ಒಕ್ಕೂಟ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟದ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಸೆಪ್ಟಂಬರ್ 27 ರಂದು ಸಂಪೂರ್ಣ ಭಾರತ್ ಬಂದ್‌ಗೆ ಕರೆ ನೀಡಿದೆ.
ರೈತ ಪ್ರತಿಭಟನೆಗೆ ನವೆಂಬರ್ 26ಕ್ಕೆ ಒಂದು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತರು ಕಿಸಾನ್ ಮಹಾಪಂಚಾಯತ್ ಮೂಲಕ ರೈತರನ್ನು ಸಜ್ಜುಗೊಳಿಸುತ್ತಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ಯಶಸ್ವಿಯಾಗಿದ್ದು, ರೈತರ ವಿಶ್ವಾಸ ಇಮ್ಮಡಿಗೊಂಡಿದೆ. ಇಂದಿನ ಕರ್ನಾಲ್ ಕಿಸಾನ್ ಮಹಾಪಂಚಾಯ್‌ನಲ್ಲಿಯೂ ಬಿಜೆಪಿಯ ಕೃಷಿ ಕಾನೂನುಗಳ ವಿರುದ್ಧ ರೈತ ನಾಯಕರು ಮಾತನಾಡಲಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ದಿನ: ’ಗೌರಿ ನೆನಹು’ ಕಾರ್ಯಕ್ರಮದ ಚಿತ್ರಗಳು
ಭಾರತ್ ಬಂದ್‌ಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಸಿಪಿಐ(ಎಂ), ಸಿಪಿಐ, ಆರ್‌ಎಸ್‌ಪಿ ಸೇರಿದಂತೆ ಎಡ ಪಕ್ಷಗಳು ಭಾರತ್ ಬಂದ್‌ಗೆ ಬೆಂಬಲ ನೀಡಿವೆ. ಕೇಂದ್ರದ ಮೋದಿ ಮತ್ತು ಯೋಗಿ ಸರ್ಕಾರಕ್ಕೆ ರೈತರ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ರೈತ ಸಂಘಟನೆಗಳು ಹೇಳಿವೆ.
ಕಳೆದ ನವೆಂಬರ್ 26 ರಿಂದ ದೆಹಲಿಯ ಸಿಂಘು, ಟಿಕ್ರಿ, ಕುಂಡಲಿ, ಗಾಝಿಪುರ್ ಗಡಿಗಳು ಮತ್ತು ರಾಜಸ್ಥಾನದ ಶಹಜಾನ್ ಪುರ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶಾದ್ಯಂತ ಹಲವು ಸಂಗಟನೆಗಳು ರೈತ ಹೋರಾಟಕ್ಕೆ ಬೆಂಬಲ ನೀಡಿವೆ. ಈವರೆಗೆ ರೈತರು ಮತ್ತು ಒಕ್ಕೂಟ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆ ನಡೆದು ವಿಫಲವಾಗಿವೆ.
ಸೆಪ್ಟಂಬರ್ 27 ರಂದು ನಡೆಯಲಿರುವ ಸಂಪೂರ್ಣ ಭಾರತ್ ಬಂದ್‌ಗೆ ಜನರ ಬೆಂಬಲ ವ್ಯಕ್ತವಾಗಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಐತಿಹಾಸಿಕ ಕಿಸಾನ್ ಮಹಾಪಂಚಾಯತ್: ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ ರೈತರು


