ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ದೇಶದೆಲ್ಲೇಡೆ ಪ್ರತಿಭಟನೆ ನಡೆದು, ರೈತರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ, ಇಡೀ ದೇಶ ದುಖಃದಲ್ಲಿದೆ. ಇದೆ ಸಮಯದಲ್ಲಿ ಪ್ರಧಾನಿ ಮೋದಿ ಯುಪಿಗೆ ಭೇಟಿ ನೀಡಿದ್ದು, 75 ವರ್ಷಗಳ ಸ್ವಾತಂತ್ರ್ಯ ಅಭಿಯಾನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಕೇಂದ್ರ ಸರ್ಕಾರದ ಒಂದು ವರ್ಷದ ಅಭಿಯಾನದ ಭಾಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ಭೇಟಿ ನೀಡಿದ್ದಾರೆ.
ಯುಪಿಯ ನಗರಾಭಿವೃದ್ಧಿ ಇಲಾಖೆಯು ಆಯೋಜಿಸಿರುವ ಮೂರು ದಿನಗಳ ನಗರ ಸಮಾವೇಶ ಕಾರ್ಯಕ್ರಮ ‘ಆಜಾದಿ@75-ನ್ಯೂ ಅರ್ಬನ್ ಇಂಡಿಯಾ: ಟ್ರಾನ್ಸ್‌ಫಾರ್ಮಿಂಗ್ ಅರ್ಬನ್ ಲ್ಯಾಂಡ್‌ಸ್ಕೇಪ್’ ಕಾನ್ಫರೆನ್ಸ್-ಕಮ್-ಎಕ್ಸ್‌ಪೋ ಉದ್ಘಾಟಿಸಿದ್ದಾರೆ.
ಭಾನುವಾರ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ರೈತರು ಮತ್ತು ಸ್ಥಳೀಯ ಪತ್ರಕರ್ತರು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದಾರೆ. ಇದಕ್ಕೆ ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ. ಉತ್ತರ ಪ್ರದೇಶ ನೋವಿನಲ್ಲಿದೆ ಈ ಸಮಯದಲ್ಲಿ ಪ್ರಧಾನಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದು ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಸಚಿವರ ಬೆಂಗಾವಲು ವಾಹನ ಹತ್ತಿಸಿ ನಾಲ್ವರು ರೈತರ ಹತ್ಯೆ; ನಂತರದ ಪ್ರತಿರೋಧದಲ್ಲಿ ನಾಲ್ವರ ಸಾವು
उप्र किसानों की हत्याओं को लेकर शोकाकुल है, ये महोत्सव का समय नहीं है।
— Akhilesh Yadav (@yadavakhilesh) October 5, 2021
ಉತ್ತರ ಪ್ರದೇಶ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. “ರೈತರ ಕೊಲೆಗೆ ಉತ್ತರ ಪ್ರದೇಶ ಶೋಕದಲ್ಲಿದೆ. ಇದು ಸಂಭ್ರಮದ ಸಮಯವಲ್ಲ” ಎಂದಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪ್ರಧಾನಿಯವರ ಲಕ್ನೋ ಭೇಟಿಗೆ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
— Priyanka Gandhi Vadra (@priyankagandhi) October 5, 2021
“ಪ್ರಧಾನಿ ಮೋದಿಯವರೆ, ನೀವು ಆಜಾದಿ ಅಮೃತ್ ಮಹೋತ್ಸವಕ್ಕಾಗಿ ಲಕ್ನೋಗೆ ಬರುತ್ತಿದ್ದೀರಿ ಎಂದು ನಾನು ಕೇಳಿದೆ. ನೀವು ಈ ವಿಡಿಯೋವನ್ನು ನೋಡಿದ್ದೀರಾ?” ಎಂದು ಪ್ರಿಯಾಂಕ ಗಾಂಧಿ ವೈರಲ್ ವಿಡಿಯೋವೊಂದನ್ನು ತಮ್ಮ ಮೊಬೈಲ್‌ನಿಂದ ಪ್ರದರ್ಶಿಸಿದ್ದಾರೆ.
“ರೈತರ ಮೇಲೆ ಕಾರು ಹರಿಸಿ ಕೊಂದ ಈ ಮನುಷ್ಯನನ್ನು ಏಕೆ ಇನ್ನೂ ಬಂಧಿಸಲಾಗಿಲ್ಲ? ಲಖಿಂಪುರ್ ಖೇರಿಗೆ ಭೇಟಿ ನೀಡಲು ಬಯಸುವ ನಮ್ಮಂತಹ ನಾಯಕರನ್ನು ಯಾವುದೇ ಎಫ್‌ಐಆರ್ ಅಥವಾ ಆದೇಶವಿಲ್ಲದೆ ಬಂಧಿಸಲಾಗಿದೆ? ಈ ಮನುಷ್ಯ ಏಕೆ ಮುಕ್ತನಾಗಿದ್ದಾನೆ ಎಂದು ತಿಳಿಯಲು ನಾನು ಬಯಸುತ್ತೇನೆ? ಎಂದು ಪ್ರಿಯಾಂಕ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿಯೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಹತ್ಯೆಗೀಡಾದ ರೈತ ಕುಟುಂಬಗಳ ಭೇಟಿಗೆ ಹೊರಟಿದ್ದ ಪ್ರಿಯಾಂಕ ಗಾಂಧಿ ವಶಕ್ಕೆ ಪಡೆದ ಪೊಲೀಸರು: ತೀವ್ರ ವಾಗ್ವಾದ


