‘ವಾರ್ತಾಭಾರತಿ’ ಪತ್ರಿಕೆಗೆ ಜಾಹೀರಾತು ನೀಡದ ವಾರ್ತಾ ಇಲಾಖೆ- ಡಾ. ಪಿ.ಎಸ್‌. ಹರ್ಷ ಕೈವಾಡ? | NaanuGauriಡದ ವಾರ್ತಾ ಇಲಾಖೆ- ಮಂಗಳೂರಿನ ಮಾಜಿ ಪೊಲೀಸ್ ಕಮೀಷನರ್‌ ಡಾ. ಪಿ.ಎಸ್‌. ಹರ್ಷ ಕೈವಾಡ?

ವಾರ್ತಾ ಇಲಾಖೆಯ ಅಧಿಕಾರಿಗಳು ರಾಜ್ಯದ ಪ್ರಮುಖ ಪತ್ರಿಕೆಯಾದ ವಾರ್ತಾಭಾರತಿ ಪತ್ರಿಕೆಗೆ ಜಾಹೀರಾತು ನೀಡದೆ ಜನತಂತ್ರವನ್ನು ಹತ್ತಿಕ್ಕುವ ಮತ್ತು ಮಾಧ್ಯಮದ ಧ್ವನಿಯನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸೋಮವಾರ ಪತ್ರ ಬರೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲು ಮತ್ತು ಮಾಧ್ಯಮ ವಿರೋಧಿ ನೀತಿಯನ್ನು ತಡೆಯಲು ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.

ರಮೇಶ್‌ ಬಾಬು ಅವರು ಬರೆದಿರುವ ಪತ್ರದಲ್ಲಿ, “ವಾರ್ತಾ ಇಲಾಖೆಯು ನಿಯಮಾನುಸಾರ 9 ಕನ್ನಡ ದಿನಪತ್ರಿಕೆಗಳನ್ನು ರಾಜ್ಯ ಮಟ್ಟದ ದಿನಪತ್ರಿಕೆಗಳೆಂದು ಅಧಿಕೃತವಾಗಿ ಪಟ್ಟಿ ಮಾಡಿರುತ್ತದೆ. ಈ ಪತ್ರಿಕೆಗಳಿಗೆ ದರಪಟ್ಟಿಗೆ ಅನುಗುಣವಾಗಿ ವಾರ್ತಾ ಇಲಾಖೆಯು ಸರ್ಕಾರದ ಜಾಹೀರಾತುಗಳನ್ನು ಯಾವುದೇ ರಾಜಕೀಯ ಒತ್ತಡ ಅಥವಾ ಅಪೇಕ್ಷಿತ ಲಾಭ ಇಲ್ಲದೆ ಬಿಡುಗಡೆ ಮಾಡಬೇಕು. ಜಾಹೀರಾತು ಹಂಚಿಕೆಯಲ್ಲಿ ವಾರ್ತಾ ಇಲಾಖೆ ಪಕ್ಷಪಾತ ಎಸಗಿದರೆ, ಸರ್ಕಾರ ಇದನ್ನು ಸರಿಪಡಿಸುವ ಹೊಣೆಗಾರಿಕೆ ಹೊರಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

“ಪಕ್ಷ ರಾಜಕಾರಣಕ್ಕೆ ಅನುಕೂಲ ಆಗುವ ರೀತಿಯಲ್ಲಿ ವಾರ್ತಾ ಇಲಾಖೆಯು ಸರ್ಕಾರದ ಜಾಹೀರಾತನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ. ವಾರ್ತಾ ಇಲಾಖೆಯ ಅಧಿಕಾರಿಗಳು ಪಕ್ಷ ರಾಜಕಾರಣದಿಂದ ಹೊರತಾಗಿ ಸರ್ಕಾರಿ ಕರ್ತವ್ಯವನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಯಾವುದೇ ಸರ್ಕಾರಿ ಅಧಿಕಾರಿ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ರಾಜಕೀಯ ಪ್ರೇರಿತವಾಗಿ ವರ್ತಿಸಿದರೆ, ಅಂತವರ ವಿರುದ್ಧ ನಾಗರೀಕ ಸೇವಾನಿಯಮಗಳ ಅನ್ವಯ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಅವರು ನೆನಪಿಸಿದ್ದಾರೆ.

“ಸೋಮವಾರ ರಾಜ್ಯ ಸರ್ಕಾರದ ಪರವಾಗಿ ವಾರ್ತಾ ಇಲಾಖೆಯು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕನ್ನಡ ದಿನಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತನ್ನು ಕನ್ನಡದ ಪ್ರಮುಖ ದಿನಪತ್ರಿಕೆಯಾದ ವಾರ್ತಾಭಾರತಿ ಪತ್ರಿಕೆಗೆ ನೀಡಿಲ್ಲ. ಇದರ ಹಿಂದೆ ವಾರ್ತಾ ಇಲಾಖೆಯ ಅಧಿಕಾರಿಗಳ ದುರುದ್ದೇಶವಿದ್ದು, ಒಂದು ಪತ್ರಿಕೆಯನ್ನು ಜಾಹೀರಾತಿನಿಂದ ಹೊರತುಪಡೆಸುವ ಕ್ರಮ ಕಾನೂನುಬಾಹಿರವಾಗಿದೆ, ಈ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ. ಒಂದು ಪತ್ರಿಕೆಗೆ ಜಾಹೀರಾತು ತಡೆಯುವ ಮೂಲಕ ವಾರ್ತಾ ಇಲಾಖೆಯ ಅಧಿಕಾರಿಗಳು ಜನತಂತ್ರವನ್ನು ಹತ್ತಿಕ್ಕುವ ಮತ್ತು ಮಾಧ್ಯಮದ ಧ್ವನಿಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ವಾರ್ತಾಭಾರತಿಗೆ ಜಾಹಿರಾತು ನೀಡದೆ ಇರುವುದು ಇದೇ ಮೊದಲಲ್ಲ!

ಕರ್ನಾಟಕದ ವಾರ್ತಾ ಇಲಾಖೆಯ ಪಟ್ಟಿಯ ಪ್ರಕಾರ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ವಿಶ್ವವಾಣಿ, ಉದಯವಾಣಿ, ಹೊಸ ದಿಗಂತ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ವಾರ್ತಾಭಾರತಿ ಪತ್ರಿಕೆಗಳು ರಾಜ್ಯ ಮಟ್ಟದ ಪತ್ರಿಕೆಗಳು ಎಂದು ಗುರುತಿಸಲ್ಪಟ್ಟಿವೆ. ಇದರ ಅರ್ಥ ರಾಜ್ಯ ಸರಕಾರ ಬಿಡುಗಡೆ ಮಾಡುವ ಎಲ್ಲ ಪ್ರಮುಖ ಜಾಹೀರಾತುಗಳನ್ನು ಪಡೆಯಲು ಈ ಪತ್ರಿಕೆಗಳು ಅರ್ಹವಾಗಿದೆ. ಆದರೆ ಸೋಮವಾರ (16 ಆಗಸ್ಟ್ 2021)ದಂದು ವಾರ್ತಾ ಇಲಾಖೆಯು ವಾರ್ತಾಭಾರತಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಪತ್ರಿಕೆಗಳಿಗೆ ಜಾಹೀರಾತು ನೀಡಿದೆ.

ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು ಶಿಕ್ಷೆ ಖಾಯಂ

ವಾರ್ತಾ ಇಲಾಖೆಯು ವಾರ್ತಾಭಾರತಿ ಪತ್ರಿಕೆಯೊಂದಿಗೆ ಈ ಹಿಂದೆ ಕೂಡಾ ಇದೇ ರೀತಿಯಲ್ಲಿ ನಡೆದುಕೊಂಡಿತ್ತು. ಜುಲೈ 26 ರಂದು ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರ್ತಿಯಾದಾಗ ರಾಜ್ಯ ಮಟ್ಟದ ಎಲ್ಲಾ ಪತ್ರಿಕೆಗೆ ಜಾಹೀರಾತು ನೀಡಲಾಗಿತ್ತು. ಆದರೆ ವಾರ್ತಾಭಾರತಿ ದಿನಪತ್ರಿಕೆಗೆ ಮಾತ್ರ ಜಾಹೀರಾತು ನೀಡಿರಲಿಲ್ಲ.

