಾರತಿ ಕೂಡ ಒಂದು. ಆದರೆ ಸರ್ಕಾರವು ಪಕ್ಷಪಾತ ಮಾಡಿ ಕಳೆದ ಒಂದು ವರ್ಷದಿಂದ ಸುಮಾರು 1 ಕೋಟಿಗೂ ಹೆಚ್ಚಿನ ಮೌಲ್ಯದ ಜಾಹಿರಾತುಗಳನ್ನು ನೀಡದೆ ವಂಚಿಸಿ, ಪಕ್ಷಪಾತ ಮಾಡಲಾಗಿದೆ. ಇದು ಅಕ್ಷಮ್ಯಕರ ನಿಲುವು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪತ್ರಿಕೆಗಳ ಕೆಲಸವೆ ಆಡಳಿತ ನಡೆಸುವ ಸರ್ಕಾರಗಳ ಮುಖಕ್ಕೆ ಕನ್ನಡಿ ಹಿಡಿಯುವುದು. ಸರಿಯಾದ ಕೆಲಸ ಮಾಡಿದರೆ ಬೆನ್ನುತಟ್ಟುವುದು, ತಪ್ಪು ಮಾಡಿದರೆ ತಪ್ಪು ಮಾಡುತ್ತಿದ್ದೀರೆಂದು ಹೇಳಬೇಕಾದುದು ಮಾಧ್ಯಮಗಳ ನೈತಿಕ ಜವಾಬ್ದಾರಿ. ಈ ನಿಲುವಿಗೆ ವಿರುದ್ಧವಾದರೆ ಅದನ್ನು ಅನೈತಿಕ ಪತ್ರಿಕೋದ್ಯಮ ಎನ್ನಬೇಕಾಗುತ್ತದೆ. ನೈತಿಕ ಪತ್ರಿಕೋದ್ಯಮವನ್ನು ಆರೋಗ್ಯಕರ ಮನಸ್ಸುಗಳು ಬೆಂಬಲಿಸಬೇಕು, ಪ್ರೋತ್ಸಾಹಿಸಬೇಕು” ಎಂದು ಅವರು ತಿಳಿಸಿದ್ದಾರೆ.
“ಆದ್ದರಿಂದ ಸರ್ಕಾರವು ವಾರ್ತಾಭಾರತಿಗೆ ಮಾಡಿರುವ ಅನ್ಯಾಯವನ್ನು ಕೂಡಲೆ ಸರಿಪಡಿಸಿ ಇದುವರೆಗೆ ತಡೆಹಿಡಿದಿರುವ ಮೌಲ್ಯದಷ್ಟು ಜಾಹಿರಾತುಗಳನ್ನು ನೀಡಬೇಕು. ಅಲ್ಲದೆ ಇನ್ನು ಮುಂದೆ ಸರ್ಕಾರ ನೀಡುವ ಜಾಹಿರಾತುಗಳನ್ನು ತಾರತಮ್ಯವಿಲ್ಲದೆ ಬಿಡುಗಡೆ ಮಾಡಬೇಕು” ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪರ ಪ್ರಚಾರ: 8 ಪತ್ರಿಕೆಗಳಿಗೆ ಚುನಾವಣಾ ಆಯೋಗ ನೋಟಿಸ್



That’s true … Varthabarathi is a great paper, reports ground reality as it is. It’s unjust from PS Harsha take personal revenge.
Change this biased officer if he is found guilty.
We need media/newspaper which is genuine and reports the reality of the world.