Homeಮುಖಪುಟಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಕಾರ್ಪೊರೇಟ್ ಹೋಂಚೊಗಳು ಎನ್ನುವರಿರ್ತಾರೆ. ಇವರು ಕಾರ್ಪೊರೇಟ್ ಜಗತ್ತಿನಲ್ಲಿ ಇತರರೊಂದಿಗೆ ಸೆಣೆಸಿ ಯಶಸ್ಸಿನ ಏಣಿ ಹತ್ತಿದವರು. ಇವರು ಜೀವನವನ್ನು ಅತಿಯಾಗಿ ಎಂಜಾಯ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಒಂದೇ ಒಂದು ತಪ್ಪು ಮಾಡಿದಲ್ಲಿ ಇವರು ಸರ್ರನೇ ಕೆಳಗಿಳಿಯುತ್ತಾರೆ. ತಂತ್ರಜ್ಞಾನದಲ್ಲಿ ಮತ್ತು ಆ ತಂತ್ರಜ್ಞಾನವನ್ನು ಬಳಸುವವರಲ್ಲಿ ವಿಶ್ವಾದಾದ್ಯಂತ ಯಾವುದೇ ಬದಲಾವಣೆ ಆಗಲಿ ಇವರಿಗೆ ಗೊತ್ತಿರಲೇಬೇಕು.

ಇಂದು 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮೋದಿಯ ಬಿಜೆಪಿ ಇನ್ನೊಮ್ಮೆ ಗೆಲ್ಲುತ್ತಿದೆ. ಅಧಿಕಾರದ ಎರಡನೇ ಅವಧಿಯಲ್ಲಿ ಅವರು ಏನೆಲ್ಲಾ ಮಾಡಬಹುದು, ನಮ್ಮ ಪ್ರಜಾಪ್ರಭುತ್ವಕ್ಕೆ ಕಾದಿರುವ ಗಂಡಾಂತರ, ನಮ್ಮ ಬಹುತ್ವದ ಸಂಸ್ಕೃತಿಗೆ ಕಾದಿರುವ ಗಂಡಾಂತರ, ಅಲ್ಪಸಂಖ್ಯಾತರು, ದಲಿತರು ಮತ್ತು ಮುಖ್ಯವಾಗಿ ಮಹಿಳೆಯರು ಅನುಭವಿಸಬೇಕಾದ ಸಂಕಷ್ಟಗಳ ಬಗ್ಗೆಯೂ ನಾವೆಲ್ಲ ಚರ್ಚಿಸಿದ್ದೇವೆ. ಇದರ ಬಗ್ಗೆ ನಮ್ಮ ಬುದ್ಧಿಜೀವಿಗಳು ಬರೆದಿದ್ದಾರೆ, ನಮ್ಮನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ.

ಆದರೆ ನಮ್ಮ ಲೀಡಿಂಗ್ ಬುದ್ಧಿಜೀವಿಗಳು ಬಿಜೆಪಿ ಮತ್ತು ಸಂಘಪರಿವಾರ ಎಸೆದ ಸವಾಲನ್ನು ಎದುರಿಸಲು ಸಶಕ್ತರಾಗಿದ್ದಾರೆಯೇ? ಇದು ಚುನಾವಣೆಯಲ್ಲಿನ ಗೆಲುವು ಸೋಲಿನ ಪ್ರಶ್ನೆಯಲ್ಲ. ಅವರು ದೇಶದ ಮುಂದೆ ಇರಿಸಿದ ಸೈದ್ಧಾಂತಿಕ ಸವಾಲಿಗೆ ಸೈದ್ಧಾಂತಿಕ ಉತ್ತರಗಳು ನಮ್ಮ ಬುದ್ಧಿಜೀವಿಗಳು ಕಂಡುಕೊಂಡಿದ್ದಾರೆಯೇ? ಕಳೆದ ಎರಡೂವರೆ ದಶಕಗಳಲ್ಲಿ ಬಿಜೆಪಿ ಮತ್ತು ಬಲಪಂಥೀಯ ಶಕ್ತಿಗಳು ಅಪಾರ ಯಶಸ್ಸನ್ನು ಕಂಡಿದ್ದಾರೆ. ಅದರೆದುರಿಗೆ ಇವರ ಪಾತ್ರವೇನಾಗಿತ್ತು?

ಇಂಟಲೆಕ್ಚುವಲಿಸಂ ಎನ್ನುವುದೂ ರಾಜಕೀಯದ ಒಂದು ಭಾಗ. ನಮ್ಮ ಬುದ್ಧಿಜೀವಿಗಳು ರಾಜಕೀಯಕ್ಕೆ ತಮ್ಮ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಸ್ವಾತಂತ್ರಪೂರ್ವದ ಸಂದರ್ಭದಲ್ಲಿ ಬುದ್ಧಿಜೀವಿಗಳೇ ರಾಜಕಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅನೇಕ ರಾಜಕಾರಣಿಗಳು ಹಲವಾರು ಪುಸ್ತಕಗಳನ್ನು ಬರೆದಿದ್ದರು. ಸ್ವಾತಂತ್ರ್ಯಾ ನಂತರದ ಮೊದಲ ಕೆಲವು ದಶಕಗಳವರೆಗೆ ದೇಶದ ರಾಜಕಾರಣಿಗಳಲ್ಲಿ ಅನೇಕ ಚಿಂತಕರು ಮತ್ತು ಬುದ್ಧಿಜೀವಿಗಳಿದ್ದರು.

ಸಮಯ ಕಳೆದಂತೆ ಪರಿಸ್ಥಿತಿ ಬದಲಾಗಿ ಬುದ್ಧಿಜೀವಿಗಳೆಂದರೆ ಯುನಿವರ್ಸಿಟಿಗಳಲ್ಲಿ ಕೆಲಸ ಮಾಡುವವರು, ಪತ್ರಕರ್ತರು, ಬರಹಗಾರರೇ ವೃತ್ತಿಪರ ಬುದ್ಧಿಜೀವಿಗಳಾದರು. ಈ ಬುದ್ಧಿಜೀವಿಗಳು ನೀಡಿದ ಕೊಡುಗೆಯೂ ಕಡಿಮೆಯೇನಿಲ್ಲ. ಆದರೆ ಕಳೆದೆರಡು ದಶಕಗಳಿಂದ ಇವರೆಲ್ಲರು ತಮ್ಮನ್ನು ತಾವು ಅಪ್‍ಡೇಟ್ ಮಾಡಿಕೊಂಡಿದ್ದಾರೆಯೇ? ತಮ್ಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆಯೇ? ಹೌದು ಮತ್ತು ಇಲ್ಲ.

ನಮ್ಮ ಬುದ್ಧಿಜೀವಿಗಳು ಬಿಜೆಪಿ ಸಂಘಪರಿವಾರದ ಮಾರಕ ಅಜೆಂಡಾಗೆ ವಿರುದ್ಧವಾಗಿ ದಿಟ್ಟವಾಗಿ ಎದ್ದು ನಿಂತಿದ್ದಾರೆ. ಬಿಜೆಪಿಯ ಕಥನವನ್ನು ಮುರಿಯಲು, ಅವರ ಕಥನದ ಪೊಳ್ಳುತನ ಮತ್ತು ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ. ಅದಕ್ಕಾಗಿ ಅವರು ತೆಗೆದುಕೊಂಡ ರಿಸ್ಕ್ ಸಹ ಅಂತಿಂಥದ್ದಲ್ಲ. ಅಕ್ಷರಶಃ ಪ್ರಾಣವನ್ನೇ ತೆತ್ತಿದ್ದಾರೆ. ಮುಖ್ಯವಾಹಿನಿ ರಾಜಕೀಯ ಪಕ್ಷಗಳು ದನಿ ಕಳೆದುಕೊಂಡಾಗ ಗಟ್ಟಿಯಾಗಿ ಮಾತನಾಡಿದ್ದಾರೆ. ಆದರೂ ಸೋತಿದ್ದಾರೆ.

