ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಇಂಧನ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧಕ್ಕೆ ಇಂದು ಎತ್ತಿನಗಾಡಿಯಲ್ಲಿ ತೆರಳಿದ್ದಾರೆ. ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಕಾಂಗ್ರೆಸ್ ’ಎತ್ತಿನಗಾಡಿ ಚಲೋ’ ಪ್ರತಿಭಟನೆ ನಡೆಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ನಿವಾಸಗಳಿಂದ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸ್ವತಃ ಎತ್ತಿನಗಾಡಿಗಳನ್ನ ಚಲಾಯಿಸುವ ಮೂಲಕ ಬಿಜೆಪಿ ಸರ್ಕಾರದ ನೀತಿಗಳನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ಸೆ.13 ರಿಂದ ವಿಧಾನ ಮಂಡಲ ಅಧಿವೇಶನ: ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ದ
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಬೆಲೆ ಏರಿಕೆಯಿಂದ ಜನರು ಬದುಕಲು ಪರದಾಡುತ್ತಿದ್ದರೂ ಜನರ ನೋವಿಗೆ ಸ್ಪಂದಿಸದೆ ಹೊಣೆಗೇಡಿಗಳಂತೆ ಸಂವೇದನಾ ಶೂನ್ಯರಾಗಿ ಬಾಲಿಶ ಮಾತುಗಳನ್ನಾಡುತ್ತಿದ್ದಾರೆ ಬಿಜೆಪಿ ನಾಯಕರು. ಬೆಲೆ ಇಳಿಸಿ ಜನರ ನೆರವಿಗೆ ನಿಲ್ಲುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ತುಟಿ ಬಿಚ್ಚದಿರುವುದು ಅವರ ಜನ ವಿರೋಧಿ ಮನಸ್ಥಿತಿಗೆ ಸಾಕ್ಷಿ” ಎಂದಿದೆ. ಜೊತೆಗೆ #ಪಿಕ್‌ಪಾಕೆಟ್‌ಸರ್ಕಾರ ಎಂಬ ಹ್ಯಾಶ್‌ಟ್ಯಾಗ್ ಬಳಸಿದೆ.
ಬೆಲೆ ಏರಿಕೆಯಿಂದ ಜನರು ಬದುಕಲು ಪರದಾಡುತ್ತಿದ್ದರೂ ಜನರ ನೋವಿಗೆ ಸ್ಪಂದಿಸದೆ ಹೊಣೆಗೇಡಿಗಳಂತೆ ಸಂವೇದನಾ ಶೂನ್ಯರಾಗಿ ಬಾಲಿಶ ಮಾತುಗಳನ್ನಾಡುತ್ತಿದ್ದಾರೆ ಬಿಜೆಪಿ ನಾಯಕರು.
ಬೆಲೆ ಇಳಿಸಿ ಜನರ ನೆರವಿಗೆ ನಿಲ್ಲುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ತುಟಿ ಬಿಚ್ಚದಿರುವುದು ಅವರ ಜನ ವಿರೋಧಿ ಮನಸ್ಥಿತಿಗೆ ಸಾಕ್ಷಿ#ಪಿಕ್‌ಪಾಕೆಟ್‌ಸರ್ಕಾರ
— Karnataka Congress (@INCKarnataka) September 13, 2021
ಕರ್ನಾಟಕ ವಿಧಾನ ಮಂಡಲ ಅಧಿವೇಶನ ಇಂದಿನಿಂದ (ಸೆ. 13) ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಅಧಿವೇಶನ ಇದಾಗಿದೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ ಸಹಿತ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಈ ಮೊದಲೆ ಸಿದ್ಧವಾಗಿತ್ತು.
ಇಂದಿನ ಎತ್ತಿನಗಾಡಿ ಚಲೋ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ನೂರಾರು ಮಂದಿ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸರ್ಕಾರಿ ದರೋಡೆಗೆ ತೆರಿಗೆ ಎಂದು ಹೆಸರು: ಬೆಲೆ ಏರಿಕೆಗೆ ಕಾಂಗ್ರೆಸ್ ಕಿಡಿ


