Homeಕರ್ನಾಟಕಪ್ರಮೀಳಾ ನಾಯ್ಡು ವಜಾಗೆ ಆಗ್ರಹಿಸಿ, ಮಹಿಳಾ ಆಯೋಗಕ್ಕೆ ಬೀಗ ಜಡಿದು ಎಎಪಿ ಪ್ರತಿಭಟನೆ

ಪ್ರಮೀಳಾ ನಾಯ್ಡು ವಜಾಗೆ ಆಗ್ರಹಿಸಿ, ಮಹಿಳಾ ಆಯೋಗಕ್ಕೆ ಬೀಗ ಜಡಿದು ಎಎಪಿ ಪ್ರತಿಭಟನೆ

- Advertisement -
- Advertisement -

ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಮಹಿಳಾ ಆಯೋಗವು ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷ ಮಹಿಳಾ ಆಯೋಗದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದೆ.

ಬೆಂಗಳೂರು ನಗರ ಆಪ್ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಮಾತನಾಡಿ, “ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 42 ಅತ್ಯಾಚಾರ ನಡೆಯುತ್ತಿದೆ. 2018ರ ಜನವರಿಯಿಂದ 2021ರ ಜುಲೈ ತನಕ ರಾಜ್ಯದಲ್ಲಿ 1,759 ಅತ್ಯಾಚಾರ ಪ್ರಕರಣಗಳು ನಡೆದಿವೆ. 2021ರ ಮೊದಲ ಏಳು ತಿಂಗಳಿನಲ್ಲಿ ರಾಜ್ಯದಲ್ಲಿ 307 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದೇ ಅವಧಿಯಲ್ಲಿ 1,300 ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಶಿಕ್ಷೆಯಾಗಿರುವುದು 6 ಆರೋಪಿಗಳಿಗೆ ಮಾತ್ರ” ಎಂದು ಹೇಳಿದ್ದಾರೆ.

“ಇತ್ತೀಚೆಗೆ ಬಿಡುಗಡೆಯಾದ ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ, 2020ರಲ್ಲಿ ರಾಜ್ಯದಲ್ಲಿ 3,246 ಮಹಿಳೆಯರ ಮೇಲೆ ಹಲ್ಲೆ ಹಾಗೂ 47 ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. 8 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿದೆ. 178 ಮಹಿಳೆಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾರೆ. ಮಾನಸಿಕ ಕಿರುಕುಳ ಹಾಗೂ ಬೆದರಿಕೆಗೆ ಹೆದರಿ 263 ಮಹಿಳೆಯರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. 6 ಮಹಿಳೆಯರ ಮೇಲೆ ಆಸಿಡ್‌ ದಾಳಿ ನಡೆದಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ 55 ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗಿದೆ” ಎಂದು ಕುಶಲಾ ಸ್ವಾಮಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ಕಳ್ಳರಂತೆ ಗಮನ ಬೇರೆಡೆ ಸೆಳೆದು ಬೆಲೆ ಏರಿಕೆ ಮಾಡುತ್ತಿದ್ದಾರೆ: ಎಎಪಿ

ಈ ವೇಳೆ ಮಾತನಾಡಿದ ಎಎಪಿಯ ಉಷಾ ಮೋಹನ್‌, “ಪ್ರಮೀಳಾ ನಾಯ್ಡು ಅವರು ಆಯೋಗದ ಅಧ್ಯಕ್ಷರೋ ಅಥವಾ ಬಿಜೆಪಿಯ ಏಜೆಂಟರೋ ಎಂಬ ಅನುಮಾನ ಕಾಡುತ್ತಿದೆ. ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಪ್ರಕರಣಗಳು ಜನರ ಗಮನಕ್ಕೆ ಬಂದು ಸರ್ಕಾರದ ಮಾನ ಬೀದಿ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರು ನಿಷ್ಕ್ರಿಯರಾಗಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರಾದ ಆರ್. ಪ್ರಮೀಳಾ ನಾಯ್ಡು ಹಾಗೂ ಸದಸ್ಯರು ಸರ್ಕಾರದ ಸೌಲಭ್ಯ ಪಡೆಯುವುದಕ್ಕೆ ಸೀಮಿತವಾಗಿದ್ದಾರೆ. ಕೋಟ್ಯಂತರ ಅನುದಾನ, ನಾನಾ ಸೌಲಭ್ಯಗಳನ್ನು ಆಯೋಗಕ್ಕೆ ನೀಡಿ ದುಂದುವೆಚ್ಚ ಮಾಡುವ ಮಾಡಲು ಆಯೋಗವನ್ನು ವಜಾ ಮಾಡಿ, ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ದಿಟ್ಟ ಮಹಿಳೆಯ ನೇತೃತ್ವದಲ್ಲಿ ಆಯೋಗದ ಪುನಾರಚನೆ ಆಗಲಿ” ಎಂದು ಆಗ್ರಹಿಸಿದ್ದಾರೆ.

“ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರವರ ಸರ್ಕಾರವು ಸ್ವಾತಿ ಮಾಲಿವಾಲ್‌ ಎಂಬ ದಿಟ್ಟ ಹೋರಾಟಗಾರ್ತಿಯನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಳೆದ ಐದು ವರ್ಷಗಳಲ್ಲಿ ಅವರ ನೇತೃತ್ವದಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ. ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸ್ಸುಗಳು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ರಾಜ್ಯದ ಆಯೋಗಕ್ಕೂ ಅಂತಹ ದಿಟ್ಟ ಅಧ್ಯಕ್ಷರ ಅಗತ್ಯವಿದೆ” ಎಂದಿದ್ದಾರೆ.

ಎಎಪಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, “ಜಾರಕಿಹೊಳಿ ಪ್ರಕರಣದಲ್ಲಿ ವಿಡಿಯೋ ನಕಲಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ನಂತರ ಅದು ಹನಿಟ್ರಾಪ್‌ ಎಂದು ಜಾರಕಿಹೊಳಿಯವರೇ ಹೇಳಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಯುವತಿಯನ್ನು ಜಾರಕಿಹೊಳಿ ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಇಡೀ ಸರ್ಕಾರವೇ ಆರೋಪಿಯ ರಕ್ಷಣೆಗೆ ನಿಂತಿದೆ” ಎಂದು ಕಿಡಿಕಾರಿದ್ದಾರೆ.

“ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದ್ದ 71 ಸಾಂತ್ವನ ಕೇಂದ್ರಗಳನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿದ್ದ 194 ಸಾಂತ್ವನ ಕೇಂದ್ರಗಳ ಪೈಕಿ 123 ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಜನಸಂಖ್ಯೆ ಜಾಸ್ತಿಯಿರುವ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚು ದಾಖಲಾಗುವ ಬೆಂಗಳೂರಿನಲ್ಲೇ ಎಲ್ಲಾ ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡಿವೆ” ಎಂದು ಎಎಪಿಯ ವೀಣಾ ಸೆರ್ರಾವ್‌ರವರು ಹೇಳಿದ್ದಾರೆ.

ಮಹಿಳಾ ನಾಯಕಿ ಪುಷ್ಪಾ ಕೇಶವ್‌ ಮಾತನಾಡಿ, “ಪೊಲೀಸರಿಗೆ ದೂರು ನೀಡಲು ಬರುವ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪೊಲೀಸರು ಎಫ್‌ಐಆರ್‌ ಹಾಕಲು ಮೀನಾಮೇಷ ಎಣಿಸುತ್ತಾರೆ. ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲೂ ರಾಜಿ ಮಾಡಿಸಲು ಪೊಲೀಸರು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಒಂದುವೇಳೆ ಎಫ್‌ಐಆರ್‌ ದಾಖಲಿಸಿಕೊಂಡರೂ, ಆರೋಪಿ ವಿರುದ್ಧ ಸಾಕ್ಷಿ ಸಂಗ್ರಹಕ್ಕೆ ಉದಾಸೀನ ತೋರುತ್ತಾರೆ” ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಮೇಕೆದಾಟು ಯೋಜನೆ ತ್ವರಿತಗೊಳಿಸಿ ಎಂದು ಎಎಪಿಯಿಂದ ಉಪವಾಸ ಸತ್ಯಾಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...