ಇದನ್ನು ಓದಿ: ದೇಶವನ್ನು ಕಾಂಗ್ರೆಸ್ ಏಕೆ ರಕ್ಷಿಸಲಾರದು? – ಯೋಗೇಂದ್ರ ಯಾದವ್

ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ನಮ್ಮ ಬುದ್ಧಿಜೀವಿಗಳಿಗೆ ತಮ್ಮ ಮಾತುಗಳು ಜನರ ತನಕ ತಲುಪಿಸುವ ಜವಾಬ್ದಾರಿ ಇದ್ದಿಲ್ಲ. ತಮ್ಮ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೂ, ತಲುಪುತ್ತಿದೆಯೋ, ಇಲ್ಲವೋ ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡರೆ? ಹಾಗೂ ಈ ಪ್ರಗತಿಪರ ಬುದ್ಧಿಜೀವಿಗಳ ಮಾತುಗಳು ಜನರಿಗೆ ತಲುಪಿದರೂ, ಇವರ ಮಾತುಗಳು ಜನರಿಗೆ ಅರ್ಥವಾಗುವ ಮಾತುಗಳಾಗಿದ್ದವೇ? ಖಂಡಿತವಾಗಿಯೂ ಇಲ್ಲ.

ನನ್ನ ಸಂಪರ್ಕದಲ್ಲಿರುವ ಯಾರಿಗೂ (ಚಳವಳಿಯ ಬಳಗದವರನ್ನು ಹೊರತುಪಡಿಸಿ) ಕೋಮುವಾದ ಮತ್ತು ಜಾತ್ಯತೀತತೆ ಎನ್ನುವಂತಹ ಪದಗಳ ಅರ್ಥಗಳೇ ಗೊತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವಾರು ದಶಕಗಳಿಂದ ಬಳಸುತ್ತಿರುವ ಪದಗಳನ್ನೇ, ಭಾಷೆಯನ್ನೇ ಬಳಸುತ್ತ ಬಂದ ಬುದ್ಧಿಜೀವಿಗಳು ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ.

ಎರಡನೆಯದು, ಬಿಜೆಪಿ ಎಸೆದ ಸವಾಲಿಗೆ ತಕ್ಕ ಉತ್ತರಗಳನ್ನಾದರೂ ಕಂಡುಕೊಂಡಿದ್ದಾರೆಯೇ? ಇದು ಚಿಂತಕರ ಮೂಲಕರ್ತವ್ಯ. ಕಳೆದೆರಡು ದಶಕಗಳಲ್ಲಿ ನಮ್ಮ ದೇಶಕ್ಕೆ ಒದಗಿರುವ ವಿಪತ್ತನ್ನು ಎದುರಿಸಲು ಯಾವುದೇ ಹೊಸ ಉತ್ತರಗಳನ್ನು ಕಂಡುಕೊಂಡಿದ್ದಾರೆಯೇ? ಮೂಲಭೂತವಾದದ ವಿರುದ್ಧ ಸೈದ್ಧಾಂತಿಕವಾಗಿ ಹಲವು ದಶಕಗಳ ಹಿಂದಿನ ನಮ್ಮ ಉತ್ತರಗಳು ಹೇಗೆ ಕೆಲಸ ಮಾಡಿಯಾವು?

