Homeಮುಖಪುಟ’ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ-1961’ಗೆ ತಿದ್ದುಪಡಿ; ಠೇವಣಿದಾರರಿಗೆ ಬೇಕು ಇನ್ನಷ್ಟು ಭದ್ರತೆ

’ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ-1961’ಗೆ ತಿದ್ದುಪಡಿ; ಠೇವಣಿದಾರರಿಗೆ ಬೇಕು ಇನ್ನಷ್ಟು ಭದ್ರತೆ

- Advertisement -
- Advertisement -

ಠೇವಣಿದಾರರಿಗೆ ಹೆಚ್ಚಿನ ಪರಿಹಾರ ಒದಗಿಸುವ ದೃಷ್ಟಿಯಿಂದ ಕಳೆದ ವಾರವಷ್ಟೇ ಭಾರತ ಸರ್ಕಾರದ ಸಚಿವ ಸಂಪುಟ “ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ-1961″ಗೆ ತಿದ್ದುಪಡಿ ತಂದು, ಬ್ಯಾಂಕು ಮುಚ್ಚುವ ಸಂದರ್ಭ ಬಂದಾಗಲೂ 90 ದಿನಗಳ ಕಾಲಮಿತಿಯಲ್ಲಿ ಠೇವಣಿದಾರರ ಮೊತ್ತವನ್ನು (ಗರಿಷ್ಠ ರೂ. 5 ಲಕ್ಷ ಮಾತ್ರ) ಪಾವತಿಸಬೇಕು ಎನ್ನುವ ತೀರ್ಮಾನ ಕೈಗೊಂಡಿದೆ (ಸಂಪಾದಕೀಯ, ಪ್ರ.ವಾ. ದಿ.4.8.2021). ಈ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಪೆಗಸಸ್ ಗದ್ದಲದ ನಡುವೆಯೂ ಅಂಗೀಕಾರಗೊಂಡಿದೆ. ಇದು ’ಎಂಟು ವರ್ಷಕ್ಕೆ ನನ್ನ ಮಗ ದಂಟು ಅಂದ’ ಎನ್ನುವ ಮಾತಿನಂತಿದ್ದರೂ ಸ್ವಾಗತಿಸಬೇಕಿದೆ. ಸ್ವತಂತ್ರ ಬಂದು ಏಳು ದಶಕಗಳು ಕಳೆದರೂ, ಮನಮೋಹನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞ ಹತ್ತು ವರ್ಷಗಳ ಕಾಲ ಈ ದೇಶದ ಪ್ರಧಾನ ಮಂತ್ರಿಯಾಗಿದ್ದರೂ ದೇಶದ ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಗ್ರಾಹಕರಿಗೆ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿರುವುದು ನಿಜ. ಇದು ಬ್ಯಾಂಕುಗಳು ಮತ್ತು ಠೇವಣಿದಾರರಿಬ್ಬರ ಹಿತದೃಷ್ಟಿಯಿಂದ ದೊಡ್ಡ ಹಿನ್ನಡೆಯೇ ಸರಿ.

ಯಾವುದೇ ದೇಶವೊಂದು ತನ್ನ ಆರ್ಥಿಕ ವಲಯದಲ್ಲಿನ ಬ್ಯಾಂಕುಗಳ ಠೇವಣಿದಾರರಿಗೆ ಕೊಡುವ ಠೇವಣಿ ಭದ್ರತೆ ಎಂದರೆ, ಅದು ಅಲ್ಲಿನ ಆಂತರಿಕ ಬಂಡವಾಳ ಕ್ರೋಢೀಕರಣಕ್ಕೆ ನೀಡುವ ಪ್ರೇರಣೆ ಅಷ್ಟೇ ಅಲ್ಲ, ಬ್ಯಾಂಕುಗಳ ಬಗೆಗಿನ ಗ್ರಾಹಕರ ನಂಬುಗೆಯ ಖಾತ್ರಿ ಕೂಡ. ಭವಿಷ್ಯದ ಭರವಸೆಯ ಬದುಕಿಗಾಗಿ ಕಷ್ಟಪಟ್ಟು ಗಳಿಸಿದ ಅಷ್ಟೋ ಇಷ್ಟೋ ಹಣವನ್ನು ಇಡುಗಂಟಾಗಿ ಬ್ಯಾಂಕಿನಲ್ಲಿ ಠೇವಣಿ ಇರಿಸುವ ಮೂಲಕ ಪಡೆಯುವ ಬಡ್ಡಿಯೇ ಬಹುಸಂಖ್ಯಾತ ಗ್ರಾಹಕರ ಸ್ವಾಭಿಮಾನದ ಬದುಕು. ಆತಂಕರಹಿತ ಹೂಡಿಕೆಯ ದಾರಿ. ಅದರಲ್ಲೂ ವೃತ್ತಿ, ಉದ್ಯೋಗಗಳಿಂದ ನಿವೃತ್ತರಾಗಿ ಜೀವನದ ಸಂಧ್ಯಾಕಾಲದಲ್ಲಿರುವವರಿಗೆ ನಿಜಕ್ಕೂ ಇದೊಂದು ವರದಾನ. ಅಧಿಕ ಹಣ ಗಳಿಕೆಯ ಸಾಧ್ಯತೆಯ ಹೂಡಿಕೆಗಳಲ್ಲಿ ಹಣ ಹಾಕಿ ಭರವಸೆಯ ಆದಾಯವಿಲ್ಲದೆ ಕೈಸುಟ್ಟುಕೊಳ್ಳಬಯಸದವರಿಗೊಂದು ನೆಮ್ಮದಿಯ ಆದಾಯ ಮೂಲ. ಇವರಿಗೆ ನೀಡುವ ಠೇವಣಿ ಭದ್ರತೆ ಎಂದರೆ ಅದು ಅವರಿಗೆ ಒದಗಿಸುವ ಸಾಮಾಜಿಕ ಭದ್ರತೆ ಮತ್ತು ನ್ಯಾಯ. ಇಂಥ ಭದ್ರತೆಯ ಅನುಪಸ್ಥಿತಿಯಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಠೇವಣಿದಾರರು ಡಬ್ಬಾ ಕಂಪನಿಗಳು ಮತ್ತು ವಂಚಕ ಸಂಸ್ಥೆಗಳ ಜಾಲದಲ್ಲಿ ಸಿಕ್ಕು ಇದ್ದದ್ದನ್ನೆಲ್ಲಾ ಕಳದುಕೊಂಡು ಬರಿಗೈ ಬಸಪ್ಪಗಳಾಗುವ ದೈನೇಸಿ ಸ್ಥಿತಿ ಒದಗಬಹುದು.

PC : Karnataka Trending

ಇಂತಹ ವಿದ್ಯಮಾನಕ್ಕೆ ಇವತ್ತು ನಾವು ನೋಡುತ್ತಿರುವ ಕೆಲ ಪ್ರಕರಣಗಳೇ ಸಾಕ್ಷಿ. ಅದು ಬೆಂಗಳೂರಿನ ಐಎಮ್‌ಎ ಪ್ರಕರಣ ಆಗಿರಬಹುದು, ರಾಘವೇಂದ್ರ ಸಹಕಾರಿ ಬ್ಯಾಂಕ್ ಆಗಿರಬಹುದು ಅಥವಾ ಪಂಜಾಬ್-ಮಹಾರಾಷ್ಟ್ರ ಬ್ಯಾಂಕ್, ಬೆಸ್ಟ್ ಬ್ಯಾಂಕ್, ಲಕ್ಷ್ಮಿವಿಲಾಸ ಬ್ಯಾಂಕುಗಳಂಥ ದೊಡ್ಡ ಬ್ಯಾಂಕುಗಳೂ ಆಗಿರಬಹುದು. ಇಂಥ ವಂಚಕರ ಕಪಿಮುಷ್ಟಿಗೆ ಸಿಕ್ಕು ಮುಗ್ಧ ಠೇವಣಿದಾರರು ಸಂಕಟದ ಕೂಪಕ್ಕೆ ಹೋಗಬಾರದೆಂದರೆ, ಅವರು ಇಟ್ಟ ಠೇವಣಿ ಮೊತ್ತ ಸುರಕ್ಷಿತವಾಗಿ ಅವರಿಗೆ ಬೇಕೆಂದಾಗ ಸಿಗುವಂತಿರಬೇಕು. ಈ ಬಗ್ಗೆ ಸರ್ಕಾರಗಳ ಕಟ್ಟುನಿಟ್ಟಿನ ಕಾಯ್ದೆಗಳಿಲ್ಲದಿದ್ದರೆ, ಮತ್ತು ಆ ಕಾಯಿದೆಗಳಾದರೂ ಕಾಲಮಿತಿಯಲ್ಲಿ ಜಾರಿಯಾಗದಿದ್ದರೆ ಅದು ತಾಯ ಮೊಲೆಹಾಲು ನಂಜಾದಂತೆ. ಭಾರತದಲ್ಲಿ ಇಂಥ ಠೇವಣಿ ಭದ್ರತೆಯ ಮೊತ್ತ ದಶಕಗಳಿಂದ ಕೇವಲ ಒಂದು ಲಕ್ಷಕ್ಕೆ ರೂಪಾಯಿಗಳಿಗೆ ಸೀಮಿತವಾಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2020ರ ಮುಂಗಡಪತ್ರದಲ್ಲಿ ಈ ಮಿತಿಯನ್ನ ರೂ.5 ಲಕ್ಷಕ್ಕೆ ಏರಿಸಿ ಉಪಕರಿಸಿದ್ದಾರೆ. ಅದೂ ಕೂಡ ಒಂದು ಬ್ಯಾಂಕಿನ ಎಲ್ಲಾ ಶಾಖೆಗಳಿಗೆ ಅನ್ವಯಿಸುವ ಒಟ್ಟು ಮೊತ್ತವಾಗಿರುತ್ತದೆ. ಆದರೆ ಈ ಮೊತ್ತ ಇತರೆ ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ರಾಷ್ಟ್ರಗಳಿಲ್ಲಿನ ಮೊತ್ತಕ್ಕೆ ಹೋಲಿಸಿದರೆ ತೀರಾ ಕಡಿಮೆ. ಮೆಕ್ಸಿಕೋ, ಟರ್ಕಿ ಮತ್ತು ಜಪಾನ್ ದೇಶಗಳಲ್ಲಿ ಅದು ಶೇ. ನೂರರಷ್ಟಿದೆ.

ಅಲ್ಲದೆ ಅದು ಹಣದುಬ್ಬರ ದರಕ್ಕೆ ಹೊಂದಿಕೆಯಾಗಿ ಏರಿಕೆಯ ದರದಲ್ಲಿರುವುದಾದರೆ ಉಳಿತಾಯದಾರರಿಗೆ
ನೆಮ್ಮದಿ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಠೇವಣಿ ಭರವಸೆ ನೀಡುವ ವಿಮಾ ಸಂಸ್ಥೆಗಳಿಗೆ ಪಾವತಿಸುವ ವಿಮಾ ಮೊತ್ತ ಅವುಗಳ ಆರ್ಥಿಕತೆಗೆ ಭಾರವಾಗುತ್ತದೆ ಎನ್ನುವುದಾದರೆ, ಹಾಲೀ ಕೆಲ ದೇಶಗಳಲ್ಲಿರುವಂತೆ ವಿಮಾ ಮೊತ್ತವನ್ನು ಬ್ಯಾಂಕು ಮತ್ತು ಗ್ರಾಹಕರು ಕೂಡಿ ಭರಿಸುವ ವ್ಯವಸ್ಥೆ ಮಾಡಬಹುದು. ಠೇವಣಿಯ ಮೇಲೆ ನೀಡುವ ಬಡ್ಡಿಯ ದರ ಒಂದಷ್ಟು ಕಡಿಮೆಯಾದರೂ ಸರಿ, ಬ್ಯಾಂಕುಗಳು ದುಃಸ್ಥಿತಿಗೆ ಒಳಗಾದಾಗ ಗ್ರಾಹಕರು ಠೇವಣಿ ವಂಚಿತರಾಗಬಾರದು. ಹೀಗೆ ವಿಮಾ ಕಂತಿನ ಪಾವತಿಯ ಭಾರವನ್ನು ಹಂಚಿಕೊಳ್ಳುವುದರಿಂದ ಬ್ಯಾಂಕಿಗೂ ಹೊರೆಯಾಗುವುದಿಲ್ಲ, ಮತ್ತು ಯಾವ ಗ್ರಾಹಕನೂ ಇಲ್ಲ ಎನ್ನುವುದಿಲ್ಲ. ಅದೂ ಕೋವಿಡ್-19ರಂತಹ ಸಂಕಷ್ಟದ ಸಂದರ್ಭದಲ್ಲಿ ಕೈಯಲ್ಲೊಂದಿಷ್ಟು ಹಣ ಇಟ್ಟುಕೊಂಡವರಿಗೆ ಸಣ್ಣ ಮೊತ್ತವಾದರೂ ಸರಿ, ನಿಗದಿತವಾಗಿ ಬಡ್ಡಿ ರೂಪದ ಆದಾಯ ಸಿಗುವ ಸಾಧ್ಯತೆ ಎಂದರೆ ಬ್ಯಾಂಕ್ ಠೇವಣಿಗಳು ಮಾತ್ರ.

ಈ ದೃಷ್ಟಿಯಿಂದ ಪ್ರಸ್ತುತ ಒಕ್ಕೂಟ ಸರ್ಕಾರ ಮಂಡಿಸಿರುವ “ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ(ಡಿಐಸಿಜಿಸಿ)” ತಿದ್ದುಪಡಿಯನ್ನು ಸ್ವಾಗತಿಸುತ್ತಲೇ, ಈಗಿನ ಠೇವಣಿ ಭರವಸೆ ಮೊತ್ತ ರೂ. 5 ಲಕ್ಷ ಮಿತಿಯನ್ನು ಅಮೆರಿಕಾ, ಇಂಗ್ಲೆಂಡ್, ಜಪಾನ್, ಜರ್ಮನಿ, ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳಲ್ಲಿರುವಷ್ಟರ ಮೊತ್ತಕ್ಕೆ ಸಮನಾಗಿ ಅಲ್ಲದಿದ್ದರೂ, ಕನಿಷ್ಟ ರೂ.20 ಲಕ್ಷಕ್ಕಾದರೂ ಏರಿಸುವ ಅಗತ್ಯವಿದೆ. ಆ ದೇಶಗಳಲ್ಲಿ ಒದಗಿಸಲಾಗಿರುವ ಠೇವಣಿಗಳ ಮೇಲಿನ ಭದ್ರತೆಯ ಮೊತ್ತ, ನಮ್ಮ ರೂಪಾಯಿ ಲೆಕ್ಕದಲ್ಲಿ, ಸರಿಸುಮಾರು ಒಂದು ಕೋಟಿ ಹತ್ತಿರ ಬರುತ್ತದೆ. ಈ ಮೂಲಕ ಠೇವಣಿದಾರರಿಗೆ ಅರ್ಥಿಕ ಭದ್ರತೆ ಮತ್ತು ಬ್ಯಾಂಕುಗಳಿಗೆ ದ್ರವ್ಯತೆ(ಲಿಕ್ವಿಡಿಟಿ) ಎರಡನ್ನೂ ಏಕಕಾಲಕ್ಕೆ ಒದಗಿಸಬಹುದು. ಅಲ್ಲದೆ, ವಿದೇಶೀ ಬಂಡವಾಳಕ್ಕಾಗಿ ದೇಶ ಜಾಗತಿಕ ಹಣಕಾಸು ಸಂಸ್ಥೆಗಳ ಮುಂದೆ ಕೈಚಾಚುವ ದಯನೀಯ ಸ್ಥಿತಿಯನ್ನು ತಪ್ಪಿಸಬಹುದು.

ಜೊತೆಗೆ, ಸಹಕಾರಿ ವಲಯದ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳನ್ನೂ ಕೂಡ ಈ ಕಾಯಿದೆಯ ವ್ಯಾಪ್ತಿ ಮತ್ತು ಆರ್‌ಬಿಐನ ಕಣ್ಗಾವಲಿಗೆ ಒಳಪಡಿಸಬೇಕಿದೆ. ಹೇಗೂ ಇದೀಗ ಒಕ್ಕೂಟ ಸರ್ಕಾರ ಸಹಕಾರಿ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳುವ ಪ್ರಯತ್ನವಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ.
ಇದರಿಂದಾಗಿ ಸಹಕಾರಿ ವಲಯದ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಟ್ಟವರಿಗೆ ಈ ಸೌಲಭ್ಯವನ್ನು ವಿಸ್ತರಿಸುವುದು ಕಷ್ಟವೇನಲ್ಲ. ಇಂದು ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಕೂಡ ನಾಯಿಕೊಡೆಗಳಂತೆ ಹುಟ್ಟಿಕೊಂಡು ಸಾಲ ಕೋರಿ ಬಂದವರ ರಕ್ತ ಹೀರುತ್ತಿವೆ. ಇಲ್ಲಿ ಶೋಷಣೆ ಎನ್ನುವುದು ಎರಡು ಬದಿಯ ಗರಗಸವಾಗಿದೆ. ಸರ್ಕಾರದ ನೋಂದಾಯಿತ ಸಂಸ್ಥೆಗಳು ಎನ್ನುವ ನಂಬುಗೆಯಿಂದ ಇಂಥ ಸಂಸ್ಥೆಗಳಲ್ಲಿ ಹಣ ಹೂಡಿ ವಂಚನೆಗೊಳಗಾದ ಸಂತ್ರಸ್ತರು ಪರಿಹಾರ ಕೋರಿ ಸಚಿವರನ್ನು ಒತ್ತಾಯಿಸಿದಾಗ “ನನ್ನನ್ನು ಕೇಳಿ ನೀವು ಠೇವಣಿ ಇಟ್ಟಿದ್ರಾ?” ಎಂದು ಹರಿಹಾಯುವ, ಹಸಿವು ಇಂಗಿಸಲು ಅಕ್ಕಿ ಕೊಡಿ ಎಂದರೆ “ಸಾಯ್ರಿ” ಎನ್ನುವ ಪ್ರಭುತ್ವದ ಪ್ರತಿನಿಧಿಗಳಿರುವಾಗ ನ್ಯಾಯ ಸಿಗುವುದು ಕಷ್ಟಸಾಧ್ಯವಾಗಿದ್ದರೂ ಹಕ್ಕೊತ್ತಾಯವನ್ನು ಕೈಬಿಡುವಂತಿಲ್ಲ. ಇದೀಗ ಹೆಚ್ಚು ವಂಚನೆಯ ಪ್ರಕರಣಗಳು ವರದಿಯಾಗುತ್ತಿರುವುದೇ ಸಹಕಾರಿ ವಲಯದ ಹಣಕಾಸು ಸಂಸ್ಥೆಗಳಲ್ಲಿ. ಗಾಂಧೀಜಿಯವರ ಕನಸಿನ ಸಹಕಾರಿ ಚಳವಳಿ ಕಳ್ಳಕಾಕರ ಕಾರ್ಯಾಚರಣೆಯಾಗುತ್ತಿರುವುದನ್ನು ತಪ್ಪಿಸಲೇಬೇಕು.

