’ನಾನು 2 ಬಾರಿ ರಾಜ್ಯಸಭಾ ಸ್ಥಾನ ತಿರಸ್ಕರಿಸಿದ್ದೇನೆ’, ರಾಜಕೀಯಕ್ಕೆ ಸೇರಲು ಮಾನಸಿಕವಾಗಿ ಸಿದ್ಧವಾಗಿಲ್ಲ ಎಂದು ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮುಂಬೈನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ, ನಂತರ ತೆರಿಗೆ ವಂಚನೆ ಮತ್ತು ಅಕ್ರಮ ಹಣದ ಆರೋಪವನ್ನು ಹೊರಿಸಿತ್ತು. ಆರೋಪ ನಿರಾಕರಿಸಿರುವ ನಟ, ತಾನು ಕಾನೂನಿನ ನಿಯಮಗಳನ್ನು ಪಾಲಿಸುವ ನಾಗರಿಕ ಎಂದು ಹೇಳಿದ್ದಾರೆ.
“ಆದಾಯ ತೆರಿಗೆ ಇಲಾಖೆಯವರು ಕೇಳಿದ ಎಲ್ಲಾ ದಾಖಲೆಗಳು, ವಿವರಗಳನ್ನು ನೀಡಿದ್ದೇವೆ. ಅವರು ಏನೇ ಪ್ರಶ್ನೆಗಳನ್ನು ಕೇಳಿದರೋ ಅವುಗಳಿಗೆ ನಾನು ಉತ್ತರಿಸಿದ್ದೇನೆ. ನನ್ನ ಕೆಲಸ ನಾನು ಮಾಡಿದ್ದೇನೆ, ಅವರು ತಮ್ಮ ಕೆಲಸವನ್ನು ಮಾಡಿದ್ದಾರೆ” ಎಂದು ನಟ ಸೋನು ಸೂದ್ ತಿಳಿಸಿದ್ದಾರೆ.
ಕೊರೊನಾ ಕಾಲದ ಬಡವರ ಆಪದ್ಬಾಂಧವ ಅನಿಸಿಕೊಂಡಿದ್ದ ನಟ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿದ್ದು, 20 ಕೋಟಿಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: ‘ಕಾಲವೆ ಕಥೆ ಹೇಳುತ್ತದೆ!’ – ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ
“ನಾನು ಎಎಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ನೀವು ನನ್ನನ್ನು ಯಾವುದೇ ರಾಜ್ಯಕ್ಕೆ ಕರೆದರು ಹೋಗುತ್ತೇನೆ. ಬಿಜೆಪಿ, ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿಯೂ ನಾನು ಕೆಲಸ ಮಾಡಿದ್ದೇನೆ” ಎಂದು ಆಮ್ ಆದ್ಮಿ ಜೊತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ.
“ನಾನು ಎರಡು ಬೇರೆ ಬೇರೆ ಪಕ್ಷಗಳಿಂದ ಬಂದ ರಾಜ್ಯಸಭಾ ಸ್ಥಾನಗಳ ಆಹ್ವಾನವನ್ನು ಎರಡು ಬಾರಿ ತಿರಸ್ಕರಿಸಿದ್ದೇನೆ. ಪ್ರಸ್ತುತ ನಾನು ನನ್ನ ಕೆಲಸಗಳಲ್ಲಿ ಸಂತೋಷವಾಗಿದ್ದೇನೆ. ನಾನು ರಾಜಕೀಯಕ್ಕೆ ಸಿದ್ಧನಾದಾಗ, ನಾನು ಸಿದ್ಧ ಎಂದು ಎಲ್ಲರಿಗೂ ತಿಳಿಯುವಂತೆ ಕೂಗುತ್ತೇನೆ” ಎಂದು ಹೇಳಿದ್ದಾರೆ.
“ನನ್ನ ಬಳಿ 54,000 ಓದದಿರುವ ಇ-ಮೇಲ್‌ಗಳು, ಸಾವಿರಾರು ಸಂದೇಶಗಳು WhatsApp, Facebook, Twitter ನಲ್ಲಿ ಇವೆ. 18 ಕೋಟಿಗಳನ್ನು ಮುಗಿಸಲು 18 ಗಂಟೆಗಳು ಕೂಡ ತೆಗೆದುಕೊಳ್ಳುವುದಿಲ್ಲ. ಆದರೆ ಪ್ರತಿಯೊಂದು ರೂಪಾಯಿಯನ್ನು ಸರಿಯಾದ ರೀತಿಯಲ್ಲಿ, ನಿಜವಾದ ಮತ್ತು ನಿರ್ಗತಿಕ ವ್ಯಕ್ತಿಗಾಗಿತೇ ಬಳಸಲಾಗಿದೆಯೆ ಎಂದು ನಾನು ಖಚಿತಪಡಿಸಿಕೊಳ್ಳಬೇಕು. ಹೀಗಾಗಿ ಇನ್ನು ಹಣ ಇದೆ” ಎಂದಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಸ್ಥಾಪಿಸಲಾದ ಸೂದ್ ಚಾರಿಟಿ ಫೌಂಡೇಶನ್, ಈ ವರ್ಷದ ಏಪ್ರಿಲ್ ಒಳಗೆ 18 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಅದರಲ್ಲಿ 1.9 ಕೋಟಿ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಲಾಗಿದೆ. ಉಳಿದ 17 ಕೋಟಿ ರೂಪಾಯಿಗಳನ್ನು ಸೂದ್ ಚಾರಿಟಿ ಫೌಂಡೇಶನ್ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಹಾಗೆ ಉಳಿದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಕಾಲದ ಆಪದ್ಬಾಂಧವ, ನಟ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ