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ. ಹೊಸ ತಲೆಮಾರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಪ್ರಾಣ ಬೆದರಿಕೆ, ಕ್ಯಾಂಪಸ್ಸುಗಳಲ್ಲೇ ದಾಳಿ, ಟ್ರೋಲಿಂಗ್ ಎಲ್ಲವನ್ನೂ ಎದುರಿಸಿ ನಿಂತ ಇವರುಗಳು ತಮ್ಮ ಬುದ್ಧಿಜೀವಿತ್ವಕ್ಕೇ ಒದಗಿ ಬಂದ ಕುತ್ತನ್ನು, ಇಂಟಲೆಕ್ಚುಯಲಿಸಂ ಮೂಲಕವೇ ಪರಿಣಾಮಕಾರಿಯಾಗಿ ಎದುರಿಸಲಿಲ್ಲ. ಪರ್ಯಾಯ ಕಥನದ ನಿರ್ಮಾಣ ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವ ಪರಿ ಎರಡನ್ನೂ ಶೋಧಿಸುವ ಕೆಲಸ ಅವರಿಂದ ನಡೆಯಲಿಲ್ಲ.

ಬಿಜೆಪಿಯ ಸವಾಲಿಗೆ ನಮ್ಮಲ್ಲಿ ಕೆಲವರು ತಂತ್ರಗಾರಿಕೆಯಿಂದ ಎದುರಿಸುವ ಪ್ರಯತ್ನ ಮಾಡಿದರು. ಖಂಡಿತ ಶ್ಲಾಘನೀಯವೇ. ಅದರಲ್ಲಿ ಕೆಲವರು ಸರ್ಕಾರವು ಜನರ ಕುತ್ತಿಗೆಗೆ ತಂದ ಕೆಲವು ಆರ್ಥಿಕ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಿದರು. ಕೆಲವರು ಬಿಜೆಪಿ ಧರ್ಮವನ್ನು ಬಳಸಿದರೆ ಜಾತಿ ಸಮೀಕರಣವನ್ನು ಬಳಸುವ ತಂತ್ರಗಾರಿಕೆ ಮಾಡಿದರು. ಆದರೆ ತಂತ್ರಗಾರಿಕೆ ಸೈದ್ಧಾಂತಿಕ ಉತ್ತರವಲ್ಲ. ಅವರು ಒಡ್ಡಿರುವ ಸೈದ್ಧಾಂತಿಕ ಸವಾಲಿಗೆ ಹೊಸ ಸೈದ್ಧಾಂತಿಕ ಉತ್ತರವನ್ನು ಕಂಡುಕೊಂಡ ನಂತರವೇ ತಂತ್ರಗಾರಿಕೆಯ ಉಪಾಯಗಳನ್ನು ಹುಡುಕಬಹುದು.

ನಮ್ಮಲ್ಲಿ ಅನೇಕರು ಇಂಟಲೆಕ್ಚುವಲಿಸಂ ಅನ್ನು ಹೋರಾಟ ಮತ್ತು ತಂತ್ರಗಾರಿಕೆಯೊಂದಿಗೆ ಕನ್ಫೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂರು ಬೇರೆ ಬೇರೆ ವಿಷಯಗಳೆಂದು ತಿಳಿದುಕೊಳ್ಳುವುದು ಅತ್ಯವಶ್ಯಕ.

ಇದನ್ನು ಓದಿ: ಈ ಚುನಾವಣೆಯಲ್ಲಿ ಮಹಿಳೆಯರಿಗೆ ಸಿಕ್ಕಿದ್ದೆಷ್ಟು? ಮಮತಾ ಮತ್ತು ನವೀನ್ ಪಟ್ನಾಯಕ್ ಮಾದರಿ ಮೆಚ್ಚುವಂತದ್ದು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹೌದು. ಬುದ್ಧಿ ಜೀವಿಗಳು ಜನರನ್ನು ತಲುಪಲು ವಿಫಲರಾಗಿದ್ದಾರೆ.
    ಬುದ್ಧಿ ಜೀವಿಗಳು ಕೇವಲ ಬೌದ್ಧಿಕ ಚರ್ಚೆಯಲ್ಲಿ ತೃಪ್ತಿ ಪಡೆಯುತ್ತಿದ್ದಾರೆ.
    ಜೂನ್ ಸಾಮಾನ್ಯರೊಡನೆ ಬದುಕದ ಬುದ್ಧಿ ಜೀವಿಗಳು ನಿರಾಸೆಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...