ಕೊರೊನಾ ಕಾಲದ ಬಡವರ ಆಪದ್ಬಾಂಧವ ಅನಿಸಿಕೊಂಡಿದ್ದ ನಟ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದ್ದು, 20 ಕೋಟಿಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸತತ ಮೂರು ದಿನಗಳ ಕಾಲ ನಟ ಸೋನು ಸೂದ್ ಅವರಿಗೆ ಸೇರಿದ ಸಂಸ್ಥೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸೋನು ಸೂದ್ ಭೇಟಿಯಾದ ಬೆನ್ನಲ್ಲೇ ನಡೆದಿರುವ ಈ ಕಾರ್ಯಾಚರಣೆ ರಾಜಕೀಯ ಪ್ರೇರಿತ ಎಂಬ ಟೀಕೆಗಳಿಗೂ ಗುರಿಯಾಗಿದೆ.
ಸೋನು ಸೂದ್ ಅವರ ಲಾಭರಹಿತ ಎನ್‌ಜಿಒ ಸಂಸ್ಥೆಯು ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ವಿದೇಶಿ ಕೊಡುಗೆದಾರರಿಂದ 2.1 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದೆ. ಇದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಎಂದು ತೆರಿಗೆ ಇಲಾಖೆ ತಿಳಿಸಿದೆ.
“ಆದಾಯ ತೆರಿಗೆ ಇಲಾಖೆಯ ಶೋಧದ ಸಮಯದಲ್ಲಿ, ನಟ ಮತ್ತು ಆತನ ಸಹಚರರು ತೆರಿಗೆ ವಂಚನೆ ನಡೆಸಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ನಟ ಓನು ಸೂದ್ ತಮ್ಮ ಲೆಕ್ಕವಿಲ್ಲದ ಆದಾಯವನ್ನು ನಕಲಿ ವಿಧಾನದಲ್ಲಿ ಸಾಲದ ರೂಪದಲ್ಲಿ ಪಡೆದಿದ್ದಾರೆ” ಎಂದು ಇಲಾಖೆ ಹೇಳಿಕೆಯಲ್ಲಿ ಆರೋಪಿಸಿದೆ.
ಇದನ್ನೂ ಓದಿ: ಕೇಜ್ರಿವಾಲ್ ಭೇಟಿ ಬೆನ್ನಲ್ಲೇ ಸೋನು ಸೂದ್ ಸಂಸ್ಥೆಗಳ ಮೇಲೆ ಐಟಿ ಕಾರ್ಯಾಚರಣೆ
“ಸೋನುಸೂದ್ ಅವರಿಗೆ ಸೇರಿದ ಸಂಸ್ಥೆ ಹಾಗೂ ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವೆ ವ್ಯವಹಾರ ನಡೆದಿದೆ. ಈ ವ್ಯವಹಾರದಲ್ಲಿ ತೆರಿಗೆಯನ್ನು ವಂಚಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿರುವುದರಿಂದ ಸಮೀಕ್ಷೆ ಮಾಡಲಾಗಿದೆ” ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿದ್ದವು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸೋನುಸೂದ್ ಅವರನ್ನು ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮಗಳಿಗೆ ರಾಯಭಾರಿಯನ್ನಾಗಿ ಘೋಷಿಸಿದ್ದಾರೆ. ಕೇಜ್ರಿವಾಲ್ ಅವರನ್ನು ಸೂದ್ ಭೇಟಿಯಾಗಿದ್ದರು. ಆಮ್‌ಆದ್ಮಿ ಮೂಲಕ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ವಿಚಾರವನ್ನು ಸೂದ್ ನಿರಾಕರಿಸಿದ್ದರು.
ಕೊರೊನಾ ಸಂದರ್ಭದಲ್ಲಿ ಸೋನು ಸೂದ್ ಮಾಡಿದ ಮಾನವೀಯ ಕೆಲಸಗಳು ಗಮನ ಸೆಳೆದಿದ್ದವು. ಅವರು ಅಪಾರ ಪ್ರಶಂಸೆಗಳಿಗೂ ಅವರು ಪಾತ್ರರಾಗಿದ್ದರು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನ ಸೌಲಭ್ಯವನ್ನು ಸೂದ್ ಕಲ್ಪಿಸಿದ್ದರು. ಎರಡನೇ ಅಲೆಯ ವೇಳೆ ರೋಗಿಗಳಿಗೆ ಆಮ್ಲಜನಕ ದೊರಕಿಸಲು ಕೈ ಜೋಡಿಸಿದ್ದರು.
ಕಳೆದ ವರ್ಷ ಜುಲೈನಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಸ್ಥಾಪಿಸಲಾದ ಸೂದ್ ಚಾರಿಟಿ ಫೌಂಡೇಶನ್, ಈ ವರ್ಷದ ಏಪ್ರಿಲ್ ಒಳಗೆ 18 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಅದರಲ್ಲಿ 1.9 ಕೋಟಿ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಲಾಗಿದೆ. ಉಳಿದ 17 ಕೋಟಿ ರೂಪಾಯಿಗಳನ್ನು ಸೂದ್ ಚಾರಿಟಿ ಫೌಂಡೇಶನ್ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಹಾಗೆ ಉಳಿದಿದೆ ಎನ್ನಲಾಗಿದೆ.
ಇದನ್ನೂ ಓದಿ: ಸೋನು ಸೂದ್ ಕಚೇರಿಗಳ ಮೇಲೆ ಐಟಿ ದಾಳಿ: ತಾಲಿಬಾನ್ ಮನಸ್ಥಿತಿ ಎಂದ ಶಿವಸೇನೆ


