ಕಳೆದ ಏಳು ದಿನಗಳಿಂದ ಪ್ರತಿದಿನ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ನಿರಂತರ ಏರಿಕೆಯಾಗಿದೆ. ಪ್ರತಿದಿನ ಲೀಟರ್ ಮೇಲೆ ಸರಾಸರಿ 31 ಪೈಸೆಯಷ್ಟು ಬೆಲೆ ಹೆಚ್ಚಳವಾಗುತ್ತಿದ್ದು ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ ಬೆಲೆ 108.08ರೂ ಗೆ ತಲುಪಿದೆ. ಅದೇ ರೀತಿಯಲ್ಲಿ ಡೀಸೆಲ್ 98.89 ರೂ ತಲುಪಿದರೆ ಕರ್ನಾಟಕದ ಕೆಲವು ನಗರಗಳಲ್ಲಿ ನೂರು ರೂ ದಾಟಿದೆ. ಇದೇ ಸಂದರ್ಭದಲ್ಲಿ ಉಚಿತ ಕೊರೊನಾ ಲಸಿಕೆ ನೀಡಿದ್ದೆ ಇಂಧನ ಬೆಲೆ ಗಗನಕ್ಕೇರಲು ಕಾರಣ ಎಂದು ಕೇಂದ್ರ ಸಚಿವ ರಾಮೇಶ್ವರ್ ತೇಲಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅಸ್ಸಾಂನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಇಂಧನ ಬೆಲೆಗಳಲ್ಲಿ ಹೆಚ್ಚಳವಾಗಿಲ್ಲ. ಆದರೆ ತೆರಿಗೆಗಳು ಹೆಚ್ಚಿವೆ. ಈ ತೆರಿಗೆಯ ಹಣವನ್ನು ಉಚಿತ ಕೋವಿಡ್ ಲಸಿಕೆ ನೀಡಲು ಸಹಾಯಧನವಾಗಿ ಬಳಸಲಾಗಿದೆ. ನೀವು ಉಚಿತ ಲಸಿಕೆ ಪಡೆದಿರಬೇಕು ಅಲ್ಲವೇ? ಅದಕ್ಕೆ ಹಣ ಎಲ್ಲಿಂದ ಬಂದಿದೆ?” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಸಹ ಇದೇ ರೀತಿಯ ಹೇಳಿಕೆ ನೀಡಿದ್ದರು. ಉಚಿತ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳು ಜಾರಿಯಲ್ಲಿರುವುದರಿಂದ ಇಂಧನಗಳ ಮೇಲಿನ ತೆರಿಗೆ ಹೆಚ್ಚು ಮಾಡಲಾಗಿದೆ. ಹಾಗಾಗಿ ಪೆಟ್ರೋಲ್ – ಡೀಸೆಲ್ ಬೆಲೆ ಇಳಿಸಲು ಸಾಧ್ಯವಿಲ್ಲ ಎಂದಿದ್ದರು.
ಇನ್ನು ನೂತನ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಜುಲೈ 27 ರಂದು ಮಾತನಾಡಿ “2020-21ರ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್‌ನಿಂದಾಗಿ 3.4 ಲಕ್ಷ ಕೋಟಿ ರೂಗಳನ್ನು ಗಳಿಸಿದ್ದು, ಅದರ ಬಹುಪಾಲು ಹಣವನ್ನು ಉಚಿತ ಲಸಿಕೆ ಮತ್ತು ಕೋವಿಡ್ ಪರಿಹಾರ ಕಾರ್ಯಗಳಿಗಾಗಿ ಬಳಸಲಾಗಿದೆ” ಎಂದು ತಿಳಿಸಿದ್ದರು. ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್ ಆಗಿ ಒಂದು ವರ್ಷದಲ್ಲಿ 2,33,296 ಲಕ್ಷ ಕೋಟಿ ರೂ ಮತ್ತು ಪೆಟ್ರೋಲ್ ಮೇಲೆ 1,01,598 ಲಕ್ಷ ಕೋಟಿ ರೂಗಳು ಸಂಗ್ರಹ ಆಗಿದೆ ಎಂದು ಲಿಖಿತವಾಗಿ ಉತ್ತರಿಸಿದ್ದಾರೆ.
ವಾಸ್ತವವೇನು?
ಆರಂಭದಲ್ಲಿ ವ್ಯಾಕ್ಸಿನ್ ಗಾಗಿ ಎಂದೇ 2021ರ ಬಜೆಟ್ಟಿನಲ್ಲಿ 35,000 ಕೋಟಿಗಳನ್ನು ಕೇಂದ್ರ ಸರ್ಕಾರ ಎತ್ತಿಡಲಾಗಿತ್ತು… ನಂತರ ಕೇಂದ್ರಕ್ಕೆ ಒಂದು ಡೋಸ್ ವ್ಯಾಕ್ಸಿನ್‌ಗೆ 150 ರೂ ಹಾಗು ರಾಜ್ಯಗಳಿಗೆ 450 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 800 ರೂಗೆ ನೀಡಲಾಗುವುದು ಎಂದು ಘೋಷಿಸಿತು. ಆಗ ಕೆಲವು ರಾಜ್ಯಗಳು ಹಣ ನೀಡಿ ಲಸಿಕೆ ಖರೀದಿಸಿದವರು. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದರು.
ನಂತರ ಜೂನ್ 21 ರಂದು ಕೇಂದ್ರ ಸರ್ಕಾರವೇ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿತು. ಆಗ ಅದಕ್ಕೆ 45,000-50,000 ಕೋಟಿ ರೂಗಳಷ್ಟು ಹೊರೆ ಬೀಳುತ್ತದೆ ಎಂದು ತಜ್ಞರ ಅಭಿಪ್ರಾಯ ಆಧರಿಸಿ ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿತ್ತು.
ಒಟ್ಟಿನಲ್ಲಿ ಭಾರತದ 18 ವರ್ಷ ಮೇಲ್ಪಟ್ಟ 94 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ನೀಡಲು ಒಟ್ಟು 1 ಲಕ್ಷ ಕೋಟಿ ರೂ ಹಣ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಇನ್ನು ಮುಂದುವರಿದು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಉಚಿತ ಪಡಿತರ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. 2013 ರಲ್ಲಿ ಆಹಾರ ಭದ್ರತಾ ಕಾಯಿದೆ ಜಾರಿಯಾದ ಮೇಲೆ ಈ ದೇಶದ 83 ಕೋಟಿ ಜನರಿಗೆ ಪ್ರತಿವರ್ಷ ರಿಯಾಯತಿ ದರದಲ್ಲಿ ಆಹಾರ ಪಡಿತರವನ್ನು ಒದಗಿಸಲು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಪ್ರತಿವರ್ಷ ಕೇಂದ್ರ ಬಜೆಟ್ಟಿನಿಂದ ಹಣವನ್ನು ಒದಗಿಸಲಾಗುತ್ತದೆ. ಅದರ ಭಾಗವಾಗಿಯೇ 2020ರಲ್ಲೇ ಈ ಬಾಬತ್ತಿಗೆ ಕೇಂದ್ರ ಬಜೆಟ್ಟಿನಲ್ಲಿ 1.15 ಲಕ್ಷ ಕೋಟಿ ಎತ್ತಿಡಲಾಗಿತ್ತು.! ಹೀಗಾಗಿ ಈ ಬಾರಿ ಕೋವಿಡ್ ನಿಂದಾಗಿ ಪಡಿತರಕ್ಕೆಂದು ಬಜೆಟ್ಟಿನಲ್ಲಿ ಎತ್ತಿಟ್ಟ ಹಣದ ಜೊತೆಗೆ ಸರ್ಕಾರಕ್ಕೆ ಹೆಚ್ಚೆಂದರೆ 15,000 ಕೋಟಿ ಖರ್ಚಾಗಿರಬಹುದು ಎನ್ನುತ್ತಾರೆ ಚಿಂತಕರಾದ ಶಿವಸುಂದರ್‌ರವರು.
ಅಂದರೆ ವ್ಯಾಕ್ಸಿನ್ ಮತ್ತು ಪಡಿತರಕ್ಕೆಂದು ಕೇಂದ್ರ ಸರ್ಕಾರ ಮೊದಲೇ ಹಣ ಎತ್ತಿಟ್ಟಿದೆ. ಅದನ್ನು ಬಜೆಟ್‌ನಲ್ಲಿಯೂ ಘೋಷಿಸಿದೆ. ಕೋವಿಡ್ ನಂತರ ಅದರ ಮೇಲೆ ಹೆಚ್ಚುವರಿಯಾಗಿ 1,15,000 ಕೋಟಿ ರೂಗಳು ಹೊರೆ ಬಿದ್ದಿದೆ ಅಷ್ಟೇ.
ಆದರೆ 2020-21ರ ಒಂದೇ ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್‌ನಿಂದಾಗಿ 3.4 ಲಕ್ಷ ಕೋಟಿ ರೂಗಳನ್ನು ಸಂಗ್ರಹಿಸಿರುವುದಾಗಿ ಒಪ್ಪಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಅದಕ್ಕೂ ಮೊದಲು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 6 ವರ್ಷದ ಆಡಳಿತದಲ್ಲಿ ಸುಮಾರು 11 ಲಕ್ಷ ಕೋಟಿ ರೂಗಳಷ್ಟು ಅಬಕಾರಿ ಸುಂಕ ಸಂಗ್ರಹಿಸಿತ್ತು. 2021 ರ ಈ ವರ್ಷದ ಎಪ್ರಿಲ್‌ನಿಂದ-ಜುಲೈವರೆಗಿನ ನಾಲ್ಕು ತಿಂಗಳಲ್ಲೇ ಸರ್ಕಾರ ಸಂಗ್ರಹಿಸಿದ ಅಬಕಾರಿ ಸುಂಕ 1 ಲಕ್ಷ ಕೋಟಿಗಿಂತ ಹೆಚ್ಚು! ಹೀಗಿರುವಾಗ ಇಷ್ಟೆಲ್ಲಾ ಹಣವನ್ನು ಲಸಿಕೆ ಮತ್ತು ಪಡಿತರಕ್ಕಾಗಿ ಬಳಸಿದ್ದೇವೆ ಎಂದು ಹೇಳುವುದು ಸಮರ್ಥನಿಯವೇ?
ಕೋವಿಡ್ ಕಾರಣಕ್ಕಾಗಿ ಲಸಿಕೆ ಮತ್ತು ಪಡಿತರದಿಂದ ಸರ್ಕಾರದ ಮೇಲೆ ಬಿದ್ದಿರುವ ಹೊರೆ 1,15,000 ಕೋಟಿ ರೂಗಳು. ಆದರೆ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯಿಂದಲೇ ಈ ಏಳು ವರ್ಷಗಳಲ್ಲಿ 15 ಲಕ್ಷ ಕೋಟಿಗೂ ಅಧಿಕ ತೆರಿಗೆ ಸಂಗ್ರಹಿಸಿದೆ. ಅದರಲ್ಲಿ ಬಹುಪಾಲನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ. ಅದರೊಂದಿಗೆ ಕೋವಿಡ್ ಪರಿಹಾರಕ್ಕಾಗಿಯೇ ಪಿಎಂ ಕೇರ್ಸ್ ಮೂಲಕ ಹಣ ಸಂಗ್ರಹಿಸಿದೆ. ಹಾಗಾಗಿ ಕೇಂದ್ರ ಸಚಿವರ ‘ಉಚಿತ ಕೊರೊನಾ ಲಸಿಕೆ ನೀಡಿದ್ದೆ ಇಂಧನ ಬೆಲೆ ಗಗನಕ್ಕೇರಲು ಕಾರಣ’ ಎಂಬ ವಾದ ಸಮರ್ಥನೀಯವಲ್ಲ ಎಂದು ತೀರ್ಮಾನಿಸಬಹುದಾಗಿದೆ.
ಇನ್ನು ಕಲವು ಬಿಜೆಪಿ ಮುಖಂಡರು ಮತ್ತು ಸಚಿವರು ಪೆಟ್ರೋಲ್ ದರ ಹೆಚ್ಚಳಕ್ಕೆ ಯುಪಿಎ ಆಡಳಿತ ಕಾಲದ ಆಯಿಲ್ ಬಾಂಡ್‌ಗಳು ಕಾರಣ ಎಂದು ವಾದಿಸಿದ್ದಾರೆ. ಆ ಕುರಿತು ನಿಜಾಂಶ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಆಯಿಲ್ ಬಾಂಡ್ ಕಾರಣ? – BJP ನಾಯಕರ ಹೇಳಿಕೆಯ ನಿಜಾಂಶವೇನು?


