2021ರ ಐಸಿಸಿ ಟಿ-20 ವರ್ಲ್ಡ್ ಕಪ್ ಆರಂಭವಾಗಿದೆ. ಆರಂಭಿಕ ಆಟಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಗೆಲುವು ಸಾಧಿಸಿವೆ. ಇಂದು (ಭಾನುವಾರ) ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಲಿದೆ.
ಕಳೆದ ಟಿ-20ಯಲ್ಲಿ ಪಾಕಿಸ್ತಾನದ ವಿರುದ್ದ ಸೋಲು ಕಾಣದೇ ಗೆಲುವಿನ ಹಾದಿಯಲ್ಲಿ ಮುನ್ನುಗ್ಗಿದ ಟೀಂ ಇಂಡಿಯಾ ಈ ಬಾರಿಯೂ ಪಾಕ್ ತಂಡವನ್ನು ಮಣಿಸುವುದೇ ಎಂದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿದೆ. ಟೀಂ ಇಂಡಿಯಾ ಗೆಲುವಿಗಾಗಿ ದೇಶದ ವಿವಿಧ ಭಾಗಗಳಲ್ಲಿ ಪೂಜೆ ನೆರವೇರಿಸಲಾಗುತ್ತಿದೆ.
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಹಿಂದಿನ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ದದ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಅದೇ ರೀತಿಯಲ್ಲಿ ಹಿಂದಿನ ಹಲವು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭಾಗವಹಿಸಿದ್ದು, ಹಿಂದಿನ ಪರಂಪರೆಯನ್ನು ಮುಂದುವರೆಸುವುದೇ ಎಂಬುದನ್ನು ಕಾದು ನೊಡಬೇಕಿದೆ.
ಇದನ್ನೂ ಓದಿ: ಶಾರುಖ್ BJP ಸೇರಿದರೆ ಡ್ರಗ್ಸ್ ಸಕ್ಕರೆ ಪುಡಿಯಾಗಿ ಮಾರ್ಪಾಡಾಗುತ್ತದೆ: ಮಹಾರಾಷ್ಟ್ರ ಸಚಿವ
ಏಕದಿನ ವಿಶ್ವಕಪ್‌ನಲ್ಲಿ 7 ಬಾರಿ ಟಿ-20 ವಿಶ್ವಕಪ್‌ನಲ್ಲಿ 5 ಪಂದ್ಯ ಸೇರಿದಂತೆ ಒಟ್ಟು 12 ಬಾರಿನ ಪಾಕಿಸ್ತಾನ ವಿರುದ್ಧ ಭಾರತವೇ ಗೆಲುವು ದಾಖಲಿಸಿದೆ. ಹೀಗಾಗಿ ಪಾಕಿಸ್ತಾನಕ್ಕೆ ಇದೊಂದು ಸವಾಲಾಗಿದ್ದು, ಬಾಬರ್ ಆಜಂ ನಾಯಕತ್ವದ ತಂಡಕ್ಕೆ ಟೀಂ ಇಂಡಿಯಾವನ್ನು ಮಣಿಸಿ, ತನ್ನ ಸೋಲಿನ ಇತಿಹಾಸವನ್ನು ತೊಡೆದು ಹಾಕಬೇಕಾದ ಅನಿವಾರ್ಯತೆಯಿದೆ.
ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತಿದ್ದರೆ, ಇತ್ತ ಭಾರತದ ಹಿಂದೂತ್ವವಾದಿ ಮುಖಂಡರು ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ವಿರೋಧಿಸುತ್ತಿದ್ದಾರೆ. ರಾಜಕೀಯವಾಗಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವುದು ಇದಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಇದೇ ಕಾರಣಕ್ಕಾಗಿ ಎರಡೂ ತಂಡಗಳ ನಡುವೆ ಹಲವು ವರ್ಷಗಳಿಂದ ವಿಶ್ವಕಪ್ ಹೊರತುಪಡಿಸಿ ಬೇರೆಯಾವುದೇ ಕ್ರಿಕೆಟ್ ಸರಣಿಗಳು ನಡೆದಿಲ್ಲ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ಇಂದು (ಭಾನುವಾರ) ರಾತ್ರಿ 7.30ಕ್ಕೆ ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿರುವ ರಾಹುಲ್ ದ್ರಾವಿಡ್


