ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ದಲಿತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಅಪಹರಿಸಿ, ಅತ್ಯಾಚಾರ ನಡೆಸಿ ಆಕೆಗೆ ವಿಷ ಕುಡಿಯುವಂತೆ ಬಲವಂತ ಮಾಡಿದ್ದಾರೆ. ಆಕೆಗೆ ಜಾತಿ ನಿಂದೆಯನ್ನು ಮಾಡಿದ್ದಾರೆ. ಅವರು ಹೇಳಿದಂತೆ ಕೇಳದಿದ್ದರೆ ಆಕೆಯನ್ನು ಕೊಲ್ಲುವುದಾಗಿ ಮತ್ತು ಅಂತರ್ಜಾಲದಲ್ಲಿ ಅತ್ಯಾಚಾರದ ವಿಡಿಯೊ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆಕೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 28 ರಂದು ಪ್ರಕರಣದ ಎಫ್ಐಆರ್ ಅನ್ನು ಕಸ್ನಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ತಕ್ಷಣವೇ ಕೈಗೆತ್ತಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆಕೆ ಗರ್ಭಿಣಿ ಎಂದು ತಿಳಿದ ಬಳಿಕ ಘಟನೆ ಬೆಳಕಿಗೆ ಬಂದಿದೆ” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಗರ್ಭಪಾತದ ವೇಳೆ ಅತ್ಯಾಚಾರ ಸಂತ್ರಸ್ತೆ ಸಾವು, ವೈದ್ಯ ಸೇರಿ ನಾಲ್ವರ ಬಂಧನ
“ಆಕೆ ಗರ್ಭಿಣಿ ಎಂದು ತಿಳಿದ ಬಳಿಕ, ತನ್ನ ಪೋಷಕರಿಗೆ ಇಡೀ ಘಟನೆಯನ್ನು ಸಂತ್ರಸ್ತೆ ವಿವರಿಸಿದ್ದಾರೆ. ಬಳಿಕ ಬಾಲಕಿಯ ತಂದೆ ಪೊಲೀಸ್ ಠಾಣೆಗೆ ಬಮದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಪ್ರಸ್ತುತ ತನ್ನ ಹೆತ್ತವರೊಂದಿಗೆ ಇದ್ದಾರೆ” ಎಂದು ಕಸ್ನಾ ಪೊಲೀಸ್ ಠಾಣೆಯ ಉಸ್ತುವಾರಿ ಸುಧೀರ್ ಕುಮಾರ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 328 (ವಿಷ, ಇತ್ಯಾದಿಗಳಿಂದ ನೋವುಂಟು ಮಾಡುವುದು), 365 (ಒಬ್ಬ ವ್ಯಕ್ತಿಯನ್ನು ರಹಸ್ಯವಾಗಿ ಅಥವಾ ತಪ್ಪಾಗಿ ಬಂಧಿಸಲು ಉದ್ದೇಶಪೂರ್ವಕವಾಗಿ ಅಪಹರಣ), 376 ಡಿ (ಸಾಮೂಹಿಕ ಅತ್ಯಾಚಾರ) ಇತ್ಯಾದಿಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .
ಜೊತೆಗೆ ಕಠಿಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989, ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ2012 ರ ಅಡಿಯಲ್ಲಿಯೂ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ರಾಜ್ಯದಲ್ಲಿ ಅತ್ಯಾಚಾರ ಯತ್ನವನ್ನು ವಿರೋಧಿಸಿದ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಕಳೆದ ಭಾನುವಾರ ರಾತ್ರಿ ಯಾದಗಿರಿ ಜಿಲ್ಲೆಯಲ್ಲಿ ನಡೆದಿತ್ತು. ಪ್ರಮುಖ ಆರೋಪಿ ಘಟನೆಯ ಪೊಲೀಸರ ಮುಂದೆ ಶರಣಾಗಿದ್ದನು. ಕೃತ್ಯಕ್ಕೆ ಸಹಕರಿಸಿದ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಯಾದಗಿರಿ: ಅತ್ಯಾಚಾರ ವಿರೋಧಿಸಿದ್ದಕ್ಕೆ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ; ಮತ್ತೆ ಇಬ್ಬರ ಬಂಧನ