ವಾರ್ತಾ ಇಲಾಖೆ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ?

ಈ ಹಿಂದೆ ಮಂಗಳೂರಿನ ಕಮಿಷನರ್‌ ಆಗಿದ್ದ ಡಾ. ಪಿ.ಎಸ್‌. ಹರ್ಷ ಅವರು ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿದ್ದಾರೆ. ಸಿಎಎ ಹೋರಾಟದ ಸಮಯದಲ್ಲಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಪ್ರಕರಣದಲ್ಲಿ ಅವರ ಕೈವಾಡವಿದೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬಂದಿತ್ತು. ಇದರ ನಂತರ ಅವರು ವಾರ್ತಾ ಇಲಾಖೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದರು.

ಅವರು ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿದ ನಂತರ ವಾರ್ತಾಭಾರತಿಗೆ ಸರ್ಕಾರಿ ಜಾಹೀರಾತುಗಳು ನೀಡುವುದು ಕಡಿಮೆಗೊಳ್ಳುತ್ತಲೆ ಬಂದಿದೆ ಎನ್ನಲಾಗಿದೆ. ಆದರೆ ಇದೀಗ ವಾರ್ತಾ ಇಲಾಖೆಯು ಶೂನ್ಯ ಜಾಹೀರಾತು ವಾರ್ತಾಭಾರತಿಗೆ ನೀಡಿ ಪತ್ರಿಕಾ ಸ್ವಾತಂತ್ಯ್ರ ಹರಣ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇದನ್ನೂ ಓದಿ: ಬಿಜೆಪಿ ಪರ ಪ್ರಚಾರ: 8 ಪತ್ರಿಕೆಗಳಿಗೆ ಚುನಾವಣಾ ಆಯೋಗ ನೋಟಿಸ್

ಕರಾವಳಿ ಮೂಲದ ವಾರ್ತಾಭಾರತಿ ಪತ್ರಿಕೆಯು ಮಂಗಳೂರು ಗೋಲಿಬಾರ್‌ ವಿವಾದದ ಬಗ್ಗೆ ದಿಟ್ಟವಾಗಿ ವರದಿ ಮಾಡಿತ್ತು. ಈ ದ್ವೇಷವನ್ನು ಪ್ರಸ್ತುತ ವಾರ್ತಾ ಇಲಾಖೆಯ ಆಯುಕ್ತರಾಗಿರುವ ಹರ್ಷ ಅವರು ತೀರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಾರ್ತಾಭಾರತಿಗೆ ಜಾಹೀರಾತು ನೀಡದಂತೆ ಅವರ ಪ್ರಭಾವ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಡಾ.ಪಿಎಸ್‌ ಹರ್ಷ ಅವರನ್ನು ಸಂಪರ್ಕಿಸಲು ನಾನುಗೌರಿ.ಕಾಂ ಪ್ರಯತ್ನಿಸಿತು, ಆದರೆ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕು ಪ್ರತಿಕ್ರಿಯೆ ನೀಡಿದ ಕೂಡಲೆ ಅವರ ಹೇಳಿಕೆಯನ್ನು ಇಲ್ಲಿ ಅಪ್‌ಡೇಟ್‌ ಮಾಡಲಾಗುವುದು.

ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಪಿ. ಮುರಳೀಧರ್ ಅವರಿಗೂ ನಾನುಗೌರಿ.ಕಾಂ ಕರೆ ಮಾಡಿದ್ದು, ಅವರು ಕೂಡಾ ಕರೆಯನ್ನು ಸ್ವೀಕರಿಸಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕ ಕೂಡಲೆ ಅವರ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗುವುದು.

ಇದನ್ನೂ ಓದಿ: ಬಿಜೆಪಿಯ ಜಾಹೀರಾತಿನಲ್ಲಿ ಸಿಕ್ಕ ಮನೆ ಪತ್ರಿಕೆಗೆ ಮಾತ್ರ ಸೀಮಿತ- ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿರುವ ಮಹಿಳೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here