ಪತ್ನಿ, ಇಬ್ಬರು ಮಕ್ಕಳು ಮತ್ತು ಸೋದರ ಸೊಸೆಯನ್ನು ಕೊಲೆ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಔರಂಗಾಬಾದ್ ಗ್ರಾಮದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಕುಟುಂಬದ ಐವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ಔರಂಗಾಬಾದ್ ಗ್ರಾಮದ 35 ವರ್ಷದ ವ್ಯಕ್ತಿ ತನ್ನ ಪತ್ನಿ, ಮಗ, ಮಗಳು ಮತ್ತು ಸೊಸೆಗೆ ವಿಷ ಹಾಕಿದ್ದಾನೆ ಅಥವಾ ಅವರಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತನೂ ನೇಣಿಗೆ ಶರಣಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ, ಕೌಟುಂಬಿಕ ಕಲಹದಿಂದ ದುರಂತ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ- ಪೊಲೀಸ್ ಪೇದೆ ಬಂಧನ
ಮೃತರನ್ನು ನರೇಶ್ ಕುಮಾರ್ (35), ಅವರ ಪತ್ನಿ ಆರತಿ (32), ಪುತ್ರ ಸಂಜಯ್ (11), ಮಗಳು ವರ್ಷಾ (9) ಮತ್ತು ಸೋದರ ಸೊಸೆ ರವಿತಾ (9) ಎಂದು ಗುರುತಿಸಲಾಗಿದೆ. ಸದ್ಯ ನರೇಶ್ ಅವರ ಕುಟುಂಬದಲ್ಲಿ ಕಿರಿಯ ಮಗಳು ಪ್ರಿಯಾ (7) ಉಳಿದಿದ್ದಾರೆ. ಬಾಲಕಿ ಆಕೆಯ ಚಿಕ್ಕಮ್ಮನೊಂದಿಗೆ ಕಳೆದ ಎರಡು ತಿಂಗಳಿನಿಂದ ಝಾನ್ಸಿಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕೃಷಿಕನಾಗಿದ್ದ ನರೇಶ್ ಕುಮಾರ್, ಝಾನ್ಸಿಯಲ್ಲಿ ಡಾಬಾವನ್ನು ತೆರೆದು ಕಳೆದ ಆರು ತಿಂಗಳಿನಿಂದ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದರು. ಪಲ್ವಾಲ್‌ನಲ್ಲಿರುವ ತಮ್ಮ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ತನ್ನ ಕುಟುಂಬದೊಂದಿಗೆ ಇರಲು ಝಾನ್ಸಿಯಿಂದ ಔರಂಗಾಬಾದ್‌ಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನರೇಶ್ ಕುಮಾರ್ ಅವರ ತಂದೆ ಲಕ್ಕಿ ರಾಮ್ (73) ಬುಧವಾರ ಮುಂಡ್ಕತಿ ಪೊಲೀಸ್ ಠಾಣೆಯಲ್ಲಿ ತನ್ನ ಮಗ ತನ್ನ ಕುಟುಂಬದವರನ್ನು ಕೊಂದಿದ್ದಾನೆ. ಬಳಿಕ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಕೊರೊನಾ ಸಂಕಷ್ಟ: ಮಗಳನ್ನು ನೇಣಿಗೇರಿಸಿ ತಾಯಿ ಆತ್ಮಹತ್ಯೆ ಯತ್ನ, ಮಗಳು ಸಾವು


