ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ವಿಡಿ ಸಾವರ್ಕರ್ ಮತ್ತು ಎಂ.ಎಸ್. ಗೋಲ್ವಾಲ್ಕರ್ ಅವರ ಕೃತಿಗಳನ್ನು ಸೇರಿಸುವುದನ್ನು ವಿಶ್ವವಿದ್ಯಾಲಯದ ಇಬ್ಬರು ಸದಸ್ಯರ ತಜ್ಞರ ಸಮಿತಿಯು ಪರಿಶೀಲನೆಗೆ ಒಳಪಡಿಸಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿಫಾರಸಿನಂತೆ ಈ ಸಮಿತಿಯನ್ನು ರಚಿಸಲಾಗಿದೆ.
ವಿಶ್ವವಿದ್ಯಾನಿಯಲದ ಪಠ್ಯ ಕ್ರಮದಲ್ಲಿ ಆರೆಸ್ಸೆಸ್ ನಾಯಕರ ಪುಸ್ತಕಗಳ ಸೇರ್ಪಡೆಗೆ ಸಂಬಂಧಿಸಿದ ವಿವಾದಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, ಸ್ವಾತಂತ್ರ್ಯ ಹೋರಾಟಕ್ಕೆ ಬೆನ್ನು ತೋರಿಸಿದವರನ್ನು ವೈಭವೀಕರಿಸುವುದು ವಿವೇಕವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಆರ್ಥಿಕ ಹಿಂಜರಿತ: 77,350 ಉದ್ಯೋಗ ಸೃಷ್ಟಿ; 100 ದಿನಗಳ ಕ್ರಿಯಾ ಯೋಜನೆ ಘೋಷಿಸಿದ ಪಿಣರಾಯಿ ಸರ್ಕಾರ
ಕೇರಳ ರಾಜ್ಯವು ಯಾವಾಗಲೂ ಇಂತಹ ವಿವಾದಾತ್ಮಕ ವ್ಯಕ್ತಿಗಳಿಂದ ಮತ್ತು ಅವರನ್ನು ವೈಭವೀಕರಿಸುವುದರ ಬಗ್ಗೆ ಅಂತರ ಕಾಯ್ದುಕೊಂಡು ಬಂದಿದೆ. ಯಾವುದೇ ಪ್ರತಿಗಾಮಿ ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಮಿತಿಯು ಪಠ್ಯಕ್ರಮವನ್ನು ಪರಿಶೀಲಿಸುತ್ತದೆ ಮತ್ತು ಸಮಿತಿಯ ಶಿಫಾರಸುಗಳ ಪ್ರಕಾರ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ, ಕಣ್ಣೂರು ವಿಶ್ವವಿದ್ಯಾನಿಲಯವು ಸಾವರ್ಕರ್ ಅವರ ‘ಹಿಂದುತ್ವ: ಹಿಂದೂ ಯಾರು’, ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’, ‘ವಿ ಓರ್ ಅವರ್ ನೇಷನ್‌ಹುಡ್ ಡಿಫೈನೆಡ್’ ಕೃತಿಯನ್ನು ಎಂಎ(ಕಲಾ ಸ್ನಾತಕೋತ್ತರ) ಆಡಳಿತ ಮತ್ತು ರಾಜಕೀಯದ ವಿಷಯದ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಆರೆಸ್ಸೆಸ್ಸಿನ ಸ್ವಯಂ ಸೇವಕಿ ಪಾಕಿಸ್ತಾನದ ಕುಸ್ತಿಪಟುವಿಗೆ ಹೊಡೆದ್ದಾರೆಂದು ವೈರಲ್ ಆದ ಈ ವಿಡಿಯೊ ಸುಳ್ಳು!
ದೀನದಯಾಳ್ ಉಪಾಧ್ಯಾಯರ ‘ಸಮಗ್ರ ಮಾನವತಾವಾದ’, ಬಾಲರಾಜ್ ಮಧೋಕ್ ಅವರ ‘ಭಾರತೀಯೀಕರಣ: ಏನು, ಏಕೆ ಮತ್ತು ಹೇಗೆ’ ಭಾಗಗಳು ಕೂಡ ಪಠ್ಯಕ್ರಮದಲ್ಲಿ ಒಳಗೊಂಡಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಗೋಪಿನಾಥ್ ರವೀಂದ್ರನ್ ಅವರು ಪಠ್ಯಕ್ರಮದಲ್ಲಿ ಕೇಸರೀಕರಣದ ಆರೋಪವನ್ನು ತಿರಸ್ಕರಿಸಿದ್ದಾರೆ.
“ನಾವು ಗಾಂಧೀಜಿ, ನೆಹರು, ಅಂಬೇಡ್ಕರ್ ಮತ್ತು ಟಾಗೋರ್ ಅವರ ಕೃತಿಗಳನ್ನು ಸೇರಿಸಿದ್ದೇವೆ. ಹಾಗೆಯೆ ಪಠ್ಯಕ್ರಮದಲ್ಲಿ ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಕೃತಿಗಳು ಒಳಗೊಂಡಿದೆ. ವಿದ್ಯಾರ್ಥಿಗಳು ಎಲ್ಲಾ ಸಿದ್ಧಾಂತಗಳ ಹಿಂದಿನ ಮೂಲ ಪಠ್ಯವನ್ನು ಕಲಿಯಲಿ ಮತ್ತು ಅರ್ಥಮಾಡಿಕೊಳ್ಳಲಿ. ಸಾವರ್ಕರ್ ಮತ್ತು ಗೋಲ್ವಾಲ್ಕರ್ ಹೇಳಿದ್ದು ಪ್ರಸ್ತುತ ಭಾರತದ ರಾಜಕೀಯದ ಭಾಗವಾಗಿದೆ. ಅದನ್ನು ಕಲಿಯುವುದರಲ್ಲಿ ತಪ್ಪೇನು?” ಎಂದು ಗೋಪಿನಾಥ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿ ಎಮರ್ಜೆನ್ಸಿ ಬಗ್ಗೆ ಮಾತನಾಡುವುದು ಸೋಗಲಾಡಿತನದ ಪರಮಾವಧಿ