PC : The Economic Times

ಕೊನೆಯದಾಗಿ, ಇವತ್ತು ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ನಿತ್ಯ ಆರ್ಥಿಕ ಬದುಕಿನಲ್ಲಿ ಅನ್ವಯಿಸಿ ನಗದುರಹಿತ ವಹಿವಾಟು ನಡೆಸಲು ಮತ್ತು ವಿದ್ಯುನ್ಮಾನ ಬ್ಯಾಂಕ್ ವ್ಯವಹಾರ ನಡೆಸಲು ಒತ್ತಾಯಪೂರಕ ಪ್ರೋತ್ಸಾಹ ಜಾರಿಯಲ್ಲಿದೆ. ಇದು ಇವತ್ತಿನ ಜಾಗತಿಕ ಸಂದರ್ಭದಲ್ಲಿ ಅನಿವಾರ್ಯ ಕೂಡ. ಆದರೆ ಇದರಿಂದ ವಂಚನೆಗೊಳಗಾದ ಸಂದರ್ಭದಲ್ಲಿ ಅಮಾಯಕರಿಗೆ ರಕ್ಷಣೆ ಇಲ್ಲ ಎನ್ನುವುದಾದರೆ ವಂಚನೆಯನ್ನೇ ಸಾರ್ವತ್ರೀಕರಿಸಿದಂತಾಗುತ್ತದೆ. ಕೆಲವು ಮುಗ್ಧ, ಅಷ್ಟೇ ಏಕೆ ಪ್ರಬುದ್ಧರೆನಿಸಿಕೊಂಡವರ ಬ್ಯಾಂಕ್ ಖಾತೆಗಳ ಹಣ ವಿದ್ಯುನ್ಮಾನ ಕಳ್ಳರ ಕೈಚಳಕದಿಂದ ಕಾಣೆಯಾಗುತ್ತಿರುವ ವರದಿಗಳು ಠೇವಣಿದಾರರ ನಿದ್ದೆಗೆಡಿಸುತ್ತಿದೆ. ಇಲ್ಲಿ ಗ್ರಾಹಕರ ಎಚ್ಚರಿಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಬ್ಯಾಂಕುಗಳ ಹೊಣೆಗಾರಿಕೆ ಮತ್ತು ಸರ್ಕಾರಗಳ ರಕ್ಷಣಾ ಕವಚ. ಯಾವ ಕಾನೂನು ಮತ್ತು ಕ್ರಮಗಳನ್ನು ನಂಬಿ ಗ್ರಾಹಕರು ಠೇವಣಿ ಇಡುತ್ತಾರೋ, ಹಣದ ವಹಿವಾಟು ನಡೆಸುತ್ತಾರೋ ಅವು, ಅವರನ್ನು ರಕ್ಷಿಸದೆ ನಡುನೀರಲ್ಲಿ ಕೈಬಿಡುವಂತಹ ಪ್ರಕರಣಗಳು ನಡೆದಾಗ ಜನ ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರ ಎರಡರ ಮೇಲೂ ಭರವಸೆ ಕಳೆದುಕೊಳ್ಳುವುದು ಸಹಜ. ಮುಕ್ತ ಮಾರುಕಟ್ಟೆ ಯಾವತ್ತೂ ತನ್ನ ವಹಿವಾಟುಗಳ ಸಂದರ್ಭದಲ್ಲಿ ಗ್ರಾಹಕರ ಬೌದ್ಧಿಕ ಸಬಲೀಕರಣವನ್ನು ಊಹಿಸಿಕೊಂಡೇ ಕ್ರಿಯಾಶೀಲವಾಗಿರುತ್ತದೆ. ಆದ್ದರಿಂದ ಮಾಹಿತಿ ಕೊರತೆ ಇರುವವರಿಗೆ, ಅಸಹಾಯಕರಿಗೆ ಅಲ್ಲಿ ನ್ಯಾಯ ಸಿಗುವುದು ಖಂಡಿತಾ ಸಾಧ್ಯವಿಲ್ಲ. ಇಂಥ ಸಂದರ್ಭ ಬಂದಾಗ ರಕ್ಷಣೆಗೆ ಬರಬೇಕಾದ್ದು ಪ್ರಭುತ್ವದ ಕೆಲಸ. ಈ ಕೆಲಸದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಏಕಕಾಲಕ್ಕೆ ಕ್ರಿಯಾಶೀಲವಾದರೆ ಮಾತ್ರ ದೇಶೀಯ ಉಳಿತಾಯ ಸಾಧ್ಯವಾಗುತ್ತದೆ, ದೇಶೀಯ ಹೂಡಿಕೆ ವೃದ್ಧಿಸುತ್ತದೆ, ಭಾರತ ಬಂಡವಾಳ ಸ್ವಾವಲಂಬಿ ರಾಷ್ಟ್ರವಾಗುತ್ತದೆ. ಇಲ್ಲವಾದರೆ ಠೇವಣಿದಾರರ ಸ್ಥಿತಿ ತೋಳನ ಕೈಗೆ ಕುರಿ ಒಪ್ಪಿಸಿದಂತೆ.

ಒಟ್ಟಿನಲ್ಲಿ ಠೇವಣಿದಾರರು ಮತ್ತು ಬ್ಯಾಂಕುಗಳೆರಡನ್ನೂ ರಕ್ಷಿಸಿ ಪೋಷಿಸುವ ಹೊಣೆ ಪ್ರಭುತ್ವದ್ದಾಗಿದೆ. ಠೇವಣಿದಾರರ ನಂಬುಗೆಯನ್ನು ಕಳೆದುಕೊಂಡ ಯಾವುದೇ ಬ್ಯಾಂಕು ಅಥವಾ ಠೇವಣಿಯನ್ನು ಕಚ್ಚಾವಸ್ತುವಾಗಿರಿಸಿಕೊಂಡ ಹಣಕಾಸು ಸಂಸ್ಥೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ ಇಲ್ಲ.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ?: ವಿಶಿಷ್ಟ ಸ್ವಾತಂತ್ರ್ಯೋತ್ಸವಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...