ಕ್ಯಾಪ್ಟನ್ ಕೂಲ್ ಧೋನಿಗೂ ಸಿಟ್ಟು ಬಂತು ನೋಡಿ !

|ಅಂತಃಕರಣ |

ಕ್ರಿಕೆಟ್ ರಂಗದಲ್ಲಿ ಬಹಳ ಸನ್ನಿವೇಶಗಳು ನಮಗೆ ಬಹಳ ಕಡಿಮೆ ನೋಡಲು ಸಿಗುತ್ತವೆ ಅಥವಾ ನೋಡಲು ಸಿಗುವುದೇ ಇಲ್ಲ ! ಉದಾಹರಣೆಗೆ ಕ್ರಿಸ್ ಗೇಲ್ ಡೈವ್ ಮಾಡುವುದು, ವಿರಾಟ್ ಕೊಹ್ಲಿ ಕ್ರಿಕೆಟ್ ಪುಸ್ತಕದೊಳಗಿರದ ಹೊಸ ಶಾಟ್ ಹೊಡೆಯುವುದು, ತೆಂಡುಲ್ಕರ್ ಸ್ಟೇಡಿಯಂನಾಚೆ ಸಿಕ್ಸರ್ ಹೊಡೆಯುವುದು, ಕೀರನ್ ಪೊಲಾರ್ಡ್ ಕ್ಯಾಚ್ ಬಿಡುವುದು. ಇದೇ ಪಟ್ಟಿಯಲ್ಲಿ ಬರುವ ಇನ್ನೂ ಒಂದು ಅತ್ಯಂತ ವಿರಳವಾದ ಸಂಗತಿಯೇನೆಂದರೆ ಮಹೇಂದ್ರ ಸಿಂಗ್ ಧೋನಿ ಕೋಪಗೊಳ್ಳುವುದು ! ಹೌದು, ಕ್ಯಾಪ್ಟನ್ ಕೂಲ್ ಎನಿಸಿಕೊಂಡಿರುವ ಎಂ ಎಸ್ ಧೋನಿ ಕೋಪಗೊಳ್ಳುವ ಒಂದು ಸನ್ನಿವೇಶ ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ನಿರ್ಮಾಣವಾಯಿತು.

ಏಪ್ರಿಲ್ 11ರಂದು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ 151 ರನ್ ಗಳಿಸಿತು. 152ರ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಬಹಳ ಬೇಗ ತನ್ನ ಟಾಪ್ 4 ಆಟಗಾರರನ್ನು ಕಳೆದುಕೊಂಡಿತು. ಆ ಸಮಯದಲ್ಲಿ ಜೊತೆಯಾದ ಅಂಬಾಟಿ ರಾಯುಡು ಹಾಗೂ ಮಹೇಂದ್ರ ಸಿಂಗ್ ಧೋನಿ 95ರ ಅತ್ಯಮೂಲ್ಯ ಜೊತೆಯಾಟದೊಂದಿಗೆ ಚೆನ್ನೈ ಗೆಲುವಿನ ಸನಿಹ ಬಂದಿತು. ಕೊನೆಯ ಓವರ್‍ನಲ್ಲಿ ಚೆನ್ನೈ ತಂಡಕ್ಕೆ 18 ರನ್‍ಗಳು ಬೇಕಿತ್ತು. ಆ ಸಮಯದಲ್ಲಿ ಬೌಲ್ ಮಾಡಲು ಬಂದಿದ್ದು ಬೆನ್ ಸ್ಟೋಕ್ಸ್. ಜಡೇಜ ಸ್ಟ್ರೈಕರ್ ಆಗಿದ್ದರೆ ನಾನ್ ಸ್ಟ್ರೈಕರ್ ಆಗಿ ಎಂ ಎಸ್ ಧೋನಿ ಇದ್ದರು. ಮೊದಲ ಎಸೆತದಲ್ಲಿಯೇ ಜಡೇಜ ಸಿಕ್ಸರ್ ಹೊಡೆದು ಒತ್ತಡ ಅಲ್ಪ ಮಟ್ಟಿಗೆ ಕಮ್ಮಿ ಮಾಡಿದರು. ಎರಡನೇ ಎಸೆತದಲ್ಲಿ ಜಡೇಜ ಒಂದು ರನ್ ಓಡಿದರು ! ಅದು ನೋ ಬಾಲ್ ಸಹ ಆಗಿತ್ತು. ಫ್ರೀ ಹಿಟ್ ಎಸೆತದಲ್ಲಿ ಧೋನಿ ಎರಡು ರನ್ ಓಡಿದರು. ಕೊನೆಯ ನಾಲ್ಕು ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 8 ರನ್‍ಗಳ ಅವಶ್ಯಕತೆಯಿತ್ತು. ಆ ಸಮಯದಲ್ಲಿ ಅತ್ಯುತ್ತಮ ಯಾರ್ಕರ್ ಕಾರ್ಯರೂಪಕ್ಕೆ ತಂದ ಬೆನ್ ಸ್ಟೋಕ್ಸ್ ಧೋನಿಯವರನ್ನು ಬೌಲ್ಡ್ ಮಾಡಿದರು. ದ ಗ್ರೇಟ್ ಫಿನಿಶರ್ ಅನ್ನು ಔಟ್ ಮಾಡಿದ ಖುಷಿಯಲ್ಲಿ ರಾಜಸ್ಥಾನ ತಂಡವಿತ್ತು!


ಕೊನೆಯ 3 ಎಸೆತಗಳಲ್ಲಿ 8 ರನ್ ಅಗತ್ಯವಿತ್ತು. ಹೊಸ ಬ್ಯಾಟ್ಸ್‍ಮನ್ ನ್ಯೂಜಿಲೆಂಡ್‍ನ ಮಿಷೆಲ್ ಸ್ಯಾಂಟನರ್ ಕ್ರೀಸ್‍ನಲ್ಲಿದ್ದರು. ಈ ಸಮಯದಲ್ಲಿ ಬೆನ್ ಸ್ಟೋಕ್ಸ್ ಫುಲ್ ಟಾಸ್ ಎಸೆತವನ್ನು ಬೌಲ್ ಮಾಡಿದರು. ಸ್ಟ್ರೈಟ್ ಅಂಪೈರ್ (ನಾನ್ ಸ್ಟ್ರೈಕರ್ ಕಡೆಯಿದ್ದ ಅಂಪೈರ್) ಅದನ್ನು ನೋಬಾಲ್ (ಬ್ಯಾಟ್ಸ್‍ಮನ್‍ನ ಸೊಂಟಕ್ಕಿಂತ ಮೇಲಿದ್ದ ಕಾರಣ) ಎಂದು ಸನ್ನೆ ಮಾಡಿದರು. ಆದರೆ ಅದಾದ ಕೆಲವು ಕ್ಷಣಗಳ ನಂತರ ಲೆಗ್ ಅಂಪೈರ್ ಅದು ನೋಬಾಲ್ ಅಲ್ಲ ಸರಿಯಾದ ಎಸೆತ ಎಂದರು ! ಇದನ್ನು ನೋಡಿ ಬೌಂಡರಿಯಾಚೆಗಿನ ಡಗೌಟ್‍ನಲ್ಲಿದ್ದ ಎಂ ಎಸ್ ಧೋನಿ ಪೂರ್ತಿ ಕೋಪಗೊಂಡರು. ಕ್ರೀಸ್‍ನಲ್ಲಿದ್ದ ಜಡೇಜ ಹಾಗೂ ಸ್ಯಾಂಟನರ್ ಅಂಪೈರ್‍ಗಳ ಬಳಿ ಹೋಗಿ ಪ್ರಶ್ನಿಸತೊಡಗಿದರು. ಇದರ ಮಧ್ಯೆಯೇ ಧೋನಿ ಕ್ರೀಡಾಂಗಣಕ್ಕೆ ಕಾಲಿಟ್ಟರು ! ಅಷ್ಟು ಕೋಪಗೊಂಡಿರುವ ಧೋನಿಯನ್ನು ನಾನು ಇಷ್ಟು ವರ್ಷ ಒಮ್ಮೆ ಸಹ ನೋಡಿರಲಿಲ್ಲ!

ಲೆಗ್ ಅಂಪೈರ್ ಬಳಿ ಹೋಗಿ ಸ್ಟ್ರೈಟ್ ಅಂಪೈರ್‍ರ ಕಡೆಗೆ ಬೆರಳು ಮಾಡುತ್ತಾ ಅವರ ತಪ್ಪನ್ನು ಹೇಳತೊಡಗಿದರು. ಸ್ಟೋಕ್ಸ್, ಧೋನಿ ಹಾಗೂ ಅಂಪೈರ್‍ಗಳ ಮಧ್ಯೆ ಕೆಲವು ಕ್ಷಣಗಳ ಕಾಲ ಮಾತಿನ ಚಕಮಕಿ ನಡೆಯಿತು. ಆ ಎಸೆತವನ್ನು ನೋ ಬಾಲ್ ಎನ್ನದೇ ಸರಿಯಾದ ಎಸೆತ ಎಂದು ಪರಿಗಣಿಸಲಾಯಿತು. ಧೋನಿ ಕ್ರೀಡಾಂಗಣದಿಂದ ಹೊರನಡೆದರು.

ಅಂದ ಹಾಗೆ ಆ ಎಸೆತದಲ್ಲಿ ಎರಡು ರನ್‍ಗಳು ಬಂದವು. ಕೊನೆಯ ಎರಡು ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 6 ರನ್ ಅಗತ್ಯವಿತ್ತು. ನಂತರದ ಎಸೆತದಲ್ಲಿ ಸಹ ಸ್ಯಾಂಟನರ್ ಎರಡು ರನ್ ಓಡಿದರು. 1 ಎಸೆತದಲ್ಲಿ 4 ರನ್‍ಗಳ ಅವಶ್ಯಕತೆಯಿತ್ತು ! ಕೊನೆಯ ಎಸೆತವನ್ನು ಸ್ಟೋಕ್ಸ್ ವೈಡ್ ಮಾಡಿದ್ದರಿಂದ ಮತ್ತೊಂದು ಅವಕಾಶ ಸ್ಯಾಂಟನರ್‍ಗೆ ದೊರೆಯಿತು. ಕೊನೆಯ ಎಸೆತದಲ್ಲಿ 3 ರನ್ ಗಳಿಸಬೇಕಾಗಿತ್ತು. ಆಗ ಸ್ಯಾಂಟನರ್ ಸ್ಟ್ರೈಟ್ ಆಗಿ ಸಿಕ್ಸ್ ಹೊಡೆದು ಚೆನ್ನೈ ತಂಡವನ್ನು ಗೆಲ್ಲಿಸಿದರು. ತಮ್ಮ ಎರಡನೇ ಪಂದ್ಯದಲ್ಲಿಯೇ ಸ್ಯಾಂಟನರ್ ಚೆನ್ನೈಗೆ ಪಂದ್ಯ ಗೆಲ್ಲಿಸಿ ತಂಡದ ಹೀರೋ ಆಗಿ ಬಿಟ್ಟರು !

ಅಂಪೈರಿಂಗ್ ವಿವಾದಕ್ಕೆ ಬರುವುದಾದರೆ ಧೋನಿಯವರು ಔಟಾದ ಮೇಲೆ ಕ್ರೀಡಾಂಗಣ ಪ್ರವೇಶಿಸಿದ್ದು ಸರಿಯಾ ಇಲ್ಲವಾ ಎಂಬ ಪ್ರಶ್ನೆ ಬರುತ್ತದೆ. ಅಷ್ಟು ಶಾಂತವಾದ ಧೋನಿ ಕೋಪಗೊಳ್ಳಲು ಕಾರಣವೇನು ಎಂಬ ಕುತೂಹಲ ಸಹ ಮೂಡುತ್ತದೆ.

ಪ್ರಾಯಶಃ ಹಿಂದಿನ ಎಸೆತದಲ್ಲಿಯೇ ಔಟಾಗಿ ತಂಡವನ್ನು ಗೆಲುವಿನ ದಡ ಸೇರಿಸಲಾಗದ ಬೇಜಾರು ಧೋನಿಯವರಿಗಿದ್ದರಬಹುದು. ಕ್ರೀಸ್‍ನಲ್ಲಿದ್ದವರಿಬ್ಬರೂ ಸಹ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್‍ಗಳಲ್ಲದ ಕಾರಣ ಚೆನ್ನೈ ಆ ಸಮಯದಲ್ಲಿ ಸೋಲಿನ ಪರಿಸ್ಥಿತಿಯಲ್ಲಿಯೇ ಇತ್ತು ಎನ್ನಬಹುದು. ನಂತರದ ಎಸೆತ ನೋಬಾಲ್ ಎಂದು ಹೇಳಿ ನಂತರ ಅದನ್ನು ಹಿಂತೆಗೆದುಕೊಂಡ ಕಾರಣ ಪೂರ್ಣವಾಗಿ ಅಸಮಾಧಾನಗೊಂಡ ಧೋನಿ ಹೀಗೆ ಮಾಡಿದರು ಎನ್ನುವುದು ಒಂದು ಸಾಧ್ಯತೆಯಾದರೆ ಈ ಬಾರಿಯ ಐಪಿಎಲ್ ಅಂಪೈರ್‍ಗಳ ತಪ್ಪುಗಳಿಗೆ ಪ್ರಸಿದ್ಧವಾಗಿದೆ ಎನ್ನಬಹುದು. ಆರ್‍ಸಿಬಿ ಹಾಗೂ ಮುಂಬೈ ಎದುರಿನ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ 7 ರನ್ ಅಗತ್ಯವಿದ್ದಾಗ ಲಸಿತ್ ಮಾಲಿಂಗ ನೋಬಾಲ್ ಮಾಡಿದರು (ಗೆರೆ ದಾಟಿ). ಆದರೆ ಅಂಪೈರ್ ಅದನ್ನು ನೀಡಲಿಲ್ಲ. ಇದೇ ಕಾರಣ ಆರ್‍ಸಿಬಿ ಸೋತು ಹೋದರು ಹಾಗೂ ನಂತರ ರಿಪ್ಲೈನಲ್ಲಿ ಆ ಎಸೆತ ನೋಬಾಲ್ ಆಗಿದ್ದು ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಪಂದ್ಯ ಮುಗಿದ ಕಾರಣ ಏನೂ ಮಾಡುವಂತಿರಲಿಲ್ಲ. ಆರ್‍ಸಿಬಿ ನಾಯಕ ಕೊಹ್ಲಿ ಪೋಸ್ಟ್-ಮ್ಯಾಚ್ ಪ್ರೆಸೇಂಟೇಷನ್‍ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರೂ ಅದು ಪಂದ್ಯದ ಮೇಲೆ ಪರಿಣಾಮವೇನೂ ಬೀರಲಿಲ್ಲ. ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ಅಂಕಿತ್ ರಜಪೂತ್ ಕೊನೆಯ ಓವರ್‍ನಲ್ಲಿ ಮಾಡಿದ ಒಂದು ಎಸೆತ ನೋ ಬಾಲ್ ಆಗಿರದಿದ್ದರೂ (ಅವರು ಗೆರೆ ದಾಟಿರದಿದ್ದರೂ) ಅಂಪೈರ್ ನೋ ಬಾಲ್ ನೀಡಿದರು. ಆ ಸಮಯದಲ್ಲಿಯೂ ಸಹ ಅದನ್ನು ಸರಿಯಾಗಿ ಗಮನಿಸದ ಫೀಲ್ಡಿಂಗ್ ಸೈಡ್ (ಪಂಜಾಬ್) ಆಟಗಾರರು ಅಂಪೈರ್‍ಗೆ ಪ್ರಶ್ನಿಸಲಿಲ್ಲ. ಆದರೆ ಈ ಸಂದರ್ಭದಲ್ಲಿ ಚೆನ್ನೈ ತಂಡಕ್ಕೆ ಅಂಪೈರ್‍ನ್ನು ಪ್ರಶ್ನಿಸುವ ಅವಕಾಶವಿತ್ತು ಹಾಗೂ ಅದನ್ನು ಜಡೇಜ ಮಾಡಿದರೂ ಅಂಪೈರ್ ಅದನ್ನು ಸರಿಯಾಗಿ ಗಣನೆಗೆ ತೆಗೆದುಕೊಳ್ಳದ ಕಾರಣ ಧೋನಿ ಕ್ರೀಡಾಂಗಣ ಪ್ರವೇಶಿಸಿ ಪ್ರಶ್ನಿಸಿದರು ಎಂದೂ ಸಹ ಹೇಳಬಹುದು. ಅಷ್ಟಕ್ಕೂ ಧೋನಿಯವರಂತಹ ಪ್ರಬುದ್ಧ ಆಟಗಾರ ಹೀಗೆ ಸುಮ್ಮನೆ ಅಥವಾ ಕ್ಷಣದ ಬಿಸಿಯಲ್ಲಿ ಮಾಡಿರುವುದಕ್ಕಂತೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಇಡೀ ಟೂರ್ನಮೆಂಟ್‍ನಲ್ಲಿ ಇಲ್ಲಿಯವರೆಗೆ ನಡೆದ ಅಂಪೈರಿಂಗ್ ತಪ್ಪುಗಳ ಬಿಂಬವಾಗಿ ಧೋನಿ ಅಂಪೈರ್‍ಗಳನ್ನು ಪ್ರಶ್ನಿಸಿದರು ಎಂದೂ ಹೇಳಬಹುದು. ಆದರೆ ಕ್ರೀಡಾಂಗಣವನ್ನು ಧೋನಿ ತೊರೆದ ನಂತರ ಪ್ರವೇಶಿಸಿದ್ದು ನಿಯಮಗಳಾನುಸಾರ ಖಂಡಿತವಾಗಿ ತಪ್ಪು. ಅದಕ್ಕಾಗಿ ಅವರಿಗೆ ತಮ್ಮ ಪಂದ್ಯದ ಸಂಭಾವನೆಯ 50ರಷ್ಟನ್ನು ದಂಡವಾಗಿ ಸಹ ವಿಧಿಸಲಾಯಿತು. ಧೋನಿ ಯಾಕೆ ಹಾಗೆ ಮಾಡಿದರು ಎಂಬುದಕ್ಕೆ ಸಿಎಸ್‍ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದು “ಧೋನಿ ಅಲ್ಲಿ ನಡೆದಿದ್ದುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಕ್ರೀಡಾಂಗಣ ಪ್ರವೇಶಿದರು” ! ಸ್ವತಃ ಧೋನಿಯವರು ಇದರ ಬಗೆಗೆ ಇನ್ನೇನನ್ನೂ ಸಹ ಹೇಳಿಲ್ಲ. ಹಾಗಾಗಿ ಅವರು ತಮ್ಮ ಹೇಳಿಕೆ ನೀಡುವವರೆಗೆ ಎಲ್ಲವೂ ಸಾಧ್ಯತೆಗಳಷ್ಟೇ
ಏನೇ ಆಗಲಿ , ಕ್ರಿಕೆಟ್ ವಿಶ್ಲೇಷಕ ಹರ್ಷ ಭೊಗ್ಲೆ ಹೇಳಿದ ಹಾಗೆ ಧೋನಿ ಎಲ್ಲರ ಹಾಗೆ ತಾವೂ ಕೂಡ ಮನುಷ್ಯ ಎಂಬುದನ್ನು ತೋರಿಸಿಕೊಟ್ಟರು. ತಮ್ಮ ಸಿಟ್ಟನ್ನು ಕ್ರೀಡಾಂಗಣದಲ್ಲಿ ಅಷ್ಟು ತೀವ್ರವಾಗಿ ಹೊರಹಾಕಿದ್ದು ಮಾತ್ರ ಕ್ಯಾಪ್ಟನ್ ಕೂಲ್ ಅಭಿಮಾನಿಗಳಿಗೆ ಹಾಗೂ ಎಲ್ಲಾ ವೀಕ್ಷಕರಿಗೆ ಅಚ್ಚರಿಯಾಯಿತು. ನಾನಂತೂ ಅವರ ಹೇಳಿಕೆಗಾಗಿ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‍ನಲ್ಲಿ ಕಾಯುತ್ತಿದ್ದೆ. ಆದರೆ ಅವರು ಅದರ ಬಗೆಗೆ ಏನೂ ಹೇಳಲಿಲ್ಲ.
ನಾನಂತೂ ಕ್ಯಾಪ್ಟನ್ ಕೂಲ್ ಹೇಳಿಕೆಗಾಗಿ ಕಾಯುತ್ತಿರುವೆ !!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here