ತನ್ನ ಓಟದ ವೈಖರಿ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿದ್ದ ಭಾರತದ ಹಾಲಿ ರಾಷ್ಟ್ರೀಯ ಚಾಂಪಿಯನ್ ದ್ಯುತಿ ಚಾಂದ್, ತನ್ನ ಗೆಳತಿಯೊಂದಿಗೆ ಸಂಬಂಧ ಹೊಂದಿರುವುದಾಗಿ ನೀಡಿರುವ ಬಹಿರಂಗ ಹೇಳಿಕೆಯು ಎಲ್ಲೆಡೆ ಚರ್ಚಾಸ್ಪದ ವಿಷಯವಾಗಿದೆ.
ಒಡಿಶಾ ಮೂಲದ ದ್ಯುತಿ, 100 ಮೀಟರ್ಸ್ ಓಟದಲ್ಲಿ ಏಷ್ಯನ್ ಕ್ರೀಡಾಕೂಟ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ದಾಖಲೆ ಮಾಡಿದ್ದಾರೆ.
ಓಟಗಾರ್ತಿಯಾಗಿ ಪರಿಚಿತರಾಗಿದ್ದ ಇವರು ತನ್ನ ಗೆಳತಿಯೊಂದಿಗೆ ಸಂಬಂಧ ಇದ್ದು, ಪರಸ್ಪರ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಸಲಿಂಗಕಾಮವನ್ನು ಬಹಿರಂಗವಾಗಿ ಹೇಳಿಕೊಂಡ ಮೊದಲ ಅಥ್ಲಿಟ್ ಎಂಬ ಹೆಗ್ಗಳಿಕೆಯು ಇವರದಾಗಿದೆ.
ದ್ಯುತಿ ಅವರ ಸಲಿಂಗಕಾಮದ ವಿಷಯವನ್ನು ತಿರಸ್ಕರಿಸಿರುವ ಅವರ ಕುಟುಂಬದ ಸದಸ್ಯರು, ಅವಳಿಗೆ ಏನು ತಿಳಿಯುವುದಿಲ್ಲ. ಯಾರದೋ ಒತ್ತಾಯಕ್ಕೆ ಮಣಿದು ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮನೆಯಿಂದ ಬಹಿಷ್ಕಾರ ಹಾಕುವುದಾಗಿಯೂ ಒತ್ತಡ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದ್ಯುತಿ `ಸಂಗಾತಿಯ ಆಯ್ಕೆ ವೈಯಕ್ತಿಕವಾದದ್ದು, ನಾನು ನನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪರಸ್ಪರ ಒಪ್ಪಿಗೆಯಿಂದಲೇ ನಾವಿಬ್ಬರು ಪ್ರೀತಿಸುತ್ತಿದ್ದೇವೆ. ನಾನು ಮೊದಲಿನಿಂದಲೂ ಸಲಿಂಗಕಾಮವನ್ನು ಬೆಂಬಲಿಸಿದ್ದೆ. ಇನ್ನು ಮುಂದೆಯೂ ಬೆಂಬಲಿಸುತ್ತೇನೆ. ನನ್ನ ಕುಟುಂಬದವರ ಒತ್ತಡಕ್ಕೆ ನಾನು ಮಣಿಯುವುದಿಲ್ಲ’ ಎಂದಿದ್ದಾರೆ.
ಅಥ್ಲೆಟ್ನಲ್ಲಿ ಮಿಂಚುತ್ತಿರುವ ದ್ಯುತಿ, ತನ್ನ ವೈಯಕ್ತಿಕ ಜೀವನದಲ್ಲಿ ತಾನು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ದಿಟ್ಟತೆಯಿಂದಿರುವುದು ಸಂತಸದ ವಿಷಯ.
ಇದನ್ನು ಓದಿ: ಐಪಿಎಲ್ :ರಿಯಾನ್ ಪರಾಗ್ ಎಂಬ ತಾರೆಯ ಅದ್ಭುತ ಆಟ
ಸುಪ್ರೀಂಕೋರ್ಟ್ ಕಳೆದ ವರ್ಷವಷ್ಟೇ `ಸಲಿಂಗಕಾಮ ಅಪರಾಧವಲ್ಲ’ ಎಂಬ ಕಾನೂನು ಭಾರತದಲ್ಲಿ ಮಾಡಿದೆ. ಆಗಿದ್ದರೂ ಸಲಿಂಗಕಾಮದ ಪ್ರಕರಣಗಳು ಬೆಳಕಿಗೆ ಬಂದಾಗ ಆ ವ್ಯಕ್ತಿಯ ಕುಟುಂಬವಾಗಲಿ, ಇಡೀ ಸಮಾಜವಾಗಲಿ ಅವರ ನಿರ್ಧಾರವನ್ನು ಒಪ್ಪಿಕೊಳ್ಳದೇ ಇರುವುದು ಇಡೀ ಸಮಾಜದ ಮೌಢ್ಯ, ಅಮಾನವೀಯ ಮನಸ್ಥಿತಿಯನ್ನು ತೋರಿಸುತ್ತದೆ.
ತಾನು ಇಷ್ಟಪಟ್ಟವರು ಅದೇ ಲಿಂಗದವರು ಎಂಬ ಕಾರಣಕ್ಕೆ ಕುಟುಂಬ ಹಾಗೂ ಇಡೀ ಸಮಾಜ ಅವರನ್ನು ಅಪರಾಧಿಯಾಗಿ ನೋಡುವುದು ಯಾವ ರೀತಿ ಸರಿ? ಪರಸ್ಪರ ಪ್ರೀತಿ ಹಾಗೂ ಸಮ್ಮತಿಯನ್ನು ಕುಟುಂಬವಾಗಲೀ ಸಮಾಜವಾಗಲೀ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದರ ಹಿಂದಿನ ಕಾರಣ ಸಮಾಜದಲ್ಲಿ ಸಲಿಂಗಕಾಮದ ಕುರಿತು ಅರಿವಿನ ಕೊರತೆ ಇರುವುದು ಕಂಡುಬರುತ್ತದೆ.
ದ್ಯುತಿ ಪ್ರಕರಣ ಮೊದಲನೆಯದಲ್ಲ. ಇಂತಹ ನೂರಾರು ಪ್ರೇಮ ಘಟನೆಗಳು ನಡೆದಿದ್ದರು ಅವು ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದ ಬೆರಳೆಣಿಕೆ ಪ್ರಕರಣಗಳಲ್ಲಿ ಆ ವ್ಯಕ್ತಿಯ ಅಭಿಪ್ರಾಯಕ್ಕಿಂತ ಜನರ ಅಭಿಪ್ರಾಯಗಳಿಗೆ ಮನ್ನಣೆ ದೊರೆತು, ವ್ಯಕ್ತಿಯ ಭಾವನೆಗಳನ್ನು ಚಿವುಟಿ ಹಾಕಲಾಗುತ್ತದೆ.
ಹಾಗಾಗಿ ಸಲಿಂಗಕಾಮದಂತಹ ಸೂಕ್ಷ್ಮ ಹಾಗೂ ಮಾನವೀಯ ಕಾನೂನುಗಳನ್ನು ಜಾರಿ ಮಾಡುವುದರ ಜೊತೆಗೆ ಈ ಕುರಿತು ಜನರಿಗೆ ಜಾಗೃತಿ ಮೂಡಿಸುವ ಜವಾಬ್ದಾರಿಯೂ ನ್ಯಾಯಾಂಗದ್ದಾಗಿರಬೇಕು. ಇಲ್ಲವಾದಲ್ಲಿ ಇಂತಹ ಎಷ್ಟೋ ಕಾನೂನುಗಳು ಪೇಪರ್ಗಳ ಪುಟಗಳಲ್ಲಿ ಮಾತ್ರ ಉಳಿದು ಹೋಗುವಂತಹ ಪರಿಸ್ಥಿತಿ ಬರುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರಗಳು ಸಮಾಜದಲ್ಲಿ ಸಲಿಂಗಕಾಮದ ಕುರಿತಾಗಿ ಅರಿವು ಮೂಡಿಸಲು ಮುಂದಾಗಬೇಕು.
ಇದನ್ನು ಓದಿ: ಕ್ಯಾಪ್ಟನ್ ಕೂಲ್ ಧೋನಿಗೂ ಸಿಟ್ಟು ಬಂತು ನೋಡಿ !